ಬೆಂಗಳೂರು: ರಜನಿಕಾಂತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜೈಲರ್ ಸಿನಿಮಾ ಮುಂದಿನ ತಿಂಗಳು ಆಗಸ್ಟ್ 11 ರಂದು ತೆರೆ ಕಾಣಲಿದೆ. ಈ ವಿಚಾರ ಅಭಿಮಾನಿಗಳಲ್ಲಿ ತೀವ್ರ ನಿರೀಕ್ಷೆ ಹುಟ್ಟುಹಾಕಿದೆ.
ಈ ಸಿನಿಮಾದಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ್ ಕೂಡ ಅಭಿನಯಿಸಿದ್ದಾರೆ. ಇತ್ತೀಚೆಗೆ ಈ ಚಿತ್ರದ ಆಡಿಯೊ ಲಾಂಚ್ ಸಮಾರಂಭ ಚೆನ್ನೈನಲ್ಲಿ ನಡೆದಿತ್ತು. ಈ ವೇಳೆ ನಟ ರಜನಿಕಾಂತ್ ಕೇವಲ ಈ ಸಿನಿಮಾ ಅಷ್ಟೇ ಅಲ್ಲದೇ ಅನೇಕ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು.
‘ನನ್ನ ಜೀವನದಲ್ಲಿ ನಾನು ಮಾಡಿದ್ದ ದೊಡ್ಡ ತಪ್ಪು ಮದ್ಯವ್ಯಸನಿಯಾಗಿದ್ದು’ ಎಂದು ತಲೈವಾ ಹೇಳಿದ್ದಾರೆ.
‘ನಾನು ಹಲವು ವರ್ಷಗಳ ಹಿಂದೆ ಒಮ್ಮೆ ಕುಡಿದು ಮಧ್ಯರಾತ್ರಿ 2ಕ್ಕೆ ಮನೆಗೆ ಬಂದಿದ್ದೆ. ಆಗ ನನ್ನ ಸಹೋದರ ಒಬ್ಬರು ಮದ್ಯ ಹವ್ಯಾಸ ಒಳ್ಳೆಯದಲ್ಲ. ಸಂಭ್ರಮಾಚರಣೆಗೆ ಸೀಮಿತ ಇದ್ದರೆ ಒಳ್ಳೆಯದು ಎಂದಿದ್ದರು. ನಾನು ಆಗ ಮದ್ಯಕ್ಕೆ ಅಂಟಿಕೊಳ್ಳದಿದ್ದರೇ ಇನ್ನೂ ಹೆಚ್ಚಿನದನ್ನು ಸಾಧಿಸುತ್ತಿದ್ದೆ’ ಎಂದು ಹೇಳಿಕೊಂಡಿದ್ದಾರೆ. ಈ ಕುರಿತು Mid Day ವೆಬ್‌ಸೈಟ್ ವರದಿ ಮಾಡಿದೆ.
ಸದ್ಯ ರಜನಿಕಾಂತ್ ಅವರು ಮದ್ಯವ್ಯಸನವನ್ನು ಸಂಪೂರ್ಣ ತ್ಯಜಿಸಿದ್ದಾರೆ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.
ಜೈಲರ್ ಸಿನಿಮಾವನ್ನು‘ಸನ್ ಪಿಕ್ಚರ್ಸ್’ ನಿರ್ಮಾಣ ಮಾಡುತ್ತಿದೆ. ಖ್ಯಾತ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತವಿದೆ.
ಸದ್ಯ 71ರ ಹರೆಯದ ರಜನಿಕಾಂತ್ ಅವರು ಜೈಲರ್ ಸಿನಿಮಾದ ಪ್ರಮೋಷನ್ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.