ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ.8ಕ್ಕೆ ಯಶ್‌–ರಾಧಿಕಾ ಜೋಡಿಯ ಸ್ಪೆಷಲ್‌ 'ಗಿರ್ಮಿಟ್‌'

Last Updated 28 ಅಕ್ಟೋಬರ್ 2019, 12:36 IST
ಅಕ್ಷರ ಗಾತ್ರ

‘ಕೆಜಿಎಫ್‌’ ಚಿತ್ರಕ್ಕೆ ಸಂಗೀತ ಸಂಯೋಜಿಸುವ ಮೂಲಕ ಹೆಸರು ಮಾಡಿದವರು ರವಿ ಬಸ್ರೂರ್‌. ಇವರ ಬಗ್ಗೆ ಇಷ್ಟೇ ಹೇಳಿದರೆ ಸಾಕಾಗುವುದಿಲ್ಲ; ‘ಅಂಜನಿಪುತ್ರ’ ಚಿತ್ರದ ‘ಚೆಂದ ಚೆಂದ ನನ್ ಹೆಂಡ್ತಿ’ ಹಾಡಿನ ಬಗ್ಗೆ ಹೇಳಿದರೆ ಹೆಚ್ಚಿನವರಿಗೆ ಗೊತ್ತಾಗುತ್ತದೆ. ಏಕೆಂದರೆ, ಆ ಹಾಡಿನ ಗಮ್ಮತ್ತೇ ಅಂಥದ್ದು! ಆ ಹಾಡಿಗೆ ಸಂಗೀತ ನೀಡಿದವರು ಕೂಡ ರವಿ ಬಸ್ರೂರ್.

ಕರಾವಳಿಯ ರವಿ ಬಗ್ಗೆ ಬರೆಯುತ್ತಿರುವುದಕ್ಕೆ ಒಂದು ಕಾರಣ ಇದೆ. ಅವರು ‘ಗಿರ್ಮಿಟ್’ ಹೆಸರಿನಲ್ಲಿ ಒಂದು ಸಿನಿಮಾ ಸಿದ್ಧಪಡಿಸಿದ್ದಾರೆ. ಇದನ್ನು ನವೆಂಬರ್ 8ರಂದು ವೀಕ್ಷಕರ ಎದುರು ತರುವುದಾಗಿ ಹೇಳಿದ್ದಾರೆ. ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ತೆರೆಗೆ ಬರುತ್ತಿರುವುದು ಈ ಚಿತ್ರದ ವೈಶಿಷ್ಟ್ಯಗಳಲ್ಲಿ ಒಂದು.

ಈ ಚಿತ್ರದಲ್ಲಿ ಆ್ಯಕ್ಷನ್ ಇದೆ, ಭಾವುಕ ಕ್ಷಣಗಳು ಇವೆ, ಪ್ರೀತಿ–ಪ್ರೇಮದ ದೃಶ್ಯಗಳು ಕೂಡ ಇವೆ. ಆದರೆ, ಈ ದೃಶ್ಯಗಳನ್ನು ನಿಭಾಯಿಸುವ ಯಾವ ಪಾತ್ರಧಾರಿಯೂ ದೊಡ್ಡವ ಅಲ್ಲ! ಮಕ್ಕಳೇ ಇಂತಹ ದೃಶ್ಯಗಳನ್ನು ನಿಭಾಯಿಸಿದ್ದಾರೆ. ಇಲ್ಲಿ ಇನ್ನೊಂದು ಗಮ್ಮತ್ತು ಇದೆ. ಈ ದೃಶ್ಯಗಳನ್ನು ಮಕ್ಕಳು ಮಕ್ಕಳಾಗಿ ನಿಭಾಯಿಸಿಲ್ಲ; ಅವರು ದೊಡ್ಡವರಾಗಿ ಇವನ್ನೆಲ್ಲ ನಿಭಾಯಿಸಿದ್ದಾರೆ.

ಚಿತ್ರದಲ್ಲಿ ಅಭಿನಯಿಸಿರುವವರು ಮಕ್ಕಳಾದರೂ, ಅವರ ಪಾತ್ರಗಳೆಲ್ಲ ದೊಡ್ಡವರು ನಿಭಾಯಿಸುವಂಥವು. ಹಾಗಾಗಿ, ಮಕ್ಕಳೇ ಮೀಸೆ ಅಂಟಿಸಿಕೊಂಡು, ನಾಯಕ ನಟನಾಗಿ ಮಿಂಚಿದ್ದಾರೆ. ಆ್ಯಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಕ್ಕಳೇ, ತಲೆ ಕೂದಲು ಬೆಳ್ಳಗೆ ಮಾಡಿಸಿಕೊಂಡು ಮಧ್ಯವಯಸ್ಕರ ಪಾತ್ರಗಳಿಗೆ ಜೀವ ತುಂಬಿದ್ದಾರೆ!

ದೊಡ್ಡವರ ಪಾತ್ರಗಳನ್ನು ಮಕ್ಕಳಿಂದ ಮಾಡಿಸುವುದಕ್ಕೆ ರವಿ ಅವರಿಗೆ ಸ್ಫೂರ್ತಿ ನೀಡಿದ್ದು ಫ್ಲಿಪ್‌ಕಾರ್ಟ್‌ನ ಜಾಹೀರಾತು ಹಾಗೂ ಟಿ.ವಿ. ವಾಹಿನಿಯೊಂದರಲ್ಲಿ ಪ್ರಸಾರ ಆಗುವ ‘ಡ್ರಾಮಾ ಜೂನಿಯರ್ಸ್‌’ ಕಾರ್ಯಕ್ರಮ. ‘ಮಕ್ಕಳಾಗಿದ್ದಾಗ ನಾವು ಕೂಡ ಮೀಸೆ ಹಚ್ಚಿಕೊಂಡು, ತಲೆ ಕೂದಲಿಗೆ ಬಿಳಿ ಬಣ್ಣ ಹಚ್ಚಿಕೊಂಡು ನಾಟಕಗಳನ್ನು ಮಾಡುತ್ತಿದ್ದೆವು. ಹಾಗಾಗಿ, ಅದೇ ರೀತಿಯಲ್ಲಿ ಸಿನಿಮಾ ಏಕೆ ಮಾಡಬಾರದು ಎಂದು ಅನಿಸಿತು. ಅದರ ಫಲ ಗಿರ್ಮಿಟ್ ಸಿನಿಮಾ’ ಎಂದರು ರವಿ.

‘ನಾವು ಮಕ್ಕಳ ಜೊತೆ ಕೂತು ಸಿನಿಮಾ ವೀಕ್ಷಿಸುತ್ತೇವೆ. ಹೀಗಿರುವಾಗ, ಅದೇ ಮಕ್ಕಳು ಸಿನಿಮಾ ಪಾತ್ರಗಳನ್ನು ಏಕೆ ನಿಭಾಯಿಸಬಾರದು ಎಂಬ ಆಲೋಚನೆಯೂ ಈ ಸಿನಿಮಾದ ಹಿಂದೆ ಕೆಲಸ ಮಾಡಿದೆ’ ಎಂದರು ರವಿ. ಚಿತ್ರದ ಆ್ಯಕ್ಷನ್ ದೃಶ್ಯಗಳನ್ನು ಕರಾಟೆಯಲ್ಲಿ ತರಬೇತಿ ಪಡೆದ ಮಕ್ಕಳು ನಿಭಾಯಿಸಿದ್ದಾರಂತೆ.

ಮದುವೆ ಮಾಡಿಸುವುದು ಎಷ್ಟು ಕಷ್ಟ ಎಂಬುದು ಈ ಚಿತ್ರದ ಕಥೆ. ಇದನ್ನು ಹುಡುಗಿಯ ದೃಷ್ಟಿಯಿಂದ, ಹುಡುಗನ ದೃಷ್ಟಿಯಿಂದ, ದೊಡ್ಡವರ ದೃಷ್ಟಿಯಿಂದ ಹೇಳಲಾಗಿದೆ ಎಂಬುದು ಚಿತ್ರತಂಡದ ಹೇಳಿಕೆ.

ಯಶ್ ಮತ್ತು ರಾಧಿಕಾ ಅವರು ಈ ಚಿತ್ರದ ಕೆಲವು ಪ್ರಮುಖ ಸಂಭಾಷಣೆಗಳಿಗೆ ದನಿ ನೀಡಿದ್ದಾರೆ. ‘ಧೂಮ್‌ ರಟ್ಟಾ’ ಎನ್ನುವ ಹಾಡಿಗೆ ಪುನೀತ್ ರಾಜ್‌ಕುಮಾರ್‌ ದನಿಯಾಗಿದ್ದಾರೆ. ರಶ್ಮಿ ಮತ್ತು ರಾಜ್ ಇದರಲ್ಲಿ ನಾಯಕಿ ಹಾಗೂ ನಾಯಕ ಆಗಿ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT