ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರೋತ್ಸವಗಳ ಹಿಂದೆ ಮುಂದೆ...

Last Updated 22 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ನಮ್ಮ ಜನ ಫೆಸ್ಟಿವಲ್‍ನಲ್ಲಿ ಮುಗಿಬಿದ್ದು ಸಿನಿಮಾ ನೋಡುತ್ತಾರೆ. ಆದರೆ, ಅಷ್ಟೇ ಜನ ಥಿಯೇಟರ್‌ಗೆ ಬಂದು ಆ ಸಿನಿಮಾಗಳನ್ನು ನೋಡುವುದಿಲ್ಲ...

ಚಲನಚಿತ್ರೋತ್ಸವ ಎಂದರೆ ಒಂದು ದೇಶದ, ಪ್ರದೇಶದ ಭಾಷೆ, ಸಂಸ್ಕೃತಿ ಮತ್ತು ಸಾಮಾಜಿಕ ತಲ್ಲಣಗಳನ್ನು ಜಗತ್ತಿಗೆ ಪರಿಚಯ ಮಾಡಿಕೊಡುವ ವೇದಿಕೆ. ಹಾಗೆಯೇ ಜಗತ್ತಿನಾದ್ಯಂತ ಬದಲಾಗುತ್ತಿರುವ ಚಿತ್ರ ನಿರ್ಮಾಣದ ಪರಿಭಾಷೆಗಳನ್ನು ಗ್ರಹಿಸಲು ಒಂದು ಉತ್ತಮ ಅವಕಾಶ. ಬೆಂಗಳೂರು ಚಿತ್ರೋತ್ಸವ ಈ ನಿಟ್ಟಿನಲ್ಲಿ ಯಶಸ್ವಿಯಾಗಿದೆಯೆ? ಜಾಗತಿಕ ಮಟ್ಟದಲ್ಲಿ ತನ್ನ ಪ್ರಭಾವ ಬೀರುತ್ತಿದೆಯೆ... ಎನ್ನುವುದು ನಿಜಕ್ಕೂ ಕುತೂಹಲಕರ ಪ್ರಶ್ನೆಗಳು.

ಒಂದು ಕಾಲವಿತ್ತು. ಜಗತ್ತಿನಲ್ಲಿ ಮೂರು ಫಿಲ್ಮ್ ಫೆಸ್ಟಿವಲ್‍ಗಳು ವಿಶ್ವಖ್ಯಾತಿ ಹೊಂದಿದ್ದವು. ಅವುಗಳೆಂದರೆ ಕಾನ್, ಬರ್ಲಿನ್ ಮತ್ತು ವೆನಿಸ್ ಫಿಲ್ಮ್ ಫೆಸ್ಟಿವಲ್‌. ವೆನಿಸ್ ಸ್ವಲ್ಪ ಕಾಲ ನಿಂತಿತ್ತು. ಕಾನ್ ಇವತ್ತಿಗೂ ಸ್ವಲ್ಪಮಟ್ಟಿಗೆ ತನ್ನ ಮಹತ್ವವನ್ನು ಉಳಿಸಿಕೊಂಡಿದೆ. ಆಗೆಲ್ಲಾ ಕಾನ್ ಚಿತ್ರೋತ್ಸವಕ್ಕೆ ಸಿನಿಮಾಗಳ ಆಯ್ಕೆ ಮಾಡುವಾಗ, ಶಕ್ತಿಶಾಲಿ ರಾಜಕೀಯ ನಿಲುವುಗಳುಳ್ಳ, ವಿಮರ್ಶಾತ್ಮಕ ಧ್ವನಿಯ ಸಿನಿಮಾಗಳನ್ನೇ ಆಯ್ಕೆ ಮಾಡುತ್ತಿದ್ದರು.

ಬಹುತೇಕ ಪ್ರಭುತ್ವ ವಿರೋಧಿ ನಿಲುವುಗಳುಳ್ಳ ಎಡವಾದದ ಸಿನಿಮಾಗಳು. ಕಾನ್ ಚಿತ್ರೋತ್ಸವದಲ್ಲಿ ಪ್ರಶಸ್ತಿ ಬಂತೆಂದರೆ ಆ ಸಿನಿಮಾ ವಿಶ್ವಮಟ್ಟದಲ್ಲಿ ಮನ್ನಣೆ ಪಡೆಯುತ್ತಿತ್ತು. ಕಮರ್ಷಿಯಲ್ ಮನ್ನಣೆಯೂ ಸಿಗುತ್ತಿತ್ತು. ಗ್ಲಾಮರ್, ಮಾರ್ಕೆಟಿಂಗ್, ಟೂರಿಸಂ ಎಲ್ಲದಕ್ಕೂ ಅನುಕೂಲ. ಕಾನ್ ಪ್ರಶಸ್ತಿಯ ಮಹತ್ವ ಈಗ ಸ್ವಲ್ಪ ಕಡಿಮೆಯಾಗಿದೆ ಅನ್ನೋದು ನಿಜ. ಆದರೆ, ಕಾನ್‍ನಲ್ಲಿ ಮೊದಲಿನಿಂದಲೂ ಪ್ರಯೋಗಾತ್ಮಕ ಚಿತ್ರಗಳಿಗೆ ಹೆಚ್ಚು ಮಹತ್ವ ನೀಡುತ್ತಿದ್ದುದು ಗಮನಿಸಬೇಕಾದ ಅಂಶ. ವೆನಿಸ್ ಚಿತ್ರೋತ್ಸವದಲ್ಲಿ ಮಾನವೀಯ ಮೌಲ್ಯಗಳಿಗೆ, ಮನಸ್ಸಿನ ಸಂಘರ್ಷಗಳಿಗೆ ಒತ್ತು ಕೊಡುವ ಸಿನಿಮಾಗಳಿಗೆ ಆದ್ಯತೆ ಇತ್ತು.

ಅಮೆರಿಕದಲ್ಲಿ ನಡೆಯುವ ಫಿಲ್ಮ್ ಫೆಸ್ಟಿವಲ್‍ಗಳ ಧೋರಣೆಯೇ ಬೇರೆ. ಅಲ್ಲಿನ ಯಾವ ಫೆಸ್ಟಿವಲ್‍ಗಳೂ ವಿಷಯ ಆಧಾರಿತ ಸಿನಿಮಾಗಳಿಗೆ ಹೆಚ್ಚು ಮಹತ್ವ ನೀಡಲಿಲ್ಲ. ಇತ್ತೀಚೆಗೆ ಕೆಲವು ಕಡೆ ಆಗಿದೆ. ಬಹುಶಃ ಹಾಲಿವುಡ್ ಇರುವುದೇ ಅಮೆರಿಕದ ಸಮಸ್ಯೆ ಎಂದು ಕಾಣುತ್ತದೆ. ಮೊದಲಿನಿಂದಲೂ ಅಮೆರಿಕ ಮತ್ತು ಯೂರೋಪ್‍ನ ಸಿನಿಮಾಗಳ ಮಧ್ಯೆ ಜಗಳ ನಡೆಯುತ್ತಿತ್ತು. ಮೂಕಿ ಸಿನಿಮಾಗೆ ಧ್ವನಿ ಸೇರಿಕೊಂಡ ಬಳಿಕ ಇಂಗ್ಲಿಷ್‍ಗೆ ಹೆಚ್ಚು ಮಹತ್ವ ಬಂತು. ಹಾಲಿವುಡ್‍ನಲ್ಲಿ ಹಣದ ಶಕ್ತಿ, ಗ್ಲ್ಯಾಮರ್ ಹೆಚ್ಚು. ಆದರೆ ಫ್ರೆಂಚರಿಗೆ, ಪೋಲೆಂಡ್‍ನವರಿಗೆ ಇಂಗ್ಲಿಷ್ ಸಿನಿಮಾಗಳು ರುಚಿಸುತ್ತಿರಲಿಲ್ಲ.

ಚಲನಚಿತ್ರೋತ್ಸವಗಳಿಗೆ ಅವುಗಳದ್ದೇ ಆದ ಮಹತ್ವವಿದೆ. ಚಿತ್ರೋತ್ಸವಗಳನ್ನು ಮಾಡುವುದರಿಂದ, ಒಂದು ದೇಶದ ವಿಷಯಗಳು ಇತರ ದೇಶದ ಜನರಿಗೆ ಅರ್ಥವಾಗುತ್ತದೆ. ಅಲ್ಲಿನ ಸಾಮಾಜಿಕ, ರಾಜಕೀಯ ಪರಿಸ್ಥಿತಿಗೆ ಸಿನಿಮಾ ನಿರ್ಮಾಪಕರು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದು ಗೊತ್ತಾಗುತ್ತದೆ. ಅದರ ಜೊತೆಗೆ ಸಿನಿಮಾ ಮಾಡುವವರು ಬಳಸುತ್ತಿರುವ ಹೊಸ ಟೆಕ್ನಿಕ್‍ಗಳು, ಹೊಸ ಮಾದರಿಗಳೇನು ಎನ್ನುವುದೂ ಗೊತ್ತಾಗುತ್ತದೆ. ಈಗ ಹಾಲಿವುಡ್‍ನದ್ದೇ ಒಂದು ಮಾದರಿ. ಲ್ಯಾಟಿನ್ ಅಮೆರಿಕದ ದೇಶಗಳು, ಏಷ್ಯಾದ ದೇಶಗಳು ಹಾಲಿವುಡ್‍ನ ಈಡಿಯಂಗಳನ್ನು ಬಳಸುವುದಿಲ್ಲ. ಮೂರನೆಯದಾಗಿ ಆಯಾ ದೇಶ, ರಾಜ್ಯದ ಸಿನಿಮಾಗಳ ಮಾರುಕಟ್ಟೆ ವಿಸ್ತಾರಗೊಳ್ಳುತ್ತದೆ. ಬೆಂಗಳೂರು ಸಹಿತ ನಮ್ಮ ಭಾರತದ ಚಿತ್ರೋತ್ಸವಗಳು ಇದನ್ನು ತಕ್ಕಮಟ್ಟಿಗೆ ಚೆನ್ನಾಗಿಯೇ ಮಾಡುತ್ತಿವೆ.

ಎಲ್ಲ ದೇಶಗಳಲ್ಲೂ, ಎಲ್ಲ ಕಾಲಗಳಲ್ಲೂ ಒಂದು ತರಹದ ನೆರೇಟಿವ್ ಇರುತ್ತದೆ. ಅದು ಪ್ರಭುತ್ವದ ಪರವೂ ಇರಬಹುದು. ಅಥವಾ ಒಂದು ರಾಜ್ಯಕ್ಕೆ ಸಂಬಂಧಿಸಿದ್ದೂ ಇರಬಹುದು. ವ್ಯವಸ್ಥೆಯ ಪರ ಇರುವುದು ಜನರಿಗೆ ಸುಲಭದ ಕೆಲಸ. ಇದರಿಂದ ಸುಲಭವಾಗಿ ಒಪ್ಪಿಗೆಯೂ ಸಿಗುತ್ತದೆ; ಯಾವುದೇ ವಿರೋಧವೂ ಬರೋದಿಲ್ಲ. ಆದರೆ ನನ್ನ ಪ್ರಕಾರ, ಇದು ನೆರೇಷನ್ ಮುಚ್ಚಿಡುವ ಅಥವಾ ಮುಚ್ಚಿಡಲು ಆಶಿಸುವ ಕೆಲಸ. ‘ಐ ಡೇನಿಯಲ್ ಬ್ಲ್ಯಾಕ್’ ಎನ್ನುವ ಸಿನಿಮಾ ಅಲ್ಲಿಯ ಕಾನೂನುಗಳ ಬಗ್ಗೆ ಇರುವ ಲೋಪದೋಷಗಳನ್ನೆಲ್ಲ ಕಥೆಯ ಮೂಲಕ, ಪಾತ್ರಗಳ ಮೂಲಕ ಹೇಳುತ್ತಾ ಹೋಗುತ್ತದೆ. ಆದರೆ, ಪ್ರಭುತ್ವ ವಿರೋಧಿ ಅನ್ನುವುದು ಕೇವಲ ಒಂದು ಮಾನದಂಡ ಆಗಬಾರದು. ಅಲ್ಲಿಯ ವಾಸ್ತವವನ್ನು ಭಿನ್ನ ನೆಲೆಯಲ್ಲಿ ಹೇಳುತ್ತಾ ಹೋಗಬೇಕು. ಅಂತಹ ಸಿನಿಮಾಗಳು ಫೆಸ್ಟಿವಲ್‍ಗಳಲ್ಲಿ ಹೆಚ್ಚು ಹೆಚ್ಚು ಇರಬೇಕು.

ನಾನು ಫೆಸ್ಟಿವಲ್‍ನಲ್ಲಿ ಹುಡುಕುವುದು ಇಂತಹ ಸಿನಿಮಾಗಳನ್ನೇ. ಸತ್ಯವೊಂದನ್ನು ದೊಡ್ಡಮಟ್ಟದಲ್ಲಿ ಹೇಳುವುದು, ಸತ್ಯದ ಇನ್ನೊಂದು ಮುಖ ಇಲ್ಲಿದೆ ನೋಡಿ ಎಂದು ತೋರಿಸುವುದು ಮುಖ್ಯ. ಜೊತೆಗೆ ಸಿನಿಮಾ ನಿರ್ದೇಶಕನ ಅಭಿವ್ಯಕ್ತಿ ಕ್ರಮವೂ. ಒಂದು ತರಹ ಏಕತಾನತೆ ಆಗಿರುವುದನ್ನು ತಿದ್ದುವ ಕೆಲಸ ಆಗಬೇಕು. ಅದು ಬರೀ ಟೆಕ್ನಿಕಲ್ ಅಲ್ಲ. ಟೆಕ್ನಿಕ್ ಬದಲಾದಾಗ ನಮ್ಮ ನೋಡುವ ಕ್ರಮವೂ ಬದಲಾಗುತ್ತದೆ. ಗ್ರಹಿಕೆಯ ಕ್ರಮವೂ ಬದಲಾಗುತ್ತದೆ. ಅಂತಹ ಸಿನಿಮಾಗಳನ್ನು ನಾನು ಉತ್ಸವದಲ್ಲಿ ಹುಡುಕುತ್ತಿರುತ್ತೇನೆ.

ನಮ್ಮ ಜನ ಫೆಸ್ಟಿವಲ್‍ನಲ್ಲಿ ಮುಗಿಬಿದ್ದು ಸಿನಿಮಾ ನೋಡುತ್ತಾರೆ. ಆದರೆ, ಅಷ್ಟೇ ಜನ ಥಿಯೇಟರ್‌ಗೆ ಬಂದು ಆ ಸಿನಿಮಾಗಳನ್ನು ನೋಡುವುದಿಲ್ಲ. ಮೊನ್ನೆ ಆಸ್ಕರ್ ಪ್ರಶಸ್ತಿ ಪಡೆದ ‘ಪ್ಯಾರಾಸೈಟ್’ ಚಿತ್ರದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಇತ್ತೀಚೆಗೆ ಥಿಯೇಟರಿಗೆ ಆ ಸಿನಿಮಾ ಬಂದಿದೆ. ಎಷ್ಟು ಜನ ನೋಡಿದ್ದಾರೆ? ನಾಳೆ ಫೆಸ್ಟಿವಲ್‍ನಲ್ಲಿ ಮುಗಿಬಿದ್ದು ನೋಡುತ್ತಾರೆ! ಕೆಲವರು ಉತ್ಸವದಲ್ಲಿ ಒಂದೇ ದಿನ ನಾಲ್ಕೈದು ಸಿನಿಮಾಗಳನ್ನು ನೋಡುತ್ತಾರೆ. ಐದು ದಿನ ಬಿಟ್ಟು ನೋಡಿದರೆ ಎಲ್ಲ ಕಲಸುಮೇಲೋಗರ. ತಲೆಯಲ್ಲಿ ಏನೂ ಉಳಿಯುವುದಿಲ್ಲ. ನಾಟಕೋತ್ಸವದಲ್ಲೂ ಹೀಗೆಯೇ ಆಗುತ್ತದೆ. ಒಟ್ಟಿಗೇ 20 ಕಾದಂಬರಿ ಓದಿದ್ರೆ ಹೇಗಾಗುತ್ತೆ... ಹಾಗೆ!

‘ನಾನು ಐದು ಸಿನಿಮಾ ನೋಡಿದೆ’ ಅಂತಾರೆ. ಯಾಕೆ ನೋಡಿದಿರಿ? ಯಾವ ನಿರ್ದೇಶಕನ ಸಿನಿಮಾ ನೋಡಿದಿರಿ? ಆ ನಿರ್ದೇಶಕನ ಹಿನ್ನೆಲೆ ಏನು? ಒಂದೂ ಗೊತ್ತಿರುವುದಿಲ್ಲ. ಪ್ರೇಕ್ಷಕರು ಯಾವ ಸಿದ್ಧತೆಯನ್ನೂ ಮಾಡಿಕೊಂಡು ಬಂದಿರುವುದಿಲ್ಲ. ಚಿತ್ರೋತ್ಸವಗಳಲ್ಲಿ ರೆಟ್ರೊಸ್ಪೆಕ್ಟಿವ್ ಮತ್ತು ಓಲ್ಡ್ ಕ್ಲಾಸಿಕ್ಸ್ ಅನ್ನುವ ಎರಡು ವಿಭಾಗಗಳು ಇರುತ್ತವೆ. ಅದಕ್ಕೆ ಜನರೇ ಇರೋದಿಲ್ಲ. ರೆಟ್ರೋದಲ್ಲಿ ಒಬ್ಬ ನಿರ್ದೇಶಕನ ಅಷ್ಟೂ ಸಿನಿಮಾಗಳನ್ನು ನಾವು ಒಟ್ಟಿಗೇ ನೋಡಿದಾಗ ಅವನನ್ನು ನಾವು ಬೇರೆಯೇ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯ. ಮೂರು ವರ್ಷಗಳ ಹಿಂದೆ ಅಡೂರು ಗೋಪಾಲಕೃಷ್ಣನ್ ಚಿತ್ರೋತ್ಸವದಲ್ಲಿ ಒಂದು ಪ್ರಶ್ನಾವಳಿ ತಯಾರಿಸಿ ಕ್ಯೂನಲ್ಲಿ ನಿಂತವರಿಗೆ ಕೊಟ್ಟರು. ಯಾವ ಸಿನಿಮಾ, ಏಕೆ ನೋಡಬೇಕು ಅಂತಿದ್ದೀರಿ ಅನ್ನುವ ಪ್ರಶ್ನೆಗಳಿದ್ದವು. ದೊಡ್ಡ ಗಲಾಟೆ ಆಯಿತು- ಏನು ನಮಗೆ ಕ್ಲಾಸ್ ತಗೋತಿದೀರಾ ಅಂತ ಪ್ರಶ್ನಿಸಿದರು.

ಬರ್ಲಿನ್ ಚಿತ್ರೋತ್ಸವಕ್ಕೆ ನಾನು ಹೋದಾಗ, ಅಲ್ಲಿ ಮೊದಲೇ ಹೋಮ್‍ವರ್ಕ್ ಮಾಡಿ ಇಂತಹ ಸಿನಿಮಾ ಇಂತಹ ದಿನ ನೋಡ್ತೀನಿ ಅಂತ ಮೊದಲೇ ತಿಳಿಸಬೇಕಿತ್ತು. ಬುಕ್ ಮೈ ಷೋನಲ್ಲಿ ನಮ್ಮಲ್ಲಿ ಈ ಸಲ ಇದೇ ಆಗಬೇಕು. ಅದು ಎಷ್ಟರಮಟ್ಟಿಗೆ ಯಶಸ್ವಿ ಆಗುತ್ತೆ ಅನ್ನುವುದು ಗೊತ್ತಿಲ್ಲ. ಏಕೆಂದರೆ ಇಲ್ಲಿ ಬುಕ್ ಮೈ ಷೋ ಹೇಗೆ ನಿರ್ವಹಣೆ ಆಗುತ್ತದೆ ಎನ್ನುವುದೂ ಮುಖ್ಯ. ‘ಕಾಫಿ ಕುಡಿದಾಯಿತು, ಇನ್ನು ಯಾವುದಾದರೂ ಒಂದು ಸಿನಿಮಾ ನೋಡೋಣ’ ಅನ್ನುವ ತರಹ ಆಗಬಾರದು. ಪ್ರೇಕ್ಷಕ ಯಾವ ಸಿನಿಮಾವನ್ನು ತಾನು ಏಕೆ ನೋಡಬೇಕು ಎನ್ನುವುದನ್ನು ಮೊದಲೇ ನಿರ್ಧರಿಸಬೇಕು.

ನಮ್ಮಲ್ಲಿ ಕೆಲವರು ಆಕ್ಷೇಪ ಎತ್ತುವುದಿದೆ- ಕನ್ನಡದ ಯಾವ ಸಿನಿಮಾದ ಹೀರೊಗಳೂ ಚಿತ್ರೋತ್ಸವಕ್ಕೆ ಬಂದಿಲ್ಲ ಅಂತ. ಇದು ಇನ್ನೊಂದು ಅತಿರೇಕ. ಆಸಕ್ತಿ ಇದ್ದರೆ ಸ್ಟಾರ್‌ನಟರು ಅವರಷ್ಟಕ್ಕೇ ಸದ್ದಿಲ್ಲದೆ ಬಂದು ಸಿನಿಮಾ ನೋಡಿಕೊಂಡು ಹೋಗುತ್ತಾರೆ. ಜಗತ್ತಿನ ಯಾವ ಚಿತ್ರೋತ್ಸವಗಳಲ್ಲೂ ಸ್ಟಾರ್‌ನಟ, ನಟಿಯರು ಬಂದು ಸಿನಿಮಾ ನೋಡುವುದಿಲ್ಲ.

ಗೋವಾದಲ್ಲಿ ಆರಂಭದ ದಿನ ಕೆಲವು ಸ್ಟಾರ್‌ಗಳು ಬಂದು ಪತ್ರಿಕೆಗಳಲ್ಲಿ ಸುದ್ದಿ ಮಾಡಿ ಮಾಯವಾಗುತ್ತಾರೆ! ಮುಖ್ಯವಾಗಿ ಕ್ಯಾಮೆರಾ ಹಿಂದೆ ಕೆಲಸ ಮಾಡುವವರು ಚಿತ್ರೋತ್ಸವಕ್ಕೆ ಬರಬೇಕು. ವಿಮರ್ಶಕರು, ಸಿನಿಮಾ ವಿದ್ಯಾರ್ಥಿಗಳು, ತಂತ್ರಜ್ಞರು ಬಂದು ಕುಳಿತು ನೋಡಿದರೆ ಚಿತ್ರರಂಗಕ್ಕೆ ಏನಾದರೂ ಅನುಕೂಲ ಆಗಬಹುದು. ನಮ್ಮ ಫೆಸ್ಟಿವಲ್‍ಗಳಲ್ಲಿ ಸತ್ಯಜಿತ್ ರೇ, ಬಿಮಲ್ ರಾಯ್, ಋತ್ವಿಕ್ ಘಟಕ್ ಮುಂತಾದವರೆಲ್ಲ ಚಿತ್ರೋತ್ಸವಗಳಲ್ಲಿ ಬಂದು ಸಿನಿಮಾ ನೋಡಿದ್ದರಿಂದಲೇ ಉದ್ಯಮ ಬೆಳೆಯಿತು. ಅವರು ತಂತ್ರಜ್ಞರಾಗಿ ಬಂದವರು. ಕೇರಳದ ಫೆಸ್ಟಿವಲ್‍ಗಳಲ್ಲಿ ಈ ತರಹದ್ದು ನಡೆಯುತ್ತದೆ. ಅಲ್ಲಿ ಪ್ರೇಕ್ಷಕರು, ತಂತ್ರಜ್ಞರು ಬಂದು ಸಿನಿಮಾ ನೋಡಿ ನಿರ್ದೇಶಕರ ಜೊತೆಗೆ ಬೌದ್ಧಿಕ ಜಗಳವೂ ನಡೆಯುತ್ತದೆ.

ನಮ್ಮ ಕನ್ನಡ ಚಿತ್ರೋದ್ಯಮದಲ್ಲಿ ಉತ್ಸವವನ್ನು ಅಕಾಡೆಮಿಕ್ ಆಗಿ ನೋಡುವ ಸ್ಥಿತಿ ಇಲ್ಲ. ಚಿತ್ರೋತ್ಸವಕ್ಕೆ ಸಿನಿಮಾಗಳನ್ನು ಆಯ್ಕೆ ಮಾಡುವಾಗಲೂ ಹಾಗೆಯೇ. ಈ ಸಲ ಕೆಲವರು ‘ಅವರದ್ದೇ ಸಿನಿಮಾ ಪ್ರತಿವರ್ಷ ಏಕೆ ತೋರಿಸುತ್ತೀರಿ? ಹೊಸಬರಿಗೆ ಅವಕಾಶ ಕೊಡಿ’ ಎಂದರಂತೆ. ಇಲ್ಲಿ ಹಳಬರು, ಹೊಸಬರು ಎನ್ನುವುದು ಸರಿಯಲ್ಲ. ಒಳ್ಳೆಯ ಸಿನಿಮಾ ಯಾವುದು ಎನ್ನುವುದನ್ನಷ್ಟೇ ನೋಡಿ. ಸಿನಿಮಾ ಮಾಡಿದವನ ಜಾತಿ, ಪ್ರದೇಶ ಎಲ್ಲ ನೋಡಿಕೊಂಡು ಮಾಡುವುದು ಸರಿಯಲ್ಲ. ಶಾಲೆ, ಕಾಲೇಜುಗಳ ಪರೀಕ್ಷೆಯಲ್ಲಿ, ‘ಅವನಿಗೇ ಪ್ರತಿಸಲ ರ‍್ಯಾಂಕ್‌ ಏಕೆ ಕೊಡ್ತೀರಿ, ಬೇರೆಯವರಿಗೂ ಕೊಡಿ, ಹೊಸಬರಿಗೂ ರ‍್ಯಾಂಕ್‌ ಬರಲಿ’ ಎನ್ನುವುದಕ್ಕಾಗುತ್ತದೆಯೆ?

ನಮ್ಮಲ್ಲಿ ಕಮರ್ಷಿಯಲ್ ಚಿತ್ರಗಳ ಸ್ಪರ್ಧಾ ವಿಭಾಗ ಬೇರೆಯೇ ಇದೆ! ಸಿನಿಮಾ ಪರಿಭಾಷೆಯಲ್ಲಿ ಕಮರ್ಷಿಯಲ್ ಎನ್ನುವ ಶಬ್ದವೇ ಇಲ್ಲ. ಜನಪ್ರಿಯ ಮತ್ತು ಜನಪ್ರಿಯ ಅಲ್ಲದ್ದು ಎರಡೇ ವರ್ಗ. ಈ ಸಲ ಆಸ್ಕರ್ ಗೆದ್ದ ‘ಪ್ಯಾರಾಸೈಟ್’ ಮತ್ತು ಕಳೆದ ವರ್ಷದ ‘ಶಾಪ್ ಲಿಫ್ಟರ್ಸ್’ ಎರಡೂ ಸಿನಿಮಾಗಳು ಮೊದಲೇ ಸಿಕ್ಕಾಪಟ್ಟೆ ದುಡ್ಡು ಮಾಡಿದ ಸಿನಿಮಾಗಳು. ಅದನ್ನು ಪಾಪುಲರ್ ಅನ್ನಬೇಕೋ, ಕಮರ್ಷಿಯಲ್ ಅನ್ನಬೇಕೋ?

ಗೋವಾದಲ್ಲಿ ನಡೆದ ಚಿತ್ರೋತ್ಸವ

ಭಾರತದಲ್ಲಿ 70-80ರ ದಶಕದಲ್ಲಿ ಹೊಸ ಅಲೆಯ ಸಿನಿಮಾಗಳು ಬಂದವು ನಿಜ. ಆದರೆ, ನಮ್ಮ ನ್ಯಾಷನಲ್ ನೆರೇಟಿವ್ ಅಂತ ಇರುವುದು ಯೂರೋಪಿಯನ್ನರಿಗೆ ಬೇಕಾಗಲೇ ಇಲ್ಲ. ನಾವು ಎಮರ್ಜೆನ್ಸಿ ಬಗ್ಗೆ ಮಾತನಾಡಿದರೆ, ಅದೊಂದು ರೀಜನಲ್ ವಿಷಯ ಅನ್ನುವ ತರಹ ಅವರು ಪರಿಗಣಿಸಿದರು. ನಮ್ಮ ವರ್ಗ ಶ್ರೇಣೀಕರಣ, ಕೌಟುಂಬಿಕ ಕಲಹಗಳು, ಹೆಚ್ಚುತ್ತಿರುವ ಪಾಶ್ಚಿಮಾತ್ಯೀಕರಣ ಇದು ಯಾವುದೂ ಯೂರೋಪಿಗೆ ತಟ್ಟಲಿಲ್ಲ. ಅವರು ಭಾರತವನ್ನು ಅರ್ಥ ಮಾಡಿಕೊಂಡ ಕ್ರಮವೇ ಬೇರೆ ಇತ್ತು.

ನನ್ನ ಸಿನಿಮಾಗಳನ್ನು ನೋಡಿದವರೇ ಕೆಲವರು ‘ಇದು ಯಾವ ಇಂಡಿಯಾ, ಇದು ನಮಗೆ ಅರ್ಥ ಆಗ್ತಿಲ್ಲ’ ಎಂದರು. ಅವರಿಗೆ ಗೊತ್ತಿರುವುದು ಒಂದು ಬಡವರ ಇಂಡಿಯಾ, ಇನ್ನೊಂದು ರಾಜರ ಇಂಡಿಯಾ. ಈ ಸಿನಿಮಾಗಳಲ್ಲಿ ಬಡವರೂ ಇಲ್ಲ; ರಾಜರೂ ಇಲ್ಲ. ‘ನಾನು ನನ್ನ ಇಂಡಿಯಾದ ಬಗ್ಗೆ ಮಾತನಾಡ್ತೀನಿ. ನಿಮಗೆ ನಿಮ್ಮ ಇಂಡಿಯಾ ಬೇಕಿದ್ದರೆ ಬೇರೆ ಸಿನಿಮಾಗಳನ್ನು ನೋಡಿ’ ಎಂದೆ. ರವೀಂದ್ರನಾಥ ಟ್ಯಾಗೋರ್ ಬರೆದ ಗೀತಾಂಜಲಿಯನ್ನು ಅವರು ಗ್ರೇಟ್ ಎಂದು ಪರಿಗಣಿಸಿದರು.ಆದರೆ ಟ್ಯಾಗೋರರ ಅತ್ಯುತ್ತಮ ಕಾದಂಬರಿ ‘ಗೋರಾ’ ಬಂದಾಗ ಅದು ಮುಖ್ಯ ಅನ್ನಿಸಲಿಲ್ಲ. ಭಾರತೀಯರಿಗೆ ಗೀತಾಂಜಲಿಗಿಂತ ಗೋರಾನೆ ಬಹಳ ಮುಖ್ಯವಾಗಿ ಕಾಣಿಸುತ್ತದೆ. ನಮ್ಮಲ್ಲಿನ ಜಾತಿ ವ್ಯವಸ್ಥೆ, ಸಾಮಾಜಿಕ ಸಂರಚನೆ ಅವರಿಗೆ ಅರ್ಥವೇ ಆಗುವುದಿಲ್ಲ.

ಆಸ್ಕರ್ ಪ್ರಶಸ್ತಿಯ ತೀರ್ಪುಗಾರರು ನಮ್ಮ ಸಿನಿಮಾಗಳನ್ನು ನೋಡಲೂ ಬರುವುದಿಲ್ಲ. ನೋಡದೆ ಮಾರ್ಕ್ ಕೊಡುವಂತಿಲ್ಲ. ‘ಲಗಾನ್’ ಸಿನಿಮಾ ಬಂದಾಗ ಜ್ಯೂರಿಗಳು ಆ ಸಿನಿಮಾ ನೋಡುವಂತೆ ಮಾಡಲು ತುಂಬ ದುಡ್ಡು ಖರ್ಚು ಮಾಡಬೇಕಾಯಿತು. ಅದೇ ಮಲಯಾಳ ಸಿನಿಮಾ ‘ಆದಮಿಂಡೆ ಮಗನ್ ಅಬೂ’ ಸ್ಪರ್ಧೆಗೆ ಹೋದಾಗ ನಿರ್ಮಾಪಕರಿಗೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ. ನಮ್ಮ ಭಾರತದ ಫಿಲಂ ಫೆಡರೇಷನ್‍ನವರೂ ಹಾಗೆಯೇ- ನಮ್ಮ ದೇಶೀಯ ಸಿನಿಮಾಗಳನ್ನು ಸರಿಯಾಗಿ ಪ್ರೊಜೆಕ್ಟ್ ಮಾಡುವುದಿಲ್ಲ. ನಮ್ಮಲ್ಲಿ ಹಿಂದಿಯ ‘ಗುರು’, ‘ನಾಯಕ್’ ಮುಂತಾದ ಎವರೇಜ್ ಸಿನಿಮಾಗಳನ್ನಷ್ಟೇ ಪ್ರೊಜೆಕ್ಟ್ ಮಾಡುತ್ತಾರೆ. ಅಲ್ಲಿನವರಿಗೆ ಇಂಡಿಯಾ ಅಂದರೆ ಇಷ್ಟೇ ಎನ್ನುವ ಅಭಿಪ್ರಾಯ ಬರಲು ಇದೂ ಒಂದು ಕಾರಣ. ಹಾಗೆ ನೋಡಿದರೆ ‘ಸ್ಲಂ ಡಾಗ್ ಮಿಲಿಯನೇರ್’ ನಮ್ಮ ಸಿನಿಮಾ ಅಲ್ಲ. ಅದು ಭಾರತದ ಕುರಿತ ಅವರ ಗ್ರಹಿಕೆ, ನಮ್ಮಲ್ಲಿ ಒಂದೇ ಒಂದು ಸಿನಿಮಾ ಆಸ್ಕರ್‌ನಲ್ಲಿ ಪ್ರಶಸ್ತಿ ಬರಬಹುದಾಗಿದ್ದು ಅಂದರೆ ‘ಚಾರುಲತಾ’. ಅದು ಅವರಿಗೆ ಅರ್ಥವೇ ಆಗಲಿಲ್ಲ.

ಇದೇ ಸಮಸ್ಯೆ ಇರಾನ್‍ಗೂ ಇದೆ. ಆದರೆ ಅಲ್ಲಿಯದ್ದು ‘ಕ್ಲೋಸ್ಡ್ ಸೊಸೈಟಿ’ ಮುಂತಾದ ಅಪಕಲ್ಪನೆಗಳು ಪಶ್ಚಿಮದವರಿಗೆ ಇದ್ದದ್ದು ಇರಾನ್‍ಗೆ ಅನುಕೂಲ ಆಯಿತು. ಜೊತೆಗೆ ಇರಾನ್ ನಿರ್ಮಾಪಕರು ತಮ್ಮ ಸಿನಿಮಾಗಳಲ್ಲಿ ವಿಭಿನ್ನ ಈಡಿಯಂಗಳನ್ನು ಬಳಸಿದರು. ನೇರವಾಗಿ ಬಹಳ ಸರಳವಾಗಿ ಮನುಷ್ಯ ಸಂಬಂಧಗಳನ್ನು ಮತ್ತು ಅದು ತಂದೊಡ್ಡುವ ಆತಂಕಗಳನ್ನು ಹೇಳತೊಡಗಿದರು. ಯೂರೋಪ್ ಅಷ್ಟುಹೊತ್ತಿಗೆ ಇಮೋಷನಲಿಸಂ ಎನ್ನುವದೇ ತಪ್ಪು ಎಂದು ನಿರ್ಧಾರಕ್ಕೆ ಬಂದುಬಿಟ್ಟಿತ್ತು. ಆದರೆ, ಇರಾನ್‍ನವರು ಅದನ್ನು ತಂದುಕೊಟ್ಟರು. ಇದು ಬಹಳ ಜನರಿಗೆ ಮನಮುಟ್ಟಿತು. ಮತ್ತೆ ಎಷೋಷನಲಿಸಂ ತರಬೇಕು ಅನ್ನಿಸಿತು.

ಚೀನಾದಲ್ಲಿ ಮಾವೊ ಯುಗ ಮುಗಿದ ಬಳಿಕ ಬಂದ ಚಿತ್ರಗಳು ಮಾವೋ ಯುಗವನ್ನು ಚಿಂದಿ ಮಾಡಿದವು. 80ರ ದಶಕದ ಲ್ಯಾಟಿನ್ ಅಮೆರಿಕನ್ ಸಿನಿಮಾಗಳನ್ನು ಗಮನಿಸಿ- ಪೊಲಿಟಿಕಲ್ ನಿಲುವು ಮತ್ತು ವಿಷಯವನ್ನು ನೋಡುವ ಅವರ ಕ್ರಮ. ಅದು ಅಮೆರಿಕನ್ ಸಿನಿಮಾಗಳಿಗಿಂತ ತುಂಬ ಭಿನ್ನವಾಗಿದ್ದವು. ಆ ಕಾಲದ ಎಲ್ಲ ಪ್ರಮುಖ ಸಿನಿಮಾ ಮಾಡುವವರೂ ಹೊಸ ರೀತಿಯ ಕಥೆಯನ್ನು ಕಟ್ಟುವ ಕ್ರಮವನ್ನು ಹೇಳಿಕೊಟ್ಟರು. ಅದರಲ್ಲಿ ಯಾವುದೇ ತರಹದ ರಂಜನೆ ವೈಭವೀಕರಣ ಇಲ್ಲ.

ಅಮ್ರ ಏಕ್ತಾ ಸಿನಿಮಾ ಬನಬೊ (ದಿ ಇನೊಸೆನ್ಸ್‌) (ಬಂಗ್ಲಾದೇಶ) ಚಿತ್ರದ ದೃಶ್ಯ

ಭಾರತದ ಸಿನಿಮಾಗಳ ದೊಡ್ಡ ಸಮಸ್ಯೆ ಎಂದರೆ ನಮ್ಮ ಸ್ಟ್ರಕ್ಚರ್. ನಾವು ಇಮೋಷನ್ಸ್‌ಗೇ ಹೆಚ್ಚು ಒತ್ತು ಕೊಡ್ತೀವಿ, ಮ್ಯೂಸಿಕ್ ಹಾಕ್ತೀವಿ. ಇರಾನಿಯನ್ ಸಿನಿಮಾ, ಚೀನಾದ ಸಿನಿಮಾಗಳನ್ನು ಏಷ್ಯನ್ ಸಿನಿಮಾ ಎಂದು ಪರಿಗಣನೆ ಮಾಡಿದರೂ ಅವರು ಮ್ಯೂಸಿಕ್ ಹಾಕೋದೇ ಇಲ್ಲ. ನಾವು ಇಮೋಷನ್ಸ್ ಕಡಿಮೆ ಮಾಡುವುದಿಲ್ಲ. ಏಕೆಂದರೆ ನಮ್ಮದು ದೊಡ್ಡ ಉದ್ಯಮ. ನಾವು ನಮ್ಮ ವೀಕ್ಷಕರಿಗಾಗಿ ಸಿನಿಮಾ ಮಾಡ್ತೀವಿ. ಹೊರದೇಶದ ವೀಕ್ಷಕರಿಗೆ ಅಲ್ಲ. ಇರಾನ್‍ನ ನಿರ್ದೇಶಕರ ಜೊತೆಗೆ ಮಾತನಾಡುತ್ತಿದ್ದಾಗ, ‘ನಮ್ಮ ಸಿನಿಮಾಗಳನ್ನು ಇರಶನ್‍ನಲ್ಲಿ ನೋಡಲ್ಲ, ಹೊರಗಡೆಯವರೇ ನೋಡ್ತಾರೆ’ ಎನ್ನುತ್ತಿದ್ದರು. ಇದೊಂದು ಜಾಗತಿಕ ವಿದ್ಯಮಾನ. ನಮ್ಮಲ್ಲಿ ಸತ್ಯಜಿತ್ ರೇ ಸಿನಿಮಾಗಳನ್ನು ಇಲ್ಲಿನವರು ನೋಡಲಿಲ್ಲ, ಹೊರಗಡೆಯವರು ಹೆಚ್ಚು ನೋಡಿದ್ರು.

ನಮ್ಮಲ್ಲಿ ಸಿನಿಮಾದ ಮಾರ್ಕೆಟಿಂಗ್ ಹೇಗೆ ಆಗಿದೆ, ಮೀಡಿಯಾ ಕವರೇಜ್ ಎಷ್ಟು ಸಿಕ್ಕಿದೆ ಎಂದು ನೋಡುತ್ತಾರೆ. ಆ ಕಾರಣಕ್ಕೇ ಗೋವಾ ಫೆಸ್ಟಿವಲ್‍ನ ಪ್ರಶಸ್ತಿ ಮೊತ್ತವನ್ನು ₹ 40 ಲಕ್ಷಕ್ಕೂ ಹೆಚ್ಚಿಗೆ ಏರಿಸಿದರು. ಮೊದಲು ನಾವು ಇಲ್ಲಿ ಕೊಡುತ್ತಿದ್ದ ಎರಡು- ಮೂರು ಲಕ್ಷ ರೂಪಾಯಿಗಳೆಲ್ಲ ಡಾಲರ್ ಲೆಕ್ಕದಲ್ಲಿ ಏನೇನೂ ಅಲ್ಲ. ಆದರೆ ನಮ್ಮ ಫೆಸ್ಟಿವಲ್‍ಗಳಲ್ಲಿ ಪ್ರಶಸ್ತಿ ಸಿಕ್ಕಿದ್ರೆ ಆ ಸಿನಿಮಾಕ್ಕೆ ಟಿ.ವಿ. ರೈಟ್ಸ್ ಸಿಗಲ್ಲ. ಜನರೂ ನೋಡುವುದಿಲ್ಲ. ಅದೊಂದು ಅನನುಕೂಲ ನಮಗೆ. ‘ಪ್ಯಾರಾಸೈಟ್’ ಚಿತ್ರಕ್ಕೆ ಕಾನ್, ಆಸ್ಕರ್ ಪ್ರಶಸ್ತಿಗಳೆಲ್ಲವೂ ಬಂದವು. ಆದರೆ ಅದಕ್ಕೂ ಮೊದಲೇ ಥಿಯೇಟರ್‌ನಲ್ಲಿ ಯಶಸ್ವಿಯಾಗಿ, ಅದರ ಹತ್ತರಷ್ಟು ದುಡ್ಡು ನಿರ್ಮಾಪಕರಿಗೆ ಬಂದಿತ್ತು.
ನಾನಂತೂ ಇಲ್ಲಿಯ ಮುಖ್ಯವಾಹಿನಿಯ ಸಿನಿಮಾಗಳನ್ನು ಮಾಡುವುದಿಲ್ಲ. ಮುಖ್ಯವಾಹಿನಿಯ ಸಿನಿಮಾಗಳಲ್ಲಿ ವ್ಯವಸ್ಥೆಯ ಪರವಾಗಿರುವ ಮೌಲ್ಯಗಳನ್ನು ಪ್ರಶ್ನಾತೀತವಾಗಿ ಎತ್ತಿ ಹಿಡಿಯುತ್ತಾರೆ. ಈಗ ರಾಷ್ಟ್ರೀಯತೆಯ ಪ್ರಶ್ನೆಯನ್ನೇ ತೆಗೆದುಕೊಳ್ಳಿ. ಏನದು? ಇದರಿಂದಾಗಿ ಉಂಟಾಗುವ ಉಸಿರುಗಟ್ಟುವ ಸ್ಥಿತಿಯ ಬಗ್ಗೆ ಯಾರೂ ಹೇಳುವುದಿಲ್ಲ. ದೇಶಪ್ರೇಮವನ್ನು ಎತ್ತಿ ಹಿಡಿಯುವ ಸಾಲು ಸಾಲು ಸಿನಿಮಾಗಳು ಬಂದವು. ಅವರಿಗೆ ದುಡ್ಡು ಮಾಡುವ ಅಗತ್ಯವಿತ್ತು. ಕಲೆ ಅನ್ನೋದು ವ್ಯವಸ್ಥೆ ಪರವೂ ಅಲ್ಲ, ವಿರುದ್ಧವೂ ಅಲ್ಲ ಎನ್ನುವ ನಂಬಿಕೆ ಒಂದಿದೆ. ನಾವು ಕ್ರಿಟಿಕಲ್ ಇನ್‍ಸೈಡರ್ಸ್. ಎಲ್ಲ ನಿಲುವುಗಳನ್ನು ಅನುಮಾನದಿಂದ ನೋಡ್ತೀವಿ ಅನ್ನುವುದು. ಒಂದು ವಿಷಯದ ಶಕ್ತಿ ಮತ್ತು ದೌರ್ಬಲ್ಯ ಎರಡನ್ನೂ ಗಮನಿಸಬೇಕು. ಜನಪ್ರಿಯ ಸಿನಿಮಾಗಳಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ.

ಕಮರ್ಷಿಯಲ್ ಮತ್ತು ಆರ್ಟ್ ಸಿನಿಮಾ ಅಂತ ಇಲ್ಲ. ಯಾವುದೇ ಸಿನಿಮಾ ಅದು ಒಳ್ಳೆಯ ಸಿನಿಮಾ ಆಗಿರಬೇಕು. ಫಿಲಂ ಫೆಸ್ಟಿವಲ್ ಎನ್ನುವುದು ಬರೀ ಮಜಾ ಮಾಡುವುದಕ್ಕಲ್ಲ. ಅದೊಂದು ಕಲಾತ್ಮಕ ಚಟುವಟಿಕೆ, ಸಾಂಸ್ಕೃತಿಕ ಚಟುವಟಿಕೆ. ಹೊಸಬರಿಗೆ ಅವಕಾಶ ಕೊಡಿ ಎನ್ನುವ ಮಾನದಂಡದಿಂದ ಉದ್ಯಮ ಬೆಳೆಯುವುದಿಲ್ಲ. ಸ್ಪರ್ಧಾತ್ಮಕ ಚಿತ್ರಗಳನ್ನು ಮಾಡಿದರಷ್ಟೇ ಬೆಳೆಯುವುದು.

ಬೆಂಗಳೂರು ಚಿತ್ರೋತ್ಸವ ಸದ್ಯದ ಮಟ್ಟಿಗೆ ಸರಿಯಾದ ಸಮಯದಲ್ಲೇ ನಡೆಯುತ್ತಿದೆ. ಫೆಬ್ರುವರಿಯಲ್ಲಿ ಹಲವು ಅನುಕೂಲಗಳಿವೆ. ಬೇರೆಲ್ಲ ದೇಶೀಯ ಚಿತ್ರೋತ್ಸವಗಳು ಮುಗಿದಿರುತ್ತವೆ. ಅಂತರರಾಷ್ಟ್ರೀಯ ಚಿತ್ರೋತ್ಸವಗಳು ಇನ್ನೂ ಆರಂಭ ಆಗಿರುವುದಿಲ್ಲ. ಡಿಸೆಂಬರ್ ರಜೆ ಮುಗಿಯುವುದರಿಂದ ಹೊರ ದೇಶಗಳ ಜನರು ಬರಲೂ ಅನುಕೂಲ. ಜೊತೆಗೆ ಇಲ್ಲಿಯ ಹವಾಮಾನವೂ ಸೂಕ್ತವಾಗಿದೆ. ಬರ್ಲಿನ್ ಉತ್ಸವ ಮಾತ್ರ ನಮ್ಮ ಜೊತೆಗೇ ನಡೆಯುವಂತಿದೆ. ಆದರೆ, ನಮ್ಮ ಉತ್ಸವದಲ್ಲಿ ವಿಚಾರ ಸಂಕಿರಣಗಳಿಗೆ, ಕಮ್ಮಟಗಳನ್ನು ನಡೆಸುವುದಕ್ಕೆ ಪ್ರತ್ಯೇಕ ಸ್ಥಳಾವಕಾಶ ಬೇಕು. ಚಲನಚಿತ್ರ ಅಕಾಡೆಮಿಯ ಕಾಂಪ್ಲೆಕ್ಸ್‌ನಲ್ಲಿ ದೊಡ್ಡ ಸಭಾಂಗಣದ ವ್ಯವಸ್ಥೆ ಶೀಘ್ರ ಆಗಬೇಕು. ಬೇಕಾದ ಸಿನಿಮಾಗಳನ್ನು ನೋಡಲು ಕಿಯೊಸ್ಕ್ ವ್ಯವಸ್ಥೆಯೂ ಬೇಕು. ಆ ಕಡೆಗೆ ಅಕಾಡೆಮಿ ಗಮನ ಹರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT