ಶನಿವಾರ, ಮಾರ್ಚ್ 6, 2021
31 °C

ಸಿನಿಮೋತ್ಸವ: ಭಿನ್ನ ನೋಟ, ಭಿನ್ನ ದನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಈ ವರ್ಷದ ಸಿನಿಮೋತ್ಸವದಲ್ಲಿ ಐದು ಸಿನಿಮಾಗಳನ್ನು ನೋಡಿದ್ದೇನೆ. ಸ್ಪಾನಿಷ್‌ ಭಾಷೆಯ ‘ಪೇಯ್ನ್ ಅಂಡ್‌ ಗ್ಲೋರಿ’ ತುಂಬಾ ಹಿಡಿಸಿದ ಸಿನಿಮಾ. ಇದು ಬಿಟ್ಟರೆ ಕಾಸ್ಟಾ ಗವರ್ಸ್‌ನ ‘ಅಡಲ್ಟ್‌ ಇನ್‌ ದಿ ರೂಮ್‌’  ಇಷ್ಟವಾಯಿತು. ಕಳೆದ ವರ್ಷ ಹಿರಿಯ ನಾಗರಿಕರಿಗೆ ಪ್ರತ್ಯೇಕ ಸರತಿ ಇತ್ತು. ಈ ವರ್ಷವೂ ಅದು ಇರಬೇಕಿತ್ತು. 70 ಮತ್ತು 80 ವರ್ಷದ ವೃದ್ಧರು ಕಾಯುವುದನ್ನು ತಪ್ಪಿಸಬಹುದಿತ್ತು. 

- ಟಿ.ಎನ್‌.ಸೀತಾರಾಂ, ಕಿರುತರೆ ನಿರ್ದೇಶಕ

***

ಮೂರು ದಿನಾನೂ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದೇನೆ. ಗಿರೀಶ್‌ ಕಾಸವರಳ್ಳಿ ಅವರ ‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ ಸಿನಿಮಾ ಇಷ್ಟ ಆಯಿತು.  ‘ಮೈ ಥಾಟ್ಸ್‌ ಆರ್‌ ಸೈಲೆಂಟ್‌’, ‘ಲೂನಾನ್’ ಸಿನಿಮಾಗಳು ಕಾಡಿದವು. ಕಳೆದ ಬಾರಿಗೆ ಹೋಲಿಸಿದರೆ ಈ ವರ್ಷ ಕೆಲವು ಒಳ್ಳೆಯ ಚಿತ್ರಗಳು ಪ್ರದರ್ಶನಗೊಂಡಿವೆ. ಆದರೆ ಆಯೋಜನೆ ಅಷ್ಟಕಷ್ಟೆ. ಸಿನಿಮಾಗಳ ಪಟ್ಟಿ ಪ್ರದರ್ಶನ ಗೊಂದಲ ಹುಟ್ಟಿಸುವಂತಿತ್ತು. ಸ್ವಯಂಸೇವಕರ ಪ್ರತಿಕ್ರಿಯೆಯೂ ಅಷ್ಟಕಷ್ಟೆ. 

- ಶರತ್‌ ಬಿ.ಸಿ. ಕಿರುಚಿತ್ರಗಳ ನಿರ್ದೇಶಕ

***

ನನ್ನ ಮಟ್ಟಿಗೆ ಈ ಚಿತ್ರೋತ್ಸವದ ಬೆಸ್ಟ್ ಚಿತ್ರ, ಸ್ಪ್ಯಾನಿಶ್ ಭಾಷೆಯ ’ಪೇಯ್ನ್ ಅಂಡ್ ಗ್ಲೋರಿ’. ಕಲಾವಿದನೊಬ್ಬನ ನೆನಪಿನ ಯಾನವನ್ನು ಅಷ್ಟು ಆರ್ದ್ರವಾಗಿ, ಸೂಕ್ಷ್ಮತೆಯಲ್ಲಿ ಕಟ್ಟಿಕೊಡಬಹುದೆ?  ಎಂದು ಯೋಚಿಸುವಂತೆ ಮಾಡಿತು.  ಈಗಲೂ ಕಾಡುವ ಚಿತ್ರಗಳೆಂದರೆ ‘ಪೋರ್ಟ್ರೇಟ್ ಆಫ್ ಎ ಲೇಡಿ’ ‘ಆನ್ ಫೈರ್, ಸೇಂಟ್ ಫ್ರ್ಯಾನ್ಸೆಸ್’, ‘ಪಾಸ್ಡ್ ಬೈ ಸೆನ್ಸಾರ್’, ‘ಅನ್ ಆಫಿಸರ್ ಅಂಡ್ ಎ ಸ್ಪೈ’  ಹೀಗೆ ದಿನಕ್ಕ್ಕೆಕೆ 4 ರಿಂದ 5 ಚಿತ್ರಗಳನ್ನು ನೋಡಿಯೂ, ಇಷ್ಟೇ ಸಂಖ್ಯೆಯ ಒಳ್ಳೆಯ ಚಿತ್ರಗಳು ಮಿಸ್ ಆಗಿಹೋಗಿವೆ ಎನ್ನುವ ಹಳಹಳಿಕೆ ಉಳಿದಿದೆ. 

- ಸಂಧ್ಯಾರಾಣಿ, ಲೇಖಕಿ

***

ಜಾಸ್ತಿ ನಿರೀಕ್ಷೆ ಇಟ್ಟುಕೊಂಡು ಸಿನಿಮೋತ್ಸವದಲ್ಲಿ ಭಾಗಿಯಾಗುವುದಿಲ್ಲ. ಈ ಬಾರಿ ‘ಪೇಂಟೆಡ್‌ ಬರ್ಡ್’ , ‘ಬಿರಿಯಾನಿ’, ‘ಮಸ್ಕಿಟೊ’ ಸಿನಿಮಾಗಳು ಮತ್ತೆ ಮತ್ತೆ ಯೋಚನೆಗೆ ಹಚ್ಚುವಂತೆ ಮಾಡಿದ ಸಿನಿಮಾಗಳು. ಕಾಸರವಳ್ಳಿ ನಿರ್ದೇಶನದ ‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ ಒಳ್ಳೆಯ ಪ್ರತ್ರಿಕ್ರಿಯೆ  ಇತ್ತು. ‘ಕೂರ್ಮಾವತಾರ’ ನಂತರ ಒಂಬತ್ತು ವರ್ಷವಾದ ಮೇಲೆ ಈ ಸಿನಿಮಾ ಬಂದಿದ್ದರಿಂದ ಜನರ ನಿರೀಕ್ಷೆ ಹೆಚ್ಚಿತ್ತು. ಆ ನಿರೀಕ್ಷೆಗೆ ತಕ್ಕಂತೆ ಸಿನಿಮಾವಿದೆ. 

ಎಂದಿನಂತೆ ವಾರಾಂತ್ಯದಲ್ಲಿ ಹೆಚ್ಚಿನ ಜನ ಜಮಾಯಿಸಿದ್ದರು. ಎರಡು ಸಿನಿಮಾ ಪ್ರದರ್ಶನಗಳ ನಡುವಿನ ಅವಧಿ ಕಡಿಮೆ ಇತ್ತು. ಈ ಅಂತರ ಜಾಸ್ತಿ ಇದ್ದರೆ, ನೋಡುಗನಿಗೆ ಸಿನಿಮಾ ಆಯ್ಕೆ ಸುಲಭವಾಗುತ್ತಿತ್ತು. 

- ಮಂಸೋರೆ, ಸಿನಿಮಾ ನಿರ್ದೇಶಕ

***

‘ಪೇಂಟೆಡ್‌ ಬರ್ಡ್‌’ ಸಿನಿಮಾ ಇಷ್ಟ ಆಯ್ತು. ಇದು ಬಿಟ್ಟರೆ ಟಿಬೆಟಿಯನ್‌ ಸಿನಿಮಾ ‘ಬಲೂನ್‌’ ಕೂಡ ಮನಸ್ಸಿಗೆ ನಾಟಿತು. ನನ್ನ ಸಿನಿಮಾ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಎರಡೂ ದಿನಾನೂ ಹೌಸ್‌ಫುಲ್‌ ಆಗಿತ್ತು. ಇಲ್ಲಿನ ಪ್ರತಿಕ್ರಿಯೆ ನೋಡಿ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಮುಂದೆ ಬಂದಿದ್ದಾರೆ. 

ಇಂಥ ಸಿನಿಮೋತ್ಸವಗಳನ್ನು ಆಯೋಜಿಸುವಾಗ ದೊಡ್ಡ ಮಟ್ಟದ ಸಿನಿಮಾ ಥಿಯೇಟರ್‌ಗಳನ್ನು ಗಮನದಲ್ಲಿಟ್ಟುಕೊಂಡು ಅಲ್ಲಿಯೂ ಪ್ರದರ್ಶನ ಏರ್ಪಡಬೇಕು. ಸದ್ಯಕ್ಕೆ ನವರಂಗ್‌ ಚಿತ್ರಮಂದಿರವಿದೆ. ಇದರ ಜತೆಗೆ ದೊಡ್ಡ ಮಟ್ಟದ ಸಿನಿಮಾ ಥಿಯೇಟರ್‌ಗಳು ಬೇಕು ಅಂತ ಅನಿಸುತ್ತೆ. 

- ಗಿರೀಶ್‌ ಕಾಸರವಳ್ಳಿ, ಸಿನಿಮಾ ನಿರ್ದೇಶಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು