ಭಾನುವಾರ, ಜುಲೈ 25, 2021
25 °C

ಮೌನದ ಮಾಸ್ಕ್‌, ಅಧ್ಯಾತ್ಮದ ಫ್ಲಾಸ್ಕ್

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

‘ಮೌನ ಕೂಡ ಆ್ಯಕ್ಟಿವ್ ಆಗಿರಬೇಕು; ವೇಸ್ಟ್ ಆಗಬಾರದು’–ಹೀಗೆನ್ನುತ್ತಾ ತಮ್ಮದೇ ‘ಪನ್‌’ಡಿತ ಶೈಲಿಯ ಮಾತುಕತೆಗೆ ತೆರೆದುಕೊಂಡರು ಸ್ವರ ಸಂಯೋಜಕ–ಚಿತ್ರಸಾಹಿತಿ ಕೆ.ಕಲ್ಯಾಣ್.

‘ಲಾಕ್‌ಡೌನ್‌’ ಎಂದದ್ದೇ ‘ಕಾಮ್‌ಡೌನ್’ ಎಂದು ಅದಕ್ಕೊಂದು ಪನ್ ಮಾಡಿ ಸಣ್ಣಗೆ ನಕ್ಕ ಅವರ ತಲೆಯೊಳಗೀಗ ಅಧ್ಯಾತ್ಮದ ಗುಂಗಿಹುಳು. ಕೊರೊನಾ ವೈರಸ್‌ ಸೋಂಕು ಹರಡಕೂಡದೆಂದು ಎಲ್ಲರನ್ನೂ ಮನೆಯಲ್ಲೇ ಇರುವಂತೆ ಹೇಳಿದ ಮೇಲೆ ಅವರು ಕೈಗೆ ಸಿಕ್ಕ ಹಲವು ಪುಸ್ತಕಗಳನ್ನು ಓದಿದ್ದಾರೆ. ರಾಮಕೃಷ್ಣ ಪರಮಹಂಸರು. ಶಂಕರಾಚಾರ್ಯ–ರಾಮಾನುಜಾಚಾರ್ಯ, ವಿವೇಕಾನಂದ ಇವರೆಲ್ಲರ ತತ್ತ್ವ ಚಿಂತನೆಗಳನ್ನು ಮತ್ತೆ ಮತ್ತೆ ಓದಿ ಸುಖಿಸಿದ ಅವರು, ಮಧ್ಯೆ ಕೇರಂ ಆಡಿ ಖುಷಿಪಟ್ಟಿದ್ದಾರೆ. ಮನೆಯಂಗಳದ ಸೀಮಿತಾವಕಾಶದಲ್ಲಿ ಕ್ರಿಕೆಟ್‌ ಆಡಿ ಮುಖ ಮೊರದಗಲ ಮಾಡಿಕೊಂಡಿದ್ದೂ ಉಂಟು. ‘ಕೇರಂ, ಕ್ರಿಕೆಟ್‌ ನನಗಿಷ್ಟ. ಚಿಕ್ಕ ಮೈದಾನದಲ್ಲಿ ಆಡೋದು ಬಲು ಕಷ್ಟ’ ಎಂದು ಇನ್ನೊಂದು ಪನ್ ಮಾಡಿದರು.

‘ಪತ್ತೆದಾರಿಯನ್ನೂ ಓದಬಲ್ಲೆ, ವಿಷ್ಣು ಸಹಸ್ರನಾಮವನ್ನೂ ಪಠಿಸಬಲ್ಲೆ’ ಎಂದು ಅಧ್ಯಾತ್ಮವನ್ನು ಮತ್ತೆ ತುಳುಕಿಸಿದರು ಕಲ್ಯಾಣ್. ‘ಹತ್ತಾರು ವಿಷಯಗಳನ್ನು ತಲೆಯಿಂದ ಬಿಸಾಕೋದೇ ನಿರ್ವಾಣ. ಆಗಷ್ಟೇ ಬದುಕಿನ ನಿರ್ಮಾಣ’, ‘ಕೆದಕಿ ನೋಡಿದರೆ ವಿಜ್ಞಾನ. ಸುಮ್ಮನಿದ್ದರೆ ಅಧ್ಯಾತ್ಮ’–ಇವು ಅವರ ಫಿಲಾಸಫಿಕಲ್ ನುಡಿಗಟ್ಟುಗಳು.

ಆತ್ಮಸಂತೃಪ್ತಿಗೆಂದು ಕೆಲವು ಟ್ಯೂನ್‌ಗಳನ್ನು ಲಾಕ್‌ಡೌನ್‌ ಅವಧಿಯಲ್ಲಿ ಕಲ್ಯಾಣ್ ರೂಪಿಸಿದ್ದಾರೆ. ಅದಕ್ಕೂ ಮಿಗಿಲಾಗಿ ಸೌಂಡಿಂಗ್‌ನಲ್ಲಿ ನಡೆದಿರುವ, ನಡೆಯುತ್ತಿರುವ ಪ್ರಯೋಗಗಳನ್ನು ಅವರು ಸೂಕ್ಷ್ಮವಾಗಿ ಕೇಳಿ, ಧ್ಯಾನಿಸಿದ್ದಾರೆ. ಎ.ಆರ್‌. ರೆಹಮಾನ್ 200–300 ವಾದ್ಯಗಳನ್ನು ಉಪಯೋಗಿಸಿಯೂ ಅಬ್ಬರ ಆಗದಂತೆ ಹೊಮ್ಮಿಸಿದ ಸಂಗೀತ, ವಾದ್ಯಗಳ ಬಳಕೆಯೇ ಇಲ್ಲದೆ ಕೋರಸ್‌ ಮೂಲಕವೇ ಕಟ್ಟಿಕೊಟ್ಟ ರಿದಂ ಮೀರಿದ ತಮಿಳು ಗೀತೆ (‘ರಾಸಾತಿ... ಎನ್ನುಸಿರು ಎನ್ನದಿಲ್ಲ’; ತಿರುಡಾ ತಿರುಡಾ ಚಿತ್ರದ್ದು), ‘ಪ್ರೇಮಲೋಕ’, ‘ರಣಧೀರ’ ಸಿನಿಮಾಗಳಲ್ಲಿ ಹಂಸಲೇಖ ಅಷ್ಟೊಂದು ವಯಲಿನ್‌ಗಳನ್ನು ಬಳಸಿಯೂ ಇಂಪನ್ನಷ್ಟೇ ಮೂಡಿಸಿದ ವಿದ್ಯಮಾನ ಇವೆಲ್ಲವೂ ಕಲ್ಯಾಣ್ ಅವರಿಗೆ ಈಗಲೂ ಬೆರಗಾಗಿ ಕಾಣುತ್ತಿವೆ. ಇದನ್ನೇ ಬರವಣಿಗೆಗೂ ಅವರು ಸಮೀಕರಿಸಿ, ‘ಬರವಣಿಗೆಯಲ್ಲೂ ಪರಿಕರಗಳು ಯಥೇಚ್ಛ ಇದ್ದೂ, ಅಬ್ಬರ ಇರಕೂಡದು. ಐಕ್ಯೂ–ಇಕ್ಯೂ ಬ್ಯಾಲೆನ್ಸ್‌ ಮಾಡಬೇಕು’ ಎನ್ನುತ್ತಾರೆ.

ಶಿವಣ್ಣ ಅಭಿನಯದ ‘ಬಜರಂಗಿ–2’ ಸಿನಿಮಾಗೆಂದು ಬರೆದಿಟ್ಟ ಹಾಡಿನ ರೀಡಿಂಗ್‌ಗೆ ಕೂರಲು ಕಲ್ಯಾಣ್ ಕಾತರರಾಗಿದ್ದಾರೆ. ‘ಪುಕ್ಸಟ್ಟೆ ಲವ್’ ಎಂಬ ಇನ್ನೊಂದು ಸಿನಿಮಾದ ಕೆಲಸ ಕೈಯಲ್ಲಿದೆ. ಸಂಗೀತ, ಅಧ್ಯಾತ್ಮ, ಬರವಣಿಗೆ ಈ ಮೂರೂ ಮನೋಶುದ್ಧತೆಯ ಮಾರ್ಗಗಳೆನ್ನುವುದು ಅವರ ಅನುಭವ.

ಸಂಗೀತದಲ್ಲಿ ಪ್ರತಿ ವಾರವೂ ಈಗ ಬದಲಾವಣೆಯದ್ದೇ ಪರ್ವ. ಆರ್‌.ಎನ್. ಜಯಗೋಪಾಲ್, ವಿಜಯ ನಾರಸಿಂಹ ತರಹದವರೂ ಬರವಣಿಗೆಗೆ ಇದ್ದ ಮಿತಿಯ ಕುರಿತು ನೊಂದುಕೊಂಡಿದ್ದರು. ಈಗ ಈ ವಿಷಯದಲ್ಲಿ ದೊಡ್ಡ ಸ್ವಾತಂತ್ರ್ಯವಿದೆ. ಪ್ರತಿಭೆಯನ್ನೀಗ ಬೇಗ ಹರಡಿಬಿಡಬಹುದು ಎನ್ನುವುದು ಕಲ್ಯಾಣ್ ಗುರುತಿಸಿರುವ ಬದಲಾವಣೆ.

ಬಾಲಪ್ರತಿಭೆಗಳಿಗೆ ಸಿಗುತ್ತಿರುವ ದೊಡ್ಡ ವೇದಿಕೆ ಮಿತಿಯೋ, ಶಕ್ತಿಯೋ ಎಂಬ ಪ್ರಶ್ನೆಗೆ ಕಲ್ಯಾಣ್‌ ಪ್ರತಿಕ್ರಿಯಿಸಿದ್ದು ಹೀಗೆ: ‘ನಾಲ್ಕೈದು ವರ್ಷದ ಮಕ್ಕಳು ಐದುನೂರು ಆರುನೂರು ರಾಗಗಳನ್ನು ಗುರುತಿಸುವುದು ಜನ್ಮಜಾತ ಸುಕೃತ. ಇನ್ನು ಕೆಲವರು ಶ್ರದ್ಧೆಯಿಂದ ಕಲಿತು ಎಂಟೊಂಬತ್ತನೇ ವಯಸ್ಸಿನ ಹೊತ್ತಿಗೆ ಮಾಗುತ್ತಾರೆ. ಸೋನು ನಿಗಮ್, ಶ್ರೇಯಾ ಘೋಶಾಲ್ ಕೂಡ ಬಾಲಪ್ರತಿಭೆಗಳೇ. ಆಮೇಲೂ ಅವರು ಸಂಗೀತದ ರಿಯಾಜ್ ಮಾಡುತ್ತಾ ಬೆಳೆದರಷ್ಟೆ. ಹೀಗೆ ಬೆಳೆಯುವ ಮಕ್ಕಳು ಎಲ್ಲ ಕಾಲದಲ್ಲೂ ಇರುತ್ತಾರೆ. ಅವರ ಸಂಗೀತಸಾಣೆ ಸರಿಯಾಗಿರಬೇಕು, ಜನಪ್ರಿಯತೆಯ ಗುಂಗು ಶಾಶ್ವತವಲ್ಲ ಎನ್ನುವುದನ್ನು ಪೋಷಕರು ತಲೆಗೆ ತುಂಬಬೇಕು’.

‘ಎದೆಯನ್ನು ಮೀಟುವ ಸಂಗೀತವಷ್ಟೇ ಕನೆಕ್ಟ್‌ ಆಗುತ್ತದೆ’ ಎಂದ ಕಲ್ಯಾಣ್, ‘ಬೇಡದಿರುವುದೇ ಜ್ಞಾನ, ಸುಮ್ಮನಿರುವುದೇ ಧ್ಯಾನ’ ಎನ್ನುತ್ತಾ ಮತ್ತೆ ಮೌನಧ್ಯಾನಕ್ಕೆ ಸರಿದರು. ಪಾಪ್‌ಕಾರ್ನ್‌ ಚೆಲ್ಲುತ್ತಾ ಒಬ್ಬರನ್ನೊಬ್ಬರು ನೂಕಿಕೊಂಡು, ಬ್ಲಾಕ್‌ನಲ್ಲಿ ಟಿಕೆಟ್‌ ಕೊಂಡು ಸಿನಿಮಾ ನೋಡುವ ಪ್ರೇಕ್ಷಕರು ಚಿತ್ರಮಂದಿರದ ಆವರಣದಲ್ಲಿ ಮತ್ತೆ ಕಾಣಲಿ ಎಂದು ಎಣಿಸುತ್ತಿರುವ ಮನಸ್ಸು ಅವರದ್ದೂ ಹೌದು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು