ಮಂಗಳವಾರ, ಜೂನ್ 28, 2022
21 °C

ಹೊಂಬಾಳೆ ಫಿಲಂಸ್‌ನಿಂದ ಹೊಸ ಸಿನಿಮಾ: ಯುವ ರಾಜ್‌ಕುಮಾರ್‌ಗೆ ಸಂತೋಷ್ ಆ್ಯಕ್ಷನ್ ಕಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕೆ.ಜಿ.ಎಫ್‌ ಚಾಪ್ಟರ್‌–2’ ಯಶಸ್ಸಿನ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್‌ ಸಾಲು ಸಾಲು ಸಿನಿಮಾ ನಿರ್ಮಾಣಕ್ಕೆ ಇಳಿದಿದೆ. ಇತ್ತೀಚೆಗಷ್ಟೇ ‘ಸೂರರೈ ಪೋಟ್ರು’ ಸಿನಿಮಾ ಖ್ಯಾತಿಯ ನಿರ್ದೇಶಕಿ ಸುಧಾ ಕೊಂಗರ ನಿರ್ದೇಶನದ ಹೊಸ ಸಿನಿಮಾ ನಿರ್ಮಾಣವನ್ನು ಘೋಷಿಸಿದ್ದ ಹೊಂಬಾಳೆ ಫಿಲ್ಮ್ಸ್‌, ಇದೀಗ ದೊಡ್ಮನೆಯ ಕುಡಿ ಯುವ ರಾಜ್‌ಕುಮಾರ್‌ ಅವರನ್ನು ನಾಯಕನಟನಾಗಿ ಬೆಳ್ಳಿಪರದೆಗೆ ಪರಿಚಯಿಸಲು ಸಜ್ಜಾಗಿದೆ. 

ಕೆಲ ವರ್ಷಗಳ ಹಿಂದೆಯೇ ಯುವ ರಾಜ್‌ಕುಮಾರ್‌ ಅವರ ಚೊಚ್ಚಲ ಸಿನಿಮಾ ‘ಯುವ ರಣಧೀರ ಕಂಠೀರವ’ ಸೆಟ್ಟೇರಿತ್ತು. ಆದರೆ ಈ ಸಿನಿಮಾ ಸದ್ಯಕ್ಕೆ ಮುಂದೂಡಲ್ಪಟ್ಟಿದೆ. ಬದಲಾಗಿ ಸಂತೋಷ್‌ ಆನಂದರಾಮ್‌ ನಿರ್ದೇಶಿಸಲಿರುವ ಹೊಸ ಸಿನಿಮಾ ಮುಖಾಂತರ ಹೀರೊ ಆಗಿ ಯುವ ರಾಜ್‌ಕುಮಾರ್‌ ಬೆಳ್ಳಿಪರದೆಗೆ ಹೆಜ್ಜೆ ಇಡಲಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಹೊಂಬಾಳೆ ಫಿಲ್ಮ್ಸ್‌, ‘ಹೊಂಬಾಳೆ ಸಂಸ್ಥೆಗೂ ಡಾ.ರಾಜ್‌ಕುಮಾರ್‌ ಕುಟುಂಬದ ನಡುವೆ ಇರುವ ಸಂಬಂಧದ ಮುಂದುವರಿದ ಭಾಗವಾಗಿ ನಾವು ನಮ್ಮ ಹೊಂಬಾಳೆ ಫಿಲ್ಮ್ಸ್‌ನಲ್ಲಿ ದೊಡ್ಮನೆಯ ಮೂರನೇ ತಲೆಮಾರಿನ ಯುವ ರಾಜ್‌ಕುಮಾರ್‌ರನ್ನು ನಾಯಕನಟನಾಗಿ ಬೆಳ್ಳಿಪರದೆಗೆ ಪರಿಚಯಿಸಲು ಹೆಮ್ಮೆ ಪಡುತ್ತೇವೆ. ಈ ಪ್ರಯತ್ನದಲ್ಲಿ ನಮ್ಮ ಸಂಸ್ಥೆಯಲ್ಲಿ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಸಂತೋಷ್‌ ಆನಂದರಾಮ್‌ರವರ ಸಾರಥ್ಯದಲ್ಲಿ ಈ ಚಿತ್ರವನ್ನು ನಿರ್ಮಿಸಲಿದ್ದೇವೆ’ ಎಂದು ಟ್ವೀಟ್‌ನಲ್ಲಿ ತಿಳಿಸಿದೆ.

ಓದಿ... ಹೊಸ ಸಿನಿಮಾ ಪ್ರಕಟಿಸಿದ ಹೊಂಬಾಳೆ ಫಿಲಂಸ್: ಸುಧಾ ಕೊಂಗಾರ ಆ್ಯಕ್ಷನ್‌ ಕಟ್ 

ಸಿನಿಮಾ ಶೀರ್ಷಿಕೆ, ಜಾನರ್‌ ಕುರಿತು ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಹಂಚಿಕೊಂಡಿಲ್ಲ. ಆದರೆ ಸಂತೋಷ್‌ ಆನಂದರಾಮ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಕಾರಣ ವಿಭಿನ್ನವಾದ ಕಥಾಹಂದರವನ್ನೇ ಸಿನಿಮಾ ಹೊಂದಿರಲಿದೆ ಎನ್ನಲಾಗಿದೆ. ‘ಅಭಿಮಾನದಿಂದ ಅಭಿಮಾನಕ್ಕಾಗಿ ಈ ನಮ್ಮ ಪಯಣ. ಇರಲಿ ನಿಮ್ಮ ಅಪ್ಪುಗೆ ಮಿಸ್‌ ಯೂ ಚಿಕ್ಕಪ್ಪ’ ಎಂದು ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರನ್ನು ನೆನೆದು ಯುವ ರಾಜ್‌ಕುಮಾರ್‌ ಟ್ವೀಟ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. 

ಹೊಂಬಾಳೆ ಫಿಲ್ಮ್ಸ್‌ ಜೊತೆ ಸಂತೋಷ್‌ ಆನಂದರಾಮ್‌ ಅವರ ನಾಲ್ಕನೇ ಚಿತ್ರ ಇದಾಗಿದೆ. ಪುನೀತ್‌ ರಾಜ್‌ಕುಮಾರ್‌ ನಟನೆಯ ‘ರಾಜಕುಮಾರ’, ‘ಯುವರತ್ನ’ ಹೊಂಬಾಳೆ ಫಿಲ್ಮ್ಸ್‌ನಡಿ ಮೂಡಿಬಂದಿತ್ತು. ನವರಸ ನಾಯಕ ಜಗ್ಗೇಶ್‌ ಅವರ ನಟನೆಯ ‘ರಾಘವೇಂದ್ರ ಸ್ಟೋರ್ಸ್‌’ ಸಿನಿಮಾವನ್ನೂ ಹೊಂಬಾಳೆ ನಿರ್ಮಾಣ ಮಾಡುತ್ತಿದ್ದು, ಇದರ ಚಿತ್ರೀಕರಣ ಅಂತಿಮ ಹಂತದಲ್ಲಿದೆ.

ಓದಿ...  ಕಿಮೋಥೆರಪಿ ವೇಳೆ ಸಂದರ್ಶನಕ್ಕೆ ಹಾಜರಾದ ಕ್ಯಾನ್ಸರ್‌ ಪೀಡಿತ ವ್ಯಕ್ತಿ: ಫೋಟೊ ವೈರಲ್

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು