ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನರಾಯಪಟ್ಟಣದಚೆಂದುಳ್ಳಿ ಚೆಲುವಿ

Last Updated 18 ಜುಲೈ 2019, 19:30 IST
ಅಕ್ಷರ ಗಾತ್ರ

ಬಾಲ್ಯದಿಂದಲೂ ಬಣ್ಣದ ಬದುಕೆಂದರೆ ಎಲ್ಲಿಲ್ಲದ ಪ್ರೀತಿ. ಬಣ್ಣ ಹಚ್ಚಿಕೊಂಡು ನಟಿಸಲು ಸದಾ ಉತ್ಸುಕಳಾಗಿದ್ದೆ. ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕೆಂಬ ತುಡಿತದಿಂದಲೇಪಿಯು‌ ಮುಗಿಯುತ್ತಿದ್ದಂತೆ ಹಾಸನದ ಚನ್ನರಾಯಪಟ್ಟಣದಿಂದ ಬೆಂಗಳೂರಿಗೆ ಬಂದೆ ಎನ್ನುತ್ತಾರೆ ಉದಯ ಟಿ.ವಿಯಲ್ಲಿ ಪ್ರಸಾರವಾಗುತ್ತಿರುವ ‘ನಾಯಕಿ’ ಧಾರಾವಾಹಿಯ ನಟಿ ರಚನಾ.

ಪಾತ್ರ ಚಿಕ್ಕದಿರಲಿ, ದೊಡ್ಡದಿರಲಿ; ಒಟ್ಟಿನಲ್ಲಿ ನಟನೆಯನ್ನೇ ವೃತ್ತಿಯಾಗಿ ತೆಗೆದುಕೊಳ್ಳಬೇಕು ಎಂಬ ಆಸೆ ನನ್ನದಷ್ಟೆ ಅಲ್ಲ, ನನ್ನ ತಂದೆ ತಾಯಿಯದ್ದೂ ಹೌದು. ಶಾಲೆಯಲ್ಲಿದ್ದಾಗ ನೃತ್ಯ ಮತ್ತು ನಾಟಕಗಳಲ್ಲಿ ಭಾಗವಹಿಸುತ್ತಿದ್ದೆ. ನಟನೆ ಚೆನ್ನಾಗಿ ಕಲಿತುಕೊಳ್ಳಲಿ ಎಂದು ಆರಂಭದಲ್ಲಿ ನಟನಾ ತರಬೇತಿ ತರಗತಿಗಳಿಗೆ ಸೇರಿಸಿದರು. ಇದು ನಟನೆಯ ಆರಂಭಿಕಪಟ್ಟುಗಳನ್ನು ಅರಿತುಕೊಳ್ಳಲು ನೆರವಾಯಿತು ಎನ್ನುವ ಅವರು ‘ನಾಯಕಿ’ ಧಾರಾವಾಹಿಗಾಗಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ. ನಾಯಕಿ ಪಾತ್ರದ ಸ್ನೇಹಿತೆಯಾಗಿ, ಬಡತನದಲ್ಲಿ ಬೆಳೆದಿದ್ದರೂ ಸ್ವಾಭಿಮಾನ ಬಿಟ್ಟುಕೊಡದ, ಮೃದು ಸ್ವಭಾವದ ನಾಯಕಿಗೆ ಬೆಂಗಾವಲಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಓರಗೆಯವರೆಲ್ಲರೂ ಕಾಲೇಜು, ಕೋರ್ಸ್‌ ಎಂದು ತಲೆಕೆಡಿಸಿಕೊಂಡಿರುವ ಈ ಹೊತ್ತಿನಲ್ಲಿ ರಚನಾಗೆ ನಟನಾಸಕ್ತಿಯ ಮುಂದೆ ಅವೆಲ್ಲವೂ ಗೌಣವೆನಿಸಿದೆ. ಯಾವುದೇ ಕ್ಷೇತ್ರದಲ್ಲಿ ತೊಡಗಿಕೊಂಡರೂ ಅದರಲ್ಲಿ ಆಸಕ್ತಿ ಇರಬೇಕು. ಓದುವುದಕ್ಕಿಂತಲೂ ಕ್ಯಾಮೆರಾವನ್ನು ಎದುರಿಸಲೇಬೇಕು ಎಂದು ಹಲವು ವರ್ಷಗಳಿಂದ ಸಿದ್ಧತೆ ಮಾಡಿಕೊಂಡು ಬಂದಿದ್ದೇನೆ. ಇದರ ಪರಿಣಾಮ ಉದಯ ಟಿ.ವಿಯಲ್ಲಿ ಹಲವು ಸೀರಿಯಲ್‌ಗಳಿಗೆ ಆಡಿಷನ್‌ ನೀಡಿದ್ದೆ. ಆದರೆ ಈ ಬಾರಿ ಆಯ್ಕೆಯಾಗಿದ್ದೇನೆ ಎನ್ನುವ ಖುಷಿ ಅವರದ್ದು.

ಧಾರಾವಾಹಿಯ ಪಾತ್ರಕ್ಕೆ ಬಂದರೆ ಬಡಹುಡುಗಿಯ, ಜೋರು ಮಾತಿನ, ಗೆಳತಿಗೆ ಸಾಥ್‌ ಕೊಡುವ ಪಾತ್ರ. ಈ ಪಾತ್ರಕ್ಕೂ ನನಗೂ ಸಾಕಷ್ಟು ಸಾಮ್ಯತೆಯಿದೆ. ಸದಾ ಚಿನಕುರಳಿಯಂತೆ ಮಾತನಾಡುವುದು, ಸುತ್ತಲಿನವರನ್ನೂ ನಗಿಸುವುದೆಂದರೆ ನನಗಿಷ್ಟ. ಸದ್ಯಕ್ಕೆ ಈ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಜನರ ಪ್ರೀತಿ ಗಳಿಸಬೇಕೆಂಬ ಧ್ಯೇಯ ಇಟ್ಟುಕೊಂಡಿದ್ದೇನೆ. ಅಭಿನಯಕ್ಕೆ ಅವಕಾಶವಿರುವ ಮತ್ತು ಒಳ್ಳೆಯ ಪಾತ್ರಗಳು ಸಿನಿಮಾದಲ್ಲಿಸಿಕ್ಕಿದರೆ ಬೆಳ್ಳಿತೆರೆಗೂ ಜಿಗಿಯುವ ಕನಸು ಅವರದ್ದು.

ತರಗತಿಯಲ್ಲಿ ಕಲಿಯುವ ನಟನೆಗೂ, ಕ್ಯಾಮೆರಾ ಮುಂದೆ ಹೇಳುವ ಸಂಭಾಷಣೆಗೂ ತುಂಬಾ ವ್ಯತ್ಯಾಸವಿದೆ. ಸದ್ಯಕ್ಕೆ ಕನ್ನಡಿಯೇ ನನಗೆ ಗುರು. ಅದರ ಮುಂದೆ ನಿಂತು ನಟಿಸಿ, ಸ್ವವಿಮರ್ಶೆ ಮಾಡಿಕೊಳ್ತಾ ಇದ್ದೀನಿ. ಹೆಚ್ಚು ಧಾರಾವಾಹಿ ವೀಕ್ಷಣೆ, ಕನ್ನಡ ದಿನಪತ್ರಿಕೆ, ಪುಸ್ತಕಗಳನ್ನು ಓದುವ ಹವ್ಯಾಸದಮೂಲಕ ಭಾಷೆಯನ್ನು ಮತ್ತಷ್ಟು ಸ್ಫುಟಗೊಳಿಸಿಕೊಳ್ಳಲುಪ್ರಯತ್ನಿಸುತ್ತಿದ್ದೇನೆ ಎನ್ನುವ ಅವರಿಗೆ ನಟನೆಯಲ್ಲಿ ರಾಧಿಕಾ ಪಂಡಿತ್‌ ಅಂದರೆ ಅಚ್ಚುಮೆಚ್ಚು.

ಧಾರಾವಾಹಿಯಿಂದ ಸಿನಿಮಾ ಕ್ಷೇತ್ರಕ್ಕೆ ಬಂದು, ಹಂತ ಹಂತವಾಗಿ ಏಳಿಗೆ ಕಂಡ ರಾಧಿಕಾರ ಒಟ್ಟಂದದ ಸಿನಿ ಹಾದಿಯ ಬಗ್ಗೆ ರಚನಾಗೆ ಅಪಾರ ಅಭಿಮಾನವಂತೆ.ಇಂತಹುದೇ ಪಾತ್ರಗಳನ್ನು ಮಾಡಬೇಕೆಂಬ ಯಾವ ಕನಸೂ ಇಲ್ಲ. ಪಾತ್ರ ಯಾವುದೇ ಇರಲಿ ಅದರ ಮೂಲಕ ಗುರುತಿಸುವಂತಾಗಬೇಕು ಎನ್ನುವುದು ಸದ್ಯಕ್ಕೆ ಅವರ ಮುಂದಿರುವ ಗುರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT