ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ನಟ ದ್ವಾರಕೀಶ್‌ಗೆ ಕಣ್ಣೀರ ವಿದಾಯ: ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

Published 17 ಏಪ್ರಿಲ್ 2024, 12:49 IST
Last Updated 17 ಏಪ್ರಿಲ್ 2024, 12:49 IST
ಅಕ್ಷರ ಗಾತ್ರ

ಬೆಂಗಳೂರು: ಹೃದಯಾಘಾತದಿಂದ ಮಂಗಳವಾರ (ಏ.16) ನಿಧನರಾದ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್‌ ಅವರ ಅಂತ್ಯಕ್ರಿಯೆ ಬುಧವಾರ (ಏ.17) ಮಧ್ಯಾಹ್ನ ಸಕಲ ಸರ್ಕಾರಿ ಗೌರವಗಳೊಂದಿಗೆ ಚಾಮರಾಜಪೇಟೆಯ ಚಿತಾಗಾರದಲ್ಲಿ ನಡೆಯಿತು. 

ದ್ವಾರಕೀಶ್‌ ಅವರ ಪಾರ್ಥಿವ ಶರೀರವನ್ನು ಬುಧವಾರ ಬೆಳಗ್ಗೆ ಎಲೆಕ್ಟ್ರಾನಿಕ್‌ ಸಿಟಿಯ ಗುಳಿಮಂಗಲದ ಅವರ ಮನೆಯಿಂದ ರವೀಂದ್ರ ಕಲಾಕ್ಷೇತ್ರದ ಆವರಣಕ್ಕೆ ತರಲಾಯಿತು. ಅಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕನ್ನಡಿಗರಿಗೆ ಹಾಸ್ಯದೌತಣ ಉಣಿಸಿದ್ದ ದ್ವಾರಕೀಶ್‌ ನೆರೆದಿದ್ದ ಎಲ್ಲರ ಕಣ್ಣಂಚನ್ನು ಒದ್ದೆ ಮಾಡಿದ್ದರು. ದ್ವಾರಕೀಶ್‌ ಅವರ ಪಾರ್ಥಿವ ಶರೀರದ ಮುಂದೆ ನಿಂತಾಗ ಹಲವರು ಭಾವುಕರಾದರು; ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇನ್ನೂ ಕೆಲವರು ಅವರು ನಗಿಸಿದ ಕ್ಷಣಗಳನ್ನು, ಸಿನಿಮಾಗಳ ಪಾತ್ರಗಳನ್ನು ನೆನಪಿಸಿಕೊಂಡು ಒಂದು ಕ್ಷಣ ನಕ್ಕು, ಮತ್ತೆ ಮೌನಕ್ಕೆ ಜಾರಿದರು. 

ದರ್ಶನ ಪಡೆದ ಸಾರ್ವಜನಿಕರ ಸಂಖ್ಯೆ ವಿರಳವಾಗಿತ್ತು. ಆದರೆ ಚಿತ್ರರಂಗದ ಪ್ರಮುಖರೆಲ್ಲರೂ  ಅಂತಿಮ ದರ್ಶನ ಪಡೆದರು. ತನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ವ್ಯಕ್ತಿ ಇನ್ನಿಲ್ಲ ಎನ್ನುವುದನ್ನು ಕಂಡು ನಟಿ ಶ್ರುತಿ ಕಣ್ಣೀರಾದರು. ಕ್ಷಣಕಾಲ ದ್ವಾರಕೀಶ್‌ ಅವರ ಮುಖವನ್ನು ದಿಟ್ಟಿಸಿ ನೋಡುತ್ತಾ ನಿಂತ ಶ್ರುತಿ, ದ್ವಾರಕೀಶ್‌ ಪುತ್ರ ಯೋಗೀಶ್‌ ಅವರನ್ನು ತಬ್ಬಿ ಹಿಡಿದು ಅತ್ತರು. 

ಬುಧವಾರ ಮುಂಜಾನೆ ದ್ವಾರಕೀಶ್‌ ಮನೆಗೆ ತೆರಳಿದ ಶಿವರಾಜ್‌ಕುಮಾರ್‌ ಅಂತಿಮ ದರ್ಶನ ಪಡೆದರು. ನಟರಾದ ಜಗ್ಗೇಶ್‌, ರವಿಚಂದ್ರನ್‌, ರಮೇಶ್‌ ಅರವಿಂದ್‌, ಸುಂದರ್‌ರಾಜ್‌, ಮುಖ್ಯಮಂತ್ರಿ ಚಂದ್ರು, ಕುಮಾರ್‌ ಗೋವಿಂದ್‌, ಸುದೀಪ್‌, ಅನಿರುದ್ಧ, ಯಶ್‌, ಧ್ರುವ ಸರ್ಜಾ, ಸುನಿಲ್‌ ಪುರಾಣಿಕ್‌, ಸಂಗೀತ ನಿರ್ದೇಶಕ ಹಂಸಲೇಖ, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ನಟಿಯರಾದ ಸುಮಲತಾ ಅಂಬರೀಶ್‌, ಸುಧಾರಾಣಿ ಮುಂತಾದವರು ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. 

ನೇತ್ರದಾನ: ದ್ವಾರಕೀಶ್‌ ಅವರ ಎರಡೂ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ಕುಟುಂಬಸ್ಥರು ದಾನ ಮಾಡಿದ್ದಾರೆ. 

ಬಹುಮುಖಿ ಪಾತ್ರದ ದ್ವಾರಕೀಶ್‌: ‘ಚಿತ್ರರಂಗಕ್ಕೆ ದ್ವಾರಕೀಶ್‌ ಅವರ ಕೊಡುಗೆ ಅಪಾರ. ಹಲವು ದಶಕಗಳ ಕಾಲ ನೆನಪಿನಲ್ಲಿ ಉಳಿಯುವಂತಹ ನಟನೆ, ಹಿಟ್‌ ಸಿನಿಮಾಗಳನ್ನು ನೀಡಿದವರು ಅವರು. ಯುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಾ, ಪ್ರೇಕ್ಷಕರನ್ನು ಸೆಳೆಯುವ ಅವರ ಸಾಮರ್ಥ್ಯವು ಕನ್ನಡ ಸಿನಿಮಾವನ್ನು ರೂಪುಗೊಳಿಸಿದ ಅವರ ಬಹುಮುಖಿ ಪಾತ್ರವನ್ನು ತೋರಿಸುತ್ತದೆ. ಅವರ ಅಗಲಿಕೆ ಬೇಸರ ತಂದಿದೆ. ಅವರ ಈ ಅದ್ಭುತ ಪಯಣವನ್ನು ನಾವು ಎಂದೂ ನೆನಪಿನಲ್ಲಿ ಇಟ್ಟುಕೊಳ್ಳಲಿದ್ದೇವೆ’ ಎಂದು ‘ಎಕ್ಸ್‌’ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT