ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀರೊ ಆಗ್ತಾರಂತೆ ‘ರಾಮಾ ರಾಮಾ ರೇ...’ ಧರ್ಮಣ್ಣ

Last Updated 7 ಫೆಬ್ರುವರಿ 2020, 20:15 IST
ಅಕ್ಷರ ಗಾತ್ರ

‘ರಾಮಾ ರಾಮಾ ರೇ’ ಚಿತ್ರದಲ್ಲಿ ತನ್ನ ನಂಬಿ ಮನೆಬಿಟ್ಟು ಬಂದಿದ್ದ ಗೆಳತಿಯ ಕೈ ಹಿಡಿದು ಓಡುತ್ತಲೇ ಇರುವ ದಡ್ಡ ವಾಚಾಳಿ ಹುಡುಗನ ಪಾತ್ರದಲ್ಲಿ ನಗೆಯುಕ್ಕಿಸುತ್ತಲೇ ಕಣ್ಣುಗಳನ್ನು ತೇವಗೊಳಿಸಿದ್ದ ನಟ ಧರ್ಮಣ್ಣ ಕಡೂರ ಈಗ ಬರ್ತ್‌ಡೇ ಬಾಯ್‌ (ಫೆ.8).

‘ಎಷ್ಟು ವರ್ಷಗಳಾಯ್ತು ನಿಮಗೆ?’ ಎಂದು ಕೇಳಿದರೆ ‘ಅದನ್ನ ಹೇಳ್ಲೇ ಬೇಕಾ? ನಿಜವಾಗ್ಲೂ ಹೇಳ್ಬೇಕಂದ್ರೆ 34 ಕಳೆದು 35ಕ್ಕೆ ಕಾಲಿಡ್ತಿದೀನಿ... ವಯಸ್ಸಾಯ್ತು ಅಂತ ಹುಡುಗೀರು ನನ್ನ ನೋಡೋದು ಬಿಟ್ರೆ ಕಷ್ಟ. ಸ್ವೀಟ್ 25 ಅಂತ ಬರೀರಿ...’ ಎಂದು ಕಣ್ಣು ಮಿಟುಕಿಸುತ್ತಾರೆ.

ಮೊದಲ ಚಿತ್ರದಲ್ಲಿಯೇ ಚಿತ್ರರಂಗದ ಗಮನಸೆಳೆದ ಧರ್ಮಣ್ಣ ಅವರಿಗೆ ನಂತರ ಸಾಲು ಸಾಲು ಅವಕಾಶಗಳು ಸಿಗುತ್ತಲೇ ಹೋದವು. ಕನ್ನಡದ ಹೊಸ ಪೀಳಿಗೆಯ ಹಾಸ್ಯನಟರ ಸಾಲಿನಲ್ಲಿ ಎದ್ದುಕಾಣುವ ಹೆಸರು ಧರ್ಮಣ್ಣ ಅವರದು. ‘ಮುಗುಳು ನಗೆ’ ಸಿನಿಮಾದ ತೊದಲುವ ಹುಡುಗನ ಪಾತ್ರವಾಗಲಿ, ‘ಅಳಿದು ಉಳಿದವರು’ ಚಿತ್ರದ ಯುವ ಪತ್ರಕರ್ತನಾಗಲಿ, ಇತ್ತೀಚೆಗೆ ಬಿಡುಗಡೆಯಾದ ‘ಕಾಣದಂತೆ ಮಾಯವಾದನು’ ಸಿನಿಮಾದಲ್ಲಿನ ಆತ್ಮವನ್ನು ಕಾಣಬಲ್ಲ ಉಡಾಪೆ ಹುಡುಗನ ಪಾತ್ರವಾಗಲಿ ಬಹುಕಾಲ ಪ್ರೇಕ್ಷಕರ ಮನಸಲ್ಲಿ ಉಳಿದುಕೊಳ್ಳುವಂಥದ್ದು.

ವೃತ್ತಿಜೀವನದಲ್ಲಿ ನಿಧಾನಕ್ಕೆ ಒಂದೊಂದೇ ಮೆಟ್ಟಿಲುಗಳನ್ನು ಏರುತ್ತಿರುವ ಧರ್ಮಣ್ಣ ಅವರೀಗ ದರ್ಶನ್ ಅಭಿನಯದ ‘ರಾಬರ್ಟ್’, ಶ್ರೀಮುರಳಿ ಅಭಿನಯದ ‘ಮದಗಜ’, ಪ್ರಜ್ವಲ್ ದೇವರಾಜ್‌ ಜೊತೆ ‘ಇನ್‌ಸ್ಪೆಕ್ಟರ್ ವಿಕ್ರಮ್’ ಹೀಗೆ ಸ್ಟಾರ್‌ ನಟರ ಸಿನಿಮಾಗಳಲ್ಲಿ ನಗೆಯುಕ್ಕಿಸುವ ಹೊಣೆಯನ್ನು ಹೊರುತ್ತಿದ್ದಾರೆ. ‘ದಂತಕತೆ’ ಎನ್ನುವ ಇನ್ನೊಂದು ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುತ್ತಿರುವುದಷ್ಟೇ ಅಲ್ಲ, ಸ್ವತಃ ಸ್ಟಾರ್ ಆಗುವ ಸನ್ನಾಹದಲ್ಲಿಯೂ ಇದ್ದಾರೆ!

ಹೌದು, ಸದ್ಯದಲ್ಲಿಯೇ ಧರ್ಮಣ್ಣ ಕಡೂರ ಅವರನ್ನು ನೀವು ನಾಯಕನಾಗಿ ನೋಡಲಿದ್ದೀರಿ. ‘ಹೀರೊ ಆಗ್ತಿದೀರಾ? ಎಂದು ಕೇಳಿದರೆ ಥಟ್ಟನೆ ಒಪ್ಪಿಕೊಳ್ಳದ ಅವರು, ಸುತ್ತಿಬಳಸಿ ತಾವು ಯಾವ ರೀತಿ ಸಿನಿಮಾಗಳಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತೇನೆ ಎಂಬುದರ ಸುಳಿವು ನೀಡುತ್ತಾರೆ.

‘ಹೀರೊಯಿಸಂ ಎಲ್ಲ ನನಗೆ ಒಗ್ಗಲ್ಲ. ನನಗೆ ಒಪ್ಪದ ಪಾತ್ರಗಳನ್ನು ಮಾಡಲು ಹೋಗುವುದೂ ಇಲ್ಲ. ಹಿಂದೊಮ್ಮೆ ಶಶಿಕುಮಾರ್, ಅನಂತ್‌ನಾಗ್ ಅವರೆಲ್ಲ ನಟಿಸುತ್ತಿದ್ದರಲ್ಲ, ಕಾಮಿಡಿ ಡ್ರಾಮಾ, ಆರೀತಿಯ ಸಿನಿಮಾಗಳು ಬಂದರೆ ಒಪ್ಪಿಕೊಳ್ಳುತ್ತೇನೆ. ಅಲ್ಲಿ ನಾಯಕನೇ ಮುಖ್ಯ ಆಗಿರುವುದಿಲ್ಲ. ಬಹಳಷ್ಟು ಮುಖ್ಯ ಪಾತ್ರಗಳಿರುತ್ತವೆ’ ಎಂಬುದು ಅವರ ವಿವರಣೆ.

‘ಕಥೆ ಮತ್ತು ಪಾತ್ರ ನನಗೆ ಒಪ್ಪಿಗೆ ಆಗುತ್ತದೆ ಎಂದು ನನಗೆ ಖಚಿತಗೊಂಡರೆ ಮಾತ್ರ ನಾನು ನಟಿಸುತ್ತೇನೆ. ಅವಕಾಶ ಸಿಕ್ಕಿತು ಅಂದಾಕ್ಷಣ ಒಪ್ಪಿಕೊಂಡು ಬಿಟ್ಟರೆ ನಗೆಪಾಟಲಿಗೀಡಾಗಬೇಕಾಗುತ್ತದೆ. ನನ್ನ ಮಿತಿಗಳು ನನಗೆ ಗೊತ್ತಿದೆ. ನಾನು ಹತ್ತಾರು ಕಟ್ಟುಮಸ್ತಾದ ವಿಲನ್‌ಗಳನ್ನು ಹೊಡೆದುರುಳಿಸಿದರೆ, ಅಷ್ಟೆತ್ತರದ ನಟಿಯೊಡನೆ ಡ್ಯೂಯೆಟ್ ಹಾಡಲು ಶುರುಮಾಡಿದರೆ ಜನ ನಂಬುವುದಿಲ್ಲ. ಕಾಮಿಡಿ ನನ್ನ ಶಕ್ತಿ. ಆ ಶಕ್ತಿಯನ್ನೇ ಬಳಸಿಕೊಂಡು ರೂಪಿಸುವ ಸಿನಿಮಾ ಆದರೆ ಒಪ್ಪಿಕೊಳ್ಳಬಹುದು’ ಎಂಬುದು ಅವರ ಸ್ಪಷ್ಟ ಮಾತು.

ಇದು ಯಾವಾಗಲೋ ಆಗಬಹುದಾದ ಕನಸಲ್ಲ. ಈಗಲೇ ಹಲವು ಕಥೆಗಳು ಧರ್ಮಣ್ಣ ಅವರನ್ನು ಅರಸಿಕೊಂಡು ಬರುತ್ತಿವೆಯಂತೆ. ಆದರಲ್ಲಿ ಒಂದು ಕಥೆ ಅವರಿಗೆ ಇಷ್ಟವೂ ಆಗಿದೆ. ಹಾಗಾಗಿ ಇನ್ನು ಕೆಲವೇ ದಿನಗಳಲ್ಲಿ ಧರ್ಮಣ್ಣ ನಾಯಕನಾಗಿ ನಟಿಸಿರುವ ಚಿತ್ರ ಸೆಟ್ಟೇರುವ ಎಲ್ಲ ಸಾಧ್ಯತೆಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT