ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲ ಧಗೆ, IPL, ಚುನಾವಣಾ ಕಾವು: ಕನ್ನಡ ಸಿನಿಮಾ ಬಿಡುಗಡೆಗೆ ನಿರ್ಮಾಪಕರ ಹಿಂದೇಟು

Published 26 ಏಪ್ರಿಲ್ 2024, 0:40 IST
Last Updated 26 ಏಪ್ರಿಲ್ 2024, 0:40 IST
ಅಕ್ಷರ ಗಾತ್ರ

ಈ ವರ್ಷದ ಮೊದಲ ನಾಲ್ಕು ತಿಂಗಳು ಕನ್ನಡ ಚಿತ್ರೋದ್ಯಮದ ಮಟ್ಟಿಗೆ ಅಷ್ಟೇನು ಸಿಹಿಯಾಗಿಲ್ಲ. ಜನವರಿ, ಫೆಬ್ರುವರಿಯಲ್ಲಿ ವಾರಕ್ಕೆ ಆರು–ಎಂಟು ಸಿನಿಮಾಗಳು ತೆರೆಕಂಡು, ಕೆಲ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗುವುದೇ ಕಷ್ಟ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಮಾರ್ಚ್‌ ಕೊನೆಯ ವಾರದಿಂದ ಈ ಚಿತ್ರಣ ಸಂಪೂರ್ಣ ಬದಲಾಗಿದೆ. ಚುನಾವಣೆ, ಐಪಿಎಲ್‌ ಬಿಸಿಯಿಂದಾಗಿ ಕಳೆದ ಮೂರು ವಾರಗಳಲ್ಲಿ ಸಿನಿಮಾ ಬಿಡುಗಡೆ ಸಂಖ್ಯೆ 2–3 ಸಿನಿಮಾಗಳಿಗೆ ಇಳಿದಿದೆ. ಅವುಗಳಲ್ಲಿಯೂ ದೊಡ್ಡ ಸ್ಟಾರ್‌ ನಟರ ಸಿನಿಮಾಗಳಿಲ್ಲ. ಭರವಸೆ ಮೂಡಿಸುವಂತಹ ಸಿನಿಮಾಗಳು ತೆರೆಗೆ ಬರಲಿಲ್ಲ. ಯಾವುದೇ ಪ್ರಚಾರವಿಲ್ಲದೆ, ನಿರ್ಮಾಣಗೊಂಡಿರುವುದಕ್ಕೆ ಬಿಡುಗಡೆ ಶಾಸ್ತ್ರ ಮುಗಿಸಬೇಕೆಂದು ಆರು ತಿಂಗಳುಗಳಿಂದ ಕಾಯುತ್ತಿದ್ದ ಚಿತ್ರಗಳು ತೆರೆಗೆ ಬಂದಿದ್ದೇ ಹೆಚ್ಚು.

‘ಚುನಾವಣೆ ಸಮಯದಲ್ಲಿ ಸಹಜವಾಗಿ ಕಲೆಕ್ಷನ್‌ ಆಗುವುದಿಲ್ಲ. ಹೀಗಾಗಿ ನಿರ್ಮಾಪಕರು ಚಿತ್ರ ಬಿಡುಗಡೆಗೆ ಹಿಂದೇಟು ಹಾಕುತ್ತಾರೆ. ಮೇ 10ರಿಂದ ಬಿಡುಗಡೆಗಳು ಪ್ರಾರಂಭವಾಗುತ್ತವೆ. ಬೆಂಗಳೂರಿನಲ್ಲಿ ಸದ್ಯ 8–10 ದೊಡ್ಡ ಚಿತ್ರಮಂದಿರಗಳು ಬಾಗಿಲು ಹಾಕಿವೆ. ಬೇರೆ ಭಾಷೆಯ ದೊಡ್ಡ ಸ್ಟಾರ್‌ಗಳ ಸಿನಿಮಾಗಳೂ ಬರುತ್ತಿಲ್ಲ. ಮಲಯಾಳಂ ಚಿತ್ರಗಳಿಂದ ಕೆಲವು ಚಿತ್ರಮಂದಿರಗಳು ಬದುಕಿಕೊಂಡಿವೆ. ಕಳೆದೊಂದು ತಿಂಗಳಲ್ಲಿ ‘ಮಂಜುಮಲ್‌ ಬಾಯ್ಸ್‌’ ಎಂಬ ಚಿತ್ರ ಬೆಂಗಳೂರಿನಲ್ಲಿಯೇ ₹4 ಕೋಟಿ ಗಳಿಕೆ ಕಂಡಿದೆ. ಫಹಾದ್‌ ಫಾಸಿಲ್‌ ನಟನೆಯ ‘ಆವೇಷಂ’ಗೆ ಜನರ ಪ‍್ರತಿಕ್ರಿಯೆ ಅತ್ಯುತ್ತಮವಾಗಿದೆ. ಮೋಹನ್‌ಲಾಲ್‌ ಪುತ್ರ ಪ್ರಣವ್‌ ಮೋಹನ್‌ಲಾಲ್‌ ನಟನೆಯ ‘ವರ್ಷಂಗಳ್‌ಕ್‌ ಶೇಷಂ’ ಚಿತ್ರದ ಗಳಿಕೆಯೂ ಚೆನ್ನಾಗಿದೆ. ಪೃಥ್ವಿರಾಜ್‌ ಅವರ ‘ಆಡುಜೀವಿತಂ’, ತೆಲುಗಿನ ‘ಟಿಲ್ಲು–2’ ಚಿತ್ರಗಳ ಕಲೆಕ್ಷನ್‌ ಜೋರಾಗಿತ್ತು. ಕನ್ನಡ, ಹಿಂದಿ, ತಮಿಳು ಸಿನಿಮಾಗಳು ಗಳಿಕೆ ದೃಷ್ಟಿಯಿಂದ ಮುಗ್ಗರಿಸಿವೆ. ಕೆಲವು ಇಂಗ್ಲಿಷ್‌ ಸಿನಿಮಾಗಳು ಉತ್ತಮವಾಗಿದ್ದರೂ, ಬಹಳ ದೊಡ್ಡ ಗಳಿಕೆಯಿಲ್ಲ. ಬಾಲಿವುಡ್‌ ಅಕ್ಷರಶಃ ಮಲಗಿದೆ. ದಕ್ಷಿಣ ಭಾರತದ ಚಿತ್ರಗಳ ಮೇಲೆ ದೇಶದ ಚಿತ್ರಮಂದಿರಗಳು ಅವಲಂಬಿತವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎನ್ನುತ್ತಾರೆ ವಿತರಕ ಮಾರ್ಸ್‌ ಸುರೇಶ್‌.

ಕುಸಿದ ಸಂಖ್ಯೆ: 

ಕಳೆದ ನಾಲ್ಕು ತಿಂಗಳಿನಲ್ಲಿ ಚಿತ್ರಮಂದಿರಗಳಲ್ಲಿ ಜನ ಒಪ್ಪಿಕೊಂಡ ಕನ್ನಡ ಚಿತ್ರಗಳ ಸಂಖ್ಯೆ ಬೆರಳೆಣಿಕೆಯಷ್ಟೂ ಇಲ್ಲ. ಪ್ರೇಕ್ಷಕರ ನೀರಸ ಪ್ರತಿಕ್ರಿಯೆ ಕೂಡ ನಿರ್ಮಾಪಕರನ್ನು ಕಂಗೆಡಿಸಿದೆ. ಈ ಗಾಯಕ್ಕೆ ಚುನಾವಣೆ, ಐಪಿಎಲ್‌ ಬರೆ ಬಿದ್ದಿದೆ. ಮಕ್ಕಳಿಗೆ ಪರೀಕ್ಷೆ, ಬೇಸಿಗೆಯ ಧಗೆಯೂ ಜನರನ್ನು ಚಿತ್ರಮಂದಿರದಿಂದ ದೂರ ಉಳಿಯುವಂತೆ ಮಾಡಿದೆ. 

‘ಜನವರಿಯಲ್ಲಿ 18 ಸಿನಿಮಾಗಳು ತೆರೆಕಂಡರೆ, ಫೆಬ್ರುವರಿಯಲ್ಲಿ 25 ಚಿತ್ರಗಳು ಬಿಡುಗಡೆಗೊಂಡಿದ್ದವು. ಗಣರಾಜ್ಯೋತ್ಸದ ವಾರದಲ್ಲಿ 8 ಸಿನಿಮಾಗಳು ತೆರೆಗೆ ಬಂದು ಚಿತ್ರಮಂದಿಗಳಿಗಾಗಿ ತೀವ್ರ ಪೈಪೋಟಿ ಎದುರಾಗಿತ್ತು. ಮಾರ್ಚ್‌ ಮೊದಲ ಮೂರು ವಾರಗಳಲ್ಲಿಯೂ 6ಕ್ಕಿಂತ ಹೆಚ್ಚು ಸಿನಿಮಾಗಳಿದ್ದವು. ಮಾರ್ಚ್‌ನಲ್ಲಿ ಒಟ್ಟು 25 ಸಿನಿಮಾಗಳು ತೆರೆಗೆ ಬಂದರೆ, ಏಪ್ರಿಲ್‌ನಲ್ಲಿ 17 ಕ್ಕೆ ಕುಸಿದಿದೆ. ಮೇ ಮೊದಲ ವಾರವೂ ಹೆಚ್ಚು ಚಿತ್ರಗಳಿಲ್ಲ’ ಎನ್ನುತ್ತಾರೆ ಸಿನಿಮಾ ಅಂಕಿ–ಅಂಶಗಳನ್ನು ಕಲೆಹಾಕುವ ಪಿಆರ್‌ಒ ವಿಜಯಕುಮಾರ್‌. 

‘ಕನ್ನಡ ಸಿನಿಮಾಗಳಿಗೆ ಹರಸಾಹಸ ಮಾಡಿದರೂ ಜನ ಬರುತ್ತಿಲ್ಲ. ಮಾಮೂಲಿ ಪ್ರೇಮಕಥೆ, ಇಲ್ಲವಾದರೆ ಹೊಡಿಬಡಿ ಕಥೆಗಳ ಸಿನಿಮಾಗಳಿಂದ ಜನ ಬೇಸತ್ತಿದ್ದಾರೆ. ಬೇರೆ ರೀತಿಯ ಕಂಟೆಂಟ್‌ ಬೇಕಿದೆ. ಇತ್ತೀಚೆಗೆ ತೆರೆಕಂಡ ‘ಬ್ಲಿಂಕ್‌’ ಮತ್ತು ‘ಶಾಖಾಹಾರಿ’ ಸಿನಿಮಾಗಳು ಭಿನ್ನ ಕಂಟೆಂಟ್‌ನಿಂದಲೇ ತಕ್ಕಮಟ್ಟಿನ ಗಳಿಕೆಯೊಂದಿಗೆ ಜನಮನ್ನಣೆ ಪಡೆದವು. ಬಿಡುಗಡೆಗೆ ಸಿದ್ಧವಿರುವ ಸಿನಿಮಾಗಳು ಸಾಕಷ್ಟಿವೆ. ಆದರೆ ಬಿಡುಗಡೆ ಮಾಡಲು ನಿರ್ಮಾಪಕರಿಗೆ ಧೈರ್ಯ ಬರುತ್ತಿಲ್ಲ. ಇವತ್ತು ಎಲ್ಲರೂ ಕಂಟೆಂಟ್‌ ಕ್ರಿಯೇಟರ್‌ಗಳು. ಸಾಮಾಜಿಕ ಜಾಲತಾಣ, ಯೂಟ್ಯೂಬ್‌ ಸ್ಟಾರ್‌ಗಳು. ಪ್ರಚಾರಕ್ಕೆ ಕನಿಷ್ಠ ₹30–40 ಲಕ್ಷ ಬೇಕಿದೆ. ರಿಲೀಸ್‌ಗೆ ಹಾಕಿದ ಹಣ ವಾಪಾಸ್‌ ಬರುವ ಭರವಸೆಯಿಲ್ಲ. ಬಹುತೇಕ ಚಿತ್ರಗಳದ್ದು ಫೇಕ್‌ ಪ್ರಚಾರ ಎಂಬುದು ಜನಕ್ಕೆ ಮನದಟ್ಟಾಗಿದೆ. ಹೀಗಾಗಿ ಜನ ನಮ್ಮ ಚಿತ್ರಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಜನರ ನಂಬಿಕೆ ಮರುಗಳಿಸುವಂಥ ಚಿತ್ರಗಳನ್ನು ಮಾಡುವುದೊಂದೇ ಪರಿಹಾರ’ ಎಂದು ಅಭಿಪ್ರಾಯಪಡುತ್ತಾರೆ ನಿರ್ಮಾಪಕ ನಾಗೇಶ್‌ ಕುಮಾರ್‌ ಯು.ಎಸ್.

ಗಮನ ಸೆಳೆದ ಚಿತ್ರಗಳು:

ಈ ವರ್ಷ ಇಲ್ಲಿತನಕ ಬಿಡುಗಡೆಗೊಂಡ ಸುಮಾರು 85 ಚಿತ್ರಗಳಲ್ಲಿ ಜನ ಮಾತಾಡಿದ ಚಿತ್ರಗಳ ಸಂಖ್ಯೆ ಕೂಡ ಹತ್ತು ದಾಟುವುದಿಲ್ಲ. ಯುವ, ಉಪಾಧ್ಯಕ್ಷ ಹೊರತುಪಡಿಸಿ ‘ಒಂದು ಸರಳ ಪ್ರೇಮಕಥೆ’, ‘ಬ್ಲಿಂಕ್‌’, ‘ಶಾಖಾಹಾರಿ’, ‘ಕೆರೆಬೇಟೆ’, ‘ಕೆಟಿಎಂ’, ‘ಫೋಟೊ’, ‘O2’ ಸಿನಿಮಾಗಳ ಕುರಿತು ಪ್ರೇಕ್ಷಕರಿಂದ ಮೆಚ್ಚುಗೆ ಮಾತು ಕೇಳಿಬಂದವು. ‘ಒಂದು ಸರಳ ಪ್ರೇಮಕಥೆ’ ಟಿವಿ ಮತ್ತು ಒಟಿಟಿ ಎರಡರಲ್ಲಿಯೂ ಪ್ರಸಾರಗೊಂಡಿದೆ. 

‘ಉಪೇಂದ್ರ ನಿರ್ದೇಶಿಸಿ ಅಭಿನಯಿಸಿರುವ ‘ಯುಐ’ ಚಿತ್ರವು ಗ್ರಾಫಿಕ್ಸ್‌ ಕೆಲಸದಿಂದ ಬಿಡುಗಡೆ ವಿಳಂಬವಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್‌ನಲ್ಲಿಯೇ ಬರಬೇಕಿತ್ತು. ಚುನಾವಣೆ ಬಿಸಿಯೂ ಹೌದು. ಜೂನ್‌ನಲ್ಲಿ ಚಿತ್ರ ತೆರೆಗೆ ಬರುತ್ತದೆ’
ಕೆ.ಪಿ.ಶ್ರೀಕಾಂತ್ ಚಿತ್ರದ ನಿರ್ಮಾಪಕರಲ್ಲೊಬ್ಬರು.

ಹಕ್ಕುಗಳು ಮಾರಾಟವಾಗುತ್ತಿಲ್ಲ

‘ಎಲೆಕ್ಷನ್‌ ಐಪಿಎಲ್‌ನಿಂದಾಗಿ ಚಿತ್ರ ಬಿಡುಗಡೆ ಕಡಿಮೆಯಾಗಿರುವುದು ನಿಜ. ಆದರೆ ಸ್ಟಾರ್‌ ನಟರ ಸಿನಿಮಾಗಳ ಟಿವಿ ಡಿಜಿಟಲ್‌ ಹಕ್ಕುಗಳು ಮಾರಾಟವಾಗದೇ ಇರುವುದು ದೊಡ್ಡ ನಾಯಕರ ಸಿನಿಮಾಗಳು ತೆರೆ ಕಾಣದಿರಲು ಮುಖ್ಯ ಕಾರಣ. ಚಿತ್ರಮಂದಿರಕ್ಕೆ ಬಂದ ನಂತರ ಮಾಮೂಲಿ ಎನ್ನಿಸಿಕೊಂಡರೆ ಹಕ್ಕುಗಳು ಉತ್ತಮ ಮೊತ್ತಕ್ಕೆ ಹೋಗುವುದಿಲ್ಲ. ಹಾಕಿದ ಬಂಡವಾಳ ಮರುಗಳಿಕೆ ಕಷ್ಟ. ಸೂಪರ್‌ ಹಿಟ್‌ ಆದರೆ ಮಾತ್ರ ಲಾಭ ನೋಡಬಹುದು. ಹೀಗಾಗಿ ಬಿಡುಗಡೆಗೆ ಮೊದಲೇ ಹಕ್ಕುಗಳನ್ನು ಮಾರಿಕೊಳ್ಳುವುದು ಅನಿವಾರ್ಯವಾಗಿದೆ. ನಮ್ಮದೇ ನಿರ್ಮಾಣ ಸಂಸ್ಥೆಯ ಎರಡು ಸಿನಿಮಾಗಳು ಬಿಡುಗಡೆಗಾಗಿ ಕಾಯುತ್ತಿವೆ’ ಎನ್ನುತ್ತಾರೆ ನಿರ್ಮಾಪಕ ವಿತರಕ ಜಯಣ್ಣ.

ಮಲಯಾಳಂಗೆ ಅಗ್ರಸ್ಥಾನ

‘ಸ್ವಂತದ್ದು ಭೋಗ್ಯದ್ದು ಸೇರಿ 25ಕ್ಕೂ ಹೆಚ್ಚು ಚಿತ್ರಮಂದಿರಗಳಿವೆ. ಈ ವಾರ ಕೆ.ಜಿ ರಸ್ತೆಯ ಪ್ರಮುಖ ಚಿತ್ರಮಂದಿರದಲ್ಲಿಯೇ ಚಿತ್ರ ಇಲ್ಲದಂತಾಗಿದೆ. ಬೆಳಿಗ್ಗೆ ಬಿಡುಗಡೆಯಾದ ಚಿತ್ರ ಸಂಜೆ ವೇಳೆಗೆ ಆಟ ಮುಗಿಸಿರುತ್ತದೆ. ಕನ್ನಡದಲ್ಲಿ ‘ಉಪಾಧ್ಯಕ್ಷ’ ‘ಯುವ’ ಸಿನಿಮಾಗಳು ತಕ್ಕಮಟ್ಟಿಗೆ ಗಳಿಕೆ ಕಂಡವು. ಉಳಿದಂತೆ ಕಳೆದ 4 ತಿಂಗಳಲ್ಲಿ ಯಾವ ಚಿತ್ರಗಳಿಂದಲೂ ಆದಾಯ ಬಂದಿಲ್ಲ. ವಾರಕ್ಕೆ ₹2 ಲಕ್ಷ ಖರ್ಚಿದೆ. ಆದರೆ ಗಳಿಕೆ ಮಾತ್ರ ಶೂನ್ಯ. ಈ ಅವಧಿಯಲ್ಲಿ 12 ಮಲಯಾಳಂ ಸಿನಿಮಾಗಳು ಹಿಟ್‌ ಆಗಿವೆ. ಅದರಲ್ಲಿ 6 ಸೂಪರ್‌ ಹಿಟ್‌. ಅವರದ್ದು ವಾರಕ್ಕೆ 2 ಸಿನಿಮಾ ಹಿಟ್‌ ಆಗುತ್ತಿದೆ. ಬೆಂಗಳೂರಿನಲ್ಲಿ ಮಲಯಾಳಂಗೆ ಅಗ್ರಸ್ಥಾನ’ ಎಂದರು ವಿತರಕ ಚಿತ್ರಮಂದಿರ ಮಾಲೀಕ ಜಯಣ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT