ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಪಿಎಂ ನರೇಂದ್ರ ಮೋದಿ’: ಇದು ’ಫ್ಲಾಪ್‌ ಹೀರೊನ ಬೋಗಸ್‌ ಸಿನಿಮಾ’ –ಕಾಂಗ್ರೆಸ್‌

ಏಪಿಲ್‌12ಕ್ಕೆ ಚಿತ್ರ ಬಿಡುಗಡೆ?
Last Updated 4 ಏಪ್ರಿಲ್ 2019, 2:53 IST
ಅಕ್ಷರ ಗಾತ್ರ

ನವದೆಹಲಿ:‘ಚೌಕೀದಾರನ ದಂಡಕ್ಕೆ ಕಾಂಗ್ರೆಸ್‌ ನಾಯಕರು ಬೆದರಿದ್ದಾರೆ’ ಎಂದು ಪಿಎಂ ನರೇಂದ್ರ ಮೋದಿಚಿತ್ರದ ಪ್ರಮುಖ ಪಾತ್ರಧಾರಿ ವಿವೇಕ್‌ ಓಬೆರಾಯ್‌(42) ವ್ಯಂಗ್ಯವಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ಇದೊಂದು ಬೋಗಸ್‌ ಸಿನಿಮಾ ಎಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆ ಆಧರಿಸಿದ ಪಿಎಂ ನರೇಂದ್ರ ಮೋದಿಚಿತ್ರದಲ್ಲಿ ವಿವೇಕ್‌ ಓಬೆರಾಯ್‌ ಅವರು ನರೇಂದ್ರ ಮೋದಿ ಆಗಿ ಅಭಿನಯಿಸಿದ್ದಾರೆ. ಈ ಚಿತ್ರ ಹಾಗೂ ಪಾತ್ರಧಾರಿಯ ಬಗ್ಗೆ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೆವಾಲಾ, ಇದು ಫ್ಲಾಪ್‌ ಹೀರೊನ ಬೋಗಸ್‌ ಸಿನಿಮಾಎಂದು ಬುಧವಾರ ಪ್ರತಿಕ್ರಿಯಿಸಿದ್ದಾರೆ.

ಲೋಕಸಭೆ ಸಮೀಪದಲ್ಲಿರುವಂತೆ ಮೋದಿ ಕುರಿತಾದ ಚಿತ್ರದ ಬಿಡುಗಡೆ ಆಕ್ಷೇಪ ವ್ಯಕ್ತಪಡಿಸಿದ್ದ ಕಾಂಗ್ರೆಸ್‌, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿತ್ತು. ಚುನಾವಣಾ ಮಾದರಿ ನೀತಿ ಸಂಹಿತಿಯ ಉಲ್ಲಂಘನೆ ಎಂದು ಆಕ್ಷೇಪಿಸಿತ್ತು. ಚುನಾವಣಾ ಆಯೋಗ ನೀಡಿದ ನೋಟಿಸ್‌ಗೆ ಉತ್ತರಿಸಲು ವಿವೇಕ್‌ ಓಬೆರಾಯ್‌ ಕಳೆದ ವಾರ ಆಯೋಗದ ಮುಂದೆ ಹಾಜರಾಗಿದ್ದರು.

‘ಇದು ಫ್ಲಾಪ್‌ ಹೀರೊನ ಬೋಗಸ್‌ ಸಿನಿಮಾ, ಜೀರೊ ಎಂದು ಸಾಬೀತು ಪಡಿಸಿರುವ ಫ್ಲಾಪ್‌ ವ್ಯಕ್ತಿಯ ಕುರಿತು ಮಾಡಿರುವ ಸಿನಿಮಾ ಹಾಗೂ ನಿರ್ಮಿಸಿರುವವರು ಫ್ಲಾಪ್‌ ನಿರ್ಮಾಪಕ’ ಎಂದು ಸುರ್ಜೆವಾಲಾ ಟೀಕಿಸಿದ್ದಾರೆ.

ಚಿತ್ರ ತೆರೆಕಾಣುತ್ತಿರುವ ಸಮಯವನ್ನು ಪ್ರಶ್ನಿಸಿದ ಸುರ್ಜೆವಾಲಾ, ಚಿತ್ರ ನಿರ್ಮಾಣದಲ್ಲಿ ಕಪ್ಪು ಹಣ ಬಳಕೆಯಾಗಿರುವ ಕುರಿತು ತನಿಖೆ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ವಿವೇಕ್‌ ಓಬೆರಾಯ್‌, ’ಏಕೆ ಕೆಲವು ಜನ ಈ ರೀತಿ ಅತಿಯಾಗಿ ವರ್ತಿಸುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ. ಅಭಿಷೇಕ್‌ ಸಿಂಘ್ವಿ ಹಾಗೂ ಕಪಿಲ್‌ ಸಿಬಲ್‌ ಅವರಂಥ ಹಿರಿಯ ಹಾಗೂ ಖ್ಯಾತ ವಕೀಲರು ಸಾಮಾನ್ಯ ಸಿನಿಮಾ ವಿರುದ್ಧ ಪಿಐಎಲ್‌ ದಾಖಲಿಸುವ ಮೂಲಕ ಯಾಕೆ ಕಾಲ ಹರಣ ಮಾಡುತ್ತಿದ್ದಾರೆ? ಏಕೆಂದು ತಿಳಿಯುತ್ತಿಲ್ಲ. ಅವರು ಸಿನಿಮಾದ ಬಗ್ಗೆ ಹೆದರಿದ್ದಾರೆಯೋ ಅಥವಾ ಚೌಕೀದಾರನ ದಂಡದ ಬಗ್ಗೆಯೋ..?’ ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ದೇಶದ ಚೌಕೀದಾರ್‌(ಕಾವಲುಗಾರ) ಎಂದು ಕರೆದುಕೊಂಡಿದ್ದಾರೆ.

'ಮೋದಿ ಅವರನ್ನು ನಾಯಕನಾಗಿ ಬಿಂಬಿಸುತ್ತಿಲ್ಲ, ಅವರು ಈಗಾಗಲೇ ಹೀರೊ...ನನಗೆ ಮಾತ್ರ ಅಲ್ಲ, ದೇಶದ ಹಾಗೂ ಹೊರದೇಶಗಳ ಕೋಟ್ಯಂತರ ಜನರಿಗೂ ನಾಯಕನಾಗಿದ್ದಾರೆ. ನಾವು ತೆರೆಯ ಮೇಲೆ ತರುತ್ತಿರುವುದು ಸ್ಫೂರ್ತಿದಾಯಕ ಕಥೆಯನ್ನು' ಎಂದು ವಿವೇಕ್‌ ಹೇಳಿದ್ದಾರೆ.

‘ಸರಬ್‌ಜಿತ್‌’, ‘ಮೇರಿ ಕೋಮ್‌’ ಜೀವನಾಧಾರಿತ ಸಿನಿಮಾಗಳನ್ನು ನಿರ್ದೇಶಿಸಿರುವ ಒಮಂಗ್‌ ಕುಮಾರ್‌ ಈ ಚಿತ್ರದ ನಿರ್ದೇಶಕ. ಚುನಾವಣಾ ಆಯೋಗ ಚಿತ್ರದಿಂದ ನೀತಿ ಸಂಹಿತೆ ಉಲ್ಲಂಘನೆ ಇಲ್ಲ ಎಂದಿದ್ದರೂ, ನಿಗದಿಯಂತೆ ಏಪ್ರಿಲ್‌ 5ರಂದು ಚಿತ್ರ ಬಿಡುಗಡೆ ಅನುಮಾನ ಎನ್ನಲಾಗುತ್ತಿದೆ. ಮೊದಲ ಹಂತದ ಲೋಕಸಭಾ ಚುನಾವಣೆ ಏಪ್ರಿಲ್‌ 11ರಿಂದ ಪ್ರಾರಂಭವಾಗಲಿದ್ದು, ಏಪ್ರಿಲ್‌ 12ರಂದು ಪಿಎಂ ನರೇಂದ್ರ ಮೋದಿತೆರೆಕಾಣುವ ಸಾಧ್ಯತೆಯಿದೆ.

ಚಿತ್ರದ ಟ್ರೇಲರ್‌ ಎರಡು ವಾರಗಳಲ್ಲಿ 2.2 ಕೋಟಿಗೂ ಅಧಿಕ ವೀಕ್ಷಣೆ ಕಂಡಿದೆ. ಟ್ರೇಲರ್‌ನಲ್ಲಿ ನರೇಂದ್ರ ಮೋದಿ ಅವರ ಯೌವನದ ದಿನಗಳಿಂದ ದೇಶದ ಉನ್ನತ ಸ್ಥಾನವನ್ನು ಅಲಂಕರಿಸುವವರೆಗೂ ಪ್ರಮುಖ ಘಟನೆಗಳ ತುಣುಕುಗಳನ್ನು ಟ್ರೇಲರ್‌ನಲ್ಲಿ ಕಾಣಬಹುದಾಗಿದೆ.

ರಾಜಕಾರಣಿಗಳ ಜೀವನಾಧಾರಿತ ಪ್ರಮುಖ ಚಿತ್ರಗಳು

ಚಿತ್ರ– ರಾಜಕೀಯ ನಾಯಕರು

ಪಿಎಂ ನರೇಂದ್ರ ಮೋದಿ- ನರೇಂದ್ರ ಮೋದಿ

ಮೈ ನೇಮ್ ಈಸ್ ರಾಗಾ- ರಾಹುಲ್ ಗಾಂಧಿ

ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್-ಮನಮೋಹನ್ ಸಿಂಗ್

ಠಾಕ್ರೆ;ಶಿವಸೇನಾ ವರಿಷ್ಠ – ಬಾಳಾ ಠಾಕ್ರೆ

ಎನ್‌ಟಿಆರ್ ಕಥಾನಾಯಕುಡ– ಎನ್.ಟಿ. ರಾಮರಾವ್

ಯಾತ್ರಾ– ವೈ.ಎಸ್. ರಾಜಶೇಖರ ರೆಡ್ಡಿ

ದಿ ತಾಷ್ಕೆಂಟ್ ಫೈಲ್ಸ್– ಲಾಲ್‌ ಬಹದ್ದೂರ್ ಶಾಸ್ತ್ರಿ

ದಿ ಐರನ್ ಲೇಡಿ– ಇಂದಿರಾ ಗಾಂಧಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT