ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ | ನಟನೆ ಬೈಕ್‌ ಸ್ಟಂಟ್‌ನಷ್ಟು ಸುಲಭವಲ್ಲ: ಅರವಿಂದ್‌ ಕೆ.ಪಿ. 

Published 2 ನವೆಂಬರ್ 2023, 23:30 IST
Last Updated 2 ನವೆಂಬರ್ 2023, 23:30 IST
ಅಕ್ಷರ ಗಾತ್ರ
ಬಿಗ್‌ಬಾಸ್‌ ಸ್ಪರ್ಧಿಗಳಾಗಿದ್ದ ಅರವಿಂದ್‌ ಕೆ.ಪಿ. ಹಾಗೂ ದಿವ್ಯಾ ಉರುಡುಗ ಬೆಳ್ಳಿತೆರೆಯ ಮೇಲೆ ಜೋಡಿಯಾಗಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ‘ಹುಲಿರಾಯ’ ಖ್ಯಾತಿಯ ನಿರ್ದೇಶಕ ಅರವಿಂದ್‌ ಕೌಶಿಕ್‌ ನಿರ್ದೇಶನದ ‘ಅರ್ದಂಬಂರ್ಧ ಪ್ರೇಮಕಥೆ’ ಇದೇ ತಿಂಗಳಲ್ಲಿ ರಿಲೀಸ್‌ ಆಗಲಿದೆ. ಈ ಹೊಸ್ತಿಲಲ್ಲಿ ನಟ ಅರವಿಂದ್‌ ಕೆ.ಪಿ. ಜೊತೆಗೊಂದು ಮಾತುಕತೆ...

ಬಣ್ಣದ ಪ್ರಪಂಚಕ್ಕೆ ಹೆಜ್ಜೆ ಇಟ್ಟಿದ್ದು ಎಷ್ಟು ಆಕಸ್ಮಿಕ? ಈ ಪರಿವರ್ತನೆಯನ್ನು ನೀವು ಹೇಗೆ ನೋಡುತ್ತೀರಿ?

ಅದೊಂದು ಆಕಸ್ಮಿಕ ಹೆಜ್ಜೆ. ಆದರೆ ಈ ಬದಲಾವಣೆ ವೈಯಕ್ತಿಕವಾಗಿ ಸಹಕಾರಿಯಾಗಿದೆ. ಕೋವಿಡ್‌ ಬಂದ ಸಂದರ್ಭದಲ್ಲಿ ಬಹಳಷ್ಟು ಜನರ ಜೀವನವೇ ಅಸ್ತವ್ಯಸ್ತವಾಗಿತ್ತು. ನನ್ನ ಬದುಕಿನ ಭಾಗವೇ ಆಗಿದ್ದ ಬೈಕ್‌ ರೇಸ್‌ಗಳ ಆಯೋಜನೆಯೇ ಸ್ಥಗಿತವಾಗಿತ್ತು. ಆ ಸಂದರ್ಭದಲ್ಲಿ ‘ಬಿಗ್‌ಬಾಸ್‌’ ರಿಯಾಲಿಟಿ ಶೋ ಅವಕಾಶ ದೊರೆಯಿತು. ನನ್ನ ಕ್ರೀಡೆಗೆ ಒಂದು ಜನಪ್ರಿಯತೆ ದೊರಕಿಸಿಕೊಡಬೇಕು ಎನ್ನುವ ಉದ್ದೇಶದಿಂದ ನಾನು ಬಿಗ್‌ಬಾಸ್‌ ಮನೆ ಪ್ರವೇಶಿಸಿದ್ದೆ. ಇದರ ಮುಖಾಂತರ ನನಗೆ ಹೆಚ್ಚಿನ ಜನಪ್ರಿಯತೆ, ಪ್ರೀತಿ ದೊರೆಯಿತು. ನನಗೆ ಅಭಿಮಾನಿ ಬಳಗ ಹುಟ್ಟಿಕೊಂಡಿತು. ಎಲ್ಲರ ಮನೆ, ಮನ ಸೇರುವಲ್ಲಿ ದೊಡ್ಡ ವೇದಿಕೆಯಾಗಿ ಈ ಕಾರ್ಯಕ್ರಮ ನನಗೆ ದೊರಕಿತು. ಈ ವೇದಿಕೆ ಇಲ್ಲದೇ ಇದ್ದರೆ ನಾನು ಇಷ್ಟೊಂದು ಗುರುತಿಸಿಕೊಳ್ಳುತ್ತಿರಲಿಲ್ಲ. ಬಣ್ಣದ ಲೋಕದಲ್ಲಿ ಇದು ನನ್ನ ಮೊದಲ ಹೆಜ್ಜೆ. 

ಕಳೆದ 17–18 ವರ್ಷ ಈ ರೇಸಿಂಗ್‌ ಫೀಲ್ಡ್‌ನಲ್ಲಿ ನಾನಿದ್ದೇನೆ. ಈ ಅವಧಿಯಲ್ಲಿ ಜನರನ್ನು ತಲುಪಲು ನಾನು ಬಹಳ ಕಷ್ಟಪಟ್ಟಿದ್ದೇನೆ. ಆದರೆ ಕೇವಲ ನೂರಾ ಇಪ್ಪತ್ತು ದಿನಗಳಲ್ಲಿ ನಾನು ದುಪ್ಪಟ್ಟು ಹೆಸರು ಗಳಿಸಿಕೊಂಡೆ. ನನ್ನ ಕ್ರೀಡೆಯ ಬಗ್ಗೆ, ನನ್ನ ಬಗ್ಗೆ ಜನರ ಬಳಿ ತೆರೆದುಕೊಂಡೆ. ಇದೊಂದು ಜೀವನದ ದಿಕ್ಕನ್ನೇ ಬದಲಾಯಿಸಿದ ಘಟನೆ. ಇಲ್ಲಿಂದ ಸಿನಿಮಾದತ್ತ ಹೊರಳಿದ್ದು ನನ್ನ ಅದೃಷ್ಟ ಎಂದೇ ಹೇಳಬಹುದು. 

‘ಅರ್ದಂಬರ್ಧ ಪ್ರೇಮಕಥೆ’ ದೊರಕಿದ್ದು ಹೇಗೆ?

ನಾನು ಕಾಫಿ ಕುಡಿಯಬೇಕಿತ್ತು. ದಿವ್ಯಾ ಉರುಡುಗ ಅವರಿಗೆ ಅರವಿಂದ್‌ ಕೌಶಿಕ್‌ ಅವರು ಕಥೆಯೊಂದನ್ನು ಹೇಳಬೇಕಿತ್ತು. ಹೀಗಾಗಿ ನಾನು ಕೂಡ ದಿವ್ಯಾ ಜೊತೆಗೆ ಹೋಗಿದ್ದೆ. ಕೌಶಿಕ್‌ ಅವರು ಕಥೆ ವಿವರಿಸುತ್ತಿರಬೇಕಾದರೆ ನಾನು ಪಕ್ಕದಲ್ಲಿ ಕಾಫಿ ಕುಡಿಯುತ್ತಿದ್ದೆ. ಅರವಿಂದ್‌ ಕೌಶಿಕ್‌ ಅವರ ಕಥೆಯ ನಿರೂಪಣೆ ಶೈಲಿ ಬಹಳ ಪರಿಣಾಮಕಾರಿ. ಕಥೆ ಕೇಳುತ್ತ ನನಗೆ ಅರಿವಿಲ್ಲದಂತೆ ನಾನೂ ಅದರಲ್ಲಿ ಕಳೆದುಹೋಗಿದ್ದೆ. ಹೀಗೆ, ನನ್ನ ಹಾಗೂ ದಿವ್ಯಾ ಅವರ ಕೆಮಿಸ್ಟ್ರಿ ನೋಡಿ, ನಾಯಕನ ಪಾತ್ರದ ಆಫರ್‌ ಮುಂದಿಟ್ಟರು. ಹೀಗೆ ಆದದ್ದು ‘ಅರ್ದಂಬರ್ಧ ಪ್ರೇಮಕಥೆ’.

ನನ್ನ ನಿರ್ಧಾರ ಏಕಾಏಕಿ ತೆಗೆದುಕೊಂಡಿದ್ದಲ್ಲ. ಎರಡು ದಿನ ಸಮಯಾವಕಾಶ ಕೇಳಿದ್ದೆ. ನನಗೆ ಸವಾಲುಗಳೆಂದರೆ ಹೆದರಿಕೆ ಇಲ್ಲ. ಈ ಮನೋಭಾವ ಹುಟ್ಟಲು ಕ್ರೀಡೆಯೇ ಕಾರಣ. ಯಾವುದೇ ಕೆಲಸ ಒಪ್ಪಿಕೊಂಡರೂ ಅರ್ಧಂಬರ್ಧ ಮಾಡುವುದು ಸರಿಯಲ್ಲ. ಶಾಲಾ–ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ನಟಿಸಿದ್ದೆ. ಇದನ್ನು ಹೊರತುಪಡಿಸಿ ನಟನೆಯ ಯಾವ ಹಿನ್ನೆಲೆಯೂ ನನಗಿರಲಿಲ್ಲ. ಹೀಗಾಗಿ ಓರ್ವ ವಿದ್ಯಾರ್ಥಿಯಾಗಿ ಅರವಿಂದ್‌ ಕೌಶಿಕ್‌ ಅವರ ಎದುರಿಗೆ ನಿಂತೆ. 

ಸಿನಿಮಾ ಜೊತೆಗೆ ಬೈಕ್‌ ರೇಸಿಂಗ್‌ ಚಟುವಟಿಕೆ ಹೇಗಿದೆ?

ಸದ್ಯಕ್ಕೆ ನಾನು ತರಬೇತಿಯಲ್ಲಿ ತೊಡಗಿಸಿಕೊಂಡಿದ್ದೇನೆ. 2019ರಲ್ಲಿ ನಡೆದ ಅಪಘಾತವೊಂದರಲ್ಲಿ ನನ್ನ ಕಾಲಿಗೆ ಏಟು ಬಿದ್ದಿತ್ತು. ಅದಕ್ಕೆ ರಾಡ್‌ ಹಾಕಿದ್ದರು. ಇದನ್ನು ಎರಡು ವರ್ಷಗಳಲ್ಲಿ ತೆಗೆಯಬೇಕಿತ್ತು. ಆದರೆ ಈ ಅವಧಿಯಲ್ಲಿ ಕೋವಿಡ್‌ ಲಾಕ್‌ಡೌನ್‌, ಸಿನಿಮಾ ಶೂಟಿಂಗ್‌ನಲ್ಲಿ ನಾನು ತೊಡಗಿಸಿಕೊಂಡಿದ್ದೆ. ‘ಅರ್ದಂಬರ್ಧ..’ ಬಿಡುಗಡೆಯಾದ ಬಳಿಕ ಮತ್ತೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಪಡಬೇಕಾಗಿದೆ. ನಂತರವಷ್ಟೇ ಮತ್ತೆ ರೇಸಿಂಗ್‌ ಟ್ರ್ಯಾಕ್‌ಗೆ ಇಳಿಯಲು ಸಾಧ್ಯ. 

‘ಅರ್ದಂಬರ್ಧ..’ ಕಥೆಯಲ್ಲಿ ನಿಮ್ಮ ಪಾತ್ರ ಹಾಗೂ ನಟನೆಯ ಅನುಭವದ ಬಗೆಗೆ ಹೇಳಿ?

ನಾನು ಹೆಚ್ಚು ಹೇಳಿಕೊಳ್ಳುವಂತಹ ವ್ಯಕ್ತಿಯಲ್ಲ. ನಮ್ಮ ರೇಸ್‌ ಫೀಲ್ಡ್‌ನಲ್ಲಿ ಭಾವನೆಗಳಿಗೆ ಅವಕಾಶ ಕಡಿಮೆ. ಹೀಗಾಗಿ ನಟನೆ ಸವಾಲಿನದ್ದಾಗಿತ್ತು. ಈ ನಟನೆ ಎನ್ನುವುದು ಬೈಕ್‌ ಸ್ಟಂಟ್‌ನಷ್ಟು ಸುಲಭವಲ್ಲ ಎಂದು ನನಗೆ ಆಗ ಅರಿವಾಯಿತು. ನಮ್ಮ ಭಾವನೆಗಳು ಬಹಳ ಫ್ಲ್ಯಾಟ್‌ ಆಗಿರುತ್ತವೆ. ಕ್ಯಾಮೆರಾ ಮುಂದೆ ಬಂದ ಸಂದರ್ಭದಲ್ಲಿ ಒತ್ತಡವಿತ್ತು. ದಿನ ಕಳೆದಂತೆ ಎಲ್ಲರೊಂದಿಗೆ ಹೊಂದಾಣಿಕೆ ಸಾಧ್ಯವಾಯಿತು. ನಿರ್ದೇಶಕರಾದ ಅರವಿಂದ್‌ ಕೌಶಿಕ್‌ ಅವರೊಳಗೆ ಒಂದು ಮಗುವಿದೆ, ಒಬ್ಬ ರೌಡಿ ಇದ್ದಾನೆ, ಕಲಾವಿದನಿದ್ದಾನೆ, ಸಂಭಾಷಣೆಗಾರನಿದ್ದಾನೆ...ಅವರ ಸಾಮರ್ಥ್ಯವನ್ನು ತೆರೆಯ ಮೇಲೆಯೇ ಕಾಣಬೇಕು. 

ಚಿತ್ರದಲ್ಲಿ ನನ್ನ ಪಾತ್ರಕ್ಕೆ ಹಲವು ಶೇಡ್ಸ್‌ ಇವೆ. ವೀಕ್ಷಕರು ನನ್ನ ಪಾತ್ರ ಹೀಗೆ ಇರಲಿದೆ ಎಂದು ಊಹಿಸುವಾಗ ಅದಕ್ಕೊಂದು ಬದಲಾವಣೆ ತರುವಂತಹ ಚಿತ್ರಕಥೆ ಸಿನಿಮಾದಲ್ಲಿದೆ. ಸಿನಿಮಾದಲ್ಲಿ ನಾನೊಬ್ಬ ಪ್ರ್ಯಾಕ್ಟಿಕಲ್‌ ಮನುಷ್ಯ. ಬೈಕ್‌ ರೇಸಿಂಗ್‌ನ ಸಣ್ಣ ಝಲಕ್‌ ಕೂಡ ಸಿನಿಮಾದಲ್ಲಿದೆ. 

ದಿವ್ಯಾ–ನಿಮ್ಮ ಪ್ರೇಮಕಥೆಯ ಭವಿಷ್ಯ ಏನು?

ಕೆಲವೊಂದು ಜವಾಬ್ದಾರಿಗಳು ನಮ್ಮ ಮೇಲೆ ಇರುತ್ತವೆ. ಕುಟುಂಬದ ಮೌಲ್ಯಗಳನ್ನು ಇಟ್ಟುಕೊಂಡು ಹೆಜ್ಜೆ ಇಡಬೇಕಾಗುತ್ತದೆ. ಸುಳ್ಳು ಭರವಸೆಗಳನ್ನು ನೀಡಬಾರದು ಅಲ್ಲವೇ? ಎಲ್ಲವೂ ಸಕಾರಾತ್ಮಕವಾಗಿದೆ. ಮುಂದಿನ ದಿನಗಳಲ್ಲಿ ತಿಳಿಯಲಿದೆ. ಯಾರ ಕಣ್ತಪ್ಪಿಸಿ ಏನೂ ಮಾಡಲು ಸಾಧ್ಯವಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT