ಚೋರ ಚರಣದಾಸನ ಜೀವ ಡಿಂಗ

ಮಂಡ್ಯ ರಮೇಶ್ ಅವರ ನಟನಾ ಸಂಸ್ಥೆಯಿಂದ ಉದಯಿಸಿದ ಪ್ರತಿಭೆ ನಟ ಆರವ ಗೌಡ. ಅವರ ಮೊದಲಿನ ಹೆಸರು ಲೋಕೇಶ್ ಬಸವಟ್ಟಿ. ‘ಪಾರ್ವತಿ ಪರಮೇಶ್ವರ’ ಧಾರಾವಾಹಿಯಲ್ಲಿ ಲಾಯರ್ ಗುಂಡಣ್ಣನಾಗಿ ಕಿರುತೆರೆ ವೀಕ್ಷಕರಿಗೂ ಚಿರಪರಿಚಿತ. ಇವರು ನಾಯಕನಾಗಿ ನಟಿಸಿರುವ ಮೂರನೇ ಚಿತ್ರ ‘ಡಿಂಗ’ ಇದೇ ಶುಕ್ರವಾರ (ಜ.31) ತೆರೆಕಾಣುತ್ತಿದೆ. ಇದು ಐಫೋನ್‌ನಲ್ಲಿ ಚಿತ್ರೀಕರಣವಾದ ಚಿತ್ರ; ಏಷ್ಯಾದಲ್ಲೇ ಮೊದಲ ಪ್ರಯತ್ನ ಎನ್ನುವ ಶ್ರೇಯಕ್ಕೂ ಪಾತ್ರವಾಗುತ್ತಿದೆ. ‘ಡಿಂಗ’ ಕುರಿತು ಆಸಕ್ತಿದಾಯಕ ಮಾಹಿತಿಗಳನ್ನು ಅವರು ‘ಸಿನಿಮಾ ಪುರವಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.
* ‘ಡಿಂಗ’ ಚಿತ್ರ ಶುರುವಾಗಿದ್ದು ಹೇಗೆ?
ಈ ಚಿತ್ರದ ನಾಯಕಿ ಅನುಷಾ ಮತ್ತು ನಾನು ಜೀ ಕನ್ನಡ ವಾಹಿನಿಯ ‘ಶ್ರೀಮಾನ್ ಶ್ರೀಮತಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದೆವು. ‘ಡಾನ್ಸ್ ಕರ್ನಾಟಕ ಡಾನ್ಸ್’ ರಿಯಾಲಿಟಿ ಶೋನಲ್ಲೂ ಕಾಣಿಸಿಕೊಂಡಿದ್ದೆವು. ಅಭಿಷೇಕ್ ಜೈನ್ ನಿರ್ದೇಶನದ ‘ಲೌಡ್ ಸ್ಪೀಕರ್’ ಚಿತ್ರದಲ್ಲೂ ಅನುಷಾ ನಾಯಕಿಯಾಗಿ ನಟಿಸಿದ್ದರು. ಅಭಿಷೇಕ್ ವಿಶಿಷ್ಟ ಪರಿಕಲ್ಪನೆಯ ಕಥೆ ಹೇಳಿದಾಗ ನಾವು ಮೂವರು ಅದನ್ನು ಸಿನಿಮಾ ಮಾಡಲು ನಿರ್ಧರಿಸಿದೆವು. ಆಗ ಮೈಸೂರಿನ ಡಾ. ಮೂಗೂರು ಮಧು ದೀಕ್ಷಿತ್ ಅವರನ್ನು ಸಂಪರ್ಕಿಸಿದೆವು. ಅವರ ಗುರುಕುಲದಲ್ಲೇ ಕಥೆ ಕೇಳಿದ ತಕ್ಷಣ ಅವರು ಸಿನಿಮಾ ನಿರ್ಮಿಸಲು ಒಪ್ಪಿ, ಹತ್ತು ಸಾವಿರ ಮುಂಗಡ ನೀಡಿದರು. ಐಫೋನ್‌ನಲ್ಲಿ ಚಿತ್ರ ಮಾಡುವ ಹೊಸ ಪ್ರಯತ್ನಕ್ಕೆ ದೀಕ್ಷಿತ್ ಅವರ ಜತೆಗೆ ಇನ್ನೂ ಹತ್ತು ನಿರ್ಮಾಪಕರು ಕೈಜೋಡಿಸಿದರು. ಸಿನಿಮಾ ಪೂರ್ಣವಾಗುವವರೆಗೂ ಅವರ‍್ಯಾರೂ ಚಿತ್ರೀಕರಣದ ಸೆಟ್ ಕಡೆಗೂ ತಲೆಹಾಕಲಿಲ್ಲ. ಅವರು ನೀಡಿದ ಆರ್ಥಿಕ ಇಂಧನದಿಂದ ‘ಡಿಂಗ’ ಇಂದು ಎಲ್ಲರ ಮನೆಮಾತಾಗುತ್ತಿದೆ.
* ನಿಮ್ಮ ಪಾತ್ರದ ಬಗ್ಗೆ ಹೇಳಿ...
ಇದರಲ್ಲಿ ನಾನು ಕ್ಯಾನ್ಸರ್ ರೋಗಿ. ಕಾಯಿಲೆ ಅಂತಿಮ ಹಂತದಲ್ಲಿರುತ್ತದೆ. ನಾನು ಸಾಕಿದ್ದ ನಾಯಿಯನ್ನು, ನಾನು ಸಾಯುವುದರೊಳಗೆ ನನ್ನಷ್ಟೇ ಪ್ರೀತಿಯಿಂದ ಸಾಕುವಂತಹ ವ್ಯಕ್ತಿ ಬಳಿ ಸೇರಿಸುವುದು ನನ್ನ ಗುರಿಯಾಗಿರುತ್ತದೆ. ಅಂತಹ ವ್ಯಕ್ತಿಗಾಗಿ ಹುಡುಕುತ್ತಿರುತ್ತೇನೆ. ನಾಯಿಯ ರಕ್ತದ ಗುಂಪು, ಜಾತಕವೂ ನನ್ನ ಹುಡುಕಾಟದಲ್ಲಿರುವ ವ್ಯಕ್ತಿಗೂ ತಾಳೆಯಾಗಬೇಕೆನ್ನುವುದು ನನ್ನ ಆಸೆ. ಇದರ ನಡುವೆ ಏನಾಗಲಿದೆ ಎನ್ನುವುದೇ ಚಿತ್ರದ ಹೂರಣ. ಹಾಗಂಥ ಇದು ನಾಯಿಯ ಸಿನಿಮಾ ಅಲ್ಲ, ನಾಯಿಯ ಪಾತ್ರವು ಚಿತ್ರದ ಒಂದು ಭಾಗ.
* ಡಿಂಗ ನಿಮಗೆ ಸಿಕ್ಕಿದ್ದೆಲ್ಲಿ?
ಚಿತ್ರದಲ್ಲಿ ಕಾಣಿಸಿಕೊಂಡಿರುವ ನಾಯಿ ‘ಡಿಂಗ’ ನನ್ನ ಪಕ್ಕದ ಮನೆಯವರದ್ದು. ಆ ನಾಯಿ ಕಂಡರೆ ನನಗೂ ಇಷ್ಟ. ದೀಕ್ಷಿತ್ ಅವರಿಗೆ ಕಥೆ ಹೇಳಿ ಮೂವರು ಕಾರಿನಲ್ಲಿ ಬರುತ್ತಿದ್ದಾಗ ಚಿತ್ರದಲ್ಲಿ ಬರುವ ನಾಯಿಗೆ ಏನೆಂದು ಹೆಸರಿಡುವುದೆಂಬ ಪ್ರಶ್ನೆ ಹುಟ್ಟಿತು. ಆಗ ಮೂವರ ಬಾಯಲ್ಲೂ ಏಕ ಕಾಲಕ್ಕೆ ಹೊರಟ ಹೆಸರು ‘ಡಿಂಗ’. ಅದೇ ಚಿತ್ರದ ಶೀರ್ಷಿಕೆಯೂ ಆಯಿತು. ಈ ಡಿಂಗನನ್ನು ಸಾರ್ವಜನಿಕವಾಗಿ ನಾವು ಎಲ್ಲಿಯೂ ತೋರಿಸಿಲ್ಲ. ಚಿತ್ರ ಬಿಡುಗಡೆಯಾದ ಮೇಲೆ ‘ಡಿಂಗ’ ಸೆಲೆಬ್ರಿಟಿಯಾಗುವುದರಲ್ಲಿ ಅನುಮಾನವೇ ಇಲ್ಲ.
* ಈ ಸಿನಿಮಾದ ಸಂದೇಶ
ಸಿನಿಮಾದ ಅವಧಿ 1 ಗಂಟೆ 47 ನಿಮಿಷ. ಇಷ್ಟರಲ್ಲಿ ಸಮಾಜ ಬದಲಿಸುವ ಭ್ರಮೆಯಲ್ಲಿ ನಾವಿಲ್ಲ. ಸಂಬಂಧಗಳ ಬಾಂಧವ್ಯವನ್ನು ಇದರಲ್ಲಿ ಕಟ್ಟಿಕೊಟ್ಟಿದ್ದೇವೆ. ಶೀರ್ಷಿಕೆ ಜತೆಗೆ ‘ಬಿ ಪಾಸಿಟಿವ್’ ಟ್ಯಾಗ್‌ಲೈನ್ ಕೊಟ್ಟಿದ್ದೇವೆ. ಹಾಸ್ಯ, ಭಾವುಕತೆಯೂ ಇದೆ. ಸಿನಿಮಾ ನೋಡಿದ ಮೇಲೆ ಅದು ಎರಡು ದಿನಗಳ ಮಟ್ಟಿಗಾದರೂ ಕಾಡದೇ ಇರದು.
* ಬಣ್ಣದ ಬದುಕಿಗೆ ಕಾಲಿಟ್ಟ ಹಿನ್ನೆಲೆ ಹೇಳಿ...
ರಂಗಭೂಮಿ ಹಿನ್ನೆಲೆಯಿಂದ ಬಂದವನು ನಾನು. ಮಂಡ್ಯ ರಮೇಶ್ ನಿರ್ದೇಶನದ ‘ಚೋರ ಚರಣದಾಸ’ ನಾಟಕ ನನಗೆ ಬದುಕು ಕೊಟ್ಟಿತು. ಈ ನಾಟಕದಲ್ಲಿನ ನನ್ನ ನಟನೆ ನೋಡಿ ಸಿಹಿಕಹಿ ಚಂದ್ರು ಮತ್ತು ಸಹಿಕಹಿ ಗೀತಾ ಅವರು ನನ್ನನ್ನು ಕಿರುತೆರೆಗೆ ಕರೆತಂದರು. ‘ಚೋರ ಚರಣದಾಸ’ನ ನಟನೆ ‘ಚತುರ್ಭುಜ’ ಮತ್ತು ‘ಸುರ್‌ಸುರ್ ಬತ್ತಿ’ ಹಾಗೂ ‘ಡಿಂಗ’ ಚಿತ್ರದಲ್ಲಿ ಅಭಿನಯಿಸುವ ಅವಕಾಶವೂ ಸಿಕ್ಕಿತು.
* ಮುಂದಿನ ಯೋಜನೆ...
‘ಇರುವುದೆಲ್ಲವ ಬಿಟ್ಟು’ ಚಿತ್ರದ ನಿರ್ದೇಶಕ ಕಾಂತಾ ಕಣ್ಣಲ್ಲಿ ಅವರ ನಿರ್ದೇಶನದಲ್ಲಿ ಒಂದು ಚಿತ್ರ ಮತ್ತು ‘ಸುರ್‌ಸುರ್ ಬತ್ತಿ’ ಚಿತ್ರದ ನಿರ್ದೇಶಕ ಮುಗಿಲ್ ಅವರ ಜತೆಗೆ ಇನ್ನೊಂದು ಚಿತ್ರದಲ್ಲಿ ನಟಿಸಲಿದ್ದೇನೆ. ಏಕಾಗ್ರತೆಗೆ ಭಂಗವಾಗಬಾರದೆಂದು ಸದ್ಯಕ್ಕೆ ಧಾರಾವಾಹಿಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಯಾವುದಾದರೂ ಒಂದು ರಂಗದಲ್ಲಿ ಮುಂದುವರಿಯುವ ಯೋಜನೆ ನನ್ನದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.