ಶನಿವಾರ, ಮೇ 15, 2021
25 °C

ಕೋವಿಡ್‌-19 ಭೀತಿ: ಸುರಕ್ಷೆಯೊಂದಿಗೆ ಶೂಟಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋವಿಡ್‌ ವೈರಸ್‌ ಭೀತಿಯಿಂದಾಗಿ ವಾರದ ಕಾಲ ಸಿನಿಮಾ ಪ್ರದರ್ಶನ ಸ್ಥಗಿತಗೊಂಡಿದೆ. ಅಷ್ಟೇ ಅಲ್ಲ, ಕೆಲವು ಸಿನಿಮಾ ನಿರ್ಮಾಪಕರು ಹೊರಾಂಗಣ ಚಿತ್ರೀಕರಣ ಸ್ಥಗಿತಗೊಳಿಸಿದ್ದಾರೆ. ಹೊರದೇಶದಲ್ಲಿ ನಿಗದಿಯಾಗಿದ್ದ ಶೂಟಿಂಗ್‌ಗಳನ್ನೂ ನಿಲ್ಲಿಸಿದ್ದಾರೆ.

ಇತ್ತ ಬೆಂಗಳೂರಿನ ಕಿರುತೆರೆ ಲೋಕಕ್ಕೂ ಕೋವಿಡ್‌ ಭೀತಿ ತಟ್ಟಿದೆ. ಈ ಹಿನ್ನೆಲೆಯಲ್ಲಿ ಹೊರಾಂಗಣ / ಪಬ್ಲಿಕ್ ಶೂಟಿಂಗ್ ಸ್ಥಗಿತಗೊಳಿಸಿ ಒಳಾಂಗಣ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಭೀತಿಯ ನಡುವೆಯೇ ಕಿರುತೆರೆ ನಟ–ನಟಿಯರು ಒಂದಷ್ಟು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. 

ಒಂದಷ್ಟು ಎಚ್ಚರಿಕೆ

‘ನಮ್ಮದು ಸಿನಿಮಾ ತರಹ ಅಲ್ಲ. ವಾರ ಪೂರ್ತಿ ಧಾರಾವಾಹಿ ಪ್ರಸಾರವಾಗುತ್ತದೆ. ಅದಕ್ಕೆ ಬೇಕಾದ ಚಿತ್ರೀಕರಣ ನಡೆಯಲೇಬೇಕು. ಹೀಗಾಗಿ ಒಂದಷ್ಟು ಎಚ್ಚರಿಕೆಯೊಂದಿಗೆ ಶೂಟಿಂಗ್‌ ನಡೆಸುತ್ತಿದ್ದೇವೆ‘ ಎನ್ನುತ್ತಾರೆ ಝೀ ಟೀವಿಯ ‘ಜೊತೆಜೊತೆಯಲಿ’ ಧಾರಾವಾಹಿಯ ಮೀರಾ ಪಾತ್ರಧಾರಿ ಮಾನಸ ಮನೋಹರ್‌.

‘ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದೇವೆ. ಹೊರಗಿನ ಆಹಾರವನ್ನೂ ಸೇವಿಸುತ್ತಿಲ್ಲ. ಕಲಾವಿದರು ಹಾಗೂ ತಂತ್ರಜ್ಞರಿಗಾಗಿ ಸೆಟ್‌ನಲ್ಲಿಯೇ ಅಡುಗೆ ತಯಾರಿಸುತ್ತಾರೆ. ಹ್ಯಾಂಡ್‌ ಸ್ಯಾನಿಟೈಸರ್‌ ಬಳಸುತ್ತಿದ್ದೇವೆ. ಸಾರ್ವಜನಿಕ ಸ್ಥಳಗಳಲ್ಲಿ ಚಿತ್ರೀಕರಣ ನಡೆಸುವುದನ್ನು ನಿಲ್ಲಿಸಿದ್ದಾರೆ’ ಎಂದು ಹೇಳುತ್ತಾರೆ.

‘ಸೆಟ್‌ನಲ್ಲಿ ಬೆಳಗ್ಗಿನಿಂದ ಸಂಜೆ ತನಕ ಕೆಲಸವಿರುತ್ತದೆ. ಕಲಾವಿದರು ಬೇರೆ ಬೇರೆ ಸ್ಥಳಗಳಿಂದ ಬಂದು, ಶೂಟಿಂಗ್‌ನಲ್ಲಿ ಭಾಗವಹಿಸಿರುತ್ತಾರೆ. ಬೇರೆ ಕಡೆಗಳಿಂದ ಭೇಟಿಯಾಗಲು ಜನರು ಬರುತ್ತಿರುತ್ತಾರೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಸ್ಯಾನಿಟೈಸರ್‌, ಮಾಸ್ಕ್‌ಗಳನ್ನು ಬಳಸುತ್ತೇವೆ. ಒಟ್ಟಿನಲ್ಲಿ ಮೊದಲಿಗಿಂತ ಹೆಚ್ಚು ಆರೋಗ್ಯದ ಬಗ್ಗೆ ಗಮನ ಕೊಡುತ್ತಿದ್ದೇವೆ’ ಎನ್ನುತ್ತಾರೆ ಸೆಟ್‌ನಲ್ಲಿರುವ ಕಿರುತೆರೆ ಕಲಾವಿದರು.


ಕಾವ್ಯಶ್ರೀ ಗೌಡ

ಕೋವಿಡ್ ಭಯ ‘ಮಂಗಳಗೌರಿ ಮದುವೆ’ ಧಾರಾವಾಹಿ ತಂಡವನ್ನೂ ಬಿಟ್ಟಿಲ್ಲ. ಈ ತಂಡವೂ ಆಹಾರದ ಬಗ್ಗೆ ಕಾಳಜಿವಹಿಸಿದೆ.  ‘ಹೊರಗಿನ ಆಹಾರ ಸೇವಿಸುವುದಿಲ್ಲ.‌ ಮನೆಯಿಂದಲೇ ಬಾಕ್ಸ್‌ ತೆಗೆದುಕೊಂಡು ಬರುತ್ತೇನೆ. ಕೆಮ್ಮು, ಸೀನುವವರಿಂದ ದೂರವೇ ಇರುತ್ತೇನೆ. ಪ್ರಜ್ಞಾಪೂರ್ವಕವಾಗಿ ಹ್ಯಾಂಡ್‌ ಶೇಕ್ ಮಾಡುವುದಿಲ್ಲ. ಹೀಗಿದ್ದೂ, ಈ ವೈರಸ್‌ ಭೀತಿ ಎಲ್ಲರನ್ನೂ ಕಾಡುತ್ತಿರುವುದಂತೂ ಹೌದು’ ಎನ್ನುತ್ತಾ ತಮ್ಮ ‘ಸೀರಿಯಲ್‌ ಸೆಟ್‌’ನ ಕತೆ ಹೇಳುತ್ತಾರೆ ನಟಿ ಕಾವ್ಯಶ್ರೀ ಗೌಡ.

‘ನಾನು ಸ್ಯಾನಿಟೈಸರ್ ಬಳಸುತ್ತೇನೆ. ಮನೆಯಿಂದ ಬಾಕ್ಸ್ ತಗೊಂಡು ಹೋಗ್ತೀನಿ. ಸದ್ಯದಲ್ಲೇ ನಮ್ಮ ಧಾರಾವಾಹಿಯದ್ದು ಹೊರಾಂಗಣ ಚಿತ್ರೀಕರಣವಿದೆ. ನಮ್ಮ ತಂಡ ಏನು ತೀರ್ಮಾನ ಮಾಡ್ತಾರೋ ಗೊತ್ತಿಲ್ಲ’ ಎನ್ನುತ್ತಾರೆ ‘ಗಟ್ಟಿಮೇಳ‘ದ ಪರಿಮಳ ಪಾತ್ರಧಾರಿ ಸುಧಾ ನರಸಿಂಹರಾಜು.

ಜಿಮ್‌ ಇಲ್ಲದ ಬೇಸರ

ನಟ, ನಟಿಯರಿಗೆ ದೇಹದಾರ್ಢ್ಯ ಕಾಪಾಡಿಕೊಳ್ಳಲು ದೈಹಿಕ ಕಸರತ್ತು ಬಹುಮುಖ್ಯ. ಆದರೆ ಈಗ ಜಿಮ್‌ಗಳು ಕೂಡ ಸೋಂಕು ಭಯದಿಂದ ಬಾಗಿಲು ಹಾಕಿವೆ. ಹಾಗಾಗಿ ಜಿಮ್‌ಗೆ ಹೋಗಲಾಗುವುದಿಲ್ಲ ಎಂಬ ಬೇಸರ ‘ಮುದ್ದುಲಕ್ಷ್ಮಿ’ ಧಾರಾವಾಹಿಯ ನಟ ಚರಿತ್‌ ಬಾಲಪ್ಪ ಅವರದ್ದು. ‘ಪ್ರತಿದಿನ ಜಿಮ್‌ಗೆ ಹೋಗಿ ಕಸರತ್ತು ನಡೆಸುತ್ತಿದ್ದೆ. ಈಗ ಜಿಮ್‌ ಅನ್ನು ಕೆಲ ದಿನ ಮುಚ್ಚಲಾಗುತ್ತದೆ ಎಂದು ಮೆಸೇಜ್‌ ಕಳಿಸಿದ್ದಾರೆ. ಸ್ವಲ್ಪ ಬೇಸರವಾಗುತ್ತಿದೆ’ ಎನ್ನುತ್ತಾರೆ.


ಚರಿತ್‌ ಬಾಲಪ್ಪ

ಕೋವಿಡ್‌ ಸೋಂಕಿನ ಭಯದಿಂದ ಎಲ್ಲಾ ನಟ– ನಟಿಯರು ಆಹಾರ ಕ್ರಮದಲ್ಲಿ ಕಟ್ಟುನಿಟ್ಟು ಪಾಲಿಸುತ್ತಿದ್ದಾರೆ. ಕೆಲವರು ಮಾಂಸಾಹಾರವನ್ನು ತ್ಯಜಿಸಿದ್ದಾರೆ.  ‘ನಾನು ಮಟನ್‌, ಚಿಕನ್‌ ಏನೂ ತಿನ್ನುತ್ತಿಲ್ಲ. ಹಸಿ ತರಕಾರಿಗಳನ್ನೂ ಹೆಚ್ಚು ತಿನ್ನುತ್ತಿಲ್ಲ. ಫ್ರಿಡ್ಜ್‌ ನೀರು, ಐಸ್‌ಕ್ರೀಂ ಎಲ್ಲಾ ನಿಷಿದ್ಧ. ಕುದಿಸಿದ, ಉಗುರು ಬೆಚ್ಚಗಿನ ನೀರನ್ನೇ ಈಗ ಕುಡಿಯುತ್ತಿದ್ದೇನೆ’ ಎನ್ನುತ್ತಾರೆ ಚರಿತ್‌ ಬಾಲಪ್ಪ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು