ಮಂಗಳವಾರ, ಆಗಸ್ಟ್ 3, 2021
22 °C

ಮತ್ತೆ ಬರ್ತಾಳೆ ಚಂದ್ರಮುಖಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಘವ ಲಾರೆನ್ಸ್‌ ಮತ್ತು ಹಾರರ್‌ ಸಿನಿಮಾಗಳಿಗೆ ಬಿಡಿಸಲಾಗದ ನಂಟು. ತಮಿಳಿನಲ್ಲಿ ಸರಣಿ ಹಾರರ್‌ ಸಿನಿಮಾಗಳಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದು ಅವರ ಹೆಗ್ಗಳಿಕೆ. ಕಳೆದ ವರ್ಷ ಅವರ ನಿರ್ದೇಶನದ ‘ಕಾಂಚನ 3’ ಚಿತ್ರ ತೆರೆ ಕಂಡಿತ್ತು. 2007ರಲ್ಲಿ ತೆರೆ ಕಂಡಿದ್ದ ‘ಮುನಿ’ ಚಿತ್ರದ ಸೀಕ್ವೆಲ್ ಇದು. ಈ ಸರಣಿಯ ಎಲ್ಲಾ ಚಿತ್ರಗಳಿಗೂ ಅವರೇ ಆ್ಯಕ್ಷನ್‌ ಕಟ್‌ ಹೇಳಿ, ಪ್ರಮುಖ ಪಾತ್ರದಲ್ಲೂ ನಟಿಸಿದ್ದರು.

ಹಾರರ್‌ ಜಾಡಿಗೆ ಅವರು ಹೊರಳಲು ‘ಮುನಿ’ ಸಿನಿಮಾದ ಯಶಸ್ಸೇ ಕಾರಣ. 2011ರಲ್ಲಿ ಅವರು ‘ಮುನಿ 2’ ಚಿತ್ರ ನಿರ್ಮಿಸಿದ್ದರು. ಇದಕ್ಕೆ ‘ಕಾಂಚನ’ ಎಂದು ಹೆಸರಿಡಲಾಗಿತ್ತು. ಪ್ರೇಕ್ಷಕರಿಂದ ಇದಕ್ಕೆ ಸಿಕ್ಕಿದ ಅದ್ಭುತ ಪ್ರತಿಕ್ರಿಯೆ ಕಂಡು 2015ರಲ್ಲಿ ‘ಕಾಂಚನ 2’ ನಿರ್ಮಿಸಿದ್ದರು. ಬಳಿಕ ಅವರು ನಿರ್ಮಿಸಿದ್ದ ‘ಕಾಂಚನ- 3’ ಸಿನಿಮಾ ‘ಮುನಿ’ ಸರಣಿಯ ನಾಲ್ಕನೇ ಚಿತ್ರ. ಕಾಂಚನ ಸಿನಿಮಾವು ‘ಕಲ್ಪನ’ ಹೆಸರಿನಲ್ಲಿ ಕನ್ನಡಕ್ಕೆ ರಿಮೇಕ್ ಆಗಿತ್ತು. ಇದರಲ್ಲಿ ಉಪೇಂದ್ರ ನಟಿಸಿದ್ದರು.

2005ರಲ್ಲಿ ಪಿ. ವಾಸು ನಿರ್ದೇಶನದ ‘ಚಂದ್ರಮುಖಿ’ ಸಿನಿಮಾ ತಮಿಳಿನಲ್ಲಿ ಯಶಸ್ಸು ಕಂಡಿತ್ತು. ರಜನಿಕಾಂತ್ ಇದರಲ್ಲಿ ನಟಿಸಿದ್ದರು. ಇದು ಕನ್ನಡದಲ್ಲಿ ‘ಆಪ್ತಮಿತ್ರ’ ಹೆಸರಿನಲ್ಲಿ ತೆರೆ ಕಂಡಿತ್ತು. ವಾಸು ಅವರೇ ಇದಕ್ಕೂ ಆ್ಯಕ್ಷನ್‌ ಕಟ್‌ ಹೇಳಿದ್ದರು.

ಈಗ ಕಾಲಿವುಡ್‌ನಲ್ಲಿ ‘ಚಂದ್ರಮುಖಿ 2’ ಸಿನಿಮಾ ನಿರ್ಮಾಣವಾಗುತ್ತಿದ್ದು, ರಾಘವ ಲಾರೆನ್ಸ್‌ ಅವರೇ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಅಧಿಕೃತ ಸುದ್ದಿ ಹೊರಬಿದ್ದಿದೆ. ಈ ಸಿನಿಮಾ ನಿರ್ದೇಶಿಸುತ್ತಿರುವುದು ಪಿ. ವಾಸು. ಇದಕ್ಕೆ ಸನ್‌ ಪಿಕ್ಚರ್ಸ್‌ ಬಂಡವಾಳ ಹೂಡುತ್ತಿದೆ.

ರಾಘವ ಅವರಿಗೆ ಚಿತ್ರ ನಿರ್ಮಾಣ ಸಂಸ್ಥೆಯಿಂದ ಮುಂಗಡವಾಗಿ ₹ 3 ಕೋಟಿ ಸಂಭಾವನೆ ನೀಡಲಾಗಿದೆಯಂತೆ. ಈ ಹಣವನ್ನು ಅವರು ಪಿಎಂ ಕೇರ್ಸ್‌, ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿ, ಎಫ್‌ಇಎಫ್‌ಎಸ್‌ಐ ಸಂಘ, ನೃತ್ಯ ಕಲಾವಿದರ ಸಂಘ, ಅಂಗವಿಕಲರ ಸಂಘ, ಅವರ ಹುಟ್ಟೂರಾದ ರಾಯಪುರಂನ ದೇಸಿಯ ನಗರದ ದಿನಗೂಲಿ ನೌಕರರು ಮತ್ತು ನಿವಾಸಿಗಳಿಗೆ ಹಂಚಲು ನಿರ್ಧರಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು