ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ತಾತ ಮತ್ತಾತನ ಚಿತ್ರಗಳು

Last Updated 29 ಜನವರಿ 2019, 19:45 IST
ಅಕ್ಷರ ಗಾತ್ರ

1948 ಜನವರಿ 30. ಮಹಾತ್ಮ ಗಾಂಧಿ ಅವರು ನಾಥುರಾಮ ಗೋಡ್ಸೆ ಗುಂಡಿಗೆ ಬಲಿಯಾದ ದಿನ. ದೇಶವು ಸ್ವಾತಂತ್ರ್ಯ ಗಳಿಸಿದ ಆರೂವರೆ ತಿಂಗಳಲ್ಲೇ ಗಾಂಧೀಜಿ ಹತ್ಯೆ ಆಯಿತು. ಇದೆಲ್ಲವೂ ನಡೆದು 71 ವರ್ಷಗಳು ಗತಿಸಿವೆ.

ಆದರೆ ಒಂದು ವಾದದ ಪ್ರಕಾರ, ಗಾಂಧೀಜಿ ಇನ್ನೂ ನಿಗೂಢವಾಗಿಯೇ ಇದ್ದಾರೆ. ಅವರನ್ನು ಪೂರ್ಣಪ್ರಮಾಣದಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ರಾಜಕೀಯ, ಸಾಮಾಜಿಕ, ಸ್ವಾತಂತ್ರ್ಯ ಚಳವಳಿ ಎಂದೆಲ್ಲ ಕೆಲವೇ ಕ್ಷೇತ್ರಗಳಿಗೆ ಅವರನ್ನು ಸೀಮಿತಗೊಳಿಸಲು ಸಹಸಾಧ್ಯ ಆಗುವುದಿಲ್ಲ. ಕಾರಣ, ಅಧ್ಯಯನ ಮಾಡಿದಷ್ಟು ಅವರು ಭಿನ್ನವಾಗಿ ಕಾಣುತ್ತಾರೆ. ಕೆಲವೊಮ್ಮೆ ಸರಳ, ಕೆಲವೊಮ್ಮೆ ಜಟಿಲ. ಹಲವು ಸಂದರ್ಭಗಳಲ್ಲಿ ಅವರು ಒಗಟಾಗಿಯೇ ಉಳಿಯುತ್ತಾರೆ.

ಗಾಂಧೀಜಿ ಅವರನ್ನು ಅರಿತುಕೊಳ್ಳಲು ಬಾಲಿವುಡ್ ಮತ್ತು ಹಾಲಿವುಡ್ ಸಾಕಷ್ಟು ಪ್ರಯತ್ನ ನಡೆಸಿವೆ. ಒಬ್ಬೊಬ್ಬ ನಿರ್ದೇಶಕನ ಕಣ್ಣುಗಳಲ್ಲಿಯೂ ರಾಷ್ಟ್ರಪಿತ ಒಂದೊಂದು ರೀತಿ ಕಂಡಿದ್ದಾರೆ. ಗಾಂಧೀಜಿ ಪಾತ್ರ ನಿರ್ವಹಿಸಿದ ಕಲಾವಿದರ ಮೇಲೆ ಅಹಿಂಸೆ, ಶಾಂತಿ, ಸಹನೆ ಸೇರಿದಂತೆ ವಿವಿಧ ವಿಷಯಗಳು ಗಾಢ ಪ್ರಭಾವ ಬೀರಿವೆ. ಆಯಾ ಕಾಲಘಟ್ಟದಲ್ಲಿ ಗಾಂಧೀಜಿ ಬಗ್ಗೆ ಹಲವು ಚಲನಚಿತ್ರ ತೆರೆ ಕಂಡಿವೆ. ಕೆಲ ಚಿತ್ರಗಳು ಪ್ರಶಸ್ತಿ ಗಳಿಸಿದ್ದರೆ, ಇನ್ನೂ ಕೆಲವು ಚಿತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಛಾಪು ಮೂಡಿಸಿವೆ.

ಗಾಂಧಿ (1982)

ಹಾಲಿವುಡ್ ಮತ್ತು ಬಾಲಿವುಡ್ ಕಲಾವಿದರು, ತಂತ್ರಜ್ಞರು ಜೊತೆಗೂಡಿ ನಿರ್ಮಿಸಿದ ಸಿನಿಮಾ ‘ಗಾಂಧಿ’. ರಿಚರ್ಡ್ ಅಟೆನಬರೊ ನಿರ್ದೇಶಿಸಿದ ಈ ಚಿತ್ರದಲ್ಲಿ ಬೆನ್ ಕಿಂಗಸ್ಲೇ ಗಾಂಧೀಜಿ ಪಾತ್ರ ನಿರ್ವಹಿಸಿದ್ದರು.

ಗಾಂಧೀಜಿ ಕುರಿತು ಸುಮಾರು 20 ವರ್ಷ ಅಧ್ಯಯನ, ಸಂಶೋಧನೆ ನಡೆಸಿದ ಬಳಿಕ ತಯಾರಾದ ಈ ಚಿತ್ರವು ಹಲವು ಅಂಶಗಳ ಮೇಲೆ ಬೆಳಕು ಚೆಲ್ಲಿತು. ಈ ಚಿತ್ರವನ್ನು ರೂಪಿಸುವಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಸೇರಿದಂತೆ ಹಲವು ಮಹನೀಯರು ಪ್ರಮುಖ ಪಾತ್ರ ವಹಿಸಿದ್ದರು. ಆಸ್ಕರ್ ಪ್ರಶಸ್ತಿಗೂ ಚಿತ್ರ ಪಾತ್ರವಾಯಿತು.

ದಿ ಮೇಕಿಂಗ್ ಆಫ್ ಮಹಾತ್ಮ (1996)

ದಕ್ಷಿಣ ಆಫ್ರಿಕಾ ಮತ್ತು ಭಾರತದ ಕಲಾವಿದರು ಮತ್ತು ಚಿಂತಕರ ಸಹಯೋಗದಲ್ಲಿ ರೂಪುಗೊಂಡ ‘ದಿ ಮೇಕಿಂಗ್ ಆಫ್ ಮಹಾತ್ಮ’, ದಕ್ಷಿಣ ಆಫ್ರಿಕಾದಲ್ಲಿನ ಗಾಂಧೀಜಿಯ‌ ಜೀವನ ಕಥನವನ್ನು ಬಿಚ್ಚಿಟ್ಟಿತು.

ದಕ್ಷಿಣ ಆಫ್ರಿಕಾದಲ್ಲಿ 21 ವರ್ಷ ವಾಸವಿದ್ದ ಗಾಂಧೀಜಿ ಅಹಿಂಸಾವಾದಿ ಮತ್ತು ಶಾಂತಿಪ್ರಿಯ ವ್ಯಕ್ತಿಯಾಗಿ ಹೇಗೆ ರೂಪುಗೊಂಡರು ಎಂಬುದು ಚಿತ್ರದ ತಿರುಳು. ಫಾತಿಮಾ ಮೀರ್ ಅವರ ‘ದಿ ಅಪ್ರೆಂಟಿಸಿಶಿಪ್ ಆಫ್ ಮಹಾತ್ಮ’ ಕೃತಿ ಆಧರಿಸಿದ ಈ ಚಿತ್ರವನ್ನು ಶ್ಯಾಮ್ ಬೆನಗಲ್ ನಿರ್ದೇಶಿಸಿದ್ದು, ರಜತ್‌ ಕಪೂರ್ ಅವರು ಗಾಂಧಿ ಪಾತ್ರದಲ್ಲಿ ಅಭಿನಯಿಸಿದರು.

ಹೇ ರಾಮ್ (2000)

ಗಾಂಧೀಜಿ ಜೀವನ ಕಥನವನ್ನೇ ಆಧರಿಸಿ ಕಮಲ್ ಹಾಸನ್ ನಿರ್ಮಿಸಿ ನಿರ್ದೇಶಿಸಿದ ‘ಹೇ ರಾಮ್’ ಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತೆರೆ ಕಂಡಿತು. ವಿವಾದವನ್ನೂ ಸೃಷ್ಟಿಸಿತು.

ಶಾರುಖ್ ಖಾನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಈ ಚಿತ್ರದಲ್ಲಿ ಗಾಂಧಿ ಪಾತ್ರ ಮಾಡಿದ್ದು ನಾಸೀರುದ್ದೀನ್ ಶಾ. ₹ 6 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣವಾದ ಈ ಚಿತ್ರದಲ್ಲಿ ಗಿರೀಶ್ ಕಾರ್ನಾಡ್, ಅತುಲ್ ಕುಲಕರ್ಣಿ, ರಾಣಿ ಮುಖರ್ಜಿ ಮುಖ್ಯ ಭೂಮಿಕೆಯಲ್ಲಿದ್ದರು.

ಲಗೇ ರಹೋ ಮುನ್ನಾಭಾಯ್ (2006)

ರಾಜ್‌ಕುಮಾರ್ ಹಿರಾನಿ ನಿರ್ದೇಶನದಲ್ಲಿ ತೆರೆ ಕಂಡ ‘ಲಗೇ ರಹೋ ಮುನ್ನಾಭಾಯ್’, ಗಾಂಧೀಜಿ ಜನರ ಮನಸ್ಸಿನ ಮೇಲೆ ಯಾವ ಪರಿ ಪ್ರಭಾವ ಬೀರಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿತು. ದಿಲೀಪ್ ಪ್ರಭಾವಲ್ಕರ್ ಗಾಂಧೀಜಿ ರೂಪದಲ್ಲಿ ಕಾಣಿಸಿಕೊಂಡರು. ಒಂದು ವೇಳೆ ಗಾಂಧೀಜಿ ಬದುಕಿದ್ದಿದ್ದರೆ ಎದುರಿಸಬೇಕಾಗಿದ್ದ ಸವಾಲು ಮತ್ತು ಅವರ ವ್ಯಕ್ತಿತ್ವವನ್ನು ಜನ ಹೇಗೆ ಕಾಣುತ್ತಿದ್ದರು ಎಂಬುದನ್ನು ತೋರಿಸಿಕೊಟ್ಟಿತು.

ಗಾಂಧಿ ಮೈ ಫಾದರ್ (2007)

ಗಾಂಧೀಜಿ ಮತ್ತು ಅವರ ಮಗ ಹರಿಲಾಲ್ ನಡುವಿನ ಸಂಬಂಧ ಹೇಗಿತ್ತು, ಅವರ ಮಧ್ಯೆ ಇದ್ದ ಪ್ರೀತಿ, ಮನಸ್ತಾಪ ಮತ್ತು ಆಗಾಗ್ಗೆ ನಡೆಯುತ್ತಿದ್ದ ಗಂಭೀರ ಸಂಭಾಷಣೆಗೆ ‘ಗಾಂಧಿ ಮೈ ಫಾದರ್’ ಕನ್ನಡಿ ಹಿಡಿಯಿತು.

ದರ್ಶನ ಜರಿವಾಲಾ ಅವರು ಗಾಂಧಿಯಾಗಿ ಅಭಿನಯಿಸಿದರೆ, ಹರಿಲಾಲ್ ಪಾತ್ರದಲ್ಲಿ ಅಕ್ಷಯ್ ಖನ್ನಾ ಕಾಣಿಸಿಕೊಂಡರು. ಈ ಚಿತ್ರವನ್ನು ಫಿರೋಜ್ ಅಬ್ಬಾಸ್ ಖಾನ್ ನಿರ್ದೇಶಿಸಿದರು.

ಗಾಂಧಿ ಟು ಹಿಟ್ಲರ್ (2011)

ಎರಡನೇ ವಿಶ್ವ ಯುದ್ಧದ ಹಿನ್ನೆಲೆಯಲ್ಲಿ, ‘ಗಾಂಧಿ ಟು ಹಿಟ್ಲರ್’ ಚಿತ್ರವು ಗಾಂಧೀಜಿ ಮತ್ತು ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಲರ್ ಅವರಿಬ್ಬರ ವ್ಯಕ್ತಿತ್ವಗಳ ನಡುವಿನ ವ್ಯತ್ಯಾಸದ ಮೇಲೆ ಬೆಳಕು ಚೆಲ್ಲಿತು. ಹಿಟ್ಲರ್‌ಗೆ ಗಾಂಧೀಜಿ ಬರೆದ ಪತ್ರಗಳನ್ನು ಈ ಚಿತ್ರವು ಉಲ್ಲೇಖಿಸಿತು. ರಾಕೇಶ್ ರಂಜನ್ ಕುಮಾರ್ ನಿರ್ದೇಶನದಲ್ಲಿ ರಘುವೀರ್ ಯಾದವ್ ‘ಹಿಟ್ಲರ್’ ಮತ್ತು ಅವಿಜಿತ್ ದತ್ ಗಾಂಧೀಜಿ ಪಾತ್ರದಲ್ಲಿ ಕಾಣಿಸಿಕೊಂಡರು.

ಮಹಾತ್ಮ: ಲೈಫ್ ಆಫ್ ಗಾಂಧಿ (1968), ನೈನ್ ಹವರ್ಸ್ ಟು ರಾಮ (1963), ಸರ್ದಾರ್ (1993) ಮತ್ತು ಮೈನೆ ಗಾಂಧಿ ಕೋ ನಹಿ ಮಾರಾ (2005) ಚಿತ್ರಗಳು ಕೂಡ ಅಷ್ಟೇ ಪ್ರಭಾವ ಬೀರಿದವು. ಗಾಂಧೀಜಿಯವರ ವಿಭಿನ್ನ ವ್ಯಕ್ತಿತ್ವಗಳನ್ನು ತೆರೆಯ ಮೂಲಕ ತೋರಿಸಿಕೊಟ್ಟವು.

ಕಾಸರವಳ್ಳಿ ನಿರ್ದೇಶಿತ ‘ಕೂರ್ಮಾವತಾರ’

ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದಲ್ಲಿ 2013ರಲ್ಲಿ ತೆರೆ ಕಂಡ ‘ಕೂರ್ಮಾವತಾರ’ ಚಿತ್ರವು ಇಂದಿನ ಕಾಲಘಟ್ಟದಲ್ಲಿ ಗಾಂಧಿ ಚಿಂತನೆಗಳು ಹೇಗೆ ಪ್ರಸ್ತುತ ಆಗುತ್ತವೆ‌ ಎಂಬುದನ್ನು ತಿಳಿಸಿತು. ವ್ಯಕ್ತಿಯೊಬ್ಬ ಗಾಂಧಿಯಂತೆ ಬದುಕಲು ಪ್ರಯತ್ನಿಸಿದರೆ ಯಾವುದೆಲ್ಲ ಸಮಸ್ಯೆ, ಸಂಕಷ್ಟಗಳಿಗೆ ಸಿಲುಕಬೇಕಾಗುತ್ತದೆ, ಸವಾಲು ಎದುರಿಸಬೇಕಾಗುತ್ತದೆ ಎಂಬುದನ್ನು ಈ ಸಿನಿಮಾ ತೋರಿಸಿಕೊಟ್ಟಿತು. ಈ ಚಿತ್ರವು ಅಂತರರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ಅಲ್ಲದೇ ರಾಜ್ಯ ಮಟ್ಟದಲ್ಲೂ ಹಲವು ಪ್ರಶಸ್ತಿ ಗಳಿಸಿತು. ಹಿರಿಯ ರಂಗಕರ್ಮಿ ಶಿಕಾರಿಪುರ ಕೃಷ್ಣಮೂರ್ತಿ ಗಾಂಧೀಜಿಯಾಗಿ, ಹಿರಿಯ ಕಲಾವಿದೆ ಜಯಂತಿ ಕಸ್ತೂರಬಾ ರೂಪದಲ್ಲಿ ಅಭಿನಯಿಸಿದರು. ಹರೀಶ್‌ರಾಜ್‌, ನಾಥುರಾಮ ಗೋಡ್ಸೆ ಪಾತ್ರದಲ್ಲಿ ಕಾಣಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT