ಗಣಿಯ ‘ಸಖತ್’ ಹಾಡಿನ ಮೋಡಿ

ಪ್ರೇಕ್ಷಕರಿಗೆ ‘ಚಮಕ್’ನಲ್ಲಿ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಸಿಂಪಲ್ ಸುನಿ ಜೋಡಿ ಈಗ ಮತ್ತೊಮ್ಮೆ ರಸದೌತಣ ನೀಡಲು ‘ಸಖತ್’ ಸಿನಿಮಾ ಮಾಡುತ್ತಿದೆ. ಈ ಚಿತ್ರದಲ್ಲಿ ರ‍್ಯಾಪರ್ ಗಾಯಕ ಮತ್ತು ರಿಯಾಲಿಟಿ ಷೋ ಸ್ಪರ್ಧಿಯಾಗಿ ಪ್ರೇಕ್ಷಕರ ಮನರಂಜಿಸಲು ಸಜ್ಜಾಗಿದ್ದಾರೆ ಗಣೇಶ್. ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಕಂಠೀರವ ಸ್ಟುಡಿಯೊದಲ್ಲಿ ನಡೆದಿದೆ.
ಇತ್ತೀಚೆಗಷ್ಟೇ ಚಿತ್ರತಂಡವು ನಾಯಕ ಗಣೇಶ್ ಕೈಯಲ್ಲಿ ಮೈಕ್ ಹಿಡಿದು ಹಾಡು ಹೇಳುವ ಪೋಸ್ಟರ್ ಹಂಚಿಕೊಂಡಿತ್ತು. ಕೈಯಲ್ಲಿ ಗಿಟಾರ್ ಹಿಡಿದು ರ‍್ಯಾಪರ್ ಗಾಯಕನಾಗಿ ಸಂಗೀತ ಕಾರ್ಯಕ್ರಮ ನೀಡುತ್ತಿರುವ ಸನ್ನಿವೇಶದ ಫೋಟೊವೊಂದನ್ನು ಗಣೇಶ್ ಈಗ ತಮ್ಮ ಟ್ವಿಟರ್ ಖಾತೆಯಲ್ಲಿ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.
ಸಿಂಪಲ್ ಸುನಿ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಗಣೇಶ್ ರಿಯಾಲಿಟಿ ಷೋನಲ್ಲಿ ಭಾಗವಹಿಸುವ ಸ್ಪರ್ಧಿಯಾಗಿ ನಟಿಸಿದ್ದಾರೆ. ಬೆಂಗಳೂರಿನಲ್ಲಿ ಯೋಜಿಸಿದ್ದ ಚಿತ್ರೀಕರಣ ಭಾಗವು ಕಂಠೀರವ ಸ್ಟುಡಿಯೊದಲ್ಲಿ ಈಗಷ್ಟೇ ಮುಗಿದಿದೆ. ಚಿತ್ರದ ಹಾಡುಗಳ ಚಿತ್ರೀಕರಣಕ್ಕೆ ಹೊರ ರಾಜ್ಯ ಅಥವಾ ಹೊರ ದೇಶಕ್ಕೆ ಹೋಗುವ ಯೋಜನೆ ಇತ್ತು. ಈಗ ಎಲ್ಲೆಡೆ ‘ಕೋವಿಡ್– 19’ ಆತಂಕವಿರುವುದರಿಂದ ಸದ್ಯಕ್ಕೆಲ್ಲೂ ಹೊರಗಡೆಗೆ ಹೋಗದಿರಲಿ ನಿರ್ಧರಿಸಲಾಗಿದೆ. ಗಣೇಶ್ ನಟಿಸುತ್ತಿರುವ ‘ಗಾಳಿಪಟ–2’ ಚಿತ್ರದ ಚಿತ್ರೀಕರಣವೂ ಮುಂದಕ್ಕೆ ಹೋಗಿದೆ ಎನ್ನುತ್ತವೆ ಚಿತ್ರತಂಡದ ಮೂಲಗಳು.
ತಮಿಳು ಮತ್ತು ತೆಲುಗಿನಲ್ಲಿ ಜನಪ್ರಿಯತೆ ಗಳಿಸಿರುವ ನಟಿ ಸುರಭಿ ‘ಸಖತ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸುರಭಿ ಅವರು ಮೊದಲ ಹಂತದ ಚಿತ್ರೀಕರಣ ಮುಗಿಸಿಕೊಂಡು ಹೋಗಿದ್ದಾರೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಮತ್ತೊಬ್ಬ ನಾಯಕಿಗಾಗಿ ನಿರ್ಮಾಪಕರು ಹುಡುಕಾಟದಲ್ಲಿದ್ದಾರಂತೆ.
ಚಿತ್ರದಲ್ಲಿ ಶೋ ಡೈರೆಕ್ಟರ್ ಪಾತ್ರದಲ್ಲಿ ಹಾಸ್ಯ ನಟ ಗಿರಿ, ತೀರ್ಪುಗಾರರ ಪಾತ್ರದಲ್ಲಿ ಕುರಿಪ್ರತಾಪ್ ಮತ್ತು ರಘುರಾಮ್ ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟ ಸಾಧುಕೋಕಿಲ ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರ ಸಖತ್ ನಗೆಬುಗ್ಗೆಯನ್ನು ಉಕ್ಕಿಸಲಿದೆಯಂತೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.