ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಶ್ರಾ ಕಾಮಿಡಿ ಮೋಡಿ

ನಟ ಸಂಜಯ್ ಮಿಶ್ರಾ ಬದುಕಿನ ಪಯಣವೇ ಹೀಗೆ
Last Updated 1 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಹಿಂದಿಯಲ್ಲಿ ಜಾನಿ ಲಿವರ್ ಮತ್ತು ಕನ್ನಡದಲ್ಲಿ ಸಾಧು ಕೋಕಿಲ ಕಂಡ ಕೂಡಲೇ ಹೇಗೆ ನಗೆ ಉಕ್ಕುವುದೋ, ಹಾಗೆಯೇ ನಗೆ ತರಿಸುವ ಮತ್ತೊಬ್ಬ ಹಿರಿಯ ಕಲಾವಿದ ಸಂಜಯ್ ಮಿಶ್ರಾ. ರಾಷ್ಟ್ರೀಯ ನಾಟಕ ಶಾಲೆಯ (ಎನ್ಎಸ್‌ಡಿ) ಪ್ರತಿಭೆಯಾದ ಅವರು ನಾಯಕ ನಟರಷ್ಟೇ ಬ್ಯುಸಿ. ಯಾವುದಾದರೂ ಒಂದು ಚಿತ್ರದ ಶೂಟಿಂಗ್‌ನಲ್ಲಿ, ಕಿರುಚಿತ್ರದ ನಿರ್ದೇಶನದಲ್ಲಿ ಅಥವಾ ಬೃಹತ್ ಬಜೆಟ್ ಚಿತ್ರವೊಂದರಲ್ಲಿ ಪಾತ್ರಕ್ಕೆ ಜೀವ ತುಂಬುತ್ತ ಇರುತ್ತಾರೆ.

ಇತ್ತೀಚೆಗೆ ತೆರೆ ಕಂಡ ಗೋಲ್‌ಮಾಲ್‌, ಧಮಾಲ್‌ನಂತಹ ಸರಣಿ ಚಿತ್ರಗಳ ಹಾಸ್ಯ ಪಾತ್ರಗಳಲ್ಲಿ ಸಂಜಯ್ ಮಿಂಚಿದರು. ಈ ಪಾತ್ರಗಳು ದೊಡ್ಡ ಸಂಚಲನವನ್ನೇ ಸೃಷ್ಟಿಸಿವೆ. ನಡುವಯಸ್ಸು ದಾಟಿದರೂ ಮುಖದಲ್ಲಿ ಸ್ವಲ್ಪವೂ ಆಯಾಸ ತೋರಗೊಡದೇ ಪಾತ್ರಕ್ಕೆ ಜೀವ ತುಂಬುವುದು ಸಂಜಯ್‌ ತಾಕತ್ತು. ಡೈಲಾಗ್ ಡೆಲಿವರಿ, ಮುಖದ ಹಾವಭಾವ, ಸಂಜ್ಞೆ ಭಾಷೆಯ ಸಂವಹನಗಳಲ್ಲಿ ಅವರದ್ದು ಎತ್ತಿದ ಕೈ.

ಬಾಲಿವುಡ್‌ನಲ್ಲಿ ಗಟ್ಟಿ ನೆಲೆ ಕಂಡುಕೊಂಡಿರುವ ಅವರ ಸಿನಿ ಪಯಣ ಸಲೀಸಾಗಿಯೇನೂ ಇರಲಿಲ್ಲ. ಬನಾರಸದಲ್ಲಿ ಬಾಲ್ಯದ ದಿನಗಳನ್ನು ಕಳೆದ ಸಂಜಯ್ ಅವರಿಗೆ ದೈನಂದಿನ ಓದು ಕಠಿಣ ಅನ್ನಿಸಿತು. ಈ ಕಾರಣಕ್ಕಾಗಿಯೇ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಅವರು ಎರಡೆರಡು ಬಾರಿ ಬರೆಯಬೇಕಾಯಿತು. ಇದ್ಯಾವುದರ ಜಂಜಾಟವೇ ಬೇಡವೆಂದು ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆಗೆ ಪ್ರವೇಶ ಪಡೆದರು. ಅಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಇರ್ಫಾನ್ ಖಾನ್ ಜೊತೆಯಾದರು. ಇಬ್ಬರೂ ಕಲಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತ ರಂಗಭೂಮಿಯ ವಿವಿಧ ಆಯಾಮಗಳನ್ನು ಕಲಿಯುತ್ತ ಜೀವನ ರೂಪಿಸಿಕೊಂಡರು.

ಬಾಲಿವುಡ್‌ನಲ್ಲಿ ಕರಿಯರ್ ರೂಪಿಸಿಕೊಂಡು ಜೀವನೋಪಾಯ ಕಂಡುಕೊಳ್ಳಲು 1991ರಲ್ಲಿ ಮುಂಬೈಗೆ ಬಂದ ಸಂಜಯ್ ಮಿಶ್ರಾ ಅವರಿಗೆ ಇದ್ದದ್ದು ಮೂರೇ ಆಯ್ಕೆ. ವಿಲನ್, ಕಾಮಿಡಿಯನ್ ಅಥವಾ ಹೀರೋ.

ಈ ಮೂರರಲ್ಲಿ ಯಾವುದಾದರೂ ಪಾತ್ರ ನಿಭಾಯಿಸಬೇಕಿತ್ತು. ಆದರೆ ಯಾರೂ ಅವಕಾಶ ಕೊಡಲಿಲ್ಲ. ಕೊನೆಗೆ ಎನ್ಎಸ್‌ಡಿಯಲ್ಲಿ ಸಹಪಾಠಿಯಾಗಿದ್ದ ಕೆಲವರು ಕಿರುತೆರೆಗಳಲ್ಲಿ ಅಭಿನಯಿಸಲು ಅವಕಾಶ ಮಾಡಿಕೊಟ್ಟರು. ಆದರೆ ದುಡಿಮೆಗೆ ತಕ್ಕಂತೆ ಹಣ ಬೇಗನೇ ಬಾರದ ಕಾರಣ ಅಲ್ಲಿ-ಇಲ್ಲಿ ಓಡಾಡುತ್ತ ವಡಾ ಪಾವ್ ತಿನ್ನುತ್ತ ಅವರು ಬದುಕು ಸಾಗಿಸಿದರು.

ನಿರಂತರ ಹೋರಾಟದ ಪರಿಣಾಮ 1995ರಲ್ಲಿ ಕೇತನ್ ಮೆಹ್ತಾ ನಿರ್ದೇಶನದ ‘ಓ ಡಾರ್ಲಿಂಗ್‌ ಯೇ ಹೈ ಇಂಡಿಯಾ’ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿತು. ಆದರೆ ನಂತರದ ವರ್ಷಗಳಲ್ಲಿ ಬಾಲಿವುಡ್‌ನಲ್ಲಿ ಅವಕಾಶ ಸಿಗದ ಕಾರಣ ಪುನಃ ಕಿರುತೆರೆಗೆ ಮರಳಿದರು. ಚಾಣಕ್ಯ, ಸಾರಿ ಮೇರಿ ಲಾರಿ ಮುಂತಾದ ಧಾರಾವಾಹಿಗಳಲ್ಲಿ ಅವರು ಅಭಿನಯಿಸಿದರು. ಆದರೆ ಅವರಿಗೆ ಆಫೀಸ್ ‘ಆಫೀಸ್’ ಎಂಬ ಜನಪ್ರಿಯ ಹಾಸ್ಯ ಧಾರಾವಾಹಿ ಖ್ಯಾತಿ ತಂದುಕೊಟ್ಟಿತು. ಕಿರುತೆರೆಯಲ್ಲಿ ಯಶ ಕಾಣುವ ಭರವಸೆ ತಂದುಕೊಟ್ಟಿತು.

ಬದುಕಿನ ಪ್ರತಿಯೊಂದು ಹಂತವನ್ನು ಹೋರಾಟವೆಂದು ಭಾವಿಸಿರುವ ಅವರು ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ನೆಲೆ ಕಂಡುಕೊಂಡಿದ್ದಾರೆ. ಈ ಕಾರಣಕ್ಕೆ ಅವರ ಪಾತ್ರಗಳು ಅವರಿಗೆ ಪ್ರಶಸ್ತಿಗಳು ತಂದುಕೊಟ್ಟಿವೆ. ಆಂಖೋ ದೇಖಿ, ಗೋಲ್‌ಮಾಲ್‌, ಧಮಾಲ್ ಮುಂತಾದ ಚಿತ್ರಗಳು ಅವರ ಪಾಲಿಗೆ ಮೈಲಿಗಲ್ಲುಗಳು.

ಢಾಬಾದಲ್ಲಿ ಆಮ್ಲೆಟ್‌ ಮಾಡುತ್ತಿದ್ದರು!
ತಮ್ಮ ತಂದೆಯ ಜೊತೆ ಭಾವನಾತ್ಮಕ ನಂಟು ಹೊಂದಿದ್ದರು ಮಿಶ್ರಾ. ಅವರನ್ನು ಕಳೆದುಕೊಂಡಾಗ ತುಂಬಾ ಸಂಕಟಪಟ್ಟರು. ಅಷ್ಟೇ ಅಲ್ಲ ಸಿನಿಮಾ-ಕಿರುತೆರೆಯ ಸಹವಾಸವೇ ಬೇಡವೆಂದು ಹೃಷಿಕೇಶಕ್ಕೆಹೊರಟುಬಿಟ್ಟರು. ಅಲ್ಲಿ ಸಣ್ಣಪುಟ್ಟ ನೌಕರಿ ಮಾಡುತ್ತಾ, ಢಾಬಾದಲ್ಲಿ ಆಮ್ಲೆಟ್ ಹಾಕುತ್ತ-ಗ್ರಾಹಕರೊಂದಿಗೆ ಮಾತನಾಡುತ್ತ ಕಾಲ ಕಳೆದರು. ತಂದೆಯನ್ನು ಕಳೆದುಕೊಂಡ ನೋವಿನಿಂದ ಹೊರಬರಲು ತುಂಬಾ ಪ್ರಯಾಸಪಟ್ಟರು.

ಢಾಬಾಗೆ ಬರುವ ಬಹುತೇಕ ಸಂಜಯ್ ಮಿಶ್ರಾ ಅವರನ್ನು ಕಂಡ ಕೂಡಲೇ ಅಚ್ಚರಿಪಡುತ್ತಿದ್ದರು. ಗೋಲ್‌ಮಾಲ್ ಚಿತ್ರದಲ್ಲಿ ಅಭಿನಯಿಸಿದ ಮತ್ತು ಕಿರುತೆರೆಗಳಲ್ಲಿ ನಟಿಸಿದರ ಬಗ್ಗೆ ಕೇಳುತ್ತಿದ್ದರು. ಅಷ್ಟೇ ಅಲ್ಲ, ಮೊಬೈಲ್ ಸೆಲ್ಫಿ ಕೂಡ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಈ ವಿಷಯ ಗೊತ್ತಾದ ಕೂಡಲೇ ನಿರ್ದೇಶಕ ರೋಹಿತ್ ಶೆಟ್ಟಿ ಹೃಷಿಕೇಶಕ್ಕೆ ತೆರಳಿ, ಸಂಜಯ್ ಅವರನ್ನು ಕರೆ ತಂದು ‘ಆಲ್ ದಿ ಬೆಸ್ಟ್‌’ ನಲ್ಲಿ ಪಾತ್ರವೊಂದನ್ನು ಕೊಟ್ಟರು. ನಂತರ ಅವರ ಜೀವನದ ದಿಕ್ಕೇ ಬದಲಾಯಿತು.

ಸಂಜಯ್ ಮಿಶ್ರಾ ಅವರು ಯಾವಾಗಲೂ ಒಂದು ಮಾತನ್ನು ಹೇಳುತ್ತಾರೆ. ‘ನಾನು ವೃತ್ತಿಪರ ನಟ ಅಲ್ಲ. ಆದರೆ, ಒಬ್ಬ ನಟನ ಹಾಗೆ ಬದುಕುತ್ತಿರುವೆ’. ಅಕ್ಷರಶಃ ಹೇಳಿದಂತೆಯೇ ಅವರ ಬದುಕು ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT