ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಹೆಯೊಳಗೆ ಗೋಲ್ಡನ್‌ಸ್ಟಾರ್‌ ಗಣೇಶ!

Last Updated 28 ಸೆಪ್ಟೆಂಬರ್ 2022, 9:21 IST
ಅಕ್ಷರ ಗಾತ್ರ

ಗೋಲ್ಡನ್‌ ಸ್ಟಾರ್‌ ಗಣೇಶ್‌ ಸದ್ಯ ಕೀನ್ಯಾದ ಗುಹೆಯೊಳಗೆ ಬಂಧಿಯಾಗಿದ್ದಾರೆ. ಆದರೆ ಅಭಿಮಾನಿಗಳು ಆತಂಕಪಡಬೇಕಾದ ಸುದ್ದಿ ಇದಲ್ಲ. ಬದಲಿಗೆ ಸಂಭ್ರಮಪಡಬೇಕಾದ ವಿಷಯ.

‘ಬಾನ ದಾರಿಯಲ್ಲಿ’ ಚಿತ್ರದ ಚಿತ್ರೀಕರಣಕ್ಕಾಗಿ ಕೀನ್ಯಾದಲ್ಲಿರುವ ಗಣೇಶ್‌, ಗುಹೆಯೊಳಗಿನ ವಿಡಿಯೊವೊಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. ‘ಶಿಲಾಯುಗ‘ ಎಂಬ ತಲೆಬರಹದೊಂದಿಗೆ ಹಂಚಿಕೊಂಡಿರುವ ಈ ವಿಡಿಯೊಕೆ ಅಭಿಮಾನಿಗಳು ಖುಷಿಯಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಜೋಪಾನ ಎಂಬ ಸಂದೇಶಗಳನ್ನು ನೀಡುತ್ತಿದ್ದಾರೆ.

ಕೀನ್ಯಾದ ಪುಟ್ಟಮಕ್ಕಳ ಜೊತೆ ಬೀದಿಯಲ್ಲಿ ಡ್ಯಾನ್ಸ್‌ ಮಾಡುತ್ತಿರುವ ವಿಡಿಯೊವನ್ನು ಕೂಡ ಗಣೇಶ್‌ ಹಂಚಿಕೊಂಡಿದ್ದರು. ಇದಕ್ಕೂ ಕೂಡ ಅಭಿಮಾನಿಗಳು ಖುಷಿಖುಷಿಯಾಗಿ ಪ್ರತಿಕ್ರಿಯಿಸಿದ್ದರು. ಕೀನ್ಯಾದ ಸ್ಥಳಗಳನ್ನು ಎಂಜಾಯ್‌ ಮಾಡುತ್ತಿರುವ ಗೋಲ್ಡನ್‌ಸ್ಟಾರ್‌, ಅಲ್ಲಿನ ವಿಭಿನ್ನವಾದ ಅನುಭವಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಗಣೇಶ್‌ ಕ್ರಿಕೆಟಿಗನಾಗಿ ಕಾಣಿಸಿಕೊಂಡಿರುವ ‘ಬಾನ ದಾರಿಯಲ್ಲಿ’ ಚಿತ್ರ ಎರಡು ಹಂತಗಳ ಶೂಟಿಂಗ್‌ ಮುಗಿಸಿದೆ. ಇದೀಗ ಮೂರನೇ ಹಂತದ ಶೂಟಿಂಗ್‌ಗೆ ಆಫ್ರಿಕಾ ಪ್ರವಾಸದಲ್ಲಿದೆ. ಇದು ಪ್ರೀತಂ ಗುಬ್ಬಿ ನಿರ್ದೇಶನದ ಚಿತ್ರ.

ಕ್ರೀಡಾ ವಿಷಯದ ಕಥಾ ವಸ್ತುವನ್ನಿಟ್ಟುಕೊಂಡು ಚಿತ್ರ ಮೂಡಿಬರಲಿದೆ. ನಾಯಕಿ ರುಕ್ಮಿಣಿ ವಸಂತ್‌ ಇಲ್ಲಿ ಈಜುಗಾರ್ತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಜುಡುಗೆ ಧರಿಸಿರುವ ಅವರ ಚಿತ್ರಗಳು ಈಗಾಗಲೇ ಜಾಲತಾಣಗಳಲ್ಲಿ ಗಮನ ಸೆಳೆದಿವೆ.

ಈ ಚಿತ್ರದ ಕಥೆ ಪ್ರೀತಾ ಜಯರಾಂ ಅವರದು. ಮಾಸ್ತಿ ಸಂಭಾಷಣೆ, ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಅಭಿಲಾಷ್ ಕಲ್ಲತ್ತಿ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. ರೀಶ್ಮಾ ನಾಣಯ್ಯ, ರಂಗಾಯಣ ರಘು ತಾರಾಗಣದಲ್ಲಿದ್ದಾರೆ. ಶ್ರೀವಾರಿ ಟಾಕೀಸ್ ಲಾಂಛನದಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT