ಮಂಗಳವಾರ, ಆಗಸ್ಟ್ 4, 2020
24 °C

ಶಿವಣ್ಣನ ಬರ್ತ್‌ಡೇಗೆ ‘ವಿಡಿಯೊ ಟ್ರಿಬ್ಯೂಟ್’: ಮೈಸೂರಿನ ಯುವ ತಂಡದ ಕಾಣಿಕೆ

ನೇಸರ ಕಾಡನಕುಪ್ಪೆ Updated:

ಅಕ್ಷರ ಗಾತ್ರ : | |

ಜುಲೈ 12 ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್ ಅವರ ಜನ್ಮದಿನ. ಯುವಕರ ಪಾಲಿಗೆ ಹಿತಚಿಂತಕರಾಗಿರುವ ಶಿವಣ್ಣನ ಮೇಲಿನ ಅಭಿಮಾನದಿಂದ ಮೈಸೂರಿನ ಕಲಾನಿರ್ದೇಶಕರ ತಂಡವು ಜನ್ಮದಿನಕ್ಕಾಗಿ ‘ಮ್ಯೂಸಿಕಲ್ ವಿಡಿಯೊ ಟ್ರಿಬ್ಯೂಟ್‌’ ಅನ್ನು ಕಾಣಿಕೆಯಾಗಿ ನೀಡಿದ್ದಾರೆ.

‘ಕಿನೊ ಕ್ಲೌಡ್ಸ್‌’ ಎಂಬ ಸೃಜನಾತ್ಮಕ ಕಲಾ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿರುವ ಮೈಸೂರಿಗ ಅರ್ಜುನ್‌ ಕಶ್ಯಪ್‌, ಕಿರು ಚಿತ್ರಗಳ ಮೂಲಕ ಹೆಸರು ಮಾಡಿದವರು. ಚಿತ್ರ ನಿರ್ಮಾಣ, ನಿರ್ದೇಶನ ಇವರ ಆಸಕ್ತಿ. ಇವರು ಶಿವಣ್ಣನಿಂದ ಬೆನ್ನು ತಟ್ಟಿಸಿಕೊಂಡವರು. 2016ರಲ್ಲಿ ಮಹಿಳಾ ಸಬಲೀಕರಣ ವಿಷಯನ್ನು ಆಧರಿಸಿ ‘ರೆಸ್ಪೆಕ್ಟ್‌ ವಿಮೆನ್‌’ ಎಂಬ ಕಿರುಚಿತ್ರವನ್ನು ನಿರ್ಮಾಣ ಮಾಡುವಾಗ ಶಿವಣ್ಣನ ಬಳಿ ಹೋಗಿದ್ದರು. ‘ವಿಡಿಯೊ ಬೈಟ್‌ ಒಂದನ್ನು ಕೊಡುವಿರಾ ಅಣ್ಣ?’ ಎಂದು ಕೋರಿದ್ದರು. ಅದಕ್ಕೆ ಶಿವಣ್ಣ, ‘ನಿಮ್ಮಂಥ ಹುಡುಗರು ಚಿತ್ರರಂಗಕ್ಕೆ ಬರಬೇಕು’ ಎಂದು ಹುರಿದುಂಬಿಸಿದ್ದರು.

‘ನನಗೆ ಮಾತ್ರವೇ ಅಲ್ಲ, ಎಲ್ಲ ಯುವಕರಿಗೂ ಶಿವಣ್ಣ ಪ್ರೋತ್ಸಾಹಿಸುತ್ತಾರೆ. ಹಾಗಾಗಿ, ಚಿತ್ರರಂಗದಲ್ಲಿ ಅವರ ಮೇಲೆ ನನಗೆ ಅಪಾರವಾದ ಅಭಿಮಾನ. ನನ್ನ ಅಭಿಮಾನಕ್ಕೊಂದು ರೂಪ ಕೊಡಬೇಕು ಎಂದು ಬಹಳ ದಿನಗಳಿಂದ ಕನಸು ಕಂಡಿದ್ದೆ. ಅದಕ್ಕಾಗಿ ಈಗ ಜನ್ಮದಿನದ ಕಾಣಿಕೆ ಕೊಟ್ಟಿದ್ದೇನೆ. ‘ಸರ್ವಂ ಶಿವಂ’ ಎಂಬ ಮೂರು ನಿಮಿಷದ ಮ್ಯೂಸಿಕಲ್‌ ವಿಡಿಯೊ ತುಣುಕನ್ನು ರಚಿಸಿದ್ದಾರೆ.‌


ಅರ್ಜುನ್‌ ಕಶ್ಯಪ್ ಹಾಗೂ ಸಂಕಲನಗಾರ ಹರ್ಷ ನಂದನ್

ಈ ವಿಡಿಯೊಗಾಗಿ ಅರ್ಜುನ್‌ ಹಾಡೊಂದನ್ನು ರಚಿಸಿದ್ದಾರೆ. ನಿರ್ಮಾಣ, ನಿರ್ದೇಶನವೂ ಇವರದೇ. ಆಂಟನಿ ಹಾಗೂ ಅರ್ಜುನ್‌ ಅವರ ಧ್ವನಿಯಲ್ಲಿ ಗಾಯನ ಮೂಡಿಬಂದಿದೆ. ಧೀರಜ್‌ ಸಂಗೀತ, ಹರ್ಷನಂದನ್‌ ಸಂಕಲನ, ಸೃಜನಾತ್ಮಕ ನಿರ್ಮಾಣ ಶಿವರಂಜನ್‌ ಮತ್ತು ಕೌಶಿಕ್ ಕುಮಾರ್, ಸಹ ಸಂಪಾದಕರಾಗಿ ಸುಪ್ರೀತ್‌ ಹಾಗೂ ನಂದನ್‌ ಕಾರ್ಯನಿರ್ವಹಿಸಿದ್ದಾರೆ. ಇವರೆಲ್ಲರೂ ಮೈಸೂರಿಗರೇ ಎಂಬುದು ವಿಶೇಷ. ‘ಸಲಗ’ ಎಂಬ ಸಂಸ್ಥೆಯ ಹೆಸರಿನಲ್ಲಿ ನಿರ್ಮಾಣವಾಗಿದೆ.

‘ಚಿತ್ರರಂಗಕ್ಕೆ ಗಟ್ಟಿ ನೆಲೆಯನ್ನು ಕಟ್ಟಿಕೊಟ್ಟಿದ್ದು ಮೈಸೂರಿನ ಕಲಾವಿದರು. ರಾಜಕುಮಾರ್, ವಿಷ್ಣುವರ್ಧನ್‌, ಅಂಬರೀಷ್ ಸೇರಿದಂತೆ ಅನೇಕರು ಈ ಮಣ್ಣಿನಿಂದಲೇ ಗುರುತಿಸಿಕೊಂಡವರು. ಆದರೆ, ಈಗ ಮೈಸೂರಿಗರು ಕೊಂಚ ಸೊರಗಿದ್ದಾರೆ. ಈ ಕೊರತೆಯನ್ನು ನೀಗಿಸಬೇಕು ಎಂಬ ಪ್ರಯತ್ನ ನಮ್ಮದು. ಹಾಗಾಗಿ, ಮೈಸೂರಿಗರಾದ ನಾವು ಸೃಜನಾತ್ಮಕವಾಗಿ, ಸತ್ವಯುತ ನಿರ್ಮಾಣವನ್ನು ನೀಡುವ ಪಣ ತೊಟ್ಟಿದ್ದೇವೆ’ ಎಂದು ಅರ್ಜುನ್‌ ‘ಪ್ರಜಾವಾಣಿ’ಯೊಂದಿಗೆ ತಮ್ಮ ಮನದಾಳದ ವಿಚಾರ ಹಂಚಿಕೊಂಡರು.

ಅರ್ಜುನ್‌ ಅವರು ಸ್ಟಾರ್‌ ಸ್ಪೋರ್ಟ್ಸ್‌, ಕಲ್ಯಾಣಿ ಮೋಟಾರ್ಸ್‌ ಸಂಸ್ಥೆಗಳಿಗೆ ಜಾಹಿರಾತುಗಳನ್ನು ನಿರ್ಮಿಸಿದ್ದಾರೆ. ಕೆಪಿಎಲ್‌ ‘ಬೆಂಗಳೂರು ಬ್ಲಾಸ್ಟರ್ಸ್‌’ ತಂಡಕ್ಕೆ ಗೀತೆಯನ್ನು ರಚಿಸಿಕೊಟ್ಟಿದ್ದಾರೆ. ‘ಬೀರ್ಬಲ್‌ ಟ್ರಿಲಜಿ’ ಸಿನಿಮಾಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.