ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿ: ದರ್ಶನ್‌ಗೆ ಇಂದ್ರಜಿತ್

Last Updated 17 ಜುಲೈ 2021, 16:38 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರಿನ ಸಂದೇಶ್‌ ಹೋಟೆಲ್‌ನಲ್ಲಿ ನಡೆದಿದೆ ಎಂದು ಹೇಳಲಾದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೊ ಬಿಡುಗಡೆ ಮಾಡುವಂತೆ ಸವಾಲು ಹಾಕಿದ್ದ ದರ್ಶನ್‌ ಅವರಿಗೆ ಪತ್ರಕರ್ತ, ಚಿತ್ರ ನಿರ್ದೇಶಕ ಇಂದ್ರಜಿತ್‌ ಲಂಕೇಶ್‌ ಪ್ರತಿ ಸವಾಲು ಹಾಕಿದ್ದಾರೆ.

‘ನೀವು ನಿಮ್ಮ ತಂದೆಗೆ ಹುಟ್ಟಿದ್ದರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಿ. ನಿಮ್ಮ ಜೊತೆಗೆ, ಸಂದೇಶ್‌ ನಾಗರಾಜ್‌ ಅವರೂ ಬರಲಿ. ನೀವು ಹೋಟೆಲ್‌ ಕೆಲಸಗಾರನಿಗೆ ಹೊಡೆದಿರೋ ಇಲ್ಲವೋ? ನಿಂದಿಸಿದಿರೋ ಇಲ್ಲವೋ ಎಂಬುದನ್ನು ಆಣೆ ಮಾಡಿ ಹೇಳಿ. ಇಷ್ಟು ಮಾಡಿದರೆ ನೀವು ಗಂಡಸರೋ ಇಲ್ಲವೋ, ನಿಮ್ಮ ತಂದೆಗೆ ಹುಟ್ಟಿದ್ದೀರೋ ಇಲ್ಲವೋ ಎಂಬುದು ಸಾಬೀತಾಗುತ್ತದೆ,‘ ಎಂದು ಇಂದ್ರಜಿತ್‌ ಲಂಕೇಶ್‌ ಅವರು ನಟ ದರ್ಶನ್‌ ಅವರಿಗೆ ಸವಾಲು ಹಾಕಿದ್ದಾರೆ.

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ ಅವರ ಆಡಿಯೊವೊಂದು ನನ್ನ ಬಳಿ ಇದೆ ಎಂದು ಇಂದ್ರಜಿತ್‌ ಈ ಹಿಂದೆ ಹೇಳಿದ್ದರು. ಇದಕ್ಕೆ ಶನಿವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ಕಿಡಿಕಾರಿದ್ದ ದರ್ಶನ್‌, ‘ಇಂದ್ರಜಿತ್‌ ಗಂಡಸಾಗಿದ್ದರೆ, ಲಂಕೇಶ್‌ ಅವರಿಗೇ ಹುಟ್ಟಿದ್ದರೆ ಆಡಿಯೊವನ್ನು ಬಿಡುಗಡೆ ಮಾಡಲಿ,‘ ಎಂದು ಸವಾಲು ಎಸೆದಿದ್ದರು.

ಈ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿ ನಡೆಸಿದ ಇಂದ್ರಜಿತ್‌ ಲಂಕೇಶ್‌, ‘ದರ್ಶನ್‌ ವಿಚಲಿತರಾಗಿದ್ದಾರೆ. ಅವರು ವಿಚಲಿತರಾಗಬೇಕಿಲ್ಲ. ನನ್ನ ಪ್ರಶ್ನೆಗಳಿಗೆ ಉತ್ತರ ಕೊಡಲಿ. ಗಾಂಡು, ಗಂಡಸು ಪದಗಳು ನನ್ನ ಬಾಯಲ್ಲಿ ಬರುವುದು ಬೇಡ. ನಾನು ಯಾರನ್ನೂ ಅನಕ್ಷರಸ್ಥರು ಎಂದು ಹೇಳಿರಲಿಲ್ಲ,‘ ಎಂದು ಸ್ಪಷ್ಟಪಡಿಸಿದರು.

‘ಸಂಸ್ಕೃತಿ, ಸಂಸ್ಕಾರವನ್ನು ವ್ಯಕ್ತಿಯ ಭಾಷೆ ತೋರಿಸುತ್ತದೆ. ಅನಕ್ಷರಸ್ಥ ಅಂದರೆ ವಿದ್ಯಾಭ್ಯಾಸದ ಕಾರಣವಲ್ಲ. ರಾಜ್‌ಕುಮಾರ್‌ ಅವರೂ ಕಡಿಮೆ ಓದಿದ್ದರು. ಆದರೆ, ಚಿತ್ರರಂಗದ ಕಡೆಗಿನ ಅವರ ಬದ್ಧತೆ, ಕಾಳಜಿ, ಜ್ಞಾನ ದೇಶ ವಿದೇಶಕ್ಕೆ ತಿಳಿದಿದೆ,‘ ಎಂದು ಹೋಲಿಕೆ ಮಾಡಿದರು.

‘ಗಂಡಸುತನವನ್ನು ಸಾಬೀತು ಮಾಡಲಾಗದು. ನೀವು ಹಲ್ಲೆ ಮಾಡಿದ್ದೀರೋ ಇಲ್ಲವೋ ಎಂದು ನಾನು ಪ್ರಶ್ನೆ ಮಾಡಿದ್ದೇನೆ. ಅರುಣಾ ದೇವಿಯನ್ನು ನಿಮ್ಮ ಮನೆಗೆ, ತೋಟಕ್ಕೆ ಕರೆಸಿಕೊಂಡಿದ್ದೀರೋ ಇಲ್ಲವೋ? 25 ಕೋಟಿ ಪ್ರಕರಣದ ಡೀಲ್‌ ಬಗ್ಗೆ ಸ್ಪಷ್ಟನೆ ಕೊಡಿ. ನಿಮಗೂ, ನಿರ್ಮಾಪಕ ಉಮಾಪತಿಗೂ, ಅರುಣಾದೇವಿಗೂ ಇರುವ ಸಂಬಂಧವೇನು? ಸಂದೇಶ್‌ ಹೋಟೆಲ್‌ನಲ್ಲಿ ನಡೆದ ಹಲ್ಲೆಯ ಬಗ್ಗೆ ಸ್ಪಷ್ಟನೆ ಕೊಡಿ. ಹಲ್ಲೆ ನಡೆಯುವಾಗ ಅಲ್ಲಿ ಯಾರು ಇದ್ದರು. ನಿಮ್ಮ ಹಲ್ಲೆ ಪ್ರಕರಣದ ತನಿಖೆ ಏಕೆ ಆಗುತ್ತಿಲ್ಲ. ಒಬ್ಬ ಬಡವನ ಮೇಲೆ ದಾಳಿ ಮಾಡಿದ್ದು ಸರಿಯೇ?‘ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

‘ನಾನು ವಕೀಲರನ್ನು ಪಕ್ಕದಲ್ಲಿ ಕೂರಿಸಿಕೊಂಡು ಸುದ್ದಿಗೋಷ್ಠಿ ನಡೆಸಿದ್ದಕ್ಕೆ ದರ್ಶನ್‌ ಆಕ್ಷೇಪವೆತ್ತಿದ್ದಾರೆ. ನನಗೆ ಗಂಡಸುತನ ಇಲ್ಲ ಎಂದು ಹೇಳಿದ್ದಾರೆ. ಆದರೆ, ಈ ಪ್ರಕರಣ ನನ್ನ ಗಂಡಸುತನ ಸಂಬಂಧಿಸಿದ್ದಲ್ಲ. ದರ್ಶನ್‌ ಅವರ ಗಂಡಸುತನಕ್ಕೆ ಸಂಬಂಧಿಸಿದ್ದು. ನೀವು ಹೋಟೆಲ್‌ ಕೆಲಸಗಾರನಿಗೆ ಹೊಡೆದಿದ್ದು, ಮಹಿಳೆಯನ್ನು ಮನೆಗೆ ಕರೆಸಿಕೊಂಡಿದ್ದು ಗಂಡಸುತನ ಸಾಬೀತು ಮಾಡಲೋ? ನಿಮ್ಮ ಪತ್ನಿಯ ಪ್ರಕರಣದಲ್ಲಿ ವಕೀಲರನ್ನು ನೀವು ಏಕೆ ಕರೆಸಿಕೊಂಡಿದ್ದಿರಿ? ಎಂದು ಅವರು ಪ್ರಶ್ನೆಗಳ ಸುರಿಮಳೆಗೈದರು.

‘ತಾಕತ್ತು, ಗಂಡಸುತನ ಎಲ್ಲವೂ ಸಿನಿಮಾದಲ್ಲಿ ತೋರಿಸುವ ರಂಜನೀಯ ವಿಷಯಗಳು ಅದನ್ನು ಅಲ್ಲೇ ತೋರಿಸಿಕೊಳ್ಳಿ,‘ ಎಂದೂ ಅವರು ಸಲಹೆ ನೀಡಿದರು.

ದರ್ಶನ್‌ ಅವರು ಹೇಳಿದಂತೆ, ನಿಮ್ಮ ಬಳಿ ಆಡಿಯೊ ಇದೆಯೇ? ಅದನ್ನು ಬಿಡುಗಡೆ ಮಾಡುವಿರಾ ಎಂಬ ಪ್ರಶ್ನೆಗೆ ಉತ್ತರಿಸಿರುವ ಇಂದ್ರಜಿತ್‌, ‘ನನ್ನ ಬಳಿ ಇರುವ ಸಾಕ್ಷ್ಯವನ್ನು ನಾನು ಯಾರಿಗೆ ನೀಡಬೇಕೋ ಅವರಿಗೆ ನೀಡುತ್ತೇನೆ. ಪೊಲೀಸರು ಕೇಳಿದರೆ ಅವರಿಗೆ ಒದಗಿಸುತ್ತೇನೆ,‘ ಎಂದು ಸ್ಪಷ್ಟಪಡಿಸಿದರು.

‘ಡ್ರಗ್ಸ್‌ ಪ್ರಕರಣವನ್ನು ಉಲ್ಲೇಖಿಸಿ ದರ್ಶನ್‌ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡ್ರಗ್ಸ್‌ ಪ್ರಕರಣದಿಂದ ಎಷ್ಟು ಮಂದಿ ಪೆಡ್ಲರ್‌ಗಳು ಹೊರಬಂದರು, ಎಷ್ಟು ಮಾದಕ ದ್ರವ್ಯ ಸಿಕ್ಕಿಬಿದ್ದಿದೆ. ಇದರಿಂದ ದರ್ಶನ್‌ ಅವರಿಗೆ ಏನಾದರೂ ಸಮಸ್ಯೆ ಆಗಿದೆಯೇ,‘ ಎಂದು ಇಂದ್ರಜಿತ್‌ ಪ್ರಶ್ನಿಸಿದ್ದಾರೆ.

ಮೈಸೂರಿನ ಹಲ್ಲೆ ಪ್ರಕರಣದಲ್ಲಿ ದರ್ಶನ್‌ ಕ್ಷಮೆ ಕೇಳಿದಿದ್ದರೆ ದೊಡ್ಡವರಾಗುತ್ತಿದ್ದರು. ಅವರು ಕ್ಷಮೆ ಕೇಳುವುದು ಮಾತ್ರವಲ್ಲ. ಹಲ್ಲೆಯಾದವರಿಗೆ ಸಹಾಯವನ್ನೂ ಮಾಡಬೇಕಿತ್ತು ಎಂದು ಇಂದ್ರಜಿತ್‌ ಅಭಿಪ್ರಾಯಪಟ್ಟಿದ್ದಾರೆ.

‘ಒಂದು ಆಸ್ತಿ ವಿಚಾರದಲ್ಲಿ ದರ್ಶನ್‌, ಉಮಾಪತಿ ಅವರ ನಡುವೆ ಗಲಾಟೆ ಆಗಿದೆ. ಇದರಲ್ಲೇ ಅರುಣಾದೇವಿ ಅವರ ವಿಚಾರವೂ ಬಂದಿದೆ,‘ ಎಂಬುದು ನನ್ನ ಮೂಲಗಳ ಮಾಹಿತಿಯಿಂದ ಗೊತ್ತಾಗಿದೆ ಎಂದು ಅವರು ಕಡೆಯಲ್ಲಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT