ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟೌನ್‌ನಲ್ಲಿ ಹಾಸ್ಯದ ಹೊನಲು

Last Updated 5 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಬಾಲಿವುಡ್‌ನಲ್ಲಿ ಹಾಸ್ಯ ಪ್ರಧಾನ ಚಿತ್ರಗಳಿಗೆ ತನ್ನದೇ ಆದ ಸ್ಥಾನವಿದೆ. ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಚಿತ್ರಗಳಿಗೆ ಸದಾ ಮಾರುಕಟ್ಟೆ ಇದೆ ಎಂಬುದಕ್ಕೆ ಈ ವರ್ಷ ಬಿಡುಗಡೆಯಾಗಿರುವ ಹಿಂದಿ ಹಾಸ್ಯ ಚಿತ್ರಗಳ ಸಂಖ್ಯೆಯೇ ಸಾಕ್ಷಿ.

ಅಕ್ಷಯ್ ಕುಮಾರ್, ಅಜಯ್ ದೇವಗನ್, ಅನಿಲ್ ಕಪೂರ್ ಅವರಂತಹ ಸ್ಟಾರ್ ನಟರು ಅಭಿನಯಿಸಿರುವ ಹಾಸ್ಯ ಚಿತ್ರಗಳು ಈ ಹಿಂದೆ ಭರ್ಜರಿ ಯಶಸ್ಸು ಕಂಡಿವೆ. ಆಯುಷ್ಮಾನ್ ಖುರಾನ, ರಾಜ್‌ಕುಮಾರ್ ರಾವ್ ಮೊದಲಾದ ಯುವನಟರು ಅಭಿನಯಿಸಿರುವ ಚಿತ್ರಗಳೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.

ಇಂತಹ ಚಿತ್ರಗಳ ಸಾಲಿಗೆ ಅನೀಸ್ ಬಾಜ್ಮಿ ನಿರ್ದೇಶನದ ‘ಪಾಗಲ್ ಪಂತಿ’ ಚಿತ್ರ ಹೊಸ ಸೇರ್ಪಡೆ. ಅನಿಲ್ ಕಪೂರ್, ಜಾನ್ ಅಬ್ರಹಾಂ, ಇಲಿಯಾನ ಡಿಕ್ರೂಸ್, ಕೃತಿ ಕರಬಂಧ, ಸೌರಭ್ ಶುಕ್ಲಾ, ಹರ್ಷದ್ ವರ್ಸಿ ಇದರಲ್ಲಿ ನಟಿಸಿದ್ದಾರೆ. ಮೂವರು ಯುವಕರು ತಮ್ಮ ಗೆಳತಿಯರ ಜೊತೆ ಸೇರಿ, ಇಬ್ಬರು ಗ್ಯಾಂಗ್‌ಸ್ಟರ್‌ಗಳಿಂದ ಹಣ ಲಪಟಾಯಿಸಲು ಯತ್ನಿಸುವುದೇ ಈ ಚಿತ್ರದ ಕಥಾಹಂದರ.

ಇದೇ ರೀತಿಯ ಕಥಾವಸ್ತು ಒಳಗೊಂಡಿರುವ ಹಲವು ಸಿನಿಮಾಗಳು ಈ ಹಿಂದೆಯೂ ಬಾಲಿವುಡ್‌ನಲ್ಲಿ ತೆರೆಕಂಡಿವೆ. ಆದರೂ ‘ಪಾಗಲ್ ಪಂತಿ’ಯಲ್ಲಿ ಪ್ರಸಿದ್ಧ ನಟ, ನಟಿಯರ ದಂಡನ್ನೇ ಬಳಸಿಕೊಂಡು ಪ್ರೇಕ್ಷಕರ ಮನ ತಟ್ಟಲು ನಿರ್ದೇಶಕರು ಪ್ರಯತ್ನಿಸಿದ್ದಾರೆ.
ಅಕ್ಷಯ್ ಕುಮಾರ್ ಅಭಿನಯದಲ್ಲಿ ಈಚೆಗೆ ತೆರೆಕಂಡಿದ್ದ ‘ಹೌಸ್‌ಫುಲ್ 4’ ಚಿತ್ರ ಕೂಡ ಸಾಕಷ್ಟು ಸದ್ದು ಮಾಡುವುದರ ಜೊತೆಗೆ ಉತ್ತಮ ಗಳಿಕೆ ಮಾಡಿತ್ತು. ಫರ್ಹದ್ ಸಮ್ಜಿ ನಿರ್ದೇಶನದ ಈ ಚಿತ್ರವು ಬಾಲಿವುಡ್‌ನ ಜನಪ್ರಿಯ ಹಾಸ್ಯ ಚಿತ್ರ ‘ಹೌಸ್ ಫುಲ್’ ಸರಣಿಯ ನಾಲ್ಕನೇ ಸಿನಿಮಾ.ರಿತೇಶ್ ದೇಶ್‌ಮುಖ್, ಬಾಬಿ ಡಿಯೋಲ್, ಕೃತಿ ಸನೂನ್, ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹೀಗೆ ಯಶಸ್ವಿ ಹಾಸ್ಯ ಚಿತ್ರಗಳ ಸೀಕ್ವೆಲ್‌ಗಳು ಕೂಡ ಸಾಕಷ್ಟು ನಿರ್ಮಾಣವಾಗುತ್ತಿವೆ.

ಆಯುಷ್ಮಾನ್ ಖುರಾನ ಅಭಿನಯದ ‘ಡ್ರೀಮ್ ಗರ್ಲ್’ ಮತ್ತು ‘ಬಾಲಾ’ ಚಿತ್ರಗಳು ಯಶಸ್ವಿ ಹಾಸ್ಯಚಿತ್ರಗಳ ಸಾಲಿಗೆ ಸೇರಿವೆ. ಇವರ ಅಭಿನಯದಲ್ಲಿ ತೆರೆ ಕಂಡಿದ್ದ ‘ಬದಾಯಿ ಹೊ’, ‘ಧಮ್ ಲಗಾಕೆ ಹೈಸಾ’ ಸಿನಿಮಾಗಳು ಈ ಹಿಂದೆ ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆದಿದ್ದವು.
ಕೃತಿ ಸನೂನ್, ಸೋನಾಕ್ಷಿ ಸಿನ್ಹಾ, ಕೃತಿ ಕರಬಂಧ ಕೂಡ ಹಾಸ್ಯ ಪ್ರಧಾನ ಚಿತ್ರಗಳಲ್ಲಿ ಹೆಚ್ಚಾಗಿ ನಟಿಸುವ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿದ್ದಾರೆ. ಆ ಮೂಲಕ ಹಾಸ್ಯ ಪಾತ್ರಗಳಿಗೂ ತಾವು ಸೈ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಇಂದ್ರಕುಮಾರ್ ನಿರ್ದೇಶನದ ‘ಟೋಟಲ್ ಧಮಾಲ್’ ಈ ವರ್ಷದ ಜನಪ್ರಿಯ ಹಾಸ್ಯ ಚಿತ್ರಗಳಲ್ಲೊಂದು. ಇದು ‘ಧಮಾಲ್’ ಸರಣಿಯ ಮೂರನೇ ಚಿತ್ರ. ಇದರಲ್ಲಿ ಅಜಯ್ ದೇವಗನ್, ಅನಿಲ್ ಕಪೂರ್, ಮಾಧುರಿ ದೀಕ್ಷಿತ್‌ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದರು.

ಹಿಂದಿ ಹಾಸ್ಯ ಚಿತ್ರಗಳಲ್ಲಿ ದೊಡ್ಡ ತಾರಾಬಳಗ ಇರುವುದು ಈಗ ಸಾಮಾನ್ಯವಾಗಿದೆ. ಶಿಲ್ಪಿದಾಸ್ ಗುಪ್ತಾ ನಿರ್ದೇಶನದ ‘ಖಾಂದಾನಿ ಶಫಾಖಾನ’ ಚಿತ್ರ ಕೂಡ ಗಮನ ಸೆಳೆದಿತ್ತು. ಇದರಲ್ಲಿ ಸೋನಾಕ್ಷಿ ಸಿನ್ಹಾ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.ಲಕ್ಷ್ಮಣ್ ಉತೇಕರ್ ನಿರ್ದೇಶನದ ‘ಲುಕಾ ಚುಪ್ಪಿ’ ಚಿತ್ರ ಬಾಲಿವುಡ್ ಅಂಗಳದಲ್ಲಿ ಹೆಚ್ಚು ಸದ್ದು ಮಾಡಿತ್ತು. ಕಾರ್ತಿಕ್ ಆರ್ಯನ್ ಮತ್ತು ಕೃತಿ ಸನೂನ್ ಇದರಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದರು.

ನವಿರು ಹಾಸ್ಯದ ಜೊತೆಗೆ ಪ್ರೇಮ ಕಥೆ ಹೊಂದಿದ್ದ ಈ ಚಿತ್ರವು ಸಾಮಾಜಿಕ ಸಮಸ್ಯೆಗಳ ಮೇಲೂ ಬೆಳಕು ಚೆಲ್ಲಿತ್ತು. ಅಕಿವ್ ಅಲಿ ನಿರ್ದೇಶನದ ‘ದೇ ದೇ ಪ್ಯಾರ್ ದೇ’, ರೋಹಿತ್ ಜುಗ್ರಾಜ್ ನಿರ್ದೇಶನದ ‘ಅರ್ಜುನ್ ಪಟಿಯಾಲ’, ಪ್ರಕಾಶ್ ಕೋವೆಲಮುಡಿ ನಿರ್ದೇಶನದ ‘ಜಜ್ ಮೆಂಟಲ್ ಹೈ ಕ್ಯಾ’, ಇಮ್ರಾನ್ ಹಶ್ಮಿ ಅಭಿನಯದ ‘ವೈ ಚೀಟ್ ಇಂಡಿಯಾ’ –ಈ ವರ್ಷದ ಪ್ರಮುಖ ಹಾಸ್ಯಪ್ರಧಾನ ಚಿತ್ರಗಳಾಗಿವೆ.

ಅಭಿಷೇಕ್ ಶರ್ಮಾ ನಿರ್ದೇಶನದ ‘ದಿ ಝೋಯಾ ಫ್ಯಾಕ್ಟರ್’ ಹಾಸ್ಯ ಚಿತ್ರದಲ್ಲಿ ಸೋನಂ ಕಪೂರ್ ಮತ್ತು ಮಲಯಾಳದ ಯುವನಟ ದುಲ್ಖರ್ ಸಲ್ಮಾನ್ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ಆದರೆ, ಈ ಚಿತ್ರ ಅಷ್ಟೇನು ಸದ್ದು ಮಾಡಲಿಲ್ಲ. ರಾಜ್‌ಮೆಹ್ತಾ ನಿರ್ದೇಶನದ ಹಾಸ್ಯ ಚಿತ್ರ ‘ಗುಡ್ ನ್ಯೂಜ್’ ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಈ ಚಿತ್ರದ ಟ್ರೇಲರ್ ಈಗ ಸದ್ದು ಮಾಡುತ್ತಿದೆ. ಹೀಗೆ ಸಾಲು ಸಾಲು ಹಾಸ್ಯ ಚಿತ್ರಗಳು ಬಾಲಿವುಡ್‌ನಲ್ಲಿ ನಿರ್ಮಾಣವಾಗುತ್ತಿವೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT