ಮಂಗಳವಾರ, ಡಿಸೆಂಬರ್ 1, 2020
26 °C

ತಮ್ಮದೇ ಯಶೋಗಾಥೆ ಕುರಿತ 'ಸೂರರೈ ಪೊಟ್ರು' ಬಗ್ಗೆ ಏನು ಹೇಳಿದ್ದಾರೆ ಗೋಪಿನಾಥ್‌?

ಇಟಿಬಿ ಶಿವಪ್ರಿಯನ್ Updated:

ಅಕ್ಷರ ಗಾತ್ರ : | |

ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್‌ ಜಿ.ಆರ್‌ ಗೋಪಿನಾಥ್‌ ಅವರ ಸಾಧನೆ ವರ್ಣಿಸುವ 'ಸೂರರೈ ಪೊಟ್ರು' ಎಂಬ ಚಿತ್ರ ತಮಿಳಿನಲ್ಲಿ ನಿರ್ಮಾಣವಾಗಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಿಗೆ ಡಬ್‌ ಆಗಿರುವ ಚಿತ್ರ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದ್ದು, ಅಪಾರ ಮೆಚ್ಚುಗೆ ಗಳಿಸಿದೆ. ಒಳ್ಳೆ ಅಭಿಪ್ರಾಯಗಳು ಚಿತ್ರ ತಂಡದಕ್ಕೆ ಸಂತಸ ಉಂಟು ಮಾಡಿರುವ ನಡುವೆಯೇ, ನಿಜವಾದ ಕಥಾ ನಾಯಕ ಕ್ಯಾಪ್ಟನ್‌ ಗೋಪಿನಾಥ್‌ ಅವರು ಸಿನಿಮಾದ ಕುರಿತು ಆಡಿರುವ ಮಾತು ಚಿತ್ರ ನಿರ್ಮಾಣದಲ್ಲಿ ತೊಡಗಿಕೊಂಡವರನ್ನು ಮತ್ತಷ್ಟು ಪುಳಕಿತಗೊಳಿಸಿದೆ.

ದೇಶದಲ್ಲಿ ವಿಮಾನ ಪ್ರಯಾಣ ಎಂಬುದು ದುಬಾರಿ ಎಂಬಂತಿದ್ದ ಕಾಲದಲ್ಲಿ ವಿಮಾನಯಾನ ಸಂಸ್ಥೆ ಹುಟ್ಟುಹಾಕಿದ್ದು, ಸಾಮಾನ್ಯರಿಗೂ ವಿಮಾನ ಯಾನ ಸಾಧ್ಯವಾಗಿಸಿದ್ದು, ಅದನ್ನು ಕೈಗೆಟುಕುವ ದರಕ್ಕೆ ತಂದು ನಿಲ್ಲಿಸಿದ್ದು ಗೋಪಿನಾಥ್‌. ಅವರು ಬುಧವಾರ ರಾತ್ರಿ ಅಮೆಜಾನ್‌ ಪ್ರೈಮ್‌ ವಿಡಿಯೊದಲ್ಲಿ ಬಿಡುಗಡೆಯಾದ 'ಸೂರರೈ ಪೊಟ್ರು' ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

'ಸಿನಿಮಾ ಕಾಲ್ಪನಿಕ ಎನಿಸುತ್ತದೆ. ಆದರೆ, ನನ್ನ ಪುಸ್ತಕದ ನಿಜವಾದ ಸಾರವನ್ನು ಹಿಡಿದಿಡುವಲ್ಲಿ ಅದು ಯಶಸ್ವಿಯಾಗಿದೆ,' ಎಂದು ಗೋಪಿನಾಥ್ ತಮ್ಮ ಪುಸ್ತಕ Simply Fly: A Deccan Odyssey (ಸಿಂಪ್ಲಿ ಫ್ಲೈ: ಎ ಡೆಕ್ಕನ್‌ ಒಡಿಸ್ಸಿ) ಆಧಾರಿತ ಚಲನಚಿತ್ರದ ಕುರಿತು ಹೇಳಿದ್ದಾರೆ. 'ಪ್ರಜಾವಾಣಿ' ಸೋದರ ಪತ್ರಿಕೆ 'ಡೆಕ್ಕನ್‌ ಹೆರಾಲ್ಡ್‌' ಪ್ರತಿನಿಧಿಯೊಂದಿಗೆ ಮಾತನಾಡಿರುವ ಅವರು, 'ಕೊರೊನಾ ವೈರಸ್‌ನ ಸಾಂಕ್ರಾಮಿಕದ ಈ ಕತ್ತಲೆಯ ಕಾಲದಲ್ಲಿ ಸಿನಿಮಾ ತುಂಬಾ ಸ್ಫೂರ್ತಿದಾಯವಾಗಿ ಮೂಡಿ ಬಂದಿದೆ,' ಎಂದು ಸಂತಸದಿಂದ ಹೇಳಿದ್ದಾರೆ.

ಭಾರತೀಯ ವಾಯುಪಡೆಯ ನಿವೃತ್ತ ಕ್ಯಾಪ್ಟನ್‌, ಗೋಪಿನಾಥ್‌ ಅವರು ಸಿನಿಮಾದಲ್ಲಿ ವಿಶೇಷವಾಗಿ ತಮ್ಮ ಪತ್ನಿ ಭಾರ್ಗವಿ ಗೋಪಿನಾಥ್ ಅವರ ಪಾತ್ರವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಗೋಪಿನಾಥ್‌ ಅವರು, ಏರ್ ಡೆಕ್ಕನ್ ಅನ್ನು ಪ್ರಾರಂಭಿಸಲು ಸೆಣಸಾಡುತ್ತಿದ್ದ ಹೊತ್ತಿನಲ್ಲಿ ಅವರಿಗೆ ನೈತಿಕ ಬಲವಾಗಿ ನಿಂತಿದ್ದವರು ಭಾರ್ಗವಿ. ಈ ಚಿತ್ರದಲ್ಲಿ ನಟಿ ಅಪರ್ಣಾ ಬಾಲಮುರಳಿ ಭಾರ್ಗವಿ ಅವರ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

'ಚಿತ್ರದಲ್ಲಿ ನನ್ನಾಕೆಯ ಪಾತ್ರ ಅತ್ಯಂತ ಸೊಗಸಾಗಿ ಮೂಡಿಬಂದಿದೆ. ಸ್ವಂತ ವಿವೇಚನೆಯುಳ್ಳ, ಕಾಠಿಣ್ಯವಿದ್ದರೂ, ಮೃಧು ಸ್ವಭಾವಿಯಾದ, ದೃಢವಾದ, ಉದ್ಯಮಿಗಳಾಗಬಲ್ಲ ಮಹಿಳೆಯರಿಗೆ ಸ್ಫೂರ್ತಿದಾಯಕವಾಗಬಲ್ಲ ಅವರ ನಡೆಯನ್ನು ಚಿತ್ರದಲ್ಲಿ ಸಮರ್ಥವಾಗಿ ಬಿಂಬಿಸಲಾಗಿದೆ,' ಎಂದು ಅವರು ಹೇಳಿದ್ದಾರೆ.

ಈ ಹಿಂದೆಯೇ ಹೇಳಿದಂತೆ 'ಸೂರರೈ ಪೊಟ್ರು' ಸಿನಿಮಾ ಗೋಪಿನಾಥ್ ಅವರ 2011ರ ಅತಿ ಬೇಡಿಕೆಯ 'ಸಿಂಪ್ಲಿ ಫ್ಲೈ: ಎ ಡೆಕ್ಕನ್ ಒಡಿಸ್ಸಿ'ಯ ರೂಪಾಂತರ. ಪುಸ್ತಕವನ್ನು ಚಲನಚಿತ್ರವಾಗಿಸುವುದು ದಿವಂಗತ ಗಿರೀಶ್ ಕಾರ್ನಾಡ್ ಅವರ ಕಲ್ಪನೆಯಾಗಿತ್ತು. ಪುಸ್ತಕವು 'ಒಳ್ಳೆ ಸಿನಿಮಾ ಮೌಲ್ಯವನ್ನು' ಹೊಂದಿದೆ ಎಂದು ಕಾರ್ನಾಡ್ ಅಭಿಪ್ರಾಯಪಟ್ಟ ನಂತರ, ಏರ್ ಡೆಕ್ಕನ್ ಸಂಸ್ಥಾಪಕ ಗೋಪಿನಾಥ್ ಅವರು ಬಾಲಿವುಡ್ ನಿರ್ಮಾಪಕ ಗುಣೀತ್ ಮೊಂಗಾಗೆ ಹಕ್ಕುಗಳನ್ನು ನೀಡಿದರು.

ಗೋಪಿನಾಥ್‌ ಅವರು ಗುರುವಾರ ರಾತ್ರಿ ಒಟಿಟಿಯಲ್ಲಿ ಚಿತ್ರವನ್ನು ವೀಕ್ಷಿಸಿದ್ದಾರೆ. ಸೂರ್ಯ ನಿಜಕ್ಕೂ 'ಪವರ್‌ಫುಲ್‌' ಆಗಿ ಕಾಣಿಸಿದ್ದಾರೆ. 'ಕನಸುಗಳನ್ನು ನನಸು ಮಾಡಿಕೊಳ್ಳಬೇಕೆಂಬ ಹುಚ್ಚುತವನ್ನು ಹೊಂದಿರುವ ಉದ್ಯಮಿಯ ಪಾತ್ರವನ್ನು ಅವರು ನಿಭಾಯಿಸಿದ್ದಾರೆ. ಸಿನಿಮಾ ನೋಡುವಾಗ ನನಗೆ ನನ್ನ ಹಿಂದಿನ ಘಟನೆಗಳೆಲ್ಲವೂ ನೆನಪಾದವು," ಎಂದು ಅವರು ಹೇಳಿಕೊಂಡಿದ್ದಾರೆ.

ತಮ್ಮ ಪುಸ್ತಕವನ್ನು ನಾಟಕೀಯಗೊಳಿಸಲಾಗುತ್ತದೆ ಎಂಬುದರ ಅರಿವು ಗೋಪಿನಾಥ್‌ ಅವರಿಗೆ ಮೊದಲೇ ಇತ್ತು. ಹೀಗಾಗಿಯೇ, ಅವರು ಒಂದು ಷರತ್ತು ಹಾಕಿದ್ದರು. ಪುಸ್ತಕದ ಮೂಲತತ್ವಕ್ಕೆ ತಕ್ಕಂತೆ ಸಿನಿಮಾ ಮೂಡಿಬರಬೇಕು ಎಂಬುದೇ ಆ ಷರತ್ತಾಗಿತ್ತು. ಈ ವಿಷಯವನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.

'ನಾನು ಸಿನಿಮಾ ನೋಡಿದೆ. ಗ್ರಾಮೀಣ ಹಿನ್ನೆಲೆ ಹೊಂದಿರುವ, ಸಾಧಿಸುವ ಅಚಲ ವಿಶ್ವಾಸ ಹೊಂದಿರುವ ಉದ್ಯಮಿಗಳ ಹೋರಾಟಗಳು, ಸವಾಲುಗಳ ವಿರುದ್ಧದ ಗೆಲುವನ್ನು ಸಿನಿಮಾದಲ್ಲಿ ನಾಟಕೀಯವಾಗಿ ತೋರಿಸಲಾಗಿದೆಯಾದರೂ, ಅದು ನಿಜವೇ ಹೌದು,' ಎಂದು ಅವರು ಹೇಳಿದ್ದಾರೆ.

'ಸಿಕ್ಯಾ ಎಂಟರ್‌ಟೈನ್‌ಮೆಂಟ್' ಮತ್ತು ಸೂರ್ಯ ಅವರ '2ಡಿ ಪ್ರೊಡಕ್ಷನ್ಸ್‌' ಸಹಯೋಗದಲ್ಲಿ ನಿರ್ಮಾಣಗೊಂಡಿರುವ ಈ ಚಲನಚಿತ್ರವನ್ನು ಕನ್ನಡ, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಡಬ್ ಮಾಡಲಾಗಿದೆ. ನಿರ್ದೇಶಕಿ ಸುಧಾ ಕೊಂಗರ ಚಿತ್ರ ನಿರ್ದೇಶಿಸಿದ್ದಾರೆ.  

ಒಟಿಟಿಯಲ್ಲಿ ಚಿತ್ರ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಮಾಜಿಕ ತಾಣಗಳಲ್ಲೂ ಸದಭಿಪ್ರಾಯ ಕೇಳಿ ಬಂದಿದೆ. ಸೂರ್ಯ ಅಭಿಮಾನಿಗಳು ಹೆಚ್ಚು ಥ್ರಿಲ್‌ ಆಗಿದ್ದಾರೆ. ಚಿತ್ರದಲ್ಲಿನ ಮಹಿಳೆಯ ದೃಢವಾದ ಪಾತ್ರಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ತಮ್ಮ ಪುಸ್ತಕದ ಆಶಯಗಳಿಗೆ ಚ್ಯುತಿಯುಂಟಾಗಬಾರದು ಎಂಬ ಗೋಪಿನಾಥ್‌ ಅವರ ಕಟ್ಟಪ್ಪಣೆಯ ಹಿನ್ನೆಲೆಯಲ್ಲಿ ಸೂರರೈ ಪೊಟ್ರು ಚಿತ್ರತಂಡವು ಸಿನಿಮಾವನ್ನು ಅತ್ಯಂತ ಜಾಗರೂಕವಾಗಿ ನಿರ್ಮಾಣ ಮಾಡಿದೆ. ಸ್ವತಃ ನಟ ಸೂರ್ಯ ಅವರು ಗೋಪಿನಾಥ್‌ ಅವರನ್ನು ಭೇಟಿಯಾಗಿ, ಕೆಲ ಕಾಲ ಅವರೊಂದಿಗೆ ಒಡನಾಡಿ ಚಿತ್ರಕ್ಕೆ ಬೇಕಾದ ಪೂರಕ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.

ಚಿತ್ರವು ಗೋಪಿನಾಥ್ ಅವರ ಜೀವನದ ಬಹುತೇಕ ಎಲ್ಲ ಅಂಶಗಳನ್ನು ಒಳಗೊಂಡಿದೆ. ಅವರ ಹಳ್ಳಿ ಬದುಕು, ಸೈನ್ಯಕ್ಕೆ ಸೇರಿದ್ದು, ಬಾಂಗ್ಲಾದೇಶವನ್ನು ಸ್ವತಂತ್ರಗೊಳಿಸಿದ 1971 ರ ಭಾರತ-ಪಾಕಿಸ್ತಾನ ಯುದ್ಧ, ಕೃಷಿಗೆ ಮರಳಿದ್ದು, 'ಏರ್ ಡೆಕ್ಕನ್' ಸ್ಥಾಪಿಸುವುದರ ಹಿಂದಿನ ಹೋರಾಟವನ್ನು ವರ್ಣಿಸಲಾಗಿದೆ. 1951 ರಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಜನಿಸಿದ ಗೋಪಿನಾಥ್, ಹಾಸನದ ಗೋರೂರಿನಲ್ಲಿ ಬೆಳೆದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು