ಸೋಮವಾರ, ಡಿಸೆಂಬರ್ 5, 2022
23 °C

ಅರವಿಂದ್-ದಿವ್ಯಾ 'ಅರ್ಧಂಬರ್ಧ ಪ್ರೇಮಕಥೆ'

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಬಿಗ್‌ಬಾಸ್ ಖ್ಯಾತಿಯ ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ ಒಟ್ಟಿಗೆ ಸಿನಿಮಾ ಮಾಡುತ್ತಿದ್ದಾರೆ ಎಂದು ಪ್ರಜಾವಾಣಿ ಈ ಹಿಂದೆ ವರದಿ ಮಾಡಿತ್ತು. ಆ ಸುದ್ದಿ ಈಗ ಅಧಿಕೃತವಾಗಿದೆ. ಬಿಗ್‌ಬಾಸ್‌ ಖ್ಯಾತಿಯ ಬೈಕ್‌ ರೇಸರ್‌ ಅರವಿಂದ್‌ ಕೆಪಿ ಹಾಗೂ ನಟಿ ದಿವ್ಯಾ ಉರುಡುಗ 'ಅರ್ಧಂಬರ್ಧ ಪ್ರೇಮಕಥೆ' ಎಂಬ ಹೊಸ ಚಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಬಿಗ್‌ಬಾಸ್‌ ಸೀಸನ್‌–8ರಲ್ಲಿ ಸ್ನೇಹಿತರಾದ ಅರವಿಂದ್‌ ಹಾಗೂ ದಿವ್ಯಾ ಕುರಿತು ಸಾಕಷ್ಟು ವದಂತಿಗಳು ಹಬ್ಬಿದ್ದವು. ಹಲವೆಡೆ ಒಟ್ಟಿಗೆ ಕಾಣಿಸಿಕೊಂಡ ಅವರಿಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದು ಅದಕ್ಕೆ ಕಾರಣವಾಗಿತ್ತು. ಸೀಸನ್‌–9ರಲ್ಲಿ ದಿವ್ಯಾ ಬಿಗ್‌ಬಾಸ್‌ ಮನೆ ಪ್ರವೇಶಿಸಿದ್ದು, ಅವರನ್ನು ಮನೆಗೆ ಕಳುಹಿಸಲು ಅರವಿಂದ್‌ ಕೂಡ ಬಂದಿದ್ದರು. ಹೀಗಾಗಿ ಅವರ ಅಭಿಮಾನಿಗಳಲ್ಲಿ ಅವರಿಬ್ಬರ ಸಂಬಂಧದ ಕುರಿತು ಒಂದು ರೀತಿಯ ಕುತೂಹಲ ಮನೆ ಮಾಡಿತ್ತು.

ಹುಲಿರಾಯ, ತುಘ್ಲಕ್ ಸಿನಿಮಾಗಳನ್ನು ನಿರ್ದೇಶಿಸಿದ್ದ ಅರವಿಂದ್ ಕೌಶಿಕ್ ಚಿತ್ರದ ನಿರ್ದೇಶಕರು. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು ಮುಂದಿನ ಕೆಲಸಗಳಲ್ಲಿ ಚಿತ್ರತಂಡ ಮಗ್ನವಾಗಿದೆ.ವಿಜಯ ದಶಮಿಯ ದಿನ ನಾಯಕನ ಇಂಟ್ರಡಕ್ಷನ್ ಟೀಸರ್ ಬಿಡುಗಡೆಗೊಂಡಿದೆ. ಹಿರಿಯನಟ ದ್ವಾರಕೀಶ್, ಬಿಗ್‌ಬಾಸ್ ತಂಡದ ಶುಭಾ ಪೂಂಜಾ, ರಾಜೀವ್ ಕೂಡ ಹಾಜರಿದ್ದು ಗೆಳೆಯನಿಗೆ ಶುಭ ಹಾರೈಸಿದರು.

ಅರ್ಜುನ್ ಜನ್ಯ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ‘ಪ್ರೀತಿ ಎನ್ನುವುದು ನಮ್ಮ ಕನಸುಗಳ ಜೊತೆಗೆ ಬೆಳೆಯುತ್ತದೆ, ಆದರೆ ಅದೇ ಪ್ರೀತಿ ಸಂಬಂಧವಾಗಿ ಬದಲಾದಾಗ ಅದು ಉಳಿಯೋದು ಕಷ್ಟ. ಏಕೆಂದರೆ ಅದು ನಮ್ಮ ಸುತ್ತಲಿನ ಸಮಾಜದ ಚೌಕಟ್ಟಿನಲ್ಲಿ ಬದುಕಬೇಕಾಗಿರುತ್ತದೆ ಇಂಥ ಒಂದು ಪ್ರೇಮಕಥೆ ಸಿನಿಮಾದಲ್ಲಿದೆ’ಎಂದು ನಿರ್ದೇಶಕ ಅರವಿಂದ್‌ ಕೌಶಿಕ್‌ ಹೇಳಿದ್ದಾರೆ.

ಈ ಚಿತ್ರದಲ್ಲಿ ಹಿರಿಯ ಕಲಾವಿದ ದ್ವಾರಕೀಶ್ ಅವರ ಪುತ್ರ ಅಭಿಲಾಷ್ ದ್ವಾರಕೀಶ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ೨೫ ವರ್ಷಗಳ ನಂತರ ನಟನೆಗೆ ಹಿಂದಿರುಗಿದ್ದಾರೆ.

ದ್ವಾರಕೀಶ್ ಮಾತನಾಡಿ, ನಮ್ಮ ಕಾಲದಲ್ಲಿ ಈ ಥರದ ನೆಗೆಟಿವ್ ಟೈಟಲ್ ಇಡುತ್ತಲೇ ಇರಲಿಲ್ಲ, ಈಗ ಅರವಿಂದ್ ಅಂತಹ ಸಾಹಸ ಮಾಡಿದ್ದಾರೆ. ನಾಯಕ ದಕ್ಷಿಣ ಕನ್ನಡದವರು.ಈಗ ಅಲ್ಲಿನವರೇ ಚಿತ್ರರಂಗದಲ್ಲಿ ಹೆಚ್ಚು ಹೆಸರು ಮಾಡುತ್ತಿದ್ದಾರೆ. ಹಿಂದೆ ಪುಟ್ಟಣ್ಣ ಕಣಗಾಲರು ನೀಡಿದ ಒಂದು ಸಲಹೆ, ನಾನು ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡುವಂತೆ ಮಾಡಿತು ಎಂದು ಹಿಂದಿನ ಘಟನೆಗಳನ್ನು ನೆನಪಿಸಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.