ಬುಧವಾರ, ಆಗಸ್ಟ್ 10, 2022
20 °C

ಸಂಚಾರಿ ವಿಜಯ್‌ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಗಣ್ಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೈಕ್‌ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ನಿಧನರಾಗಿರುವ ನಟ ಸಂಚಾರಿ ವಿಜಯ್‌ ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಇಡಲಾಗಿದ್ದು, ನಟರಾದ ಶಿವರಾಜ್‌ಕುಮಾರ್‌, ಧನಂಜಯ್‌ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು. 

ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ್‌ಕುಮಾರ್‌, ‘ನನಗೆ ಮಾತುಗಳು ಬರುತ್ತಿಲ್ಲ. ಇಷ್ಟು ಚಿಕ್ಕ ವಯಸ್ಸಿನಲ್ಲಿ ನಮ್ಮಿಂದ ದೂರ ಹೋಗುವುದು ನಮಗಿಂತ ಅವರ ಕುಟುಂಬಕ್ಕೇ ಹೆಚ್ಚಿನ ನೋವು ನೀಡಿರುತ್ತದೆ. ‘ಕಿಲ್ಲಿಂಗ್‌ ವೀರಪ್ಪನ್‌’ ಚಿತ್ರದಲ್ಲಿ ನಾವಿಬ್ಬರೂ ಜೊತೆಯಾಗಿ ನಟಿಸಿದ್ದೆವು. ಯಲ್ಲಾಪುರದಲ್ಲಿ 10–12 ದಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದೆವು. ಈ ಸಂದರ್ಭದಲ್ಲಿ ಅವರನ್ನು ನಾನು ಹತ್ತಿರದಿಂದ ನೋಡಿದ್ದೆ. ವಿಭಿನ್ನವಾಗಿ ನಟಿಸುವ ಆಸೆ, ಕಲಿಯುವ ಆಸಕ್ತಿಯನ್ನು ಅವರಲ್ಲಿ ಗಮನಿಸಿದ್ದೆ. ರಾಷ್ಟ್ರ ಪ್ರಶಸ್ತಿ ಯಾಕೆ ಸಿಗಬೇಕು ಎನ್ನುವುದಕ್ಕೆ ನಾನು ಅವನಲ್ಲ, ಅವಳು ಉತ್ತಮ ಉದಾಹರಣ. ನಿಧನದ ಬಳಿಕ ಅಂಗಾಂಗ ದಾನ ಮಾಡಿದರು. ಇದರಿಂದ ಅವರ ವ್ಯಕ್ತಿತ್ವ ಎಲ್ಲರಿಗೂ ತಿಳಿಯುತ್ತದೆ’ ಎಂದರು.

ಓದಿ: ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಇನ್ನಿಲ್ಲ

‘ಈ ಉದಾಹರಣೆ ಇಟ್ಟುಕೊಂಡು ಮಾತನಾಡಲು ನೋವಾಗುತ್ತದೆ. ದಯವಿಟ್ಟು ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಹೆಲ್ಮೆಟ್‌ ಧರಿಸಿ.  ಇದೊಂದು ಸಂದೇಶ. ಕಾನೂನು ನಿಮ್ಮ ಒಳ್ಳೆಯದಕ್ಕೆ ಹೇಳುವುದು’ ಎಂದು ಶಿವರಾಜ್‌ಕುಮಾರ್‌ ಹೇಳಿದರು.

‘ಶಂಕರ್‌ನಾಗ್‌, ಕರಿಬಸವಯ್ಯ, ಸುನಿಲ್‌ ಸಾಲಿಗೆ ಇವರೊಬ್ಬರು ಸೇರ್ಪಡೆಯಾದರು. ಇದು ಸಾವಿನ ಅಟ್ಟಹಾಸ. ಒಳ್ಳೆಯ ಮರಗಳಿಗೆ ಮೊದಲು ಕೊಡಲಿ ಬಿದ್ದಂತಾಗಿದೆ. ವಿಜಯ್‌ ಅವರು ಇನ್ನಷ್ಟು ಸಾಧನೆ ಮಾಡಬೇಕಿತ್ತು. ಈ ದುರಂತದ ಸರಮಾಲೆ ಬೇಗ ಕೊನೆಯಾಗಲಿ’ ಎಂದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಹೇಳಿದರು.

ಓದಿ: 

ಮುಖ್ಯಮಂತ್ರಿ ಚಂದ್ರು ಅವರು ಮಾತನಾಡಿ, ‘ಯಾರಿಗೂ ಇಂತಹ ಸಾವು ಬರಬಾರದು. ಇದೇ ಮೊದಲ ಬಾರಿ ಇಂತಹ ಸಾವು ನೋಡಿದ್ದೇನೆ. ಮಾನವೀಯತೆಯಿಂದ ಅಂಗಾಂಗ ದಾನದ ಮುಖಾಂತರ ಬೇರೆಯವರಿಗೆ ಜೀವ ಕೊಡುವ ತೀರ್ಮಾನ ತೆಗೆದುಕೊಂಡ ಕುಟುಂಬಕ್ಕೆ ಧನ್ಯವಾದ. ಬಡ ಕುಟುಂಬದಿಂದ, ಸಣ್ಣ ಹಳ್ಳಿಯಿಂದ ಬಂದು ಸಾಧನೆ ಮಾಡಿದ ವಿಜಯ್‌, ಮಂಗಳಮುಖಿ ಪಾತ್ರ ಮಾಡಿ ರಾಷ್ಟ್ರಪ್ರಶಸ್ತಿ ಪಡೆದರು. ಅವರಿಗೆ ಈ ಬಗ್ಗೆ ಯಾವುದೇ ಅಂಹಂಕಾರ ಇಲ್ಲ. ಹೆಲ್ಮೆಟ್‌ ಇದ್ದಿದ್ದರೆ ಬದುಕುತ್ತಿದ್ದರೋ ಏನೋ ಎಂದು ಎನಿಸುತ್ತಿದೆ. ಇದೇ ಸಂದರ್ಭದಲ್ಲಿ ವಿಜಯ್‌ ಅವರ ಜೊತೆಗಿದ್ದ ಸವಾರನನ್ನು ಬದುಕಿಸುವ ಜವಾಬ್ದಾರಿ ನಮ್ಮದು’ ಎಂದರು.

ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅವರ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವಗಳೊಂದಿಗೆ ನಡೆಸಲಾಗುವುದು. ಅವರ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿರುವ ಕುಟುಂಬದವರಿಗೆ ಕೃತಜ್ಞತೆಗಳ ಜೊತೆಗೆ ಸಂತಾಪ ಸೂಚಿಸುತ್ತಾ, ಪ್ರತಿಭಾವಂತ ಕಲಾವಿದ ಸಂಚಾರಿ ವಿಜಯ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

ನಟರಾದ ನೀನಾಸಂ ಸತೀಶ್‌, ರಂಘಾಯಣ ರಘು, ನಟಿ ಪಾರುಲ್‌ ಯಾದವ್‌ ಮುಂತಾದವರೂ ವಿಜಯ್‌ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಪಾರ್ಥಿವ ಶರೀರವನ್ನು 10ಗಂಟೆಯ ಬಳಿಕ ಕಡೂರಿನ ಪಂಚನಹಳ್ಳಿ ಗ್ರಾಮಕ್ಕೆ ತೆಗೆದುಕೊಂಡು ಹೋಗಲು ಸಿದ್ಧತೆ ನಡೆದಿದೆ.   

ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು