ಸೋಮವಾರ, ಅಕ್ಟೋಬರ್ 26, 2020
23 °C

ಬಾಲಿವುಡ್ ನಟ ‌ವಿವೇಕ್ ಒಬೆರಾಯ್ ಮನೆಯಲ್ಲಿ ಶೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡ್ರಗ್ಸ್ ಜಾಲದ ತನಿಖೆ ಚುರುಕುಗೊಳಿಸಿರುವ ನಗರದ ಸಿಸಿಬಿ ಪೊಲೀಸರು, ಮುಂಬೈನಲ್ಲಿರುವ ಬಾಲಿವುಡ್ ನಟ ವಿವೇಕ್‌ ಒಬೆರಾಯ್ ಮನೆಯಲ್ಲಿ ಗುರುವಾರ ಶೋಧ ನಡೆಸಿದರು. ಅಂತರರಾಷ್ಟ್ರೀಯ ಡ್ರಗ್ಸ್ ಜಾಲದ ಬಗ್ಗೆ ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆದಿತ್ಯ ಆಳ್ವ ತಲೆಮರೆಸಿಕೊಂಡಿದ್ದಾನೆ.

ಆತನ ಭಾವನೂ (ಅಕ್ಕನ ಗಂಡ) ಆಗಿರುವ ವಿವೇಕ್ ಒಬೆರಾಯ್ ಅವರ ಮುಂಬೈನ ಮನೆಯಲ್ಲಿ ಆದಿತ್ಯ ಅವಿತುಕೊಂಡಿದ್ದ ಮಾಹಿತಿ ಸಿಸಿಬಿಗೆ ಸಿಕ್ಕಿತ್ತು.

ಪುರಾವೆ ಹಾಜರುಪಡಿಸಿ ನ್ಯಾಯಾಲಯದಿಂದ ಶೋಧನಾ ವಾರಂಟ್ ಪಡೆದಿದ್ದ ಇನ್‌ಸ್ಪೆಕ್ಟರ್‌ಗಳಾದ ಮಹಾನಂದ ಹಾಗೂ ರವಿ ಪಾಟೀಲ ನೇತೃತ್ವದ ತಂಡ, ಗುರುವಾರ ಬೆಳಿಗ್ಗೆ ಮುಂಬೈಗೆ ಹೋಗಿ ಅಂಧೇರಿಯಲ್ಲಿರುವ ವಿವೇಕ್ ಒಬೆರಾಯ್
ಮನೆಯಲ್ಲಿ ಸಂಜೆಯವರೆಗೆ ಶೋಧ ನಡೆಸಿತು.

ಆರಂಭದಲ್ಲಿ ಶೋಧಕ್ಕೆ ವಿರೋಧ ವ್ಯಕ್ತಪಡಿಸಿದ ವಿವೇಕ್ ದಂಪತಿ, ‘ಆದಿತ್ಯ ಬಗ್ಗೆ ನಮಗೇನು ಗೊತ್ತಿಲ್ಲ. ನಿಮ್ಮ ತನಿಖೆ ನೀವು ಮಾಡಿಕೊಳ್ಳಿ. ನಮ್ಮ ಮನೆಗೆ ಬಂದು ಏಕೆ ತೊಂದರೆ ಕೊಡುತ್ತೀರಾ’ ಎಂದರು. ಜೊತೆಗೆ, ಮೊಬೈಲ್‌ ನೀಡಲು ಸಹ ದಂಪತಿ ನಿರಾಕರಿಸಿದರು. ಸ್ಥಳೀಯ ಪೊಲೀಸರ ನೆರವಿನಿಂದ ಸಿಸಿಬಿ ಪೊಲೀಸರು, ಶೋಧ ಮುಂದುವರಿಸಿದರು. ಆದಿತ್ಯನ ಅಕ್ಕ ಪ್ರಿಯಾಂಕಾ ಅವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದರು.

‘ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿರುವ ಆದಿತ್ಯ, ತನ್ನ ಅಕ್ಕನ ಮನೆಯಲ್ಲಿರುವ ಮಾಹಿತಿ
ಸಿಕ್ಕಿತ್ತು. ಮುಂಬೈಗೆ ಹೋಗಿರುವ ತಂಡ ಶೋಧ ನಡೆಸಿದ್ದು, ಆದಿತ್ಯ ಪತ್ತೆಯಾಗಿಲ್ಲ’ ಎಂದು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಹೇಳಿದರು.

ಪ್ರಿಯಾಂಕಾ ಆಳ್ವಗೆ ಸಿಸಿಬಿ ನೋಟಿಸ್

ಡ್ರಗ್ಸ್ ಜಾಲ ಪ್ರಕರಣ ಸಂಬಂಧ ಶುಕ್ರವಾರ ಬೆಳಿಗ್ಗೆ ವಿಚಾರಣೆಗೆ ಹಾಜರಾಗುವಂತೆ ವಿವೇಕ್‌ ಒಬೆರಾಯ್ ಪತ್ನಿ ಪ್ರಿಯಾಂಕಾ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.

ಮನೆ ಶೋಧದ ವೇಳೆಯಲ್ಲಿ ಪೊಲೀಸರು ನೋಟಿಸ್ ನೀಡಲು ಹೋದಾಗ, ಅದನ್ನು ಸ್ವೀಕರಿಸಲು ಪ್ರಿಯಾಂಕಾ ನಿರಾಕರಿಸಿದ್ದರು. ಹೀಗಾಗಿ, ಅವರ ಮೊಬೈಲ್‌ಗೆ ವಾಟ್ಸ್‌ಆ್ಯಪ್‌ ಮೂಲಕವೇ ನೋಟಿಸ್ ಕಳುಹಿಸಿದ್ದಾರೆ. ವಿಚಾರಣೆಗೆ ಬರದಿದ್ದರೆ ಮುಂದಿನ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ... ಡ್ರಗ್ಸ್‌ ಪ್ರಕರಣ: ಆದಿತ್ಯ ಆಳ್ವ ರೆಸಾರ್ಟ್ ಮೇಲೆ ಸಿಸಿಬಿ ದಾಳಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು