ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜುನ್‌ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಶ್ರುತಿಗೆ ಚೇಂಬರ್‌ ಬುಲಾವ್

Last Updated 22 ಅಕ್ಟೋಬರ್ 2018, 17:38 IST
ಅಕ್ಷರ ಗಾತ್ರ

ಬೆಂಗಳೂರು: ನಟ ಅ‌ರ್ಜುನ್‌ ಸರ್ಜಾ ಅವರ ಮಾವ ರಾಜೇಶ್‌ ಅವರು ಸೋಮವಾರ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಸಂಧಾನ ಸಮಿತಿ ಮುಂದೆ ಹಾಜರಾಗುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ನಟಿ ಶ್ರುತಿ ಹರಿಹರನ್‌ಗೆ ಸೂಚಿಸಲಿದೆ.

ಮಂಡಳಿ ಅಧ್ಯಕ್ಷ ಎಸ್‌.ಎ. ಚಿನ್ನೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

‘ಮಂಡಳಿ ವ್ಯಾಪ್ತಿಯಲ್ಲಿಯೇ ಹಲವು ಪ್ರಕರಣಗಳು ಬಗೆಹರಿದಿವೆ. ಶ್ರುತಿ ಹರಿಹರನ್‌ ಮತ್ತು ಅರ್ಜುನ್‌ ಸರ್ಜಾ ಅವರು ಪ್ರಕರಣವನ್ನು ಇಲ್ಲಿಯೇ ಬಗೆಹರಿಸಿಕೊಂಡರೆ ಯಾವುದೇ ಅಭ್ಯಂತರವಿಲ್ಲ. ಅವರಿಬ್ಬರು ನ್ಯಾಯಾಲಯದ ಮೆಟ್ಟಿಲು ಹತ್ತಿದರೆ ನಾವು ಏನು ಮಾಡಲು ಸಾಧ್ಯವಿಲ್ಲ’ ಎಂದು ಸಭೆಯ ಬಳಿಕ ಚಿನ್ನೇಗೌಡ ಸುದ್ದಿಗಾರರಿಗೆ ತಿಳಿಸಿದರು.

ಸಂಧಾನ ಸಮಿತಿಯಲ್ಲಿ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ, ನಿರ್ಮಾಪಕರ ಸಂಘ ಮತ್ತು ನಿರ್ದೇಶಕರ ಸಂಘದ ಸದಸ್ಯರು ಇರುತ್ತಾರೆ. ಇನ್ನೆರಡು ದಿನದಲ್ಲಿ ಸಮಿತಿ ರಚಿಸಲಾಗುವುದು.ಸದ್ಯಕ್ಕೆ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್‌ ಅವರು ಬೆಂಗಳೂರಿನಲ್ಲಿ ಇಲ್ಲ. ಅವರು ಬಂದ ಬಳಿಕ ಚರ್ಚಿಸಿ ಅಂತಿಮ ತೀರ್ಮಾನಕೈಗೊಳ್ಳುತ್ತೇವೆ ಎಂದರು.

ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಮಾತನಾಡಿ, ‘ಹೆಣ್ಣುಮಕ್ಕಳ ಮೇಲೆ ನಮಗೂ ಗೌರವವಿದೆ. ಮಾಧ್ಯಮಗಳ ಮುಂದೆ ಹೋಗಿ ವಿಷಯವನ್ನು ದೊಡ್ಡದು ಮಾಡುವುದು ಸರಿಯಲ್ಲ. ತನ್ನ ಮೇಲೆ ದೌರ್ಜನ್ಯ ನಡೆದ ದಿನದಂದೇ ಶ್ರುತಿ ಹರಿಹರನ್‌ ಅವರು ಪ್ರತಿಭಟನೆ ನಡೆಸಿದ್ದರೆ ಚಿತ್ರರಂಗಕ್ಕೆ ಮಾದರಿ ನಾಯಕಿಯಾಗುತ್ತಿದ್ದರು’ ಎಂದರು.

ನಟ ಚೇತನ್‌ ಅವರು ಮಧ್ಯರಾತ್ರಿ ಕುಡಿದು ಕಬ್ಬನ್‌‍ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ದಾಂದಲೆ ನಡೆಸಿದ್ದನ್ನು ಯಾರೊಬ್ಬರು ಮರೆತಿಲ್ಲ. ಅಂತಹ ವ್ಯಕ್ತಿಗೆ ನನ್ನ ವಿರುದ್ಧ ಟೀಕೆ ಮಾಡುವ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಡಾ.ವಿ. ನಾಗೇಂದ್ರಪ್ರಸಾದ್‌ ಮಾತನಾಡಿ, ‘ಗಂಡಹೆಂಡತಿ ಚಿತ್ರದ ಶೂಟಿಂಗ್‌ ವೇಳೆ ನನ್ನೊಂದಿಗೆ ನಿರ್ದೇಶಕರು ಅಸಭ್ಯವಾಗಿ ವರ್ತಿಸಿದ್ದಾರೆಂದು ನಟಿ ಸಂಜನಾ ಗರ್ಲಾನಿ ಮಾಡಿರುವ ಆರೋಪದಲ್ಲಿ ಸತ್ಯವಿಲ್ಲ. ನಮ್ಮ ಬಳಿಯೂ ದಾಖಲೆಗಳಿವೆ. ಸಂಧಾನ ಸಮಿತಿ ಮುಂದೆ ಅವುಗಳನ್ನು ಹಾಜರುಪಡಿಸುತ್ತೇವೆ. ಅವರು ಬಹಿರಂಗ ಕ್ಷಮೆ ಕೋರಬೇಕು’ ಎಂದು ಆಗ್ರಹಿಸಿದರು.

ಚೇತನ್ ವಿರುದ್ಧ ಹಣ ವಂಚನೆ ಆರೋಪ

ಬೆಂಗಳೂರು: ‘ನಟ ಚೇತನ್‌ ಅವರನ್ನು ‘ಪ್ರೇಮಬರಹ’ ಚಿತ್ರಕ್ಕೆ ನಾಯಕನನ್ನಾಗಿ ಆಯ್ಕೆ ಮಾಡುವ ಸಂಬಂಧ ಫೋಟೊಶೂಟ್‌ ನಡೆಸಲಾಗಿತ್ತು. ಆಗ ಅರ್ಜುನ್‌ ಸರ್ಜಾ ಅವರು ಚೇತನ್‌ಗೆ ₹ 10 ಲಕ್ಷ ನೀಡಿದ್ದರು. ಈ ಹಣ ವಾಪಸ್‌ ನೀಡುವಂತೆ ಕೇಳಿದ ಹಿನ್ನೆಲೆಯಲ್ಲಿ ಶ್ರುತಿ ಹರಿಹರನ್‌ ಮೂಲಕ ಸರ್ಜಾ ಕುಟುಂಬದ ವಿರುದ್ಧ ಅವರು ಷಡ್ಯಂತ್ರ ರೂಪಿಸಿದ್ದಾರೆ’ ಎಂದು ಅರ್ಜುನ್‌ ಸರ್ಜಾ ಅವರ ಸ್ನೇಹಿತ ಪ್ರಶಾಂತ್‌ ಸಂಬರಗಿ ಆರೋಪಿಸಿದರು.

ಆಂತರಿಕ ಸಮಿತಿಯೇ ಇಲ್ಲ!

ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಆಂತರಿಕ ಸಮಿತಿಯನ್ನೇ ರಚಿಸಿಲ್ಲ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಮಂಡಳಿ ಅಧ್ಯಕ್ಷ ಚಿನ್ನೇಗೌಡ, ‘ಮಂಡಳಿಯ ವ್ಯಾಪ್ತಿಯಲ್ಲಿ ಸದ್ಯಕ್ಕೆ ಆಂತರಿಕ ಸಮಿತಿ ಕಾರ್ಯನಿರ್ವಹಿಸುತ್ತಿಲ್ಲ. ಈ ಹಿಂದೆ ಸಮಿತಿಯು ಕಾರ್ಯ ನಿರ್ವಹಿಸುತ್ತಿತ್ತು. ಸಂಘದ ಪದಾಧಿಕಾರಿಗಳ ಸಭೆ ಕರೆದು ಚರ್ಚಿಸಿ ಸಮಿತಿ ರಚಿಸಲಾಗುವುದು’ ಎಂದು ತಿಳಿಸಿದರು.

ರಾಜೇಶ್‌ ಆರೋಪ: ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಶ್, ‘ಅರ್ಜುನ್‌ ಸರ್ಜಾ ‘ಪ್ರೇಮ ಬರಹ’ ಚಿತ್ರ ನಿರ್ದೇಶಿಸಿದ್ದರು. ಈ ಚಿತ್ರದ ನಾಯಕನಾಗಿ ಮೊದಲಿಗೆ ನಟ ಚೇತನ್ಅವರನ್ನು ಆಯ್ಕೆ ಮಾಡಲಾಗಿತ್ತು. ಅವರ ಬದಲಿಗೆ ಮತ್ತೊಬ್ಬರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಲಾಯಿತು. ಈ ಸೇಡು ತೀರಿಸಿಕೊಳ್ಳಲು ಚೇತನ್ ಅವರು ಶ್ರುತಿ ಹರಿಹರನ್ ಪರವಾಗಿ ನಿಂತಿದ್ದಾರೆ’ ಎಂದು ಆರೋಪಿಸಿದರು.

ತುರ್ತು ವಿಚಾರಣೆಗೆ ‘ಸುಪ್ರೀಂ’ ನಕಾರ

ನವದೆಹಲಿ: ‘ಮೀ ಟೂ’ ಅಭಿಯಾನಕ್ಕೆ ಸಂಬಂಧಿಸಿದ ಪ್ರಕರಣಗಳ ತುರ್ತು ವಿಚಾರಣೆ ಕೈಗೊಳ್ಳಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ. ಈ ಕುರಿತು ಎಂ.ಎಲ್. ಶರ್ಮಾ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

‘ಕಾಲಮಿತಿಯೊಳಗೆ ವಿಚಾರಣೆ ನಡೆಸಿ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸಬೇಕು’ ಎಂದು ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಮತ್ತು ನ್ಯಾಯಮೂರ್ತಿ ಸಂಜಯ್‌ ಕಿಶನ್‌ ಕೌಲ್‌, ಎಲ್ಲ ಅರ್ಜಿಗಳಂತೆ ಇದನ್ನೂ ಪರಿಗಣಿಸಲಾಗುವುದು. ಸಮಯ ಬಂದಾಗ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT