ಶನಿವಾರ, ಜುಲೈ 31, 2021
28 °C
11ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ

ಚಿತ್ರರಂಗದಲ್ಲಿ ಒಗ್ಗಟ್ಟಿಲ್ಲ: ಸಿ.ಎಂ. ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಚಿತ್ರರಂಗದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಬದ್ಧ. ಆದರೆ, ಅದ್ದೂರಿ ಬಜೆಟ್‌ನ ಸಿನಿಮಾ ಮಾಡಿ ಟಿಕೆಟ್‌ ದರ ಹೆಚ್ಚಿಸುವ ನಿರ್ಮಾಪಕರು ಇದ್ದಾರೆ. ಮತ್ತೊಂದೆಡೆ ಮಲ್ಟಿಫ್ಲೆಕ್ಸ್‌ಗಳಲ್ಲಿ ಟಿಕೆಟ್‌ ದರ ಕಡಿಮೆಗೊಳಿಸುವಂತೆ ಕೋರುತ್ತಾರೆ. ಚಿತ್ರರಂಗದಲ್ಲಿಯೇ ಒಗ್ಗಟ್ಟಿಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು. 

ವಿಧಾನಸೌಧದ ಬ್ಯಾಕ್ವೆಂಟ್‌ ಹಾಲ್‌ನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ, ವಾರ್ತಾ‌ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹಮ್ಮಿಕೊಂಡಿರುವ 11ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಗುರುವಾರ ವಿಧ್ಯುಕ್ತವಾಗಿ ಚಾಲನೆ‌ ನೀಡಿ ಅವರು ಮಾತನಾಡಿದರು. 

ಗುಣಮಟ್ಟದ ಸಿನಿಮಾಗಳಿಂದ ಮಾತ್ರವೇ ಚಿತ್ರರಂಗದ ಉಳಿವು ಸಾಧ್ಯ. ಈ ನಿಟ್ಟಿನಲ್ಲಿ ನಿರ್ದೇಶಕರು ಕಾರ್ಯತತ್ಪರರಾಗಬೇಕು ಎಂದು ಸಲಹೆ ನೀಡಿದರು.

ಸಿನಿಮಾದ ಕಥೆ, ಮೇಕಿಂಗ್‌ ಬಗ್ಗೆ ಶ್ರದ್ಧೆವಹಿಸಬೇಕು. ದೊಡ್ಡ ಬಜೆಟ್‌ನ ಸಿನಿಮಾ ಮಾಡಿದರೆ ಮಾತ್ರ ಚಿತ್ರರಂಗದಲ್ಲಿ ಉಳಿಯಬಹುದು ಎನ್ನುವುದು ತಪ್ಪುಕಲ್ಪನೆ. ಗುಣಮಟ್ಟದ ಸಣ್ಣ ಸಿನಿಮಾಗಳನ್ನು ಮಾಡಿದರೂ ಜನರು ಚಿತ್ರಮಂದಿರಕ್ಕೆ ಬರುತ್ತಾರೆ ಎಂದರು.

ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ ಮಾತನಾಡಿ, ಪ್ರಸ್ತುತ ರಾಜ್ಯದಲ್ಲಿ ಚಿತ್ರಮಂದರಿಗಳ ಸಂಖ್ಯೆ ಕಡಿಮೆಯಿದೆ. ಇನ್ನೊಂಡೆದೆ ಏಕಸ್ವಾಮ್ಯವೂ ತಲೆದೋರಿದೆ.  ಇದಕ್ಕೆ ಕಡಿವಾಣ ಹಾಕಬೇಕು ಎಂದು ಕೋರಿದರು. 

ಈ ಹಿಂದೆ ಚಿತ್ರಮಂದಿರಗಳ ಬಾಡಿಗೆ ದರ ತಿಂಗಳಿಗೊಮ್ಮೆ ಏರಿಕೆಯಾಗುತ್ತಿತ್ತು. ಈಗ ವಾರಕ್ಕೊಮ್ಮೆ ಹೆಚ್ಚಳವಾಗುತ್ತಿದೆ. ದುಬಾರಿ ಬಾಡಿಗೆ ಭರಿಸಲಾರದೆ ನಿರ್ಮಾಪಕರು ತೊಂದರೆಗೆ ಸಿಲುಕಿದ್ದಾರೆ. ಹಾಗಾಗಿ, ರಾಜ್ಯದ ವಿವಿಧೆಡೆ ಮಿನಿ ಚಿತ್ರಮಂದಿರಗಳ‌ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.

ಹಿರಿಯ ನಟ ಅನಂತನಾಗ್ ಮಾತನಾಡಿ, ಯುವಜನರು ದೇಶ, ವಿದೇಶಗಳ ಅತ್ಯುತ್ತಮ ಸಿನಿಮಾಗಳನ್ನು ವೀಕ್ಷಿಸಿ ಅವುಗಳಿಂದ ಸ್ಫೂರ್ತಿ ಪಡೆಯಬೇಕು ಎಂದು ಆಶಿಸಿದರು.

ಬಾಲಿವುಡ್‌ನ ನಿರ್ದೇಶಕ ರಾಹುಲ್‌ ರವೈಲ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ. ಚಿನ್ನೇಗೌಡ, ಚಲನಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್. ವಿದ್ಯಾಶಂಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಪಂಕಜ್‌ಕುಮಾರ್ ಪಾಂಡೆ, ನಿರ್ದೇಶಕ ರವಿಕುಮಾರ್, ಅಕಾಡೆಮಿಯ ರಿಜಿಸ್ಟ್ರಾರ್ ಎಚ್.ಬಿ. ದಿನೇಶ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು