ಆರ್‌ಜಿವಿ ಪಬ್ಲಿಸಿಟಿ ಸ್ಟಂಟ್!

ಸದಾ ಒಂದಿಲ್ಲ ಒಂದು ವಿವಾದಗಳಿಂದಲೇ ಸುದ್ದಿಯಲ್ಲಿರುವ ಖ್ಯಾತ ನಿರ್ದೇಶಕ ವಂಗವೀಟಿ ರಾಂಗೋಪಾಲ್ ವರ್ಮಾ (ಆರ್‌ಜಿವಿ) ಏನೇ ಮಾಡಿದರೂ ವಿವಾದ ಸೃಷ್ಟಿಯಾಗುತ್ತದೆ. ಆರ್‌ಜಿವಿ ಎಲ್ಲಿರುತ್ತಾರೆ ಅವರ ಬೆನ್ನ ಹಿಂದಯೇ ವಿವಾದವೂ ಇರುತ್ತದೆ. ಇದು ಅವರ ಹುಟ್ಟು ಗುಣವೋ, ಪಬ್ಲಿಸಿಟಿ ಸ್ಟಂಟೋ ಅಥವಾ ಅಸ್ತಿತ್ವದ ಪ್ರಶ್ನೆಯೇ ಗೊತ್ತಿಲ್ಲ. ಒಟ್ಟಿನಲ್ಲಿ ವಿವಾದಕ್ಕೂ ಅವರಿಗೂ ಬಿಡದ ನಂಟು! ಈಗ ‘ಕಮ್ಮಾ ರಾಜ್ಯಂ ಲೋ ಕಡಪಾ ರೆಡ್ಲು’ ಚಿತ್ರದ ಮೂಲಕ ಮತ್ತೊಂದು ಹೊಸ ವಿವಾದವನ್ನು ಅವರು ಮೈಮೇಲೆ ಎಳೆದುಕೊಂಡಿದ್ದಾರೆ...
ತೆಲುಗು ಮತ್ತು ಹಿಂದಿಯಲ್ಲಿ ಹಿಟ್ ಮೇಳೆ ಹಿಟ್ ಚಿತ್ರಗಳನ್ನುನೀಡಿದ ರಾಂಗೋಪಾಲ್ ವರ್ಮಾ ಮುಟ್ಟಿದ್ದೆಲ್ಲ ಚಿನ್ನ ಎಂಬ ಕಾಲವೊಂದಿತ್ತು. ಈಗ ‘ಪಬ್ಲಿಸಿಟಿಗಾಗಿ ವರ್ಮಾ ಯಾವುದೇ ಮಟ್ಟಕ್ಕಾದರೂ ಇಳಿಯುತ್ತಾರೆ’ ಎಂಬ ಮಾತು ಕೇಳಿ ಬರುತ್ತಿದೆ. ಅದು ಸತ್ಯ ಕೂಡ ಹೌದು!
ಹೌದು, ಕಾಲ ಬದಲಾಗಿದೆ. ಶನಿ ವರ್ಮಾ ಹೆಗಲಮೇಲೇರಿದೆ. ಸಾಲು, ಸಾಲು ತೋಪು ಚಿತ್ರಗಳನ್ನು ನೀಡಿದ ವರ್ಮಾ ಯಶಸ್ಸಿಗಾಗಿ ಹಾತೊರೆಯುತ್ತಿದ್ದಾರೆ. ಅಸ್ತಿತ್ವಕ್ಕಾಗಿ ಹೆಣಗಾಡುತ್ತಿರುವ ಅವರು ಜೇನುಗೂಡಿಗೆ ಕಲ್ಲು ಹೊಡೆಯಲು ಹಿಂಜರಿಯುವುದಿಲ್ಲ.
ರಾಜಕಾರಣಿಗಳ ವೈಯಕ್ತಿಕ ವಿಷಯ, ಸಾಮೂಹಿಕ ಅತ್ಯಾಚಾರ, ಬಾಂಬ್ ಸ್ಫೋಟ, ಕುಟುಂಬ ರಾಜಕಾರಣ, ಸೆಕ್ಸ್ ಹಗರಣ... ಯಾವುದಾದರೂ ಸರಿ. ತಕ್ಷಣ ಹೊಸ ಸಿನಿಮಾಗಳ ಟೈಟಲ್ ಘೋಷಿಸಿ ಬಿಡುತ್ತಾರೆ. ಅಲ್ಲಿಂದ ವಿವಾದ ಅವರ ಬೆನ್ನು ಬೀಳುತ್ತದೆ.
ವಿವಾದಾತ್ಮಕ ವಿಷಯಗಳನ್ನು ಹೆಕ್ಕಿ ತೆಗೆಯುವಲ್ಲಿ ವರ್ಮಾ ನಿಷ್ಣಾತರು. ಯಾವುದೇ ವಿಷಯ ಸಿಗದಿದ್ದರೆ ಗಾಳಿಯಲ್ಲಿ ಗುಂಡು ಹೊಡೆದಂತೆ ತಾವೇ ಒಂದು ಹೊಸ ವಿವಾದ ಸೃಷ್ಟಿಸುತ್ತಾರೆ. ರಾಂಗೋಪಾಲ ವರ್ಮಾ ಅವರ ಹೊಸ ಸಿನಿಮಾ ‘ಕಮ್ಮಾ ರಾಜ್ಯಂ ಲೋ ಕಡಪಾ ರೆಡ್ಲು’ ಆಂಧ್ರ ಪ್ರದೇಶದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿದೆ. ಆಂಧ್ರ ರಾಜಕಾರಣದ ಪ್ರಸ್ತುತ ಸ್ಥಿತಿಗತಿಯನ್ನು ಲೇವಡಿ ಮಾಡುವ ಸಿನಿಮಾದ ಟೈಟಲ್‌ನಿಂದ ಪಾತ್ರಗಳವರೆಗೂ ವಿವಾದ ಅಂಟಿಕೊಂಡಿದೆ.
‘ಕಮ್ಮಾ ರಾಜ್ಯಂಲೋ ಕಡಪಾ ರೆಡ್ಲು’ ಈಗ ‘ಅಮ್ಮ ರಾಜ್ಯಂಲೋ ಕಡಪಾ ಬಿಡ್ಡಲು’ ಎಂದು ಬದಲಾಗಿದೆ. ಬಹುಶಃ ವರ್ಮಾ ಉದ್ದೇಶ ಈಡೇರಿಯಾಗಿದೆ. ಕಳೆದ ಕೆಲವು ತಿಂಗಳಿಂದ ಈ ಸಿನಿಮಾ ಆಂಧ್ರ ಪ್ರದೇಶದಲ್ಲಿ ಚರ್ಚೆ ಹುಟ್ಟು ಹಾಕಿತ್ತು. ಚಿತ್ರಕ್ಕೆ ಸಿಗಬೇಕಾದಷ್ಟು ಪುಕ್ಕಟೆ ಪ್ರಚಾರ ಬಿಡುಗಡೆಗೂ ಮುನ್ನವೇ ಸಿಕ್ಕಿದೆ. ಅಷ್ಟರ ಮಟ್ಟಿಗೆ ಆರ್‌ಜಿವಿ ಗಿಮಿಕ್ ಯಶಸ್ವಿಯಾಗಿದೆ.
ಅಕ್ಕಿನೇನಿ ನಾಗಾರ್ಜುನ್‌ಗೆ ಹೊಸ ಇಮೇಜ್ ನೀಡಿದ ತೆಲುಗು ಬ್ಲಾಕ್ ಬ್ಲಸ್ಟರ್ ‘ಶಿವ’ ಚಿತ್ರದೊಂದಿಗೆ ಆರಂಭವಾದ ವರ್ಮಾ ಸಿನಿ ಪಯಣ ಅನೇಕ ಏಳುಬೀಳುಗಳನ್ನು ಕಂಡಿದೆ. ಅದೆಲ್ಲಕ್ಕಿಂತ ಹೆಚ್ಚಾಗಿ ಅವರು ಆಯ್ದುಕೊಂಡ ವಿಷಯಗಳು ವಿವಾದಗಳನ್ನು ಹುಟ್ಟು ಹಾಕಿವೆ. ಎನ್.ಟಿ. ರಾಮಾರಾವ್ ಅವರ ವೈಯಕ್ತಿಕ ಬದುಕನ್ನು ದೊಡ್ಡ ಪರದೆಯಲ್ಲಿ ತೋರಿಸಿದ ‘ಲಕ್ಷ್ಮೀಸ್ ಎನ್‌ಟಿಆರ್‘ ಮತ್ತು ಆಂಧ್ರದ ರಕ್ತಸಿಕ್ತ ರಾಜಕಾರಣದ ಸುತ್ತ ಹೆಣೆದ ‘ರಕ್ತ ಚರಿತ’ ಸಿನಿಮಾಗಳು ಆಂಧ್ರದಲ್ಲಿ ತಲ್ಲಣ ಸೃಷ್ಟಿಸಿದ್ದವು.
ಗಾಯಂ, ಅಂತಂ, ಗೋವಿಂದ, ಗೋವಿಂದಾ, ಕ್ಷಣ, ಕ್ಷಣಂ, ವೆಂಗವೀಟಿ, ಧ್ಯೇಯಂ ಸೇರಿದಂತೆ ಅನೇಕ ತೆಲುಗು ಹಿಟ್ ಚಿತ್ರಗಳು ಆರ್‌ಜಿವಿ ಬತ್ತಳಿಕೆಯಲ್ಲಿವೆ.
ಹಿಂದಿಯಲ್ಲಿ ಕಂಪನಿ, ರಣ್, ಸರ್ಕಾರ್, ಧರಣಾ ಜರೂರಿ ಹೈ, ಏಕ್ ಹಸೀನಾ ಥಿ.., ಮೈ ಭಿ ಮಾಧುರಿ ದೀಕ್ಷಿತ್ ಬನಾ, ನಾಚ್, ಕಿಲ್ಲಿಂಗ್ ವೀರಪ್ಪನ್, ರಂಗೀಲಾ, ರಾತ್, ಭೂತ್, ಫೂಂಕ್, ದೌಡ್, ಅಬ್ ತಕ್ ಛಪ್ಪನ್ ಮುಂತಾದ ಚಿತ್ರಗಳಿಂದ ಬಾಲಿವುಡ್‌ನಲ್ಲಿ ಭದ್ರವಾಗಿ ನೆಲೆ ಕಂಡುಕೊಂಡಿದ್ದರು ಆರ್‌ಜಿವಿ.
ಆದರೆ, ಹೊಸಬರ ಅಲೆಯಲ್ಲಿ ಕೊಚ್ಚಿ ಹೋಗುತ್ತಿರುವ ರಾಂಗೋಪಾಲ್ ವರ್ಮಾ ಅವರು ಇದೀಗ ಅಸ್ತಿತ್ವಕ್ಕಾಗಿ ಹೆಣಗಾಡುವಂತಾಗಿದೆ. ಅವರ ಬತ್ತಳಿಕೆಯೂ ಬರಿದಾದಂತೆ ಕಾಣುತ್ತಿದೆ. ಹೀಗಾಗಿ ಗಿಮಿಕ್, ಪಬ್ಲಿಸಿಟಿಗಳ ಬೆನ್ನು ಬಿದ್ದಿರುವುದು ವಿಪರ್ಯಾಸ!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.