ಬುಧವಾರ, ಡಿಸೆಂಬರ್ 1, 2021
22 °C

ಸಂದರ್ಶನ: ‘ಸಲಗ’ ದುನಿಯಾ ವಿಜಯ್‌ ಹೊಸ ವರ್ಷನ್‌!

ಅಭಿಲಾಷ್‌ ಪಿ.ಎಸ್‌. Updated:

ಅಕ್ಷರ ಗಾತ್ರ : | |

Prajavani

ನಟ ದುನಿಯಾ ವಿಜಯ್‌ ಇದೇ ಮೊದಲ ಬಾರಿಗೆ ಆ್ಯಕ್ಷನ್‌ ಕಟ್‌ ಹೇಳಿರುವ, ಶ್ರೀಕಾಂತ್‌ ಕೆ.ಪಿ ನಿರ್ಮಾಣದ ಸಿನಿಮಾ ‘ಸಲಗ’ ಅ.14ಕ್ಕೆ ತೆರೆ ಕಾಣುತ್ತಿದೆ. ಈ ಸಂದರ್ಭದಲ್ಲಿ ನಿರ್ದೇಶನದ ಜವಾಬ್ದಾರಿ ಹಾಗೂ ಚಿತ್ರದ ಬಗ್ಗೆ ವಿವರಿಸುತ್ತಾ ಪ್ರಜಾವಾಣಿ ಸಿನಿಮಾ ಪುರವಣಿ ಜೊತೆ ವಿಜಯ್‌ ಮಾತಿಗಿಳಿದರು...

ಕೋವಿಡ್‌ನಿಂದ ‘ಸಲಗ’ದ ರಿಲೀಸ್‌ ಗಜಪ್ರಸವದಂತೆ ಆಯಿತಲ್ಲವೇ?

ಹೌದು. ಇಡೀ ಜಗತ್ತಿನಲ್ಲಿ ಎಲ್ಲರೂ ಅನುಭವಿಸಿದ ಸಂಕಷ್ಟ ಇದು. ಒಂದೂವರೆ ವರ್ಷ ಮೌನವಿತ್ತು. ನಾವು ಬದುಕುತ್ತೇವೆಯೋ ಇಲ್ಲವೋ ಎನ್ನುವುದೇ ಮನಸ್ಸಿನಲ್ಲಿ ಎಲ್ಲರಿಗೂ ಕಾಡುತ್ತಿತ್ತು. ಚಿತ್ರ ಬಿಡುಗಡೆಗೆ ಕಾದು ಕಾದು ಮಂಕಾಗಿದ್ದೆವು. ಇದೀಗ ಕೋವಿಡ್‌ ಪ್ರಕರಣಗಳು ಇಳಿಕೆಯಾದ ಮೇಲೆ, ಲಸಿಕೆಯನ್ನು ಪಡೆದ ಮೇಲೆ ಹೊಸ ಆಸೆ ಚಿಗುರಿದೆ. ಎಲ್ಲರಿಗೂ ಈಗ ಹೊಸ ಜನ್ಮ ಸಿಕ್ಕಿದೆ. ಸಿದ್ಧವಾಗಿದ್ದ ‘ಸಲಗ’ದ ಮೆರವಣಿಗೆ ಈಗ ಹೊರಟಿದೆ. ದೊಡ್ಡ ಮೆರವಣಿಗೆ ಅದ್ಧೂರಿಯಾಗಿ ನಡೆಯಲಿದೆ. 

ದಸರಾಗೆ ಜನರಿಗೆ ಡಬಲ್‌ ಧಮಾಕ. ಎರಡೆರಡು ಸ್ಟಾರ್‌ ನಟರ ಚಿತ್ರ ಒಂದೇ ದಿನ ಬಿಡುಗಡೆಯ ಬಗ್ಗೆ ಏನನ್ನುತ್ತೀರಿ?

ಒಂದೂವರೆ ವರ್ಷ ಹೆಚ್ಚಿನ ಸಿನಿಮಾ ಬಿಡುಗಡೆ ಆಗಿಲ್ಲ. ದಸರಾ ಸಂದರ್ಭದಲ್ಲಿ ಕನ್ನಡದ ಒಂದೊಂದೇ ಸಿನಿಮಾ ಬಿಡುಗಡೆಯಾಗಿ ಪರಭಾಷಾ ಚಿತ್ರಗಳಿದ್ದರೂ ಜನ ಕನ್ನಡ ಸಿನಿಮಾ ನೋಡುತ್ತಿದ್ದರು. ರಜೆ ಇರುವುದರಿಂದ ಎರಡೂ ಸಿನಿಮಾಗಳನ್ನೂ ಜನ ನೋಡುತ್ತಾರೆ. ಈ ನಂಬಿಕೆ ಇದೆ. ಇದನ್ನು ಪ್ರೀತಿಯಿಂದ ಆಹ್ವಾನಿಸುತ್ತೇನೆ. ಖಂಡಿತವಾಗಿಯೂ ಆವತ್ತು ಹಬ್ಬದ ವಾತಾವರಣ ಚಿತ್ರಮಂದಿರಗಳಲ್ಲಿ ಇರಲಿದೆ. 

ನಟನೆಯ ಜೊತೆಗೆ ನಿರ್ದೇಶನಕ್ಕೆ ಇಳಿದ ಕಾರಣವೇನು?

ಕೆಲವೊಮ್ಮೆ ನಮ್ಮ ಕೆಲಸವನ್ನು ನಾವೇ ಮಾಡಬೇಕು. ಇನ್ನೊಬ್ಬರ ಮೇಲೆ ಅವಲಂಬಿತವಾಗಬಾರದು. ಹೀಗಾಗಿ ‘ಸಲಗ’ದ ನಿರ್ದೇಶನ ಕೈಗೆತ್ತಿಕೊಂಡೆ. ಕೆಲವೊಮ್ಮೆ ಮೈಮರೆಯುತ್ತೇವೆ. ನಮ್ಮ ಕೆಲಸ ನಾವೇ ಮಾಡಿದರೆ ಎಲ್ಲವೂ ಸರಿಹೋಗುತ್ತದೆ. ಒಳ್ಳೆಯ ತಂಡ ನನಗೆ ದೊರಕಿತ್ತು. ನನ್ನ ಸಹಾಯಕ ನಿರ್ದೇಶಕ ಅಭಿ ಬಹಳ ಪ್ರಾಮಾಣಿಕ. ಚಿತ್ರತಂಡದ ಬೆಂಬಲ ನನಗೆ ಸದಾ ಇತ್ತು.

ವಿಭಿನ್ನ ಪಾತ್ರಗಳ ಪ್ರಯೋಗ ಮಾಡಿದಿರಿ. ನಂತರ ಇಂತಹ ಪಾತ್ರಗಳನ್ನು ಹುಡುಕಿಕೊಂಡು ಹೋಗಿಲ್ಲವೇ?

‘ಜಾನಿ ಜಾನಿ ಯಸ್‌ ಪಾಪ...’ ಪ್ರಯತ್ನ ಮಾಡಿದೆವು. ಇದು ಅಂತಹ ಯಶಸ್ಸು ಕಾಣಲಿಲ್ಲ. ನಮ್ಮಲ್ಲಿ ಸತ್ಯವಾಗಲೂ ಬರವಣಿಗೆಗಾರರ ಕೊರತೆ ಇದೆ. ನಮ್ಮ ಕ್ಷೇತ್ರದಲ್ಲಿ ಮತ್ತಷ್ಟು ವಿದ್ಯಾವಂತರು ಬೇಕು. ಅವಿದ್ಯಾವಂತರೂ ಬಂದು ಗೆಲ್ಲಬಹುದು ಎಂದು ತುಂಬಾ ಜನ ಬಂದುಬಿಟ್ಟಿದ್ದಾರೆ. ವಿದ್ಯೆಯ ಜೊತೆಗೆ ಅನುಭವವೂ ಮಾತನಾಡಿಸುತ್ತದೆ. ವೀಣೆ ಇದ್ದರೆ ಸಾಲದು ಅದನ್ನು ನುಡಿಸಲು ವಿದ್ಯೆ ಬೇಕು. ಅಣ್ಣಾವ್ರು ಅಭಿನಯದಲ್ಲೇ ಯಾರೂ ಮಾಡಲಾಗದ ಅನುಭವ ಪ‍ಡೆದಿದ್ದರು. ಇದೂ ಒಂದು ರೀತಿಯ ಶಿಕ್ಷಣ. ಹೀಗಾಗಿ ಅವರು ಲೀಲಾಜಾಲವಾಗಿ ಪಾತ್ರ ಮಾಡುತ್ತಿದ್ದರು. ತಮಿಳು, ಮಲಯಾಳಂ ಸಿನಿಮಾ ಇಂಡಸ್ಟ್ರಿಯನ್ನು ಯಾಕೆ ಇಷ್ಟು ಹೊಗಳುತ್ತಿದ್ದೀರಾ ಎಂದರೆ ಅಲ್ಲಿ ಬರಹಗಾರರಿಗೆ ತುಂಬಾ ಬೆಲೆ ಇದೆ. ಇದು ಕನ್ನಡದಲ್ಲಿ ಇಲ್ಲ.  

ಡಾಲಿ ಧನಂಜಯ್‌ ಅವರಿಗೆ ‘ಸಾಮ್ರಾಟ್‌’ ಪಾತ್ರ ನೀಡುವ ಹಿಂದಿನ ಸ್ಫೂರ್ತಿ ಯಾರು?

ಡಾಲಿ ಧನಂಜಯ್‌ ಅವರು ಪೊಲೀಸ್‌ ಪಾತ್ರವನ್ನೂ ಮಾಡಬಹುದು. ಕೆಲವೊಮ್ಮೆ ಮುಳ್ಳನ್ನು ಮುಳ್ಳಿಂದಲೇ ತೆಗೆಯಬೇಕು. ಡಾಲಿ ಅವರ ಪಾತ್ರ ಪೊಲೀಸ್‌ ಆದರೆ ಇನ್ನೊಬ್ಬ ಎದುರಾಳಿ ರೌಡಿ ಆದರೆ ಮುಳ್ಳು ಮುಳ್ಳಲ್ಲೇ ತೆಗೆಯಲು ಸಾಧ್ಯ. ಹೀಗಾಗಿ ಧನಂಜಯ್‌ ಅವರನ್ನೇ ಆಯ್ಕೆ ಮಾಡಿದೆವು. ಕಥೆ ಬರೆಯುವಾಗಲೇ ಈ ಪಾತ್ರಕ್ಕೆ ಧನಂಜಯ್‌ ಅವರು ಸೂಕ್ತ ಎಂದು ನಾನು ನಿರ್ಧರಿಸಿದ್ದೆ. ‘ಸಾಮ್ರಾಟ್‌’ ಪಾತ್ರ ಬರೆಯುವಾಗ ನನಗೆ ಅಣ್ಣಾಮಲೈ, ರವಿ ಡಿ.ಚನ್ನಣ್ಣನವರ ಹಾಗೂ ಪ್ರಾಮಾಣಿಕವಾಗಿರುವ ಇಂತಹ ದಕ್ಷ ಅಧಿಕಾರಿಗಳೇ ಸ್ಫೂರ್ತಿ. ಇವರಿಂದ ನಾನು ಬಹಳ ಸ್ಫೂರ್ತಿ ಪಡೆದಿದ್ದೇನೆ. 

ದುನಿಯಾ ವಿಜಯ್‌ಗೂ ಸಲಗ ವಿಜಯ್‌ಗೂ ಇರುವ ವ್ಯತ್ಯಾಸ?

ದುನಿಯಾದಲ್ಲೂ ಶಿವಲಿಂಗ ಒಬ್ಬನೇ ಬರುತ್ತಾನೆ. ಇಲ್ಲೂ ಸಲಗ ಒಬ್ಬನೇ ಇರುತ್ತಾನೆ. ಶಿವಲಿಂಗ ತಾಯಿಯ ಗೋರಿ ಕಟ್ಟಿಸಲು ಬಂದ. ನಂತರದಲ್ಲಿ ಅವನೊಬ್ಬನೇ ನಿರ್ಧರಿಸಿ ನಡೆಸಿದ ಜೀವನದಲ್ಲಿ ಏನೇನೋ ನಡೆದು ಹೋಯಿತು. ‘ಸಲಗ’ನ ಕಥೆ ಚಿತ್ರಮಂದಿರದಲ್ಲೇ ಜನ ನೋಡಬೇಕು. ನನ್ನ 14 ವರ್ಷಗಳ ಸಿನಿ ಪಯಣದಲ್ಲಿ ‘ಸಲಗ’ವನ್ನು ದುನಿಯಾ ವಿಜಯ್‌ ಹೊಸ ವರ್ಷನ್‌ ಎನ್ನಬಹುದು.  

ಅಮ್ಮನಿಗೆ ಸಲಗ ಎಷ್ಟು ಹತ್ತಿರವಾಗಿತ್ತು?

ತಾಯಿ ಇದ್ದಿದ್ದರೆ ಖಂಡಿತಾ ಖುಷಿಪಡುತ್ತಿದ್ದಳು. ಪ್ರತಿಕ್ಷಣ ಮಕ್ಕಳ ಏಳಿಗೆ ಬಯಸುವುದು ತಾಯಿ. ನನ್ನ ಅಮ್ಮನೂ ಒಬ್ಬ ತಪಸ್ವಿ. ಇಲ್ಲ ಇವತ್ತು. ಅವರಿಗೆ ಸಿನಿಮಾ ನೋಡಲಾಗುವುದಿಲ್ಲ. ಈ ಬಗ್ಗೆ ನನಗೂ ಬೇಸರವಿದೆ. ಚಿತ್ರ ನೋಡುವ ಎಲ್ಲ ತಾಯಂದಿರ ಆಶೀರ್ವಾದ ನನಗೆ ಸಾಕು.

ಟಿಣಿಂಗ ಮಿಣಿಂಗ ಟಿಷ್ಯಾ... ಬಗ್ಗೆ ಹೇಳಿ?

ಪ್ರೊಮೋಷನಲ್‌ ಹಾಡಿಗೆ ಏನಾದರೂ ವಿಭಿನ್ನವಾಗಿ ಮಾಡಬೇಕು ಎನ್ನುವ ಹುಡುಕಾಟ ನನ್ನದಾಗಿತ್ತು. ಏನಾದರೂ ಹೊಸದು ಮಾಡಬೇಕು ಎನ್ನುವ ಆಸೆ. ನಾನು ನಿರ್ದೇಶನ ಮಾಡುತ್ತೇನೆ ಎನ್ನುವುದೇ ವಿಶೇಷ. ಹೀಗಿರುವಾಗ ಈ ಹಾಡೂ ಮತ್ತಷ್ಟು ವಿಶೇಷವಾಗಿರಬೇಕು ಅಲ್ಲವೇ. ಹೀಗೆ ಹುಟ್ಟಿಕೊಂಡಿದ್ದು ಟಿಣಿಂಗ ಮಿಣಿಂಗ ಟಿಷ್ಯಾ...

ಜೀವನದಲ್ಲಿ, ಸಿನಿಮಾದಲ್ಲೂ ಏರಿಳಿತ ಇದ್ದೇ ಇರುತ್ತದೆ. ವಿಜಯ್‌ ಅವರು ಇದನ್ನು ಹೇಗೆ ನಿಭಾಯಿಸುತ್ತಾರೆ?

ಒಮ್ಮೆ ನೀವು ಬೆಳೆಯುತ್ತಿದ್ದೀರಿ ಎಂದು ತಿಳಿದಕೂಡಲೇ ಹೊಟ್ಟೆಕಿಚ್ಚು ಪಡೋ ಜನ ಬಹಳಷ್ಟು ಇರುತ್ತಾರೆ. ಕಾಲೆಳೆಯುವರು ಹುಟ್ಟಿಕೊಳ್ಳುತ್ತಾರೆ. ಹೊಗಳುವವರಿಗೂ ಎರಡು ಮುಖ ಇರುತ್ತದೆ. ನಮ್ಮ ತಪ್ಪಿಲ್ಲ ಎಂದಿದ್ದರೆ ಎಂಥ ನೋವಿಂದಲೂ ಹೊರಬರಬಹುದು. ನನ್ನ ಜೀವನದ ಯಾವುದೇ ವಿವಾದಗಳಿರಲಿ, ನಾನು ತಪ್ಪು ಮಾಡಿದ್ದರೆ ಮಾತ್ರ ತಲೆಬಗ್ಗಿಸುತ್ತೇನೆ. ನಾನು ತಪ್ಪೇ ಮಾಡದಿದ್ದರೆ ದೇವರಿಗೂ ತಲೆಬಗ್ಗಿಸಲ್ಲ. ಕೋಗಿಲೆ ಕಪ್ಪಗಿದ್ದರೂ ಒಳ್ಳೆಯ ಧ್ವನಿ ಇದೆ ಅಲ್ಲವೇ. ಅದೇ ರೀತಿ ಮುಖಕ್ಕೆ ಮಸಿ ಬಳೆಯಬಹುದೇ ಹೊರತು ಕೆಲಸಕ್ಕಲ್ಲ. ಕೆಲಸ ಒಂದು ದಿನ ಮಾತನಾಡುತ್ತದೆ. ಮಾನಸಿಕವಾಗಿ ನಾನು ಅಷ್ಟು ಸದೃಢವಾಗಿರುತ್ತೇನೆ. 

ಅಪ್ಪ ಬೆಂಗಳೂರಿಗೆ ವಲಸೆ ಬಂದು ದಿನಕ್ಕೆ ನೂರಿನ್ನೂರು ರೂಪಾಯಿ ಸಂಪಾದನೆ ಮಾಡಿಕೊಂಡು, 25 ರೂಪಾಯಿ ಮನೆ ಬಾಡಿಗೆ ಕಟ್ಟಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬ ನಮ್ಮದು. ಎಲ್ಲರೂ ಬೆಂಗಳೂರಿಗೆ ವಲಸಿಗರೇ. ಜೀವನಕ್ಕೋಸ್ಕರ ಇಲ್ಲಿಗೆ ಬಂದಿದ್ದೇವೆ. ಸಿನಿಮಾ ಕ್ಷೇತ್ರಕ್ಕೆ ಇಳಿಯಲು ಇಚ್ಛಿಸುವ ಯುವಜನತೆ ಕೇವಲ ಅದೃಷ್ಟದ ಮೇಲೆ ನಂಬಿಕೆ ಇಡಬಾರದು. ಇದೊಂದು ಸುಳಿ. ಗುರಿ ತಲುಪಲು ಕಠಿಣಶ್ರಮ ಬೇಕು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು