ಮಂಗಳವಾರ, ಆಗಸ್ಟ್ 9, 2022
20 °C

ಕನ್ನಡ ಆಯ್ತು, ಈಗ ಡಾ. ರಾಜ್‌ ವಿಚಾರದಲ್ಲಿ ಪ್ರಮಾದ!

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿ ಅಂಶ ಬಿತ್ತರವಾಗಿದ್ದು ಆಯ್ತು, ಈಗ ಕನ್ನಡದ ವರನಟ ಡಾ. ರಾಜಕುಮಾರ್‌ ಅವರ ವಿಚಾರದಲ್ಲಿಯೂ ಅಂತರ್ಜಾಲದಲ್ಲಿ ಪ್ರಮಾದ ಸಂಭವಿಸಿದೆ. ತಮಿಳಿನ ‘ವಿಕ್ರಮ್‌ ವೇದ’ ಸಿನಿಮಾದ ತಾರಾಗಣದ ಗೂಗಲ್‌ ಪುಟದಲ್ಲಿ ರಾಜಕುಮಾರ್‌ ಎಂಬ ಪಾತ್ರದಾರಿಯ ಜಾಗದಲ್ಲಿ ಡಾ. ರಾಜ್‌ ಅವರ ಚಿತ್ರ ಕಾಣುತ್ತಿದೆ. ಇದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: 

ವಿಜಯ್‌ ಸೇತುಪತಿ ಮತ್ತು ಮಾಧವನ್‌ ಮುಖ್ಯ ಭೂಮಿಕೆಯ ತಮಿಳಿನ ಹಿಟ್‌ ಚಿತ್ರ ವಿಕ್ರಮ್‌ ವೇದದಲ್ಲಿ ’ಹಾಫ್‌ ಬಾಯ್ಲ್‌‘ ಎಂಬ ಪಾತ್ರವನ್ನು ತಮಿಳು ನಟ ರಾಜ್‌ಕುಮಾರ್‌ ಎಂಬುವವರು ನಿಭಾಯಿಸಿದ್ದರು. ಅವರ ಜಾಗದಲ್ಲಿ ಕನ್ನಡದ ಮೇರು ನಟ ರಾಜ್‌ಕುಮಾರ್‌ ಅವರ ಚಿತ್ರವನ್ನು ಹೊಂದಿಸಲಾಗಿದೆ.

'Vikram Vedha Star Cast' ಎಂದು ಗೂಗಲ್‌ನಲ್ಲಿ ಹುಡುಕಿದರೆ ಚಿತ್ರದ ತಾರಾಗಣದ ಗೂಗಲ್‌ ಪುಟ ತೆರೆದುಕೊಳ್ಳುತ್ತದೆ. ‘ರಾಜ್‌ಕುಮಾರ್‌– ಹಾಫ್‌ ಬಾಯ್ಲ್‌ (ಪಾತ್ರದ ಹೆಸರು)‘ ಎಂಬುವವರ ಜಾಗದಲ್ಲಿ ಡಾ, ರಾಜ್‌ಕುಮಾರ್‌ ಅವರ ಚಿತ್ರ ಕಾಣಿಸುತ್ತಿದೆ. ಈ ಬೆಳವಣಿಗೆಯು ಹಲವರ ಆಕ್ರೋಶಕ್ಕೆ ಗುರಿಯಾಗಿದೆ. ಇನ್ನೊಂದೆಡೆ ಈ ವಿಚಾರವನ್ನು ಗೂಗಲ್‌ಗೆ ರಿಪೋರ್ಟ್‌ ಮಾಡುವಂತೆ ಸಾಮಾಜಿಕ ತಾಣಗಳಲ್ಲಿ ಪ್ರಚಾರ ನಡೆಯುತ್ತಿದೆ.

ಇದನ್ನೂ ಓದಿ: 

‘ರಾಜ್‌ ಅವರಿಗೆ ಅಪಮಾನ ಮಾಡಲು ಕಿಡಿಗೇಡಿಗಳು ಈ ಕೃತ್ಯ ಮಾಡಿದ್ದಾರೆ,‘ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಕನ್ನಡದ ನಟ, ನಿರ್ದೇಶಕ ರಿಷಭ್‌ ಶೆಟ್ಟಿ, ‘ಎಲ್ಲರಲ್ಲೂ ಒಂದು ಮನವಿ. ವಿಕ್ರಂ ವೇದ ತಮಿಳು ಚಿತ್ರದ ಗೂಗಲ್ ಪುಟದಲ್ಲಿ ನಮ್ಮ ಡಾ. ರಾಜಕುಮಾರ್ ಅವರ ಫೋಟೋ ಬೇರೆ ಹೆಸರಿನಲ್ಲಿ (half boil) ನಮೂದಿಸಲಾಗಿದೆ. ದಯಮಾಡಿ ಅದನ್ನು ಗೂಗಲ್ ಗೆ ರಿಪೋರ್ಟ್‌ ಮಾಡಿ, ತಪ್ಪು ಸರಿ ಹೋಗಲಿ...,‘ ಎಂದು ಮನವಿ ಮಾಡಿದ್ದಾರೆ.

2017ರಲ್ಲಿ ತಮಿಳಿನಲ್ಲಿ ವಿಕ್ರಮ್ ವೇದ ಎಂಬ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ವಿಜಯ್ ಸೇತುಪತಿ, ಆರ್. ಮಾಧವನ್ ಮತ್ತು ಕನ್ನಡಿಗರಾದ ಶ್ರದ್ಧಾ ಶ್ರೀನಾಥ್, ಅಚ್ಯುತ್‌ ನಟಿಸಿದ್ದರು.

ಇದನ್ನೂ ಓದಿ: 

ವಿಕ್ರಮ ವೇದ ಮಾತ್ರವಲ್ಲ...

ತಮಿಳಿನ ಕಲಾವಿದ ರಾಜ್‌ಕುಮಾರ್‌ ಎಂಬುವವರು ನಟಿಸಿರುವ ಸಿನಿಮಾಗಳ ತಾರಾಗಣದಲ್ಲಿ ಅವರ ಚಿತ್ರದ ಬದಲಿಗೆ ಕನ್ನಡದ ಮೇರು ನಟ ರಾಜ್‌ಕುಮಾರ್‌ ಅವರ ಚಿತ್ರವೇ ಕಾಣುತ್ತಿದೆ. ಇದು ವಿಕ್ರಮ್‌ ವೇದ ಚಿತ್ರಕ್ಕೆ ಮಾತ್ರ ಸೀಮಿತವಾದ ವಿಚಾರವಲ್ಲ. ಈ ಬಗ್ಗೆಯೂ ಈಗ ಕನ್ನಡಿಗರು ಗೂಗಲ್‌ಗೆ ರಿಪೋರ್ಟ್‌ ಮಾಡಲಾರಂಭಿಸಿದ್ದಾರೆ.

ಇದನ್ನೂ ಓದಿ: 

ಅಗ್ಲಿ ಲಾಂಗ್ವೆಜ್‌ ನೆನಪು...

ಭಾರತದ ಅತಿ ಕೆಟ್ಟ ಭಾಷೆ ಎಂದು ಗೂಗಲ್‌ನಲ್ಲಿ ಹುಡುಕಿದರೆ ‘ಕನ್ನಡ’ ಎಂದು ಉತ್ತರ ಬರುತ್ತಿತ್ತು. ಇದು ಕನ್ನಡ ಅಭಿಮಾನಿಗಳ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದ ಎಚ್ಚೆತ್ತ ಗೂಗಲ್‌, ಕನ್ನಡಿಗರ ಕ್ಷಮೆ ಯಾಚಿಸಿತ್ತು. ಇದಾದ ಬಳಿಕ ಕೆನಡಾದ ಅಮೆಜಾನ್‌ ವೆಬ್‌ಸೈಟ್‌ನಲ್ಲಿ ಕನ್ನಡದ ಭಾವುಟದಿಂದ ಮಾಡಿದ ಬಿಕಿನಿಯೊಂದನ್ನು ಮಾರಾಟಕ್ಕಿಡಲಾಗಿತ್ತು. ಕನ್ನಡಿಗರ ಎಚ್ಚರಿಕೆಗೆ ಮಣಿದ ಅಮೆಜಾನ್‌ ಸಮಸ್ಯೆಯನ್ನು ಸರಿಪಡಿಸಿತ್ತು.

ಇದನ್ನೂ ಓದಿ: ಕನ್ನಡದ ಧ್ವಜ, ಲಾಂಛನವಿರುವ ಬಿಕಿನಿ ಮಾರಾಟಕ್ಕಿಟ್ಟ ಅಮೆಜಾನ್! ತೀವ್ರ ಆಕ್ರೋಶ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು