ವಿಜಯ್‌ಗೆ ವಿಚ್ಛೇದನ ನೀಡಿಲ್ಲ: ನಾಗರತ್ನ

7

ವಿಜಯ್‌ಗೆ ವಿಚ್ಛೇದನ ನೀಡಿಲ್ಲ: ನಾಗರತ್ನ

Published:
Updated:

ಬೆಂಗಳೂರು: ‘ವಕೀಲರ ಎದುರಿಗೇ ಒಪ್ಪಂದ ಮಾಡಿಕೊಂಡು ನಾವಿಬ್ಬರೂ ಬೇರೆಯಾಗಿದ್ದೇವೆ ಎಂದು ದುನಿಯಾ ವಿಜಯ್ ಹೇಳಿದ್ದಾರೆ. ಇದು ಸುಳ್ಳು. ನಾನು ಯಾವ ಒಪ್ಪಂದಕ್ಕೂ ಹೋಗಿಲ್ಲ. ಅವರು ಇನ್ನೊಂದು ಮದುವೆ ಆಗುವುದಕ್ಕೆ ಒಪ್ಪಿಗೆಯನ್ನೂ ನೀಡಿಲ್ಲ. ಹಾಗೊಮ್ಮೆ ಒಡಂಬಡಿಕೆ ಆಗಿದೆ ಎಂದಾದರೆ ಸಂಬಂಧಿಸಿದ ದಾಖಲೆ ತೋರಿಸಲಿ’ ಎಂದು ದುನಿಯಾ ವಿಜಯ್ ಅವರ ಪತ್ನಿ ನಾಗರತ್ನಾ ಸವಾಲು ಹಾಕಿದ್ದಾರೆ. 

ಬುಧವಾರ ಸಂಜೆ ಬೆಂಗಳೂರಿನ ಕತ್ರಿಗುಪ್ಪೆಯ ‘ದುನಿಯಾ ಋಣ’  ನಿವಾಸದಲ್ಲಿ ಪತ್ರಿಕಾಗೋಷ್ಠಿ ಕರೆದ ಅವರು ಕೀರ್ತಿ ಗೌಡ ಅವರ ವಿರುದ್ಧ ಹರಿಹಾಯ್ದರು. 

‘ಕೀರ್ತಿ ಗೌಡ ಚಾರಿತ್ರ್ಯ ಎಂಥದು, ಅವಳು ಯಾವ್ಯಾವ ನಿರ್ಮಾಪಕರ ಜತೆಯಲ್ಲಿ ಇದ್ದಳು ಎಂಬ ಕುರಿತು ಆಡಿಯೊ, ಫೋಟೊಗಳ ದಾಖಲೆ ಇದೆ. ಅವಳ ಬಾಯ್‌ಫ್ರೆಂಡ್ಸ್‌ ದೂರವಾಣಿ ಸಂಖ್ಯೆಯೂ ಇದೆ. ಎರಡು ದಿನ ಸಮಯ ಕೊಡುತ್ತೇನೆ. ಅಷ್ಟರೊಳಗೆ ಕೀರ್ತಿ ಗೌಡ ಮಾಧ್ಯಮದ ಎದುರು ತಾವು ಮದುವೆ ಆಗಿರುವುದಕ್ಕೆ ದಾಖಲೆ ನೀಡಬೇಕು. ಇಲ್ಲದಿದ್ದರೆ ನನ್ನ ವಕೀಲರ ಜತೆ ಚರ್ಚಿಸಿ ನನ್ನ ಬಳಿ ಇರುವ ದಾಖಲೆ ಬಿಡುಗಡೆ ಮಾಡುತ್ತೇನೆ’  ಎಂದು ಹೇಳಿದರು.

‘ಅವಳು ನನ್ನ ಗಂಡನ ಜತೆ ಯಾಕೆ ಇದ್ದಾಳೆ ಎನ್ನುವುದು ನನಗೆ ಗೊತ್ತಿದೆ. ಅವಳು ಸ್ಲಮ್‌ನಿಂದ ಬಂದವಳು. ಸಹಾಯ ಕೇಳಿಕೊಂಡು ಬಂದಿದ್ದಳು. ಆದರೆ ಈಗ ವಿಜಯ್ ಅವರನ್ನು ಮದುವೆಯಾಗಿದ್ದೇನೆ ಎನ್ನುತ್ತಿದ್ದಾಳೆ. ಹೆಂಡತಿ ಸ್ಥಾನ ಏನು, ಇಟ್ಟುಕೊಂಡಿರುವವಳ ಸ್ಥಾನ ಏನು ಎನ್ನುವುದು ಅವಳಿಗೆ ಗೊತ್ತಿಲ್ಲ. ನಾನು ವಿಜಯ್‌ಗೆ ವಿಚ್ಛೇದನ ಕೊಟ್ಟಿರುವುದಕ್ಕೆ ಯಾವ ದಾಖಲೆ ಇದೆ? ಅವಳು ಎಲ್ಲಿ ವಿಜಯ್ ಅವರನ್ನು ಮದುವೆ ಮಾಡಿಕೊಂಡಿದ್ದಾರೆ ಎನ್ನುವುದನ್ನು ಹೇಳಲಿ. ಅವರ ಮದುವೆಗೆ ಯಾರು ಹೋಗಿದ್ದಾರೆ?’ ಎಂದು ಅವರು ಪ್ರಶ್ನಿಸಿದರು.

ನಮ್ಮ ಸಂಸಾರದಲ್ಲಿ ಹುಡುಗಿಯರ ಪ್ರವೇಶ ಆಗುವುದು ಇದೇನೂ ಹೊಸದಲ್ಲ. ವರ್ಷಕ್ಕೊಂಡು ಹುಡುಗಿಯರು ಬರುತ್ತ ಹೋಗುತ್ತ ಇರುತ್ತಾರೆ. ಆದರೆ ಇವಳು ಇಷ್ಟು ಮುಂದುವರಿಯುತ್ತಾಳೆ ಎಂದು ಗೊತ್ತಿರಲಿಲ್ಲ. ಮರ್ಯಾದೆಗೆ ಅಂಜಿ ಇಷ್ಟು ದಿನ ಸುಮ್ಮನಿದ್ದೆ. ಗಂಡನನ್ನು ಸರಿದಾರಿಗೆ ತರಲು ಮನೆಯೊಳಗೇ ಸಾಕಷ್ಟು ಪ್ರಯತ್ನಿಸಿದೆ. ಆದರೆ ಈಗ ನಾನು ಮತ್ತು ನನ್ನ ಮಕ್ಕಳು ಬೀದಿಗೆ ಬರುವ ಪರಿಸ್ಥಿತಿ ಎದುರಾಗಿದೆ. ಕೊಲೆಬೆದರಿಕೆ ಬರುವವರೆಗೂ ಪರಿಸ್ಥಿತಿ ಮುಂದುವರಿದಿದ್ದರಿಂದ ಮಾಧ್ಯಮದ ಎದುರಿಗೆ ಬರಬೇಕಾದ ಅನಿವಾರ್ಯ ಎದುರಾಗಿದೆ’ ಎಂದು ನಾಗರತ್ನಾ ಹೇಳಿದರು. 

ಮಕ್ಕಳ ಹೆಸರಲ್ಲಿ ಆಸ್ತಿ ಇಲ್ಲ: ‘ವಿಜಯ್, ಮಕ್ಕಳ ಹೆಸರಲ್ಲಿ ಆಸ್ತಿ ಬರೆದಿಟ್ಟಿದ್ದಾರೆ ಎನ್ನುವುದು ಸುಳ್ಳು. ಈಗ ನಾನು ವಾಸಿಸುತ್ತಿರುವ ಮನೆಯೊಂದು ನನ್ನ ಹೆಸರಲ್ಲಿ ಇದೆ. ಅದನ್ನು ಬಿಟ್ಟು ಎಲ್ಲ ಆಸ್ತಿಯೂ ವಿಜಯ್ ಹೆಸರಿಲ್ಲಿಯೇ ಇದೆ. ವಿಜಯ್ ನನ್ನ ಜತೆ ಇದ್ದಾಗ ಅವರಿಗೆ ಮೂರು ಬಂಗಲೆಗಳನ್ನು ತೆಗೆಸಿಕೊಟ್ಟಿದ್ದೆ. ಈಗ ಏನೂ ಇಲ್ಲದೆ ಬಾಡಿಗೆ ಮನೆಗೆ ಹೋಗುವಂತೆ ಮಾಡಿರುವವರು ಯಾರು?’ ಎಂದು ಪ್ರಶ್ನಿಸಿದ ಅವರು ‘ನಾನು ಯಾವ ಆಸ್ತಿಗೂ ಆಸೆಪಟ್ಟು ಮದುವೆ ಮಾಡಿಕೊಂಡವಳಲ್ಲ. ತಿನ್ನಲು ಊಟವೂ ಇಲ್ಲದ ಸಮಯದಲ್ಲಿ ವಿಜಯ್ ಅವರನ್ನು ಮದುವೆಯಾಗಿದ್ದೇನೆ. ನನಗೆ ಈಗಲೂ ಆಸ್ತಿ ಬೇಡ, ವಿಜಯ್ ಬೇಕು. ಅವರೊಂದಿಗೆ ಸಂಸಾರ ಮಾಡಬೇಕು’ ಎಂದು ಹೇಳಿದರು. 

ವಿಜಯ್‌ಗೆ ಕೊನೆಗೂ ನಾನೇ ಗತಿ: ‘ಕೀರ್ತಿ ಗೌಡ ಅವರ ತಂದೆ, ತಾಯಿ, ಅಕ್ಕ ತಂಗಿಯರು, ವಿಜಯ್ ಅವರ ಕೆಲವು ಸ್ನೇಹಿತರು ಸೇರಿಕೊಂಡು ಪಿತೂರಿ ನಡೆಸುತ್ತಿದ್ದಾರೆ. ಈ ಆಟಗಳೆಲ್ಲ ಬಹಳ ದಿನ ನಡೆಯುವುದಿಲ್ಲ. ನಾನು ಪೂಜೆ ಮಾಡುವ ದೇವರು ನನಗೆ ಆ ನಂಬಿಕೆ ಕೊಟ್ಟಿದ್ದಾನೆ. ಕೊನೆಗೂ ವಿಜಯ್ ಅವರಿಗೆ ನಾಗರತ್ನಳೇ ಬೇಕಾಗುತ್ತದೆ. ಇದನ್ನು ಛಾಲೆಂಜ್ ಮಾಡಿ ಹೇಳುತ್ತೇನೆ. ಈ ಹಿಂದೆಯೂ ಇಂಥ ಘಟನೆಗಳು ನಡೆದಿವೆ. ಕೊನೆಗೆ ನನ್ನ ಬಳಿಯೇ ಬಂದಿದ್ದಾರೆ. ಈಗಲೂ ಹಾಗೆಯೇ ಆಗುತ್ತಾರೆ’ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. 

‘ರಕ್ತ ಕಣ್ಣೀರು’ ಸಿನಿಮಾ ನೋಡಲಿ: ‘ವಿಜಯ್ ಈಗಲೂ ಕೀರ್ತಿ ಗೌಡ ಅವರೇ ತಮ್ಮ ಹೆಂಡತಿ, ಸಾಯುವವರೆಗೂ ಅವಳ ಜತೆಗೆ ಬದುಕುತ್ತೇನೆ ಎಂದು ಹೇಳುತ್ತಿದ್ದಾರಲ್ಲವೇ?’ ಎಂಬ ಪ್ರಶ್ನೆಗೆ ‘ನನ್ನ ಗಂಡನಿಗೆ ಕೆಲವೊಂದು ವಿಷಯ ಗೊತ್ತಿಲ್ಲ. ಅವರು ಕೆಲವು ಸಿನಿಮಾಗಳನ್ನು ನೋಡಿಲ್ಲ ಅನಿಸುತ್ತದೆ. ಅವರು ‘ರಕ್ತ ಕಣ್ಣೀರು’ ಸಿನಿಮಾ ನೋಡಬೇಕು. ನಾನೇ ಬೇಕಾದರೆ ಡಿವಿಡಿ ತರಿಸಿಕೊಡುತ್ತೇನೆ’ ಎಂದು ವ್ಯಂಗ್ಯವಾಡಿದರು. 

 

ಬರಹ ಇಷ್ಟವಾಯಿತೆ?

 • 20

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !