ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಂಡಲ್‌ವುಡ್‌ನ ‘ಡಿಂಪಲ್‌ ಕ್ವೀನ್‌’ ರಚಿತಾ ರಾಮ್‌‌ಗೆ ವಿಭಿನ್ನ ಪಾತ್ರ ಇಷ್ಟ

Last Updated 20 ನವೆಂಬರ್ 2020, 3:10 IST
ಅಕ್ಷರ ಗಾತ್ರ

ಸ್ಯಾಂಡಲ್‌ವುಡ್‌ನ ‘ಡಿಂಪಲ್‌ ಕ್ವೀನ್‌’ ರಚಿತಾ ರಾಮ್‌ ಮಾತಿಗಿಳಿದರೆ ನಾನ್‌ಸ್ಟಾಪ್‌. ಮನಸೊಳಗಿನ ಮಾತುಗಳನ್ನು ಒಂದಿಷ್ಟು ಮುಚ್ಚುಮರೆ ಮಾಡದೆ ಬಿಚ್ಚು ಮನಸಿನಿಂದ ಮಾತನಾಡುವ ಚಟಪಟ ಮಾತಿನ ಮಲ್ಲಿ ಎಂದರೂ ಅತಿಶಯವಲ್ಲ.

‘100’, ‘ಸೂಪರ್‌ ಮಚ್ಚಿ’, ‘ಏಕ್‌ ಲವ್‌ ಯಾ’ ಹಾಗೂ ‘ಡಾಲಿ’ ಧನಂಜಯ ಜತೆಗಿನ ಇನ್ನು ಹೆಸರಿಡದ ಚಿತ್ರವು ಸೇರಿ ನಾಲ್ಕು ಚಿತ್ರಗಳ ಶೂಟಿಂಗ್‌ ಪೂರ್ಣಗೊಳಿಸಿದ್ದಾರೆ ರಚಿತಾ ರಾಮ್‌. ಡಿಸೆಂಬರ್‌ನಲ್ಲಿ ಶುರುವಾಗಲಿರುವ ನೀನಾಸಂ ಸತೀಶ್‌ ಜತೆಗಿನ ‘ಮ್ಯಾಟ್ನಿ’, ನಾಯಕಿ ಪ್ರಧಾನ ಚಿತ್ರ ‘ಲಿಲ್ಲಿ’ ಹಾಗೂ ‘ವೀರಂ’ ಚಿತ್ರಗಳ ಶೂಟಿಂಗ್‌ಗೆ ಅಣಿಯಾಗುತ್ತಿದ್ದಾರೆ. ಹಾಗೆಯೇ ಜನವರಿ ಅಂತ್ಯಕ್ಕೆ ಅಂದರೆ 2021ರ ವರ್ಷಾರಂಭದಲ್ಲಿ ಆರಂಭವಾಗಲಿರುವ ‘ಪಂಕಜ ಕಸ್ತೂರಿ’ಗೂ ಹಾಗೂ ಹೆಸರಿಡದ ಮತ್ತೆರಡು ಹೊಸ ಚಿತ್ರಗಳಿಗೂ ರಚಿತಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಮಾಲಿವುಡ್‌ನ ಲೋಹಿತ್ ನಿರ್ಮಾಣದ ಚಿತ್ರದಲ್ಲಿ ರಚ್ಚು ಅಭಿನಯಿಸುತ್ತಿದ್ದಾರೆ. ಈ ಚಿತ್ರ ಕೂಡ ನಾಯಕಿ ಪ್ರಧಾನ ಚಿತ್ರ. ತಂದೆ–ಮಗಳ ಸೆಂಟಿಮೆಂಟ್‌ ಕಥಾಹಂದರ ಇದರಲ್ಲಿರಲಿದೆ. ಚಿತ್ರದ ಟೈಟಲ್‌ ಇನ್ನೂ ಘೋಷಣೆಯಾಗಿಲ್ಲ. ರಚ್ಚು ಅವರ ಹೊಸ ಚಿತ್ರವೊಂದು ಅತೀ ಶೀಘ್ರದಲ್ಲಿ ಘೋಷಣೆಯಾಗಲಿದೆ. ಈ ಚಿತ್ರವನ್ನು ವಿಶೇಷ ಸಂದರ್ಭದಲ್ಲಿ ಘೋಷಿಸಲು ರಚಿತಾ ದಿನಗಣನೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರದು ಕುರುಡಿಯ ಪಾತ್ರವಂತೆ!

ಸದ್ಯ ಅವರ ಬತ್ತಳಿಕೆಯಲ್ಲಿರುವ ಚಿತ್ರಗಳ ಸಂಖ್ಯೆ ಒಂದು ಡಜನ್‌! ತಾನು ನಟಿಸುವ ಚಿತ್ರಗಳ ಲೆಕ್ಕವಿಡದಿದ್ದರೂ, ಪಾಲಿಗೆ ಬರುವ ಪಾತ್ರಗಳನ್ನು ಅಳೆದು ತೂಗಿ ನೋಡಿಯೇ ಒಪ್ಪಿಕೊಳ್ಳುವ ಜಾಣೆ ಕೂಡ ಹೌದು.

ದಿನೇಶ್‌ ಬಾಬು ನಿರ್ದೇಶನದ ‘ಕಸ್ತೂರಿ ಮಹಲ್‌’ ಚಿತ್ರದಿಂದ ಹೊರ ನಡೆದ ನಿಜಕಾರಣವನ್ನು ಅವರು ಬಿಚ್ಚಿಟ್ಟಿದ್ದಾರೆ. ‘ಈ ಚಿತ್ರದ ಶೂಟಿಂಗ್‌ ಶುರುವಾಗುವ ವೇಳೆಗೆ ತೆಲುಗಿನ ‘ಸೂಪರ್‌ ಮಚ್ಚಿ’ ಚಿತ್ರದ ಶೂಟಿಂಗ್‌ ಶುರುವಾಗಿಬಿಟ್ಟಿತ್ತು. ಡೇಟ್‌ ಹೊಂದಾಣಿಕೆಯಾಗದ ಕಾರಣಕ್ಕೆ ‘ಕಸ್ತೂರಿ ಮಹಲ್‌’ ಕೈಚೆಲ್ಲಬೇಕಾಯಿತು’ ಎನ್ನುವ ಸ್ಪಷ್ಟನೆ ರಚಿತಾ ಅವರದು.

ನಿಮ್ಮೊಳಗಿನ ಅಭಿನೇತ್ರಿ ಎಂತಹ ಪಾತ್ರಕ್ಕೆ ಹಂಬಲಿಸುತ್ತಿದ್ದಾರೆ ಎಂದಾಗ, ‘ಯಾರೂ ಮಾಡದೇ ಇರುವ ಮತ್ತು ತುಂಬಾ ಚಾಲೆಂಜಿಂಗ್‌ ಆಗಿರುವ ಪಾತ್ರಗಳೆಂದರೆ ನನಗೆ ಬಹಳ ಇಷ್ಟ. ಅಂತಹ ಕಥೆ ಯಾರಿಂದಲೇ ಬರಲಿ, ನಿರ್ದೇಶಕ ಮತ್ತು ನಿರ್ಮಾಣ ಬ್ಯಾನರ್‌ ಒಳ್ಳೆಯದಿದ್ದರೆ ಅದರಲ್ಲಿ ಅಭಿನಯಿಸಲು ನಾನು ಸದಾ ಸಿದ್ಧ’ ಎನ್ನುವುದು ಅವರ ವಾಗ್ದಾನ.

‘ಈವರೆಗೆ ತುಂಬಾ ವಿಭಿನ್ನ ಪಾತ್ರಗಳನ್ನೇ ಮಾಡಿಕೊಂಡು ಬಂದಿರುವೆ. ಮಾಡದೇ ಉಳಿದಿರುವ ಮತ್ತು ಸವಾಲೊಡ್ಡುವ ಪಾತ್ರದ ನಿರೀಕ್ಷೆಯಲ್ಲಿದ್ದೆ. ಈಗ ಅದು ಕೂಡ ಸದ್ಯದಲ್ಲೇ ಪರಿಪೂರ್ಣವಾಗುತ್ತಿದೆ. ಒಳ್ಳೆಯ ಬ್ಯಾನರ್‌ನಡಿ, ಒಳ್ಳೆಯ ನಿರ್ದೇಶಕರ ಜತೆಗೆ ಈ ಚಿತ್ರ ಶುರುವಾಗಲಿದೆ. ಅತಿ ಶೀಘ್ರದಲ್ಲಿ ಈ ಚಿತ್ರದ ಇನ್ನಷ್ಟು ಮಾಹಿತಿ ಹಂಚಿಕೊಳ್ಳುವೆ’ ಎನ್ನಲು ಅವರು ಮರೆಯಲಿಲ್ಲ.

‘ಮಜಾಭಾರತ’ ಸ್ಟ್ರೆಸ್‌ ಬಸ್ಟರ್‌: ಟಿ.ವಿ ಕಾರ್ಯಕ್ರಮಗಳಿಗೆ ಸಮಯ ಹೊಂದಾಣಿಕೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಮುಂದಿಟ್ಟಾಗ, ‘ನಾನು ಕಿರುತೆರೆಯಿಂದಲೇ ಬಂದವಳು. ನನಗೆ ಟಿ.ವಿ ಕಾರ್ಯಕ್ರಮಗಳೆಂದರೆ ತುಂಬ ಇಷ್ಟ. ‘ಮಜಾಭಾರತ’ ರಿಯಾಲಿಟಿ ಶೋ ನನಗೆ ಒಂದು ರೀತಿಯಲ್ಲಿ ಸ್ಟ್ರೆಸ್‌ ಬಸ್ಟರ್‌ (ಒತ್ತಡ ನಿವಾರಣೆ) ಇದ್ದಂತೆ. ಮೂರು ವರ್ಷಗಳಿಂದ ಇದರಲ್ಲಿ ಭಾಗವಹಿಸುತ್ತಿರುವೆ. ಇದರಲ್ಲಿ ನಾನು ಮಗುವಾಗಿ ಭಾಗವಹಿಸಿ, ಮನಸಾರೆ ನಗುತ್ತೇನೆ ಮತ್ತು ಖುಷಿಪಡುತ್ತೇನೆ. ಇದರಲ್ಲಿ ಭಾಗವಹಿಸುವಾಗ ನಾನು ಇಡೀ ದಿನ ನಿರಾಳ ಭಾವದಲ್ಲಿರುತ್ತೇನೆ’ ಎನ್ನುವುದು ರಚಿತಾ ಮನದ ಮಾತು.

ಜೋಗಿ ಪ್ರೇಮ್‌ ನಿರ್ದೇಶನದ ‘ಏಕ್‌ ಲವ್‌ ಯಾ’ ಸಿನಿಮಾದಲ್ಲಿ ಸಿಗಾರ್‌ ಸೇದಿರುವ ಬಗ್ಗೆ ಕೆಣಕಿದರೆ, ‘ಅಯ್ಯೋ ಅದೊಂದು ದೊಡ್ಡ ಕಥೆ, ಮೊದಲು ಗಣೇಶ ಬೀಡಿ, ನಂತರ ಸಿಗರೇಟ್‌ ಸೇದಿಸಿದರು, ಕೊನೆಗೆ ಸಿಗಾರ್‌ ಕೂಡ ಎಳೆಸಿದರು. ಪಾತ್ರಕ್ಕಾಗಿ ಅದನ್ನು ಮಾಡಿರುವೆ. ‘ಟಗರು’ ಸಿನಿಮಾದ ‘ಡಾಲಿ’ಯನ್ನು ಈ ಚಿತ್ರದಲ್ಲಿ ಒಂದೇ ಒಂದು ಬಿಟ್ಸ್‌ಗೆ ಅನುಕರಿಸಿದ್ದೇನೆ. ಸಿಗಾರ್‌ ಹಚ್ಚಲು, ಕೈಯಲ್ಲಿ ರಿವಾಲ್ವರ್‌ ಹಿಡಿಯಲು ‘ಡಾಲಿ’ ಪಾತ್ರದಿಂದ ಒಂದಿಷ್ಟು ಪ್ರಭಾವಿತಳಾಗಿರುವುದುಂಟು’ ಎಂದು ರಚಿತಾ ಮುಚ್ಚುಮರೆ ಇಲ್ಲದೆ ಹೇಳಿದರು.

‘ಏಕ್‌ ಲವ್‌ ಯಾ ಚಿತ್ರದಲ್ಲಿ ನನ್ನ ಪಾತ್ರವೂ ಹಾಗೆಯೇ ಇದೆ. ಒಂದು ರೀತಿಯಲ್ಲಿ ರೌಡಿ ಬೇಬಿ ಎನ್ನಿ. ಮನಸಿನಲ್ಲಿರುವುದನ್ನು ಮುಚ್ಚಿಡದೆ ಬಿಚ್ಚಿಡುವ ಸ್ವಭಾವ, ಇದು ನನ್ನ ನಿಜ ಜೀವನಕ್ಕೂ ಅನ್ವಯಿಸುತ್ತದೆ. ಆದರೆ, ಪಾತ್ರದಲ್ಲಿ ಹುಡುಗನಿಗೆ ಲವ್‌ ಪ್ರಪೋಸ್‌ ಮಾಡಿ, ಕಿಸ್‌ ಮಾಡುವ ಬಿಂದಾಸ್‌ ಹುಡುಗಿ. ಅದು ಪಾತ್ರದಲ್ಲಿ ಮಾತ್ರ’ ಎಂದು ಮನಸಾರೆ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT