ಮದುವೆಗೆ ಕರೆಯುತ್ತಿರುವ ಎಂ.ಎಸ್.ಧೋನಿ : ತಮಿಳು ಚಿತ್ರದ ಶೀರ್ಷಿಕೆ ಘೋಷಣೆ

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ, ತಮ್ಮ ನಿರ್ಮಾಣ ಸಂಸ್ಥೆಯಿಂದ ತಮಿಳು ಸಿನಿಮಾ ನಿರ್ಮಿಸುವುದಾಗಿ ಈ ಹಿಂದೆ ಘೋಷಿಸಿದ್ದರು. ಚಿತ್ರಕ್ಕೆ ‘ಲೆಟ್ಸ್ ಗೆಟ್ ಮ್ಯಾರೀಡ್’ ಎಂದು ಹೆಸರಿಡಲಾಗಿದ್ದು, ಧೋನಿ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಚಿತ್ರದ ಶೀರ್ಷಿಕೆಯೊಂದಿಗೆ ಪೋಸ್ಟರ್ ಅನ್ನು ತನ್ನ ಸಾಮಾಜಿಕ ಜಾಲತಾಣ ಪುಟದಲ್ಲಿ ಹಂಚಿಕೊಂಡಿದೆ.
Pictures from the puja of Dhoni Entertainment’s first production in Tamil - #LGM which took place today morning.@msdhoni @SaakshiSRawat @ActressNadiya @iamharishkalyan @i__ivana_ @Ramesharchi pic.twitter.com/QtmkOUgHyw
— Dhoni Entertainment Pvt Ltd (@DhoniLtd) January 27, 2023
ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಿದ್ದ ಧೋನಿಗೆ ತಮಿಳುನಾಡಿನೊಂದಿಗಿರುವ ವಿಶೇಷ ಒಡನಾಟವೇ ಈ ಹೆಜ್ಜೆಗೆ ಕಾರಣ. ಧೋನಿಯನ್ನು ಸೂಪರ್ ಹೀರೋ ಆಗಿ ಹೊಂದಿರುವ ‘ಅಥರ್ವ–ದಿ ಒರಿಜಿನ್’ ಗ್ರಾಫಿಕ್ ಕಾದಂಬರಿಯ ಲೇಖಕ ರಮೇಶ್ ತಮಿಳ್‌ಮಣಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಧೋನಿ ಪತ್ನಿ ಸಾಕ್ಷಿ ಸಿಂಗ್ ಚಿತ್ರದ ನಿರ್ಮಾಪಕಿ.
ಗ್ರಾಫಿಕ್ಸ್ ಪೋಸ್ಟರ್‌ನಲ್ಲಿ ಕಾಡು, ರಸ್ತೆಯಲ್ಲಿ ಚಲಿಸುವ ವ್ಯಾನ್ ಮತ್ತು ಹಸಿರಿನ ನಡುವೆ ಸಿನಿಮಾ ಶೀರ್ಷಿಕೆ ಅನಾವರಣಗೊಳ್ಳುತ್ತದೆ. ಎಲ್‌ಜಿಎಂ ಚಿತ್ರದ ಟೈಟಲ್. ತಮಿಳು ಹಾಸ್ಯ ನಟ ಯೋಗಿಬಾಬು, ನಟಿ ಇವಾನ, ನಾದಿಯಾ ಮೊದಲಾದವರು ಇರುವ ಚಿತ್ರವನ್ನು ಸಂಸ್ಥೆ ಟ್ವೀಟ್ ಮಾಡಿದೆ.
ಧೋನಿ ಹಾಗೂ ಅವರ ಪತ್ನಿ ಸಾಕ್ಷಿ ಸಿಂಗ್ ಒಟ್ಟಾಗಿ 2019ರಲ್ಲಿ ಧೋನಿ ಎಂಟರ್‌ಟೈನ್‌ಮೆಂಟ್ ಸಂಸ್ಥೆಗೆ ಚಾಲನೆ ನೀಡಿದ್ದರು. ಮುಖ್ಯವಾಹಿನಿಯ ಭಾಷೆಗಳಲ್ಲಿ ಮನರಂಜನಾ ಕಾರ್ಯಕ್ರಮಗಳನ್ನು ನಿರ್ಮಿಸುತ್ತಿದ್ದು, ನಿರ್ಮಾಣ ಪ್ರಕ್ರಿಯೆ ವಿವಿಧ ಹಂತಗಳಲ್ಲಿದೆ ಎಂದು ಕಂಪನಿ ಹೇಳಿತ್ತು.
ಚೆನ್ನೈ ಸೂಪರ್‌ಕಿಂಗ್ಸ್‌ನ ನಾಯಕ ಧೋನಿಗೆ ತಮಿಳುನಾಡಿನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ‘ಕೊರೊನಾ ನಂತರ ಭಾರತದಲ್ಲಿ ಸಿನಿಮಾ ಉದ್ಯಮ ಏಕೀಕರಣಗೊಂಡಿದೆ. ಹಿಂದಿ ಸಿನಿಮಾ, ಇತರ ಭಾಷೆ ಸಿನಿಮಾ ಎಂಬ ಪ್ರತ್ಯೇಕತೆ ಇಲ್ಲ. ತಮಿಳು, ತೆಲುಗು, ಮಲಯಾಳ ಮತ್ತು ಕನ್ನಡ ಸಿನಿಮಾಗಳನ್ನು ದೇಶದಾದ್ಯಂತ ಸಂಭ್ರಮಿಸಲಾಗುತ್ತಿದೆ. ಹೀಗಾಗಿ ಧೋನಿ ಎಂಟರ್‌ಟೈನ್‌ಮೆಂಟ್ ಬಹುಭಾಷೆಯ ಯೋಜನೆಗಳನ್ನು ಹುಡುಕುತ್ತಿದೆ’ ಎಂದು ಸಂಸ್ಥೆ ಹೇಳಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.