ಶನಿವಾರ, ಜುಲೈ 31, 2021
25 °C

ಮದ್ಯದ ಬಾಟಲಿಯೊಂದಿಗೆ ಮನೆಗೆ ಬಂದಿದ್ದ ನಿರ್ದೇಶಕ: ನಟಿ ಅನುಅಗರವಾಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಆಶಿಕಿ’ ಖ್ಯಾತಿಯ ನಟಿ ಅನು ಅಗರ್‌ವಾಲ್‌ ಬಾಲಿವುಡ್‌ನಲ್ಲಿ ತಾವು ಎದುರಿಸಿದ ಪಾತ್ರಕ್ಕಾಗಿ ಪಲ್ಲಂಗ (ಕಾಸ್ಟಿಂಗ್ ಕೌಚ್‌) ದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಸೂಪರ್ ಹಿಟ್‌ ಚಿತ್ರ ಆಶಿಕಿ ನಂತರ ತಾವು ಎದುರಿಸಿದ ಕಾಸ್ಟಿಂಗ್ ಕೌಚ್ ಅನುಭವವನ್ನು ಮಾಧ್ಯಮವೊಂದರ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ ಅನು. 

ಚೊಚ್ಚಲ ಸಿನಿಮಾ ಆಶಿಕಿಯಿಂದಲೇ ರಾತ್ರೋರಾತ್ರಿ ಹೆಸರು ಗಳಿಸಿದ್ದರು ಅನು. ಅಲ್ಲದೇ ಆ ಮೂಲಕ ಬಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದರು. ನಾಚಿಕೆ ಸ್ವಭಾವದ, ಹೊರ ಜಗತ್ತಿನ ಬಗ್ಗೆ ತಿಳಿಯದ ವ್ಯಕ್ತಿಯೊಬ್ಬರನ್ನು ಮನಪೂರ್ವಕವಾಗಿ ಪ್ರೀತಿಸುವ ಹುಡುಗಿಯ ಪಾತ್ರದಲ್ಲಿ ಅನು ಕಾಣಿಸಿಕೊಂಡಿದ್ದರು. 

ಇವರ ಜೀವನದ ಕುರಿತು ನೆಟ್‌ಫಿಕ್ಸ್‌ನಲ್ಲಿ ಸರಣಿ ಆರಂಭವಾಗುತ್ತಿದ್ದು ತಮ್ಮ ಬಾಲಿವುಡ್‌ ಪಯಣ ಹಾಗೂ ತಾವು ಸಿನಿರಂಗದಲ್ಲಿ ಎದುರಿಸಿದ ಪಾತ್ರಕ್ಕಾಗಿ ಪಲ್ಲಂಗದ ಅನುಭವಗಳ ಕುರಿತು ಮಾತನಾಡಿದ್ದಾರೆ ಅನು.

‘ಕಾಸ್ಟಿಂಗ್ ಕೌಚ್ ವಿಷಯದಲ್ಲಿ ನನ್ನ ಜೀವನದಲ್ಲಿ ತುಂಬಾ ಕೆಟ್ಟ ಅನುಭವಗಳೇನೂ ಆಗಿಲ್ಲ. ಆದರೆ ಒಬ್ಬ ಖ್ಯಾತ ನಿರ್ದೇಶಕ ಕತೆ ಹೇಳುವ ಸಲುವಾಗಿ ಮನೆಗೆ ಬರುತ್ತೇನೆ ಎಂದಿದ್ದರು. ಬರುವಾಗ ಸ್ಕ್ರಿಪ್ಟ್ ಜೊತೆ ಮದ್ಯದ ಬಾಟಲಿಯನ್ನು ಕೈಯಲ್ಲಿ ಹಿಡಿದು ಬಂದಿದ್ದರು. ಕತೆ ವಿವರಿಸುವ ನೆಪದಲ್ಲಿ ನಮ್ಮ ಮನೆಯೊಳಗೆ ಕುಳಿತು ಕುಡಿಯಲು ಆರಂಭಿಸಿದ್ದರು. ಅವರ ಈ ವರ್ತನೆ ನನಗೇಕೊ ಅನುಮಾನ ತರಿಸಿತ್ತು. ಅದು ಮಟ ಮಟ ಮಧ್ಯಾಹ್ನದ ಹೊತ್ತು. ಕತೆ ಹೇಳಲು ಬರುವಾಗ ಮದ್ಯದ ಬಾಟಲಿ ತರುವ ಅವಶ್ಯಕತೆ ಏನಿತ್ತು ಎಂದು ಅನ್ನಿಸಿತ್ತು. ಯಾಕೋ ಇದು ಸರಿ ಎನ್ನಿಸದ ಕಾರಣ ನಾನು ಅವರನ್ನು ವಿನಯದಿಂದಲೇ ಮನೆಯಿಂದ ಹೊರ ಹೋಗುವಂತೆ ಕೇಳಿಕೊಂಡಿದ್ದೆ. ನಾನು ಹೇಳುವುದೇನೆಂದರೆ ಮಹಿಳೆಯರಿಗೆ ಆಯ್ಕೆಗಳಿರುತ್ತವೆ. ಸಂದರ್ಭಕ್ಕೆ ತಕ್ಕಂತೆ ಪರಿಸ್ಥಿತಿಯನ್ನು ನಿಭಾಯಿಸುವುದು ತಿಳಿದಿರಬೇಕು’ ಎಂದು ತಮ್ಮ ಅನುಭವ ಹಾಗೂ ತಾನು ಆ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಯನ್ನು ವಿವರಿಸಿದ್ದಾರೆ ಅನು. 

‘ಗಂಡಸರಿಗೆ ತಾವು ಏನೇ ಮಾಡಿದರು ಹೆಣ್ಣು ಅದಕ್ಕೆ ಒಪ್ಪಿಕೊಳ್ಳಬೇಕು ಎಂಬ ಮನೋಭಾವವಿರುತ್ತದೆ. ನಾನು ಹುಡುಗಿಯರೊಂದಿಗೆ ಮಾತನಾಡುವಾಗ ಅನೇಕ ಹುಡುಗಿಯರು ಅವನು ನನಗೆ ಮೋಸ ಮಾಡಿದ, ನನ್ನ ಬದುಕು ಹಾಳು ಮಾಡಿದ ಎಂದೆಲ್ಲಾ ಗೋಳು ತೋಡಿಕೊಳ್ಳುತ್ತಾರೆ. ನಾನು ನನ್ನ 13ನೇ ವಯಸ್ಸಿನಿಂದಲೂ ಇಂತಹ ಅನುಭವಗಳನ್ನು ಎದುರಿಸಿದ್ದೇನೆ. ಆದರೆ ಆಗ ನನಗೆ ಪರಿಸ್ಥಿತಿಯನ್ನು ನಿಭಾಯಿಸುವುದು ತಿಳಿದಿರಲಿಲ್ಲ. ನನಗೆ ಅನ್ನಿಸುವುದು ಏನೆಂದರೆ ಎಂದರೆ ಹೆಣ್ಣುಮಕ್ಕಳು ಗಟ್ಟಿಯಾಗಿರಬೇಕು. ಪರಿಸ್ಥಿತಿಯನ್ನು ಧೈರ್ಯವಾಗಿ ಎದುರಿಸಬೇಕು. ಆಗ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಹುಡುಗಿ ಒಮ್ಮೆ ಸಮ್ಮತಿ ನೀಡಿದರೆ ಆಗ ಹುಡುಗರು ಏನು ಬೇಕಾದರೂ ಮಾಡುತ್ತಾರೆ. ಆ ಕಾರಣಕ್ಕೆ ನನಗನ್ನಿಸುವುದು ಎಲ್ಲವೂ ನಮ್ಮ ಮೇಲೆ ಅವಲಂಬಿತವಾಗಿದೆ. ನಾವು ಅಂತಹವರಿಂದ ದೂರ ಇದ್ದಷ್ಟು ನಮ್ಮ ಜೀವನ ಸುಂದರವಾಗಿರುತ್ತದೆ’ ಎಂಬ ದಿಟ್ಟ ಉತ್ತರ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು