ಶನಿವಾರ, ಜುಲೈ 31, 2021
27 °C

ನಿರ್ಮಾಪಕನಾಗುವ ಕನಸು ಬಿಚ್ಚಿಟ್ಟ ಧರ್ಮ

ಕೆ.ಎಂ. ಸಂತೋಷ್‌ ಕುಮಾರ್‌ Updated:

ಅಕ್ಷರ ಗಾತ್ರ : | |

ಚಿತ್ರನಟ ಧರ್ಮ ಸಿನಿಮಾಗಳಲ್ಲಿ ಖಳ ನಟನಾಗಿ ಮಿಂಚಿದ್ದೇ ಹೆಚ್ಚು. ಸಿನಿಮೋದ್ಯಮದ ಚಟುವಟಿಕೆಗಳು ಸ್ಥಗಿತಗೊಂಡಿರುವುದರಿಂದ ಧರ್ಮ ಅವರು ಈಗ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಹಾಗಂಥ ಅವರ ಕೈಯಲ್ಲಿ ಸಿನಿಮಾಗಳಿಲ್ಲವೆಂದಲ್ಲ, ಕೈಯಲ್ಲಿ ಸಾಲು ಸಾಲು ಸಿನಿಮಾಗಳೂ ಇವೆ. ಆದರೆ, ಕೊರೊನಾ ಲಾಕ್‌ಡೌನ್‌ ಕಾರಣಕ್ಕೆ ಸಿನಿಮಾ ಶೂಟಿಂಗ್‌ ಶುರುವಾಗಿಲ್ಲ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಸಿನಿಮಾ ಚಿತ್ರೀಕರಣ ಶುರುವಾದರೆ ಅತ್ತ ಜಿಗಿಯುವ ಯೋಜನೆ ಅವರದು.

ಸುಮಾರು ನೂರೈವತ್ತರ ಎಪಿಸೋಡ್ ಹೊಸ್ತಿಲಿನಲ್ಲಿರುವ, ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಇಂತಿ ನಿಮ್ಮ ಆಶಾ’ ಧಾರಾವಾಹಿಯಲ್ಲಿ ಧರ್ಮ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯ ನಿರ್ಮಾಣದಲ್ಲಿ ಅವರ ಪಾಲೂ ಇದೆಯಂತೆ. ಹಲವು ಸಿನಿಮಾಗಳನ್ನು ಅವರು ಒಪ್ಪಿಕೊಂಡಿರುವುದರಿಂದ, ‘ಆ್ಯಕ್ಸಿಡೆಂಟ್‌ ಮಾಡಿಸಿ ನನ್ನ ಪಾತ್ರವನ್ನು ಸಾಯಿಸಿ, ಈ ಧಾರಾವಾಹಿಯಿಂದ ಬೇಗ ನನ್ನನ್ನು ಬಿಡುಗಡೆ ಮಾಡಬೇಕು’ ಎಂದು ಕೇಳಿಕೊಂಡಿದ್ದರಂತೆ. ಆದರೆ, ವಾಹಿನಿಯವರು ಮತ್ತು ನಿರ್ದೇಶಕರು ಅವರ ಈ ಬೇಡಿಕೆಗೆ ಸೊಪ್ಪು ಹಾಕುತ್ತಿಲ್ಲವಂತೆ! ಇವರ ಪಾತ್ರಕ್ಕೆ ಮಹತ್ವ ಇರುವುದರಿಂದ ಸಿನಿಮಾ ಚಿತ್ರೀಕರಣ ಶುರುವಾಗುವವರೆಗೂ ಧರ್ಮ ಪಾತ್ರದಲ್ಲಿ ಮುಂದುವರಿಯಲೇಬೇಕಾಗಿದೆಯಂತೆ.

ಧ್ರುವ ಸರ್ಜಾ ನಟನೆಯ ಪೊಗರು (ಒಳ್ಳೆಯ ಇನ್‌ಸ್ಪೆಕ್ಟರ್‌), ದರ್ಶನ್‌ ಅಭಿನಯದ ‘ರಾಜವೀರ ಮದಕರಿ ನಾಯಕ’ (ಪಾತ್ರ ಇನ್ನೂ ಹೇಳಿಲ್ಲ), ಪುನೀತ್‌ ರಾಜ್‌ಕುಮಾರ್‌ ನಟನೆಯ ಜೇಮ್ಸ್‌ (ವಿಲನ್‌), ಶ್ರೀಮುರಳಿಯ ಅಭಿನಯದ ‘ಮದಗಜ’ (ಸಿಬಿಐ ಅಧಿಕಾರಿ), ಧನ್ವೀರ್‌ ನಟನೆಯ ‘ಬಂಪರ್’‌ (ಪಾಸಿಟಿವ್‌ ಪಾತ್ರ), ರವಿಚಂದ್ರನ್‌ ನಟನೆಯ ‘ರವಿ ಬೋಪಣ್ಣ’ (ಎಸ್‌ಪಿ) ಮತ್ತು ‘ರಾಜೇಂದ್ರ ಪೊನ್ನಪ್ಪ’ (ವಿಲನ್‌) ಹಾಗೂ ರವಿಶಂಕರ್‌ ನಟನೆಯ ಸದ್ಗುಣ ಸಂಪನ್ನ ಮಾಧವ 100% (ಹಾಸ್ಯ ಪಾತ್ರ) ಚಿತ್ರಗಳಲ್ಲಿ ಧರ್ಮ ನಟಿಸುತ್ತಿದ್ದಾರೆ. ಪೊಗರು ಚಿತ್ರ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಇನ್ನುಳಿದ ಚಿತ್ರಗಳಲ್ಲಿ ಧರ್ಮ ನಿರ್ವಹಿಸಲಿರುವ ಬಹುತೇಕ ಪಾತ್ರಗಳ ಚಿತ್ರೀಕರಣ ಬಾಕಿ ಇದೆಯಂತೆ.

‘ಈವರೆಗೆ 263 ಚಿತ್ರಗಳಲ್ಲಿ ನಟಿಸಿದ್ದೇನೆ. ಇದರಲ್ಲಿ 85 ಸಿನಿಮಾಗಳಲ್ಲಿ ಖಾಕಿ ಧರಿಸಿದ್ದೇನೆ. ವರ್ಷದಲ್ಲಿ ನನಗೆ 25 ಸ್ಕ್ರಿಪ್ಟ್‌ ಬಂದರೆ, ಅದರಲ್ಲಿ 20 ಸ್ಕ್ರಿಪ್ಟ್‌ಗಳಲ್ಲಿ ಪೊಲೀಸ್‌ ಪಾತ್ರಗಳೇ ಇರುತ್ತವೆ. ಹಾಗಾಗಿ ಈಗಂತೂ ಪಾತ್ರಗಳ ಆಯ್ಕೆಯಲ್ಲಿ ತುಂಬಾ ಚ್ಯೂಸಿಯಾಗಿದ್ದೇನೆ. ಸಿಕ್ಕಿದ್ದೆಲ್ಲವನ್ನೂ ಒಪ್ಪಿಕೊಳ್ಳುತ್ತಿಲ್ಲ. ದೊಡ್ಡ ಸ್ಟಾರ್‌ಗಳಿರುವ ಚಿತ್ರಗಳಲ್ಲಿ ನಮ್ಮ ಪಾತ್ರಗಳಿಗೂ ಒಂದಿಷ್ಟು ಕಿಮ್ಮತ್ತು ಇರುವಂತೆ ಎಚ್ಚರ ವಹಿಸುತ್ತಿದ್ದೇನೆ. ರವಿಶಂಕರ್‌ ಮತ್ತು ರಂಗಾಯಣ ರಘು ಅವರಂತೆ ಪಾತ್ರಗಳಲ್ಲಿ ಛಾಪು ಮೂಡಿಸಬೇಕೆನ್ನುವ ಆಸೆಗಳು ನನಗೂ ಇವೆ’ ಎನ್ನುವುದು ಅವರ ಅನಿಸಿಕೆ.

‘ನಿರ್ದೇಶಕ ಟಿ.ಎಸ್‌. ನಾಗಾಭರಣ ಅವರ ‘ವಸುಂಧರ’ ಚಿತ್ರದಲ್ಲಿ ಸೈಂಟಿಸ್ಟ್‌ ಪಾತ್ರ ಸಿಕ್ಕಿತ್ತು. ಆ ಪಾತ್ರ ನನ್ನ ಬಣ್ಣದ ಬದುಕಿನಲ್ಲಿ ತುಂಬಾ ತೃಪ್ತಿ ನೀಡಿತು. ಇತ್ತೀಚೆಗೆ ಒಪ್ಪಿಕೊಂಡಿರುವ ಎಲ್ಲ ಸಿನಿಮಾಗಳಲ್ಲೂ ಒಳ್ಳೆಯ ಪಾತ್ರಗಳೇ ಸಿಕ್ಕಿವೆ. ವಿಲನ್‌ ಮತ್ತು ಪೊಲೀಸ್‌ ಪಾತ್ರಗಳಿಗೆ ಮಾತ್ರ ಸೀಮಿತವಾಗುತ್ತಿಲ್ಲ. ಪಾಸಿಟಿವ್‌ ಆದ ಮತ್ತು ಕಾಮಿಡಿ ಪಾತ್ರಗಳನ್ನು ಮಾಡುತ್ತಿದ್ದೇನೆ. ನಾವು ಮಾಡುವ ಪಾತ್ರಗಳು ಪ್ರೇಕ್ಷಕರ ಮನಸಿನಲ್ಲಿ ಉಳಿಯಬೇಕು ಎನ್ನುವ ಹಂಬಲ ಎಲ್ಲ ಕಲಾವಿದರಿಗೆ ಇದ್ದಂತೆ ನನಗೂ ಇದೆ’ ಎನ್ನಲು ಅವರು ಮರೆಯಲಿಲ್ಲ.

‘ಈಗ ಒಂದು ಧಾರಾವಾಹಿ ನಿರ್ಮಾಣ ಮಾಡುತ್ತಿದ್ದೇನೆ. ಸಿನಿಮಾ ನಿರ್ಮಾಣ ಕೈಗೆತ್ತಿಕೊಳ್ಳುವ ಯೋಜನೆ ಇದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ವರ್ಷದ ಕೊನೆಯಲ್ಲಿ ಎರಡು ಸಿನಿಮಾಗಳಿಗೆ ನಿರ್ಮಾಪ‍ಕನಾಗುವ ಭಾಗ್ಯ ಕೂಡಿಬರಲಿದೆ’ ಎಂದು ತಮ್ಮ ಕನಸನ್ನು ಬಿಚ್ಚಿಟ್ಟರು.


ಧರ್ಮ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು