ಬುಧವಾರ, ಮೇ 18, 2022
24 °C

‘ಅಪ್ಪು’ ಧ್ವನಿಯಲ್ಲೇ ‘ಜೇಮ್ಸ್‌’ ಸಿನಿಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಟ ದಿವಂಗತ ಪುನೀತ್ ರಾಜ್‌ಕುಮಾರ್‌ ನಟನೆಯ ‘ಜೇಮ್ಸ್‌’ ಸಿನಿಮಾ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ 25 ದಿನಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳ ಮುಂದೆ ಪುನೀತ್‌ ಮತ್ತೆ ಜನ್ಮತಾಳಲಿದ್ದಾರೆ. ಪುನೀತ್‌ ಅವರ ಧ್ವನಿಯಲ್ಲೇ ‘ಜೇಮ್ಸ್‌’ ಏ.22ರಂದು ರಿರಿಲೀಸ್‌ ಆಗಲಿದೆ.

ಪುನೀತ್‌ ಅವರ ಜನ್ಮದಿನದಂದು(ಮಾರ್ಚ್‌ 17) ಜೇಮ್ಸ್‌ ತೆರೆಕಂಡಿತ್ತು. ಕರ್ನಾಟಕ ಸೇರಿದಂತೆ ವಿಶ್ವವ್ಯಾಪಿ ಒಟ್ಟು 4 ಸಾವಿರಕ್ಕೂ ಅಧಿಕ ತೆರೆಗಳಲ್ಲಿ ಸಿನಿಮಾ ಪ್ರದರ್ಶನ ಕಂಡಿತ್ತು. ಸಿನಿಮಾದ ಡಬ್ಬಿಂಗ್‌ ಪೂರ್ಣಗೊಳ್ಳುವ ಮೊದಲೇ ಪುನೀತ್‌ ಅವರು ನಿಧನರಾದ ಕಾರಣ ನಟ ಶಿವರಾಜ್‌ಕುಮಾರ್‌ ಅವರು ಪುನೀತ್‌ ಅವರ ಪಾತ್ರಕ್ಕೆ ಧ್ವನಿ ನೀಡಿದ್ದರು.

ಇದೀಗ ನೂತನ ತಂತ್ರಜ್ಞಾನವನ್ನು ಬಳಸಿಕೊಂಡು ಪುನೀತ್‌ ಅವರ ಧ್ವನಿಯನ್ನೇ ಮರುಸೃಷ್ಟಿಸಲಾಗಿದೆ. ತೆಲುಗು ನಟ ಪ್ರಭಾಸ್‌ ಅವರು ಬಂಡವಾಳ ಹೂಡಿರುವ ಬಿಡ್‌ ಮಂತ್ರ ಕಂಪನಿಯ ಖ್ಯಾತ ಸೌಂಡ್‌ ಎಂಜಿನಿಯರ್‌ ಶ್ರೀನಿವಾಸ್‌ ರಾವ್‌ ತಂಡ ಪುನೀತ್‌ ಅವರ ಧ್ವನಿಗೆ ಮರುಜೀವ ನೀಡಿದೆ. ‘ಪ್ರಸ್ತುತ 67 ಚಿತ್ರಮಂದಿರಗಳಲ್ಲಿ ಜೇಮ್ಸ್‌ ಪ್ರದರ್ಶನ ಕಾಣುತ್ತಿದ್ದು, ಏ.22ರಿಂದ ಮತ್ತೆ ಸುಮಾರು 60–70 ಚಿತ್ರಮಂದಿರಗಳು ಸೇರ್ಪಡೆಯಾಗಲಿವೆ. ಇವುಗಳೆಲ್ಲದರಲ್ಲೂ ಅಪ್ಪು ಅವರ ಧ್ವನಿಯ ಜೇಮ್ಸ್‌ ಮರುಬಿಡುಗಡೆಯಾಗಲಿದೆ. ನಾನು ಅಪ್ಪು ಅವರ ಧ್ವನಿಯಲ್ಲೇ ಇಡೀ ಸಿನಿಮಾ ನೋಡಿದ್ದೇನೆ. ನನಗಂತೂ ರೋಮಾಂಚನವಾಗಿದೆ’ ಎಂದು ನಿರ್ದೇಶಕ ಚೇತನ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.  

‘ಪ್ರಸ್ತುತ ಲಭ್ಯವಿರುವ ಗ್ರಾಫಿಕ್ಸ್‌ ತಂತ್ರಜ್ಞಾನವನ್ನು ಬಳಸಿ ಒಬ್ಬ ವ್ಯಕ್ತಿಯನ್ನು ತೆರೆಯ ಮೇಲೆ ಮತ್ತೆ ಜೀವಂತವಾಗಿಸಲು ಸಾಧ್ಯವಾಗಿದೆ. ಆದರೆ ಧ್ವನಿ ವಿಚಾರದಲ್ಲಿ ಕೇವಲ ಸಂಶೋಧನೆ ನಡೆಯುತ್ತಿತ್ತು. ಇದೀಗ ದೇಶದಲ್ಲೇ ಮೊದಲ ಬಾರಿಗೆ ಬಿಡ್‌ ಮಂತ್ರ ಈ ಸಂಶೋಧನೆಯಲ್ಲಿ ಯಶಸ್ಸು ಸಾಧಿಸಿದೆ. ಅವರು ಅಪ್ಪು ಅವರ ಧ್ವನಿಯನ್ನು ರಿಕ್ರಿಯೇಟ್‌ ಮಾಡಿ ನೀಡಿದ್ದಾರೆ. ಹೊಸ ಧ್ವನಿಯ ದೃಶ್ಯಗಳನ್ನು ಶಿವರಾಜ್‌ಕುಮಾರ್‌, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರೂ ನೋಡಿದ್ದು ಎಲ್ಲರಿಗೂ ಖುಷಿಯಾಗಿದೆ. ಅವರೂ ಏ.22ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವ ಸಾಧ್ಯತೆ ಇದೆ. ಚಿತ್ರಮಂದಿರಗಳಲ್ಲಿ ತೆರೆ ಕಂಡ ಬಳಿಕ, ಒಟಿಟಿಯಲ್ಲೂ ಅಪ್ಪು ಅವರ ಧ್ವನಿಯಲ್ಲೇ ಸಿನಿಮಾ ತೆರೆ ಕಾಣಲಿದೆ’ ಎಂದರು ಚೇತನ್‌.

‘ಚಿತ್ರೀಕರಣದ ಸಮಯದಲ್ಲೇ ದಾಖಲಾಗಿದ್ದ ಅಪ್ಪು ಅವರ ಧ್ವನಿಯನ್ನು ಮತ್ತಷ್ಟು ಸ್ಪಷ್ಟವಾಗಿ ಕೇಳುವಂತೆ ಮಾಡಲು ನಾಲ್ಕು ಕಂಪನಿಗಳಿಗೆ ಅದನ್ನು ಕ್ಲೀನಿಂಗ್‌ಗೆ ನೀಡಿದ್ದೆವು. ಆದರೆ ಇದರಲ್ಲಿ ದೊರಕಿದ್ದ ಧ್ವನಿ ನಮಗೆ ತೃಪ್ತಿ ತಂದಿರಲಿಲ್ಲ. ಉಳಿದಂತೆ ಮತ್ತೊಂದಿಷ್ಟು ಕಂಪನಿಗೆ ಧ್ವನಿ ರಿಕ್ರಿಯೇಟ್‌ ಮಾಡಲು ನೀಡಿದ್ದೆವು. ಪುನೀತ್‌ ರಾಜ್‌ಕುಮಾರ್‌ ಅವರ ಹಿಂದಿನ ಸಿನಿಮಾಗಳಲ್ಲಿನ ಧ್ವನಿ, ಅಪ್ಪು ಅವರ ಸಂದರ್ಶನ, ಕನ್ನಡದ ರಿಯಾಲಿಟಿ ಶೋಗಳಲ್ಲಿನ 15 ಗಂಟೆಗಳ ಧ್ವನಿ ಸಂಗ್ರಹವನ್ನು ಕಂಪನಿಗೆ ನೀಡಲಾಗಿತ್ತು’ ಎಂದು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು