ಶನಿವಾರ, ಜನವರಿ 18, 2020
26 °C

ಹಂಗಾಮ 2 ಚಿತ್ರೀಕರಣದಲ್ಲಿ ಶಿಲ್ಪಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

2003ರಲ್ಲಿ ಬಿಡುಗಡೆಯಾದ ‘ಹಂಗಾಮ’ ಚಿತ್ರದ ಸೀಕ್ವೆಲ್‌ ತೆರೆಗೆ ಬರಲಿದ್ದು, ಇದರಲ್ಲಿ ಮೀಜಾನ್‌ ಜೆಫ್ರಿ ನಾಯಕನಾಗಿ ನಟಿಸುತ್ತಿದ್ದಾರೆ. ಅವರಿಗೆ ಜೋಡಿಯಾಗಿ ನಟಿಸುತ್ತಿರುವವರು ಕನ್ನಡದ ನಟಿ ಪ್ರಣೀತಾ ಸುಭಾಷ್‌.

ಈ ಚಿತ್ರದಲ್ಲಿ ಮೀಜಾನ್‌– ಪ್ರಣೀತಾ ಜೋಡಿ ಜೊತೆಗೆ ಪರೇಶ್‌ ರಾವಲ್‌ ಹಾಗೂ ಶಿಲ್ಪಾ ಶೆಟ್ಟಿ ಜೋಡಿಯೂ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಲಿದ್ದಾರೆ. ಈ ಚಿತ್ರದ ಫಸ್ಟ್‌ ಪೋಸ್ಟರ್‌ ಈಗಾಗಲೇ ಬಿಡುಗಡೆಯಾಗಿದೆ. ಕೆಲ ವರ್ಷಗಳಿಂದ ಶಿಲ್ಪಾ ಶೆಟ್ಟಿ ನಟನೆಯಿಂದ ಕೊಂಚ ದೂರವಾಗಿದ್ದರು. ಆದರೆ ಯೋಗ ಸಂಬಂಧಿತ ಕಾರ್ಯಕ್ರಮ, ಅಡುಗೆ ಷೋಗಳಿಂದ ಅವರು ಯಾವಾಗಲೂ ಸುದ್ದಿಯಲ್ಲಿರುತ್ತಿದ್ದರು. ಈಗ ಹಿರಿಯ ನಟ ಪರೇಶ್‌ ರಾವಲ್‌ ಜೊತೆ ನಗಿಸಲು ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

‘ಹಂಗಾಮ’ ಚಿತ್ರದಲ್ಲಿ ಅಕ್ಷಯ್‌ ಖನ್ನಾ, ಪರೇಶ್‌ ರಾವಲ್‌, ಶಕ್ತಿ ಕಪೂರ್‌ ನಟಿಸಿದ್ದರು. ಆ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಹಿಟ್‌ ಗಳಿಸಿತ್ತು. ಈಗ 16 ವರ್ಷಗಳ ನಂತರ ಆ ಚಿತ್ರದ ಸೀಕ್ವೆಲ್‌ ಬರುತ್ತಿದೆ. ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವವರು ಪ್ರಿಯದರ್ಶನ್‌.

 ‘ಹಂಗಾಮ 2’ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಮೊದಲ ದಿನ ಚಿತ್ರೀಕರಣದಲ್ಲಿ ಪಾಲ್ಗೊಂಡ ವಿಡಿಯೊವನ್ನು ಶಿಲ್ಪಾ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಾಪಸ್‌ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸುತ್ತಿರುವುದರಿಂದ ಎಷ್ಟು ಖುಷಿಯಾಗಿದ್ದೇನೆ ಎಂಬುದನ್ನು ಅವರು ಅಭಿಮಾನಿಗಳ ಬಳಿ ಹಂಚಿಕೊಂಡಿದ್ದಾರೆ.

‘ಹೊಸ ಆರಂಭ ಹಂಗಾಮ 2. ಮೊದಲ ದಿನ. ನನ್ನ ನೆಚ್ಚಿನ ನಿರ್ದೇಶಕನ ಜೊತೆ ಕೆಲಸ ಮಾಡುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಎಲ್ಲಿ ಆರಂಭವಾಯಿತೋ ಅಲ್ಲಿಗೆ ವಾಪಸ್‌ ಹೋದಷ್ಟು ಖುಷಿಯಾಗುತ್ತಿದೆ’ ಎಂದು ಹೇಳಿಕೊಂಡಿದ್ದಾರೆ.  ‘ಹಂಗಾಮ’ ಸಿನಿಮಾದಲ್ಲಿ ಪರೇಶ್‌ ರಾವಲ್‌ ಅವರ ನಟನೆಯೇ ಚಿತ್ರದ ಮುಖ್ಯ ಆಕರ್ಷಣೆಯಾಗಿತ್ತು. ಈ ಹೊಸ  ಚಿತ್ರವನ್ನು ರತನ್‌ ಜೈನ್‌ ನಿರ್ಮಾಣ  ಮಾಡುತ್ತಿದ್ದಾರೆ. ಚಿತ್ರವು ಆಗಸ್ಟ್‌ 14ಕ್ಕೆ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಸಲ್ಮಾನ್ ಜೊತೆ ನಾನು ಡೇಟಿಂಗ್ ಮಾಡಿಲ್ಲ: ಶಿಲ್ಪಾಶೆಟ್ಟಿ

ಪ್ರತಿಕ್ರಿಯಿಸಿ (+)