ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೇಶಕ ರಾಜಮೌಳಿ ಸಿನಿಮಾ 'ಆರ್‌ಆರ್‌ಆರ್‌' ಶೂಟಿಂಗ್‌ಗೆ 50 ಮಂದಿ!

Last Updated 3 ಜೂನ್ 2020, 9:16 IST
ಅಕ್ಷರ ಗಾತ್ರ

ತೆಲಂಗಾಣ ಸರ್ಕಾರವು ಈಗಾಗಲೇ ಸಿನಿಮಾ ಶೂಟಿಂಗ್‌ಗೆ ಅನುಮತಿ ನೀಡಿದೆ. ಅಲ್ಲದೇ ಎಲ್ಲಾ ರಾಜ್ಯಗಳಂತೆ ಇಲ್ಲಿಯೂ 50 ಮಂದಿಯಷ್ಟೇ ಶೂಟಿಂಗ್‌ನಲ್ಲಿ ಭಾಗವಹಿಸಬೇಕು ಎಂಬುದು ಸರ್ಕಾರದ ಆದೇಶವಾಗಿದೆ.

ಆದರೆ ಯಶ‌ಸ್ವಿ ನಿರ್ದೇಶಕ ರಾಜಮೌಳಿಗೆ ಈ ವಿಷಯ ತಲೆನೋವಾಗಿ ಪರಿಣಮಿಸಿದೆ. ಯಾಕೆಂದರೆ ರಾಜಮೌಳಿ ಮೊದಲಿನಿಂದಲೂ ಆಡಂಬರ ಹಾಗೂ ಹೆಚ್ಚು ಜನರಿಂದ ಕೂಡಿರುವ ಚಿತ್ರ ನಿರ್ಮಾಣಕ್ಕೆ ಹೆಸರುವಾಸಿ. ಅವರ ಆರ್‌ಆರ್‌ಆರ್‌ ಸಿನಿಮಾವೂ ಇದಕ್ಕೆ ಹೊರತಾಗಿಲ್ಲ. ಆ ಕಾರಣಕ್ಕೆ ಈ ಹೊಸ ನಿಯಮ ಬಾಹುಬಲಿ ನಿರ್ದೇಶಕರ ಸಿನಿಮಾಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ ಎನ್ನುತ್ತಿವೆ ಟಾಲಿವುಡ್‌ ಮೂಲಗಳು.

ಸಾಮಾನ್ಯ ಸೀನ್‌ಗೂ ಅತೀ ಹೆಚ್ಚು ಜನರನ್ನು ಸೇರಿಸಿಕೊಂಡು ಶೂಟಿಂಗ್‌ ಮಾಡುವುದು ರಾಜಮೌಳಿಗೆ ಅಭ್ಯಾಸ. ಆ ಕಾರಣಕ್ಕೆ ಆರ್‌ಆರ್‌ಆರ್ ಶೂಟಿಂಗ್‌ ಹೇಗೋ ಏನೋ ಎಂಬ ಕುತೂಹಲ ಟಾಲಿವುಡ್‌ನಲ್ಲಿ ಮೂಡಿದೆ.

ಮೂಲಗಳ ಪ್ರಕಾರ ಸೀಮಿತ ಜನರೊಂದಿಗೆ ಶೂಟಿಂಗ್ ಮಾಡುವ ಅನುಕ್ರಮಗಳನ್ನು ಆರ್‌ಆರ್‌ಆರ್‌ ಚಿತ್ರತಂಡ ಈಗಾಗಲೇ ಸಿದ್ಧಪಡಿಸಿವೆಯಂತೆ. ಕೊರೊನಾ ಬಿಕ್ಕಟ್ಟು ಶಮನವಾಗುವವರೆಗೂ ರಾಜಮೌಳಿ ಈ ಅನುಕ್ರಮಗಳನ್ನು ಪಾಲಿಸಿ ಶೂಟಿಂಗ್‌ ನಡೆಸಲಿದ್ದಾರೆ.

₹350 ಕೋಟಿಯಷ್ಟು ಭಾರಿ ಮೊತ್ತದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ಬಹುಭಾಷೆಯಲ್ಲಿ ಬಿಡುಗಡೆಯಾಗಲಿದೆ. ಜ್ಯೂನಿಯರ್‌ ಎನ್‌ಟಿಆರ್‌ ಹಾಗೂ ರಾಮ್‌ಚರಣ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಈ ಸಿನಿಮಾ 2021ರ ಜನವರಿಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಮೊದಲು ಶೂಟಿಂಗ್‌ ಪೂರ್ಣಗೊಳಿಸಿ ನಂತರದ ಬಿಡುವಿನ ಸಮಯದಲ್ಲಿ ಸಿನಿಮಾ ಬಿಡುಗಡೆಯ ಬಗ್ಗೆ ಯೋಚಿಸಲಿದ್ದಾರಂತೆ ರಾಜಮೌಳಿ.

ಆರ್ಥಿಕ ಹಿಂಜರಿತ ಹಾಗೂ ಕೊರೊನಾ ಬಿಕ್ಕಟ್ಟಿನ ಕಾರಣದಿಂದ ರಾಜಮೌಳಿ ಹಾಗೂ ನಿರ್ಮಾಪಕ ದಾನಯ್ಯ ತೀವ್ರ ಸಂಕಟಕ್ಕೆ ಸಿಲುಕಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಎಲ್ಲಾ ಸಂಕಷ್ಟದ ನಡುವೆ 50 ಮಂದಿ ಮಾತ್ರ ಶೂಟಿಂಗ್‌ನಲ್ಲಿ ಭಾಗವಹಿಸಬೇಕು ಎಂಬ ಸೂಚನೆ ರಾಜಮೌಳಿಗೆ ನುಂಗಲಾರದ ತುತ್ತಾಗಿರುವುದು ಮಾತ್ರ ಸುಳಲ್ಲ.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕೊರೊನಾ ಕೇಸ್‌ಗಳ ಸಂಖ್ಯೆ ಕಡಿಮೆ ಇರುವ ಕಾರಣ ಕೇರಳದಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಿದೆ. ಆದರೆ ಶೂಟಿಂಗ್‌ ನಡೆಸುವ ಜಾಗದಲ್ಲಿ ಐವತ್ತಕ್ಕೂ ಅಧಿಕ ಮಂದಿ ಇರಬಾರದು ಎಂದು ಇಲ್ಲಿನ ಸರ್ಕಾರ ಕಟ್ಟುನಿಟ್ಟಾಗಿ ಆದೇಶ ಹೊರಡಿಸಿದೆ.

ಮಹಾರಾಷ್ಟ್ರ ಸರ್ಕಾರವೂ ಕೆಲವೊಂದು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವ ಮೂಲಕ ಧಾರಾವಾಹಿ ಹಾಗೂ ಸಿನಿಮಾ ಶೂಟಿಂಗ್‌ಗೆ ಅನುಮತಿ ಸೂಚಿಸಿದೆ. ಶೂಟಿಂಗ್‌ ಸೆಟ್‌ನಲ್ಲಿ ಅತೀ ಕಡಿಮೆ ಜನ ಇರಬೇಕು ಹಾಗೂ 65 ವರ್ಷ ಮೀರಿದ ವ್ಯಕ್ತಿಗಳಿಗೆ ಶೂಟಿಂಗ್‌ನಲ್ಲಿ ಭಾಗವಹಿಸಲು ಅವಕಾಶ ನೀಡಬಾರದು ಎಂಬುದು ಆ ಮಾರ್ಗದರ್ಶಿಯಲ್ಲಿನ ಪ್ರಮುಖ ಸೂತ್ರಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT