ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ಸಂಗಾತಿ ಎಸ್‌ಪಿಬಿ ಇಲ್ಲದೆ ಜೀವನ ಹೇಗೆ ಕಳೆಯಲಿ: ಹಂಸಲೇಖ

ಹಂಸಲೇಖ ಭಾವನಾತ್ಮಕ ನುಡಿ
Last Updated 25 ಸೆಪ್ಟೆಂಬರ್ 2020, 19:29 IST
ಅಕ್ಷರ ಗಾತ್ರ
ADVERTISEMENT
""

‘ನನ್ನ ಜೀವನ ಸಂಗಾತಿ ನನ್ನ ಪತ್ನಿಯಾಗಿದ್ದರೆ, ಸಿನಿಮಾ ಸಂಗಾತಿ ರವಿಚಂದ್ರನ್‌ ಹಾಗೂ ಸಂಗೀತದ ಸಂಗಾತಿ ಎಸ್‌ಪಿಬಿ ಒಬ್ಬರೇ ಆಗಿದ್ದರು. ಎಸ್‌ಪಿಬಿ ಇಲ್ಲದೆ ಉಳಿದ ಜೀವನ ಕಳೆಯುವುದು ನನ್ನ ಪಾಲಿಗೆ ತುಂಬಾ ಕಷ್ಟದ್ದು’ ಎಂದು ಸಂಗೀತ ನಿರ್ದೇಶಕ ‘ನಾದಬ್ರಹ್ಮ’ ಹಂಸಲೇಖ ಭಾವುಕರಾಗಿ ನುಡಿದಿದ್ದಾರೆ.

‘ಸಂಗೀತದಲ್ಲಿರುವ ಭಾವನಾತ್ಮಕ ಜಗತ್ತು ಬೇರೆಲ್ಲೂ ಇರುವುದಿಲ್ಲ.ಈ ಭಾವನಾತ್ಮಕ ಜಗತ್ತಿಗೆ ಎಸ್‌ಪಿಬಿ ಯಜಮಾನರಾಗಿದ್ದರು. ಇಂದು ಅವರು ನಮ್ಮನ್ನು ಬಿಟ್ಟು ಹೋಗಿದ್ದಾರೆ. ನಾನು ಅಕ್ಷರಶಃ ದಿಕ್ಕು ತೋಚದಂತಾಗಿದ್ದೇನೆ. ಎಸ್‌ಪಿಬಿಯಂತಹವರು ಐನೂರು ವರ್ಷಗಳಿಗೊಮ್ಮೆ ಹುಟ್ಟಬಹುದು. ಹುಟ್ಟಿದರೂ ಎಸ್‌ಪಿಬಿಯವರಿಗೆ ಸಿಕ್ಕಷ್ಟು ಅವಕಾಶಗಳು ಬೇರೆಯವರಿಗೆ ಸಿಗುವುದು ಕಷ್ಟ, ಸಿಕ್ಕಿದರೂ ಅವರಷ್ಟು ಚೆಂದವಾಗಿ ಬೇರೆಯವರಿಂದ ಬಳಸಿಕೊಳ್ಳಲೂ ಸಾಧ್ಯವಿಲ್ಲ.ಸೌಂದರ್ಯ, ವಿದ್ಯೆ, ಪ್ರತಿಭೆ ಈ ಮೂರನ್ನೂ ಹೊಂದಿದ್ದ ಅವರು ಐದು ದಶಕಗಳ ಕಾಲ ಚಿತ್ರೋದ್ಯಮದಲ್ಲಿದ್ದರು. ಜಗತ್ತಿನಯಾವ ಉದ್ಯಮದಲ್ಲೂ ಇಂತಹ ವ್ಯಕ್ತಿ ಕಾಣ ಸಿಗುವುದಿಲ್ಲ’ ಎಂದು ಹಂಸಲೇಖ ಬಣ್ಣಿಸಿದರು.

‘ಲೌಕಿಕದಲ್ಲಿದ್ದು, ಅಲೌಕಿಕಕ್ಕೆ ಹೋಗುತ್ತೀರಲ್ಲಾ ಇದು ಹೇಗೆ ಸಾಧ್ಯಗುರುಗಳೇ ?’ ಎಂದು ಒಮ್ಮೆ ಅವರನ್ನು ನಾನು ಕೇಳಿದ್ದೆ. ಆಗ ಅವರು, ‘ಪ್ರತಿಭೆ ಎನ್ನುವುದು ದೇವರು ಕೊಟ್ಟಿದ್ದೇ ಆದರೂ ಅದು ನಮಗೆ ಸ್ವಂತದ್ದೇ. ಅದನ್ನು ಹೆಚ್ಚು ಖರ್ಚು ಮಾಡದೆ ಸ್ವಲ್ಪ ಸ್ವಲ್ಪವೇ ಜಾಣತನದಿಂದ ವಿನಿಯೋಗಿಸುತ್ತಾ ಹೆಚ್ಚು ಕಾಲ ಸುಖ ಮತ್ತು ನೆಮ್ಮದಿಯಿಂದ ಬುದುಕುವುದು ಪ್ರತಿಭಾವಂತರ ಮುಖ್ಯ ಲಕ್ಷಣ. ನಾನು ಗೆದ್ದಿದ್ದರೆ ನನ್ನ ಲೌಕಿಕ ಜ್ಞಾನದಿಂದಷ್ಟೇ ಹೊರತು ಪ್ರತಿಭೆಯಿಂದ ಅಲ್ಲ. ಪ್ರಾದೇಶಿಕ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳು ಉದಯಿಸಿದಾಗ, ಆತುರಪಡಬೇಡಿ, ದುಡುಕಬೇಡಿ. ಪ್ರಾದೇಶಿಕ ರಂಗದಲ್ಲಿ ಪ್ರತಿಭೆಗಳು ಹುಟ್ಟುವುದು 25 ವರ್ಷಗಳಿಗೊಮ್ಮೆ ಅಷ್ಟೇ. ಇಳಯರಾಜ ಬಂದರೆಂದರೆ ಅವರದು 25 ವರ್ಷ, ಹಂಸಲೇಖ ಬಂದ ಎಂದರೆ ಅವರದು 25 ವರ್ಷ, ಎಸ್‌ಪಿಬಿ ಬಂದರೆ ಅವರೊಂದು 35 ವರ್ಷ ಇರುತ್ತಾರೆ. ಯಾರ‍್ಯಾರೋ ಬಂದರೆಂದು ಸ್ಪರ್ಧೆಗೆ ಬಿದ್ದು ಗೊಂದಲಕ್ಕೆ ಸಿಲುಕಬೇಡಿ,ಇದನ್ನು ಅರ್ಥ ಮಾಡಿಕೊಂಡು ಪ್ರತಿಭೆಯನ್ನು ಜಾಣತನದಿಂದ ಬಳಸಿಕೊಳ್ಳಿ ಎನ್ನುತ್ತಿದ್ದರು. ಎಸ್‌ಪಿಬಿ ಸದಾ ಎಚ್ಚರಿಕೆಯಿಂದ ಬದುಕುತ್ತಿದ್ದರು ಅಷ್ಟೇ ಅಲ್ಲ, ಜತೆಯಲ್ಲಿದ್ದವರನ್ನೂ ಎಚ್ಚರಿಕೆಯಿಂದ ಬದುಕಲು ಮಾರ್ಗದರ್ಶನ ನೀಡುತ್ತಿದ್ದರು’ ಎಂದುಅವರ ಜತೆಗಿನ ಒಡನಾಟವನ್ನು ಹಂಸಲೇಖ ಮೆಲುಕು ಹಾಕಿದರು.

‘ನಾನು ನಿರ್ದೇಶನ ಮಾಡಿದ ಚಿತ್ರದ ಒಂದು ಹಾಡನ್ನು ಹಾಡಿಸಲುಎಸ್‌ಪಿಬಿಯವರನ್ನು ನಾನು ಮೊದಲ ಬಾರಿಗೆ ಭೇಟಿ ಮಾಡಿದ್ದೆ, ಆ ಚಿತ್ರದ ‘ಆನೆಗೆ ಅಂಕುಶ ಬೇಡವೇ, ನಾಡಿಗೊಬ್ಬ ದೊರೆಯು ಬೇಡವೇ, ಮನೆಗೆ ಒಬ್ಬಒಡೆಯ ಬೇಡವೇ’ ಎಂಬಹಾಡನ್ನು ಅವರಿಂದ ಹಾಡಿಸಿದ್ದೆ. ದುರದೃಷ್ಟವಶಾತ್‌ ಆ ಸಿನಿಮಾ ಬಿಡುಗಡೆಯಾಗಲಿಲ್ಲ. ನಂತರ ಅವರಿಂದ ಪ್ರೇಮಲೋಕ ಚಿತ್ರಕ್ಕೆ ಹಾಡಿಸಿದೆ. ಆ ಹಾಡುಗಳು ಟ್ರೆಂಡ್‌ ಹುಟ್ಟುಹಾಕಲಿವೆ ಎನ್ನುವ ಮಾತು ಅವರಿಂದ ಬಂತು. ಅಂದು ‘ಪ್ರೇಮಲೋಕ’ದಲ್ಲಿ ನಾನು ಉಳಿದೆ ಎಂದರೆ ಅದು ಎಸ್‌ಪಿಬಿಯಿಂದ. ರವಿಚಂದ್ರನ್‌ ಅವರ ‘ಪ್ರೇಮಲೋಕ’ ಪ್ರಯೋಗ ಅಷ್ಟೊಂದು ಯಶಸ್ಸು ಕಾಣಬೇಕೆಂದರೆ ಅದಕ್ಕೆ ಎಸ್‌ಪಿಬಿಯವರೇ ಕಾರಣ. ಅಲ್ಲಿಂದ ಎಸ್‌ಪಿಬಿಯವರೂ ಸಿನಿಮಾಲೋಕದ ಸ್ಕ್ರಿಪ್ಟ್‌ಗಳನ್ನು ಆವರಿಸಿಕೊಂಡುಬಿಟ್ಟರು. ಎಸ್‌ಪಿಬಿ ಇದ್ದ ಕಡೆ ಸಂಗೀತದಲ್ಲಿ ಶ್ರುತಿ ಮತ್ತು ಲಯ ಇರುತ್ತಿತ್ತು. ನಿಜ ಅರ್ಥದಲ್ಲಿ ಅವರು ಸಂಗೀತದ ಗುಣಮಟ್ಟ ಕಾಪಾಡುವ ಮತ್ತು ಚಲನಚಿತ್ರ ಸಂಗೀತ ಲೋಕದ ಶ್ರುತಿ ಬಲಪಡಿಸುವ ಅಂಕುಶವಾಗಿದ್ದರು’ ಎನ್ನುವ ಮಾತು ಸೇರಿಸಿದರು ಹಂಸಲೇಖ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT