ಗುರುವಾರ , ಜುಲೈ 29, 2021
25 °C
ಕನ್ನಡ ಚಲನಚಿತ್ರ ರಂಗದ ಪೋಷಕ ನಟಿ ಬಿ.ಶಾಂತಮ್ಮ ಪುತ್ರಿ ಸುಮಾ ನೋವಿನ ಅಂತರಾಳ

‘ಸಕಾಲಕ್ಕೆ ಚಿಕಿತ್ಸೆ ದೊರಕಿದ್ದರೆ ಬದುಕುತ್ತಿದ್ದರೇನೋ..?’

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

ಶಾಂತಮ್ಮ

ಮೈಸೂರು: ‘ಅಮ್ಮನಿಗೆ ಸಕಾಲಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಬದುಕುತ್ತಿದ್ದರೇನೋ...?’

ಕನ್ನಡ ಚಲನಚಿತ್ರ ರಂಗದ ಪೋಷಕ ನಟಿ ಬಿ.ಶಾಂತಮ್ಮ ಪುತ್ರಿ, ಕಲಾವಿದೆ ಸುಮಾ ಭಾನುವಾರ ರಾತ್ರಿ ‘ಪ್ರಜಾವಾಣಿ’ ಬಳಿ ಗದ್ಗದಿತರಾದರು. ಬಿಕ್ಕಳಿಸಿ ಅತ್ತರು. ಬಾರದ ಲೋಕಕ್ಕೆ ಅಮ್ಮ ತೆರಳಿದ ನೋವಿನ ನಡುವೆಯೂ ಕೆಲ ವಿಷಯಗಳನ್ನು ಹಂಚಿಕೊಂಡರು.

‘ಅಮ್ಮನಿಗೆ 94 ವರ್ಷ ವಯಸ್ಸಾಗಿತ್ತು. ಶುಗರ್, ಬಿಪಿ ಯಾವೊಂದು ಕಾಯಿಲೆಯೂ ಇರಲಿಲ್ಲ. ಇನ್ನೊಬ್ಬ ಮಗಳು(ನನ್ನ ತಂಗಿ) ಆಸ್ಟ್ರೇಲಿಯಾಗೆ ಹೋದ ಬಳಿಕ ಬೆಂಗಳೂರಿನಲ್ಲಿ ಒಬ್ಬಂಟಿಯಾಗಿದ್ದರು. ಕೋವಿಡ್–19 ಹೆಚ್ಚಿದ್ದರಿಂದ ನನಗೂ ಹೋಗಿ ಬರಲಾಗಿರಲಿಲ್ಲ. ಈಚೆಗೆ ನೆನಪಿನ ಶಕ್ತಿ ಕಡಿಮೆಯಾಗುತ್ತಿತ್ತಷ್ಟೇ. ತಿಂಗಳ ಹಿಂದಷ್ಟೇ ಇಲ್ಲಿಗೆ ಕರೆಸಿಕೊಂಡಿದ್ದೆ. ಈ ವಯಸ್ಸಿನಲ್ಲೂ ನಮಗೆ ಕೆಲವೊಮ್ಮೆ ಅಡುಗೆ ಮಾಡಿ ಬಡಿಸುತ್ತಿದ್ದರು. ಅಂತಹ ತಾಯಿ ನಮ್ಮನ್ನು ಬಿಟ್ಟು ಹೋಗಿ ಬಿಟ್ಟರು’ ಎಂದು ಕಣ್ಣೀರಾದರು.

‘ಶನಿವಾರ ಮಧ್ಯಾಹ್ನ ಊಟ ಮಾಡುವಾಗ ಅಮ್ಮನ ಗಂಟಲಲ್ಲಿ ಅನ್ನ ಇಳಿಯಲಿಲ್ಲ. ಪ್ರತಿ ತುತ್ತಿಗೂ ನೀರು ಕುಡಿಯುತ್ತಿದ್ದರು. ಸಂಜೆ ವೇಳೆಗೆ ಮುನ್ನೆಚ್ಚರಿಕೆಯಾಗಿ ಅನ್ನ ನಾಳದ ಈ ಸಮಸ್ಯೆ ತೋರಿಸಲಿಕ್ಕಾಗಿ ಮೈಸೂರಿನ ಎಲ್ಲೆಡೆ ಚಿಕಿತ್ಸೆಗಾಗಿ ಸುತ್ತಾಡಿದೆವು. ಆದರೆ ಯಾವೊಂದು ನರ್ಸಿಂಗ್‌ ಹೋಂನಲ್ಲಿ ದಾಖಲಿಸಿಕೊಳ್ಳಲಿಲ್ಲ. ಅಲ್ಲಿಗೆ ಹೋಗಿ, ಇಲ್ಲಿಗೆ ಹೋಗಿ ಎಂದು ಮಧ್ಯರಾತ್ರಿವರೆಗೂ ಅಲೆಸಿದರು.’

‘ಕೊನೆಗೆ ಬೆಂಗಳೂರಿನ ಪರಿಚಿತ ವೈದ್ಯರೊಬ್ಬರ ಮೂಲಕ ರಾತ್ರಿ 1 ಗಂಟೆ ವೇಳೆಗೆ, ನಗರದಲ್ಲಿನ ಬನ್ನೂರು ಮುಖ್ಯ ರಸ್ತೆಯಲ್ಲಿರುವ ಕಾವೇರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹೇಳಿಸಿ, ಚಿಕಿತ್ಸೆಗಾಗಿ ದಾಖಲಿಸಿದೆವು. ಆದರೂ ಭಾನುವಾರ ಸಂಜೆ 5.30ರ ವೇಳೆಗೆ ಅಮ್ಮ ನಮ್ಮನ್ನು ಬಿಟ್ಟು ಹೋದರು. ಸಕಾಲಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಇನ್ನೊಂದಿಷ್ಟು ದಿನ ನಮ್ಮೊಟ್ಟಿಗೆ ಬದುಕಿರುತ್ತಿದ್ದರೇನೋ?’ ಎಂದರು.

’ಅಮ್ಮನ ಸೂಚನೆಯಂತೆಯೇ ಪಾರ್ಥಿವ ಶರೀರವನ್ನು ಚಾಮುಂಡಿ ಬೆಟ್ಟದ ತಪ್ಪಲಿನ ಸ್ಮಶಾನದಲ್ಲಿ ಸೋಮವಾರ ಮಧ್ಯಾಹ್ನದೊಳಗೆ ಸುಡುವ ಮೂಲಕ ಅಂತ್ಯ ಸಂಸ್ಕಾರ ನಡೆಸುತ್ತೇವೆ. ಯಾರಿಗೂ ಕಾಯಲ್ಲ’ ಎಂದು ಸುಮಾ ಹೇಳಿದರು.

‘ಅಣ್ಣಾವ್ರ ಕುಟುಂಬದ ಒಡನಾಡಿ ಅಮ್ಮ’

‘ಗುಬ್ಬಿ ವೀರಣ್ಣ ಕುಟುಂಬದ ನಂಟಿದ್ದ ಅಮ್ಮನಿಗೆ ಆರಂಭದಿಂದಲೂ ಅಣ್ಣಾವ್ರ ಕುಟುಂಬದ ಜೊತೆ ಒಡನಾಟ. ಹರಿಭಕ್ತ ಸಿನಿಮಾ ಅಮ್ಮನ ಮೊದಲ ಚಿತ್ರ. ರಾಜ್‌ಕುಮಾರ್‌ಗೆ ತಾಯಿಯಾಗಿ ಈ ಸಿನಿಮಾದಲ್ಲಿ ನಟಿಸಿದ್ದರು.

ಹಿಂದಿಯಲ್ಲಿ ಮಿಥುನ್ ಚಕ್ರವರ್ತಿ ಅಭಿನಯದ ಚಲನಚಿತ್ರದಲ್ಲಿ ಪಾತ್ರವೊಂದನ್ನು ಮಾಡಿದ್ದಾರೆ. ರಜನಿಕಾಂತ್ ಚಿತ್ರಗಳಲ್ಲೂ ನಟಿಸಿದ್ದಾರೆ. ತಮಿಳಿನ ಲಿಂಗಂ ಅವರು ನಟಿಸಿದ ಕೊನೆಯ ಚಿತ್ರ. 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಮ್ಮ ವಿವಿಧ ಪಾತ್ರ ನಿಭಾಯಿಸಿದ್ದಾರೆ’ ಎಂದು ಸುಮಾ ನೆನಪು ಮಾಡಿಕೊಂಡರು.

‘ನಾವೆಲ್ಲಾ ಬೆಳೆದಿದ್ದು ಮದ್ರಾಸಿನಲ್ಲಿ. ಅದೂ ಅಣ್ಣಾವ್ರ ಮನೆಯಲ್ಲೇ. ಅಣ್ಣಾವ್ರು ಹೋದ ಬಳಿಕ ಪಾರ್ವತಕ್ಕನ ಜೊತೆಗಾರ್ತಿಯಾಗಿದ್ದರು ಅಮ್ಮ. ಪಾರ್ವತಕ್ಕನ ಕೊನೆಯ ದಿನಗಳವರೆಗೂ ಜೊತೆಯಲ್ಲಿದ್ದರು. ಅಕ್ಕ ಹೋದ ಮೇಲೆ ಮನೆಗೆ ಬಂದಿದ್ದು. ಅಣ್ಣಾವ್ರ ಮಕ್ಕಳಿಗೆ ಶಾಂತಮ್ಮ ಅಂದರೇ ಅಚ್ಚುಮೆಚ್ಚು. ಇವರಿಗೂ ಅಷ್ಟೇ. ನಾವು ಆರು ಜನ ಮಕ್ಕಳಿದ್ದರೂ ಅವರನ್ನು ತನ್ನ ಮಕ್ಕಳಂತೆಯೇ ಕಾಣುತ್ತಿದ್ದರು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು