ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾದ 'ಸಂತ' ಶಿವರಾಮಣ್ಣ: ಚಿತ್ರರಂಗದ ಭಕ್ತಿಪರವಶ ಸಮನ್ವಯಕಾರ

Last Updated 4 ಡಿಸೆಂಬರ್ 2021, 19:31 IST
ಅಕ್ಷರ ಗಾತ್ರ

ಒಬ್ಬ ಪರಿಣಾಮಕಾರಿ ಸಮನ್ವಯಕಾರ ಶಿವರಾಮಣ್ಣ. ಆ ಸಾಮರ್ಥ್ಯವಿದ್ದ ಕಾರಣದಿಂದಲೇ ಅವರನ್ನು ಕನ್ನಡ ಚಿತ್ರರಂಗದ ಹಿರಿಯಣ್ಣ ಎಂದು ಕರೆಯುತ್ತೇನೆ. ಚಿತ್ರರಂಗದ ಯಾವುದೇ ಸಂಘಟನೆಗಳಲ್ಲಿ ಏನೇ ಭಿನ್ನಾಭಿಪ್ರಾಯ, ಸಮಸ್ಯೆ ಬರಲಿ ಅವರು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಿದ್ದುಂಟು. ಅದನ್ನೆಲ್ಲಾ ಯಾವುದೇ ನಿರೀಕ್ಷೆ ಇಲ್ಲದೇ ನಿರ್ವಹಿಸಿದವರು ಅವರು.

ಸಿನಿಮಾದ ಜಾಗತಿಕ ನೋಟ: ಸಿನಿಮಾ ಬಗ್ಗೆ ಅವರಿಗೆ ಏನು ಗೊತ್ತಿಲ್ಲ ಹೇಳಿ? ಕ್ಯಾಮೆರಾದಿಂದ ಹಿಡಿದು ನಿರ್ಮಾಣದ ಕೊನೆಯ ಹಂತದವರೆಗೆ ಪ್ರತಿಯೊಂದರ ಆಳ ಅಗಲವನ್ನೂ ಅವರು ಬಲ್ಲರು. ಜಾಗತಿಕ ಸಿನಿಮಾಗಳ ವೀಕ್ಷಕ ಅವರು. ಅವರ ಮನೆಯೇ ಒಂದು ದೊಡ್ಡ ಗ್ರಂಥಾಲಯ. ಸುಮಾರು 14 ಸಾವಿರದಷ್ಟು ಪುಸ್ತಕಗಳು, ಸಿನಿಮಾ ಸಾಮಗ್ರಿ, ಪೋಸ್ಟರ್‌ಗಳು, ಐದಾರು ಸಾವಿರದಷ್ಟು ಜಾಗತಿಕ ಸಿನಿಮಾಗಳ ಸಿ.ಡಿ ಸಂಗ್ರಹ ಅವರ ಮನೆಯಲ್ಲಿದೆ. ಕಣಗಾಲ್‌ ಪ್ರಭಾಕರ ಶಾಸ್ತ್ರಿ, ಪುಟ್ಟಣ್ಣ ಕಣಗಾಲ್‌ ಅವರಂಥ ದಿಗ್ಗಜರ ಜೊತೆ ಕೆಲಸ ಮಾಡಿದವರು. ಪೂರ್ಣ ಅಪ್‌ಡೇಟ್‌ ಆಗಿರುತ್ತಿದ್ದ ವ್ಯಕ್ತಿ ಅವರು. ಹಾಗಾಗಿ ಅವರ ಜೀವನವೇ ಅನುಭವದ ಆಗರ.

ಶಿವರಾಮಣ್ಣ ಮತ್ತು ಸುಚಿತ್ರಾ: ಸುಚಿತ್ರಾ ಫಿಲಂ ಸೊಸೈಟಿ ಸ್ಥಾಪನೆಗೆ ಶಿವರಾಮಣ್ಣನೇ ಪ್ರಮುಖ ಕಾರಣ. ಅದರ ಕಟ್ಟಡ ನಿರ್ಮಾಣದ ಸಂದರ್ಭ ಹಣದ ಕೊರತೆ ಎದುರಾಯಿತು. ಆ ಕಾಲದಲ್ಲಿ ಮುಖ್ಯಮಂತ್ರಿಯಿಂದ ಹಿಡಿದು ವಿವಿಧ ಸಚಿವರನ್ನು ಕಂಡು ಆ ಕಟ್ಟಡ ಪೂರ್ಣವಾಗಲು ಕಾರಣರಾದರು. ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಸ್ಥಾಪನೆ ಮತ್ತು ಅದರ ಮೊದಲ ಕಟ್ಟಡ ನಿರ್ಮಾಣದ ಸಂದರ್ಭದಲ್ಲಿಯೂ ಶಿವರಾಮಣ್ಣ ಮುತುವರ್ಜಿ ವಹಿಸಿದ್ದರು.

ಈ ಮಧ್ಯೆ ಸುಚಿತ್ರಾ ಟ್ರಸ್ಟ್‌ ಮತ್ತು ಫಿಲ್ಮ್‌ ಸೊಸೈಟಿ ಮಧ್ಯೆ ಭಿನ್ನಾಭಿಪ್ರಾಯ ಬಂದಾಗ ಶಿವರಾಮಣ್ಣ ಕೆಲಕಾಲ ಸಂಘಟನೆಯಿಂದ ದೂರ ಉಳಿದಿದ್ದರು. 2019ರಲ್ಲಿ ಫಿಲ್ಮ್‌ ಸೊಸೈಟಿಯ ಚುನಾವಣೆಯಲ್ಲಿ ಸ್ಪರ್ಧಿಸಿ ಅತಿ ಹೆಚ್ಚು ಮತಗಳಿಂದ ಗೆದ್ದು ಸದಸ್ಯರಾದರು. ಮತ್ತೆ ಸಂಘಟನೆಯನ್ನು ಗಟ್ಟಿಗೊಳಿಸಿದ್ದರು. ಚಿತ್ರರಂಗದ ಎಲ್ಲ ಸಂಘಟನೆಗಳಲ್ಲಿ ಶಿವರಾಮಣ್ಣ ಸಕ್ರಿಯರಾಗಿದ್ದರು.

ಒಡನಾಟ: ನಾನು ಅವರನ್ನು ಮೊದಲು ನೋಡಿದ್ದು ನಾಗರಹಾವು ಚಿತ್ರದ ಚಿತ್ರೀಕರಣದ ವೇಳೆ. ಆಗ ನನ್ನ ತಾಯಿ ನನ್ನನ್ನು ಶೂಟಿಂಗ್‌ ನೋಡಲು ಕರೆದುಕೊಂಡು ಹೋಗಿದ್ದರು. ಅಲ್ಲಿಂದ ಅವರ ಪರಿಚಯ, ಮಾತು ಆರಂಭವಾಗಿತ್ತು. ಮುಂದೆ ಅವರು ನನಗೆ ರಂಗಭೂಮಿ, ಸಿನಿಮಾದ ಮೂಲಕ ಹತ್ತಿರವಾಗಿದ್ದರು. ಅವರು ರಂಗಭೂಮಿಯಲ್ಲಿ ಮೇಕಪ್‌ ನಾಣಿಯವರ ಜೊತೆ ಮೇಕಪ್‌ ಮಾಡಿದ್ದೂ ಇದೆ, ಲೈಟ್‌ ಕಟ್ಟಿದ್ದೂ ಇದೆ.

ಬೆಂಗಳೂರಿನ ಬನಶಂಕರಿಯಲ್ಲಿ ಚಲನಚಿತ್ರ ನಟ ಶಿವರಾಂ ಅವರ ಪಾರ್ಥಿವ ಶರೀರಕ್ಕೆ ನಟ ಶಿವರಾಜ್ ಕುಮಾರ್ ಶನಿವಾರ ಅಂತಿಮ ನಮನ ಸಲ್ಲಿಸಿದರು. ಶಿವರಾಂ ಅವರ ಮಗ ಲಕ್ಷ್ಮೀಶ ಇದ್ದಾರೆ.
ಬೆಂಗಳೂರಿನ ಬನಶಂಕರಿಯಲ್ಲಿ ಚಲನಚಿತ್ರ ನಟ ಶಿವರಾಂ ಅವರ ಪಾರ್ಥಿವ ಶರೀರಕ್ಕೆ ನಟ ಶಿವರಾಜ್ ಕುಮಾರ್ ಶನಿವಾರ ಅಂತಿಮ ನಮನ ಸಲ್ಲಿಸಿದರು. ಶಿವರಾಂ ಅವರ ಮಗ ಲಕ್ಷ್ಮೀಶ ಇದ್ದಾರೆ.

ಭಕ್ತಿ ಪರಂಪರೆಯಲ್ಲಿ ನಂಬಿಕೆ: ಅವರು ಎಲ್ಲರನ್ನೂ ಒಳಗೊಳ್ಳುವ, ಎಲ್ಲರೊಳಗೊಂದಾಗುವ ವ್ಯಕ್ತಿಯಾಗಿದ್ದರು. ಹಾಗಾಗಿ ಅವರು ಭಕ್ತಿ ಪರಂಪರೆಯತ್ತ ವಾಲಿದ್ದರು. ಬಹುಶಃ ಅವರ ಸಹೋದರನ ಅಗಲಿಕೆಯ ನಂತರ ಇರಬೇಕು. ಅದ್ಯಾಕೋ ಭಕ್ತಿ ಅವರನ್ನು ತುಂಬಾ ಸೆಳೆಯಿತು. ಹಲವಾರು ವರ್ಷ ಅವರು ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಸಿನಿಮಾ ಕ್ಷೇತ್ರದ ಅನೇಕ ಹಿರಿಕಿರಿಯರನ್ನು ಶಬರಿಮಲೆಗೆ ಕರೆದುಕೊಂಡು ಹೋದದ್ದೂ ಇದೆ. ಭಕ್ತಿಗೆ ಗಾಢವಾಗಿ ವಾಲಿದ ಅವರು ಸಂಪೂರ್ಣ ಕಾವಿಧಾರಿಯಾಗಿದ್ದರು. ಪೂಜೆ, ಧ್ಯಾನ ಇತ್ಯಾದಿಗಳಲ್ಲೇ ಹೆಚ್ಚು ಕಾಲ ಇರುತ್ತಿದ್ದರು. ಅಯ್ಯಪ್ಪ ಸ್ವಾಮಿ ವ್ರತಧಾರಿಗಳಿಗೆ ಗುರುಸ್ಥಾನದಲ್ಲಿದ್ದು ಪೂಜಾ ಕಾರ್ಯ ನಡೆಸಿದ್ದರು. ನೋಡಿ ಅದಕ್ಕೇ ಇರಬೇಕು, ಅವರು ದೇವರ ಮುಂದೆಯೇ ಕುಸಿದುಬಿದ್ದು ನಮ್ಮಿಂದ ಅಗಲಿದರೇನೋ ಎನಿಸುತ್ತಿದೆ.

ಸಿನಿಮಾದಲ್ಲಿ ಹೀಗಿದ್ದರು...: ನಟನೆಯನ್ನು ನೆನಪಿಸುವುದಾದರೆ ‘ತಾಯಿ ಸಾಹೇಬ’ದಲ್ಲಿ ಅವರ ಪಾತ್ರ ಗಿರೀಶ ಕಾಸರವಳ್ಳಿ ಅವರ ಜೊತೆಗೆ ಇತ್ತು. ಅದು ಅದ್ಭುತವಾಗಿ ಬಂದಿತು. ಅಶೋಕ್‌ ಕಶ್ಯಪ್‌, ಯೋಗರಾಜ್‌ ಭಟ್‌ ನಿರ್ದೇಶನದ ‘ಚಕ್ರ’ ಧಾರಾವಾಹಿಯಲ್ಲಿ ಅವರ ಗಾಂಧಿಯ ಪಾತ್ರ ನೆನಪಿನಲ್ಲಿ ಉಳಿದಿದೆ. ಪಾತ್ರ ಗಂಭೀರವಾದದ್ದೋ, ಹಾಸ್ಯಮಯವೋ ಏನೇ ಇರಲಿ ಪೂರ್ಣ ತೊಡಗಿಕೊಳ್ಳುತ್ತಿದ್ದರು ಶಿವರಾಮಣ್ಣ.

ಅವರನ್ನು ಚಿತ್ರರಂಗ ಒಂದು ಕ್ಯಾರಿಕೇಚರ್‌ ರೀತಿ ಬಳಸಿತೇ ಎಂದು ಅನಿಸುತ್ತಿದೆ. ಅವರ ಸಾಮರ್ಥ್ಯವನ್ನು ಪೂರ್ಣ ಬಳಸಿಕೊಂಡಿದ್ದೇ ಕಡಿಮೆ. ಹಾಗೆಯೇ ಸುಚಿತ್ರಾ ಫಿಲ್ಮ್‌ ಸೊಸೈಟಿ ಅಧ್ಯಕ್ಷನಾಗಿ, ವೈಯಕ್ತಿಕವಾಗಿ ಹಾಗೂ ಸಮಾಜಕ್ಕೆ ಶಿವರಾಮಣ್ಣ ಅಗಲಿಕೆ ದೊಡ್ಡನಷ್ಟ.

-ನಿರೂಪಣೆ: ಶರತ್‌ ಹೆಗ್ಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT