ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಘಟ್ಟದಲ್ಲೇ ಚಿತ್ರನಗರ: ಡಿಸಿಎಂ ಅಶ್ವತ್ಥನಾರಾಯಣ

ಚಿತ್ರರಂಗದ ನಿಯೋಗದಿಂದ ಡಿಸಿಎಂ ಭೇಟಿ
Last Updated 13 ಆಗಸ್ಟ್ 2020, 22:50 IST
ಅಕ್ಷರ ಗಾತ್ರ

ಬೆಂಗಳೂರು: ’ರೋರಿಚ್ ಎಸ್ವೇಟಿನ ಬದಲು ಹೆಸರಘಟ್ಟದಲ್ಲಿಯೇ ಚಿತ್ರನಗರಿಯನ್ನು (ಫಿಲಂ ಸಿಟಿ) ನಿರ್ಮಾಣ ಮಾಡಲಾಗುವುದು. ಕೋವಿಡ್‌ನಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಚಿತ್ರರಂಗದ ಪುನಶ್ಚೇತನಕ್ಕೆ ಸರ್ವ ನೆರವು ನೀಡಲಾಗುವುದು‘ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.

ಗುರುವಾರ ಇಲ್ಲಿ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಭೇಟಿಯಾದ ಕನ್ನಡ ಚಿತ್ರರಂಗದ ನಿಯೋಗದ ಜತೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ರೋರಿಚ್ ಎಸ್ಟೇಟಿನಲ್ಲಿ ಪರಿಸರಾ ತ್ಮಕಸಮಸ್ಯೆಗಳು ಎದುರಾದವು. ಹೀಗಾಗಿ ಅಲ್ಲಿ ಈ ಯೋಜನೆ ಅನುಷ್ಠಾನ ಸಾಧ್ಯವಾಗುತ್ತಿಲ್ಲ‘ ಎಂದರು.

’ಹೆಸರಘಟ್ಟದಲ್ಲಿ ಪಶು ಸಂಗೋಪನಾ ಇಲಾಖೆಯ 450 ಎಕರೆ ಭೂಮಿ ಇದ್ದು, ಅದರಲ್ಲಿ 150 ಎಕರೆಯನ್ನು ಫಿಲಂ ಸಿಟಿ ನಿರ್ಮಾಣಕ್ಕೆ ನೀಡಲಾಗುವುದು. ಅಲ್ಲಿ ಸಂಪರ್ಕ ರಸ್ತೆಯೊಂದನ್ನು ನಿರ್ಮಿಸಿ ಆ ಜಾಗವನ್ನುಫಿಲಂ ಸಿಟಿಗೆ ಹಸ್ತಾಂತರ ಮಾಡಲಾಗುವುದು.ಈಗಾಗಲೇ ಇದಕ್ಕೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ನಡೆಯುತ್ತಿವೆ. ಆದಷ್ಟು ತ್ವರಿತವಾಗಿ ಫಿಲಂ ಸಿಟಿ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು‘ ಎಂದರು.

’ಕೋವಿಡ್ ಕಾರಣದಿಂದ ಚಿತ್ರರಂಗ ಎದುರಿಸುತ್ತಿರವ ಸಮಸ್ಯೆಗಳ ಬಗ್ಗೆ ಶಿವರಾಜ್ ಕುಮಾರ್ ಅವರ ಜತೆ ವಿವರವಾಗಿ ಚರ್ಚಿಸಲಾಗಿದೆ. ಮುಂದಿನ ವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಮಸ್ಯೆಗಳನ್ನು ಪರಿಹರಿಸಲು ಮಾತುಕತೆ ನಡೆಸಲಾಗುವುದು‘ ಎಂದರು.

’ಚಿತ್ರರಂಗದ ಅಸಂಘಟಿತ ದಿನಗೂಲಿ ನೌಕರರ ಹಿತ ಕಾಯುವ ಬಗ್ಗೆ ಆದಷ್ಟು ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಅವರನ್ನು ಕಾರ್ಮಿಕ ಇಲಾಖೆಯ ಅಡಿಗೆ ತಂದು ಸರ್ಕಾರದ ಸವಲತ್ತುಗಳು ಮಾಡಲಾಗುವುದು. ಪ್ರದರ್ಶಕ ವಲಯದಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ಕಾರ್ಮಿಕರಿಗೂ ಸರ್ಕಾರ ಸಹಾಯಹಸ್ತ ಚಾಚಲಿದೆ‘ ಎಂದರು.

ಎಸ್‌ಒಪಿಯಲ್ಲಿ ರಿಯಾಯಿತಿ: ಕೋವಿಡ್‌ ಕಾರಣಕ್ಕೆ ಮಾರ್ಗದರ್ಶಿ (ಎಸ್‌ಒಪಿ) ಜಾರಿಯಲ್ಲಿದೆ. ಕಲಾವಿದರು ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಸ್ವಲ್ಪ ಮಟ್ಟಿಗೆ ರಿಯಾಯಿತಿ ನೀಡಬೇಕು ಎಂದು ಚಿತ್ರರಂಗದ ಗಣ್ಯರು ವಿನಂತಿಸಿದ್ದಾರೆ. ಆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

’ಈಗಿನ ಎಸ್‌ಒಪಿ ಪ್ರಕಾರ ಶೂಟಿಂಗ್ ಮತ್ತಿತರೆ ಸಿನಿಮಾ ಸಂಬಂಧಿತ ಚಟುವಟಿಕೆಗಳಲ್ಲಿ 40 ಜನ ಮಾತ್ರ ಇರಬೇಕು. ಇದರಿಂದ ಅನೇಕ ಕಲಾವಿದರು ಮತ್ತು ಕಾರ್ಮಿಕರಿಗೆ ಕಷ್ಟವಾಗುತ್ತಿದೆ. ಈ ಮಿತಿಯನ್ನು ಸಡಿಲ ಮಾಡುವಂತೆ ಕೇಳಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು‘ ಎಂದರು.

ಶಿವರಾಜ್ ಕುಮಾರ್ ಮಾತನಾಡಿ, ’ಕೋವಿಡ್ ಕಾರಣದಿಂದ ಚಿತ್ರರಂಗ ಕಂಗೆಟ್ಟಿದೆ. ಸರ್ಕಾರವೇ ಚಿತ್ರರಂಗವನ್ನು ರಕ್ಷಿಸಬೇಕು. ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಮುಂದಿನ ವಾರ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT