ಬುಧವಾರ, ಜನವರಿ 29, 2020
26 °C

 ದಚ್ಚು– ಕಿಚ್ಚರಿಂದ ಸಂಕ್ರಾಂತಿಗೆ ಸಿಹಿ ಸುದ್ದಿ, ಅಭಿಮಾನಿಗಳಲ್ಲಿ ಕಾತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದರ್ಶನ್‌ ಮತ್ತು ಸುದೀಪ್‌ ಅಭಿಮಾನಿಗಳಿಗೆ ಈ ಸಂಕ್ರಾಂತಿಗೆ ಶುಭ ಸುದ್ದಿ ಕಾದಿದೆ. ದರ್ಶನ್‌ ಅಭಿನಯದ ಬಹು ನಿರೀಕ್ಷಿತ 'ರಾಬರ್ಟ್‌' ಚಿತ್ರದ ಸೆಕೆಂಡ್ ಲುಕ್ ಮೋಷನ್ ಪೋಸ್ಟರ್ ಇದೇ 15ರಂದು ಬಿಡುಗಡೆಯಾಗುತ್ತಿದೆ. ಇದಕ್ಕು ಒಂದು ದಿನ ಮುಂಚಿತವಾಗಿ ಸುದೀಪ್‌ ಅಭಿನಯದ ಬಿಗ್‌ಬಜೆಟ್‌ನ ಕೋಟಿಗೊಬ್ಬ3 ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆಯಾಗುತ್ತಿದೆ.

‘ರಾಬರ್ಟ್‌’ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಬಾಕಿ ಇರುವ ಒಂದು ಹಾಡಿನ ಚಿತ್ರೀಕರಣ ಪೂರ್ಣಗೊಳಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಅಲ್ಲದೆ, ಈಗಾಗಲೇ ನೂರು ದಿನಗಳ ಕಾಲ ಚಿತ್ರೀಕರಣ ಮಾಡಿರುವ ದೃಶ್ಯಗಳ ಸಂಕಲನವೂ ಭರದಿಂದ ನಡೆಯುತ್ತಿದೆ. ಚಿತ್ರವನ್ನು ಏಪ್ರಿಲ್‌ ವೇಳೆಗೆ ಪ್ರೇಕ್ಷಕರ ಮುಂದಿಡಲು ನಿರ್ದೇಶಕ ತರುಣ್‌ ಕಿಶೋರ್‌ ಸುಧೀರ್‌ ಸಿದ್ಧತೆಯಲ್ಲಿ ತೊಡಗಿದ್ದಾರೆ. ದರ್ಶನ್‌ ಹೊಸ ರೂಪದಲ್ಲಿ ಕಾಣಿಸಿಕೊಂಡಿರುವ ‘ರಾಬರ್ಟ್‌’ ಚಿತ್ರದ ಫಸ್ಟ್‌ ಲುಕ್‌ ಈಗಾಗಲೇ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕ್ರೇಜ್‌ ಹುಟ್ಟು ಹಾಕಿದೆ. ಎರಡನೇ ಮೋಷನ್‌ ಪೋಸ್ಟರ್‌ ನೋಡಲು ಇನ್ನಷ್ಟು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಚಿತ್ರಕ್ಕೆ ಉಮಾಪತಿ ಶ್ರೀನಿವಾಸಗೌಡ ಬಂಡವಾಳ ಹೂಡಿದ್ದಾರೆ. ನಾಯಕಿಯಾಗಿ ಆಶಾ ಭಟ್‌ ಮತ್ತು ಪ್ರಮುಖ ಪಾತ್ರದಲ್ಲಿ ಸೋನಲ್‌ ಮೊಂತೆರೊ ನಟಿಸಿದ್ದಾರೆ.

ಸಂಕ್ರಾಂತಿಗೆ ಮುನ್ನಾ ದಿನ ಬಿಡುಗಡೆ

2019ರ ಸಾಲಿನಲ್ಲಿ ಸೈರಾ ನರಸಿಂಹ ರೆಡ್ಡಿ, ಪೈಲ್ವಾನ, ದಬಾಂಗ್‌ 3 ಹಿಟ್‌ ಸಿನಿಮಾಗಳಿಂದ ಅಭಿಮಾನಿಗಳನ್ನು ಖುಷಿಪಡಿಸಿರುವ ನಟ ಸುದೀಪ್‌ ಅವರ ಬಹು ನಿರೀಕ್ಷಿತ ಚಿತ್ರ ‘ಕೋಟಿಗೊಬ್ಬ3’ ಈ ವರ್ಷ ತೆರೆಗೆ ಲಗ್ಗೆ ಇಡಲಿದೆ. ಈ ಚಿತ್ರದ ಮೊದಲ ಮೋಷನ್‌ ಪೋಸ್ಟರ್‌ ಸಂಕ್ರಾಂತಿಗೆ ಒಂದು ದಿನ ಮುಂಚಿತವಾಗಿಯೇ ಬಿಡುಗಡೆಯಾಗುತ್ತಿದೆ. ಮೊದಲ ಪೋಸ್ಟರ್‌ ಹೇಗಿರಲಿದೆ ಎನ್ನುವುದು ಸುದೀಪ್‌ ಅಭಿಮಾನಿಗಳಲ್ಲೂ ಕುತೂಹಲ ಹುಟ್ಟು ಹಾಕಿದೆ. ಈ ಚಿತ್ರವನ್ನು ಶಿವಕಾರ್ತಿಕ್‌ ನಿರ್ದೇಶಿಸಿದ್ದು, ಎಂ.ಬಿ. ಬಾಬು ಬಂಡವಾಳ ಹೂಡಿದ್ದಾರೆ.

ಕೇರಳದ ಬೆಡಗಿ ಮಡೋನ್ನಾ ಸೆಬಾಸ್ಟಿಯನ್‌ ಈ ಚಿತ್ರದಲ್ಲಿ ನಾಯಕಿಯಾಗಿದ್ದು, ಬಾಲಿವುಡ್‌ನ ಸುಧಾಂಶು ಪಾಂಡೆ, ಅಫ್ತಾಪ್‌ ಶಿವದಾಸನಿ ಮತ್ತು ಶ್ರದ್ಧಾ ದಾಸ್‌ ನಟಿಸಿರುವುದು ಈ ಚಿತ್ರದ ವಿಶೇಷ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು