ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ವಿಮರ್ಶೆ: ವ್ಯಾಕುಲ ಕಾಲದಲ್ಲಿ ‘ಇಕ್ಕಟ್’ ನಗೆಗುಳಿಗೆ

Last Updated 22 ಜುಲೈ 2021, 14:52 IST
ಅಕ್ಷರ ಗಾತ್ರ

ಚಿತ್ರ: ಇಕ್ಕಟ್ (ಕನ್ನಡ)–ಅಮೆಜಾನ್ ಪ್ರೈಮ್‌ನಲ್ಲಿ ತೆರೆಕಂಡಿದೆ

ನಿರ್ಮಾಣ: ರಾಕೆಟ್ ಸೈನ್ಸ್ ಎಂಟರ್‌ಟೇನ್‌ಮೆಂಟ್

ನಿರ್ದೇಶನ: ಇಶಾಂ ಹಾಗೂ ಹಸೀನ್ ಖಾನ್

ತಾರಾಗಣ: ನಾಗಭೂಷಣ್, ಭೂಮಿ ಶೆಟ್ಟಿ, ಸುಂದರ್, ಆರ್‌ಜೆ ವಿಕ್ಕಿ, ಆನಂದ್ ನೀನಾಸಂ

ಹಾಸ್ಯ ಕಾಲಕಾಲಕ್ಕೆ ಅಪ್‌ಡೇಟ್‌ ಆಗುತ್ತಿರುತ್ತದೆ. ಅದರ ಭಾಷೆ, ನುಡಿಗಟ್ಟು ಬದಲಾಗುವುದು ಯುಗಧರ್ಮ. ಸ್ಟ್ಯಾಂಡ್‌ಅಪ್‌ ಕಾಮಿಡಿಗಳು, ಓಪನ್‌ ಮೈಕ್ ಕಾಮಿಡಿಗಳು ಪಕ್ಕೆಗಳ ಮೇಲೆ ನುಡಿಬೆರಳಾಡಿಸುತ್ತಿರುವ ಹೊತ್ತಿನಲ್ಲಿ ಕನ್ನಡದ ಮಟ್ಟಿಗೆ ಗಮನಾರ್ಹ ಬರವಣಿಗೆ ಇರುವ ಹಾಸ್ಯದ ಸಿನಿಮಾ ‘ಇಕ್ಕಟ್’. ಸಾಮಾನ್ಯವಾಗಿ ನಾವು ಶಿಷ್ಟ ಭಾಷೆಯಲ್ಲಿ ‘ಇಕ್ಕಟ್ಟು’ ಎನ್ನುತ್ತೇವೆ. ಆ ನುಡಿಗಟ್ಟನ್ನೂ ‘ಇಕ್ಕಟ್’ ಎಂದು ಬದಲಿಸಿರುವುದೂ ಕಾಲಧರ್ಮವೇ.

ಕೋವಿಡ್ ಸಂದರ್ಭವನ್ನು ಬಳಸಿಕೊಂಡು ಕನ್ನಡದಲ್ಲಿ ಬಂದಿರುವ ಎರಡನೇ ಸಿನಿಮಾ ಇದು. ಹಾಸ್ಯ ಪ್ರಕಾರದಲ್ಲಿ ಪ್ರಥಮ ಯತ್ನ.

ಸಾಂದರ್ಭಿಕ ಲಘುಹಾಸ್ಯ ಚಿತ್ರಗಳ ಮಟ್ಟಿಗೆ ಫಣಿ ರಾಮಚಂದ್ರ ಅವರದ್ದು ಮರೆಯಲಾಗದ ಇನಿಂಗ್ಸ್‌. ‘ಗಣೇಶನ ಮದುವೆ’ ಅದಕ್ಕೊಂದು ಗಟ್ಟಿ ಉದಾಹರಣೆ. ಅದರಲ್ಲಿನ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಪಾತ್ರಗಳು ಚಿರಂತನ. ‘ಇಕ್ಕಟ್’ ಹೊಸಕಾಲದ ಹಾಸ್ಯ ಬರವಣಿಗೆಯ ಇನ್ನೊಂದು ಇನಿಂಗ್ಸ್‌ಗೆ ಸೇರುವಂಥದ್ದು. ತುಂಟತನದ ಕೆಲವು ಸಾಲುಗಳು ಅಶ್ಲೀಲತೆಗೆ ಜಾರದಂತೆ ಎಚ್ಚರ ವಹಿಸಿದ ಬರವಣಿಗೆ ಇರುವ, ಬಿದ್ದು ಬಿದ್ದೂ ನಗುವಂತೆ ಮಾಡದೇ ಇದ್ದರೂ ರಮ್ಯ ಹಾಸ್ಯವನ್ನು ಮನಸ್ಸಿಗೆ ಹೊಗಿಸುವ ಚಿತ್ರವಿದು. ‘ಸಿಟ್‌ಕಾಮ್’ ಎಂಬ ಈ ಕಾಲದ ಪ್ರಭೇದದ್ದು.

ನಾಯಕ–ನಾಯಕಿ ಮಧ್ಯಮವರ್ಗದ ಗಂಡ–ಹೆಂಡತಿ. ಟಾಮ್ ಅಂಡ್ ಜೆರ್ರಿ ತರಹ ಕಿತ್ತಾಡುತ್ತಾ ಸುಖವಾಗಿರುತ್ತಾರೆ. ಸಣ್ಣದಕ್ಕೂ ಡೈವೊರ್ಸ್‌ ಕೊಡುವ ಮಾತಾಡುವಷ್ಟು ಕಚ್ಚಾಟ. ಹೀಗಿರುವಾಗಲೇ ಲಾಕ್‌ಡೌನ್ ಶುರು. ಮನೆಗೆ ಇಬ್ಬರು ಅಭ್ಯಾಗತರ ಪ್ರವೇಶ. ಇವಿಷ್ಟೇ ಪಾತ್ರಗಳ ನಡುವೆ ನಡೆಯುವ ಸಾಂದರ್ಭಿಕ ಪ್ರಹಸನಗಳೇ ಹಾಸ್ಯದ ವಸ್ತು. ಟಿಕ್‌ಟಾಕ್ ಗೀಳಿನ ನಗರ ನಾಗರಿಕತೆಯ ಸಿಕ್ಕುಗಳನ್ನೂ ಸಿನಿಮಾ ನವಿರು ಹಾಸ್ಯರಸಾಯನದ ಭಾಗವಾಗಿಸಿಕೊಳ್ಳುತ್ತದೆ.

ನಿರ್ದೇಶಕದ್ವಯರ ಜತೆಗೆ ರಾಮಕೃಷ್ಣ ರಣಗಟ್ಟಿ ಚಿತ್ರಕ್ಕೆ ಮಾತುಗಳನ್ನು ಬರೆದಿದ್ದಾರೆ. ಚಿತ್ರಕಥೆಯನ್ನು ಮೇಲೆತ್ತಿರುವುದೇ ಈ ಮೂವರ ನಾಜೂಕಾದ ಬರವಣಿಗೆ. ಪ್ರತಿ ಪಾತ್ರದ ಪ್ರವೇಶ ಹಾಗೂ ನಿರ್ಗಮನದ ಸಿನಿಮೀಯ ತರ್ಕ ಆಸಕ್ತಿಕರ. ಸಿನಿಮಾದ ಕೇಂದ್ರಪಾತ್ರ ನಾಯಕಿ ಎನ್ನುವುದೂ ಅಪರೂಪವೇ. ಹೊಸಕಾಲದ ಮನಸ್ಸಿನ ಅವಳ ಪ್ರಾಮಾಣಿಕತೆ ಇಂಥವರನ್ನು ದೂರುವ ಸಾಂಪ್ರದಾಯಿಕ ಮನಃಸ್ಥಿತಿಯವರು ಮುಟ್ಟಿನೋಡಿಕೊಳ್ಳುವಂತೆಯೂ ಇದೆ. ಚಿತ್ರದಲ್ಲಿ ಕರ್ಣನ ಪಾತ್ರ ಅಂತಹ ಸಾಂಪ್ರದಾಯಿಕ ಮನೋವರ್ತನೆಯನ್ನು ತುಳುಕಿಸುತ್ತದೆ. ಖುದ್ದು ಅಪಸವ್ಯಗಳನ್ನು ಮಾಡಿದ, ಸ್ವಯಂ ನೆಲೆಯೇ ಇಲ್ಲದ ಆ ಪಾತ್ರ ಗಂಡ–ಹೆಂಡತಿಯ ನಡುವೆಯೇ ತಂದಿಕ್ಕುವ ಧೋರಣೆ ಕಾಣಿಸಿರುವುದು ನಿರ್ದೇಶಕರ ಸೂಕ್ಷ್ಮಕ್ಕೆ ಹಿಡಿದ ಕನ್ನಡಿ.

ಅಷ್ಟೆಲ್ಲ ಕಚ್ಚಾಡಿಯೂ ‘ಗಂಡ–ಹೆಂಡತಿ ಜಗಳ ಉಂಡು ಮಲಗುವತನಕ’ ಎಂಬ ಹಳೆ ನಾಣ್ನುಡಿಯನ್ನೇ ಹೊಸ ನಿರ್ದೇಶಕರು ಕಣ್ಣಿಗೊತ್ತಿಕೊಂಡಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಫೋನಾಯಿಸಿ, ತನ್ನ ಮಗಳಿಗೆ ಲೈನ್ ಹೊಡೆಯುವವರನ್ನೆಲ್ಲ ಕೋವಿಡ್‌ ವಾರ್ಡ್‌ಗೆ ಕಳುಹಿಸುವ ಐಡಿಯಾ ಮಾಡುವ ನೆರೆಮನೆಯವನ ಪಾತ್ರದ ಕಾಮಿಡಿ ಟೈಮಿಂಗ್‌ ಕೂಡ ಮಜವಾಗಿದೆ.

ಭೂಮಿ ಶೆಟ್ಟಿ ಅಭಿನಯ ಚಿತ್ರದ ಜೀವಾಳ. ಅವರ ಅನನುಭವ ಯಾವ ಫ್ರೇಮ್‌ನಲ್ಲೂ ಕಾಣುವುದಿಲ್ಲ. ನಾಗಭೂಷಣ ತಮ್ಮ ಒಪ್ಪಿತ ಏಕತಾನತೆಯಲ್ಲೇ ನಗಿಸುತ್ತಾರೆ. ಪದೇ ಪದೇ ಕೆಮ್ಮುತ್ತಾ, ಸೀನುತ್ತಾ ನಗೆಬುಗ್ಗೆ ಮೂಡಿಸುವ ಕಷ್ಟದ ಅಭಿನಯವನ್ನು ಸುಂದರ್ ಸುಖಿಸಿದ್ದಾರೆ. ಆರ್‌.ಜೆ. ವಿಕ್ಕಿ, ಆನಂದ್ ನೀನಾಸಂ ನಟನೆಗೂ ಅಂಕಗಳು ಸಲ್ಲಬೇಕು.

ವ್ಯಾಕುಲ ಪರಿಸ್ಥಿತಿಯಲ್ಲಿ ಎಲ್ಲ ಮರೆಸಿ ತುಟಿಮೇಲೆ ನಗೆ ಲಹರಿ ಮೂಡಿಸುವ ಮನರಂಜನೆ ಅಗತ್ಯ. ‘ಇಕ್ಕಟ್’ ಅದನ್ನು ಪೂರೈಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT