ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ ಅವರು ‘ಸುಧಾ’ಕ್ಕೆ ನೀಡಿದ್ದ ವಿಶೇಷ ಸಂದರ್ಶನದ ಆಯ್ದ ಭಾಗ 2019ರ ಫೆಬ್ರುವರಿ 6ರಂದು ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡಿತ್ತು. ಅದನ್ನು ಯಥಾವತ್ ಇಲ್ಲಿ ನೀಡಲಾಗಿದೆ.

ಕನ್ನಡ ಚಿತ್ರರಂಗದ ನಾಯಕಿಯರ ಪರಂಪರೆ ಉಜ್ವಲವಾಗಿದ್ದ ದಿನಗಳಲ್ಲಿ ಚಿತ್ರರಸಿಕರ ಕಣ್ಮಣಿಯಾಗಿ ಕಂಗೊಳಿಸಿದವರು ನಟಿ ಜಯಂತಿ. ಅಭಿನಯ ಚಾತುರ್ಯದಿಂದ ‘ಅಭಿನಯ ಶಾರದೆ’ ಎನ್ನುವ ಪ್ರಶಂಸೆಗೆ ಒಳಗಾದ ಅವರು, ಗ್ಲಾಮರಸ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಯುವಪ್ರೇಕ್ಷಕರ ಮೈಮನಗಳಲ್ಲಿ ಮಿಂಚಿನಹೊಳೆ ಹರಿಸಿದವರು.

‘ಚಂದವಳ್ಳಿಯ ತೋಟ’, ‘ಚಕ್ರತೀರ್ಥ’, ‘ಮಿಸ್ ಲೀಲಾವತಿ’, ‘ಮಣ್ಣಿನ ಮಗಳು’, ‘ಎಡಕಲ್ಲು ಗುಡ್ಡದ ಮೇಲೆ’, ‘ಭಲೇ ಬಸವ’, ‘ಬೆಟ್ಟದ ಹುಲಿ’, ‘ಶ್ರೀಕೃಷ್ಣ ದೇವರಾಯ’, ‘ಕಸ್ತೂರಿ ನಿವಾಸ’, ‘ಬಹದ್ದೂರ್ ಗಂಡು’ ಅವರ ಅಭಿನಯದ ಕೆಲವು ಜನಪ್ರಿಯ ಚಿತ್ರಗಳು. 1968ರಲ್ಲಿ ತೆರೆಕಂಡ ‘ಜೇನುಗೂಡು’ ಅವರು ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದ ಮೊದಲ ಸಿನಿಮಾ. ಬೆಳ್ಳಿತೆರೆ ಬದುಕಿಗೆ ಐವತ್ತು ವರ್ಷಗಳು ತುಂಬಿದ ಸಂದರ್ಭದಲ್ಲಿ, ಜಯಂತಿ ಅವರು ‘ಸುಧಾ’ಕ್ಕೆ ನೀಡಿದ್ದ ವಿಶೇಷ ಸಂದರ್ಶನ ಆಯ್ದಭಾಗಗಳು ಇಲ್ಲಿವೆ.

* ‘ಜಗದೇಕವೀರ’ನ ಕಥೆಯಲ್ಲಿ ಪುಟ್ಟ ಪಾತ್ರ ನಿರ್ವಹಿಸಿದ್ದು ಬಿಟ್ಟರೆ, ‘ಜೇನುಗೂಡು’ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದ ನಿಮ್ಮ ಮೊದಲ ಸಿನಿಮಾ. ಹೆಣ್ಣುಮಕ್ಕಳು ಸಿನಿಮಾದಲ್ಲಿ ನಟಿಸಲು ಹಿಂಜರಿಯುತ್ತಿದ್ದ ದಿನಗಳಲ್ಲಿ ನೀವು ನಟಿಯಾದುದು ಹೇಗೆ?

ಸಿನಿಮಾದಲ್ಲಿ ನಟಿಸುವ ಆಸೆ ನನಗಾಗಲೀ ನನ್ನ ಅಪ್ಪ–ಅಮ್ಮನಿಗಾಗಲೀ ಇರಲಿಲ್ಲ. ಚಾಮುಂಡೇಶ್ವರಿ ದಯೆಯಿಂದ ನಮ್ಮದು ಒಳ್ಳೆಯ ಕುಟುಂಬ. ಯಾವುದಕ್ಕೂ ಕೊರತೆಯಿರಲಿಲ್ಲ. ಶಾಲಾದಿನಗಳಲ್ಲಿ ನಮ್ಮ ಟೀಚರ್ಸ್‌ಗೆ ನನ್ನನ್ನು ಕಂಡರೆ ವಿಪರೀತ ಅಕ್ಕರೆ. ‘ಎರಡು ಜಡೆ ಕಮಲಕುಮಾರಿ’ ಎಂದು ಕರೆಯುತ್ತಿದ್ದರು. ಎರಡು ಜಡೆ ಅಂದರೆ ನನಗೂ ಇಷ್ಟ. ಅನೇಕ ಸಿನಿಮಾಗಳಲ್ಲಿ ನಾನು ಎರಡು ಜಡೆಯಲ್ಲಿ ಕಾಣಿಸಿಕೊಂಡಿದ್ದೇನೆ. ಶಾಲಾ ವಾರ್ಷಿಕೋತ್ಸವದಲ್ಲಿ ನನಗೆ ಒಂದು ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿತ್ತು. ‘ಬೃಂದಾವನಮದಿ ಅಂದಿರಿದಿ. ಗೋವಿಂದುಡು ಅಂದರಿವಾಡೆ’ ಎನ್ನುವ ತೆಲುಗು ಚಿತ್ರವೊಂದರಲ್ಲಿ ಜಮುನಾ ಅವರು ನಟಿಸಿದ್ದ ಹಾಡಿಗೆ ನೃತ್ಯ ಮಾಡಬೇಕಿತ್ತು. ನನ್ನ ಮುಗ್ಧ ನೃತ್ಯ ಎಲ್ಲರಿಗೂ ಇಷ್ಟವಾಯಿತು.

ಅಮ್ಮನಂತೂ ‘ನನ್ನ ಮಗಳು ದೊಡ್ಡ ನೃತ್ಯಗಾತಿ’ ಎಂದು ಬೀಗಿದರು. ನೃತ್ಯಕ್ಷೇತ್ರದಲ್ಲಿ ಆಕರ್ಷಣೆ ಉಂಟಾದುದು ಹೀಗೆ. ನನ್ನ ಪ್ರದರ್ಶನಗಳಿಗೆ ಸಣ್ಣಪುಟ್ಟ ಬಹುಮಾನಗಳು ದೊರೆಯುತ್ತಿದ್ದವು – ಕನ್ನಡಿ, ಬಾಚಣಿಗೆ, ಪೌಡರ್ ಡಬ್ಬ, ನೋಟ್‌ಬುಕ್, ಹೀಗೆ. ಆ ಸಣ್ಣ ಬಹುಮಾನಗಳೇ ಆಗ ಈಗಿನ ರಾಜ್ಯಪ್ರಶಸ್ತಿಗಳ ರೀತಿ ಖುಷಿ ಕೊಡುತ್ತಿದ್ದವು.

ನನ್ನ ನೃತ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಊರಿಂದ ನಮ್ಮ ಕುಟುಂಬ ಚೆನ್ನೈಗೆ ಬಂದು ನೆಲೆಸಿತು. ಚಂದ್ರಕಲಾ ಎನ್ನುವ ನೃತ್ಯಗುರು ದೊರೆತರು. ಅವರು ನೃತ್ಯಶಾಲೆ ನಡೆಸುವುದರ ಜೊತೆಗೆ ಸಿನಿಮಾಗಳಲ್ಲಿ ನೃತ್ಯ ಸನ್ನಿವೇಶಗಳಲ್ಲೂ ಕಾಣಿಸಿಕೊಳ್ಳುತ್ತಿದ್ದರು. ಆ ನೃತ್ಯಶಾಲೆಯಲ್ಲಿ ಮನೋರಮಾ ನನ್ನ ಸೀನಿಯರ್. ಎಲ್ಲರೂ ನನ್ನನ್ನು ರೇಗಿಸುತ್ತಿದ್ದರು. ನಾನು ಮೊದಲಿನಿಂದಲೂ ಸ್ವಲ್ಪ ದುಂಡದುಂಡಗೆ. ಅಮ್ಮ ನನ್ನನ್ನು ಹಾಗೆ ಸಾಕಿದ್ದರು. ಸಂಜೆ ಶಾಲೆಯಿಂದ ಬರುತ್ತಿದ್ದಂತೆ ತುಪ್ಪ ಹಾಗೂ ಸಕ್ಕರೆಯನ್ನು ಕಲಸಿ ಬಟ್ಟಲಿಗೆ ಹಾಕಿ ಕೊಡುತ್ತಿದ್ದರು.

ಮನೆಯಂಗಳದಲ್ಲಿನ ಮರದ ಮೇಲೆ ಕುಳಿತು ಬಟ್ಟಲು ಖಾಲಿ ಮಾಡುತ್ತಿದ್ದೆ. ಹೀಗೆ ತುಪ್ಪ–ಸಕ್ಕರೆ ತಿಂದು ಬೆಳೆದ ಶರೀರ ಹೇಗೆ ಸಣ್ಣಗಾಗುತ್ತೆ? ‘ಇವಳು ಡಾನ್ಸ್ ಕಲೀತಾಳಾ? ಧಡಗಲಿ, ಇವಳ ಕಾಲು ಬಗ್ಗುತ್ತಾ, ಸೊಂಟ ಬಗ್ಗುತ್ತಾ’ ಎಂದೆಲ್ಲ ರೇಗಿಸುತ್ತಿದ್ದರು. ನನಗೆ ಅಳು ಬರುತ್ತಿತ್ತು. ನನಗೆ ಅಳು ಬಂದರೆ ಗೋಡೆಯನ್ನು ಕವುಚಿಕೊಂಡು ಅಳುತ್ತಿದ್ದೆ. ಒಂದು ದಿನ ಹೀಗೆ ಅಳುತ್ತಿರುವಾಗ, ಮನೋರಮಾ ಬಂದರು. ‘ಯಾಕೆ ಕಮಲಾ ಅಳುತ್ತಿದ್ದೀಯ?’ ಎಂದರು. ನಾನು ಅಳುತ್ತಲೇ ವಿಷಯ ತಿಳಿಸಿದೆ. ಅವರು ಎಲ್ಲರನ್ನೂ ಕರೆದು ತರಾಟೆಗೆ ತೆಗೆದುಕೊಂಡರು. ‘ಇನ್ನೊಮ್ಮೆ ಅವಳ ತಂಟೆಗೆ ಬಂದರೆ ಹುಷಾರ್’ ಎಂದು ಎಚ್ಚರಿಸಿದರು. ಗುರುಗಳು ಕೂಡ ಅಲ್ಲಿಗೆ ಬಂದು, ಎಲ್ಲರನ್ನೂ ಬೈದರು, ಎಲ್ಲರೂ ಒಟ್ಟಿಗೆ ಕಲಿಯುವಂತೆ ಬುದ್ಧಿ ಹೇಳಿದರು.

ಒಂದು ದಿನ ನಮ್ಮ ಚಂದ್ರಕಲಾ ಮೇಡಂ ಶೂಟಿಂಗ್‌ಗೆ ಹೋಗಿದ್ದರು. ಶೂಟಿಂಗ್ ನೋಡಲೆಂದು ನಾವೆಲ್ಲ ‘ಗೋಲ್ಡನ್ ಸ್ಟುಡಿಯೋ’ಗೆ ಹೋದೆವು. (ಆಗ ಕನ್ನಡ ಸಿನಿಮಾಗಳಿಗೆ ಡೇಟ್ಸ್ ಕೊಡುತ್ತಿದ್ದುದು ಗೋಲ್ಡನ್ ಸ್ಟುಡಿಯೋ ಮಾತ್ರ. ಅದೂ ರಾತ್ರಿ ಸಮಯದಲ್ಲಿ). ಫ್ಲೋರ್‌ನ ಒಂದು ಬದಿಯಲ್ಲಿ ನಿಂತು ಡಾನ್ಸ್ ನೋಡುತ್ತಿದ್ದೆ. ಎತ್ತರದಲ್ಲಿ ನಿಂತವರನ್ನು ನೋಡುತ್ತಾ ಅಚ್ಚರಿಗೊಳ್ಳುತ್ತಿದ್ದೆ. ಸಣ್ಣ ಸಣ್ಣ ಷಾಟ್‌ಗಳನ್ನು ನೋಡಿ ವಿಚಿತ್ರ ಎನ್ನಿಸುತ್ತಿತ್ತು. ಅದೇ ನಾನು ಮೊದಲು ಶೂಟಿಂಗ್ ನೋಡಿದ್ದು.

ನಿರ್ದೇಶಕ ವೈ.ಆರ್. ಸ್ವಾಮಿ ಅವರು ತಮ್ಮ ‘ಜೇನುಗೂಡು’ ಸಿನಿಮಾಕ್ಕಾಗಿ ನಾಯಕಿಯರ ಹುಡುಕಾಟದಲ್ಲಿದ್ದರು. ಪಂಢರಿಬಾಯಿ ಹಾಗೂ ಚಂದ್ರಕಲಾ (ನಮ್ಮ ಗುರುಗಳಲ್ಲ, ಸಿನಿಮಾ ನಾಯಕಿ) ಎರಡು ಪಾತ್ರಗಳಿಗೆ ಗೊತ್ತಾಗಿದ್ದರು. ಮತ್ತೊಂದು ಪಾತ್ರಕ್ಕಾಗಿ ಸ್ವಾಮಿ ಅವರು ಹೊಸ ನಟಿಯ ಅನ್ವೇಷಣೆಯಲ್ಲಿದ್ದರು. ಅವರು ನಾವು ಶೂಟಿಂಗ್ ನೋಡುತ್ತಿದ್ದ ಫ್ಲೋರ್‌ಗೆ ಬಂದರು. ನನ್ನ ಅದೃಷ್ಟ ಇರಬೇಕು – ಗುಂಪಿನಲ್ಲಿದ್ದ ನಾನು ಅವರ ಕಣ್ಣಿಗೆ ಬಿದ್ದೆ. ಚಂದ್ರಕಲಾ ಅವರ ಸ್ಟೂಡೆಂಟ್ ಎಂದು ಗೊತ್ತಾದ ಮೇಲೆ ನನ್ನನ್ನು ಕರೆದು ಹೆಸರು ಕೇಳಿದರು. ‘ಕಮಲಾ’ ಎಂದು ಅಳುಕುತ್ತಲೇ ಹೇಳಿದೆ. ‘ಗಟ್ಟಿಯಾಗಿ ಹೇಳು. ಕಮಲಾ ಅಷ್ಟೇನಾ, ಇನ್ನೂ ಬಾಲ ಇದೆಯಾ?’ ಎಂದರು. ನಮ್ಮ ಸಿನಿಮಾದಲ್ಲಿ ಅಭಿನಯಿಸುತ್ತೀಯ ಎಂದರು.

ನಾನು ಗುರುಗಳ ಮುಖ ನೋಡಿದೆ. ಮಾರನೇ ದಿನ ಮನೆಗೆ ಬಂದು ಅಪ್ಪ ಅಮ್ಮನನ್ನು ಕೇಳಿದರು. ಅವರು ಒಪ್ಪಲಿಲ್ಲ. ಆಗ ಸಿನಿಮಾ ಹಾಗೂ ಸಿನಿಮಾ ಜನ ಎಂದರೆ ಸಮಾಜದಲ್ಲಿ ಒಳ್ಳೆಯ ಅಭಿಪ್ರಾಯ ಇರಲಿಲ್ಲ. ‘ಕೆಟ್ಟದು, ಒಳ್ಳೆಯದು ಎಲ್ಲ ಜಾಗದಲ್ಲೂ ಇರುತ್ತೆ. ನಾವು ಒಳ್ಳೆಯವರಾಗಿದ್ದರೆ ಎಲ್ಲರೂ ಒಳ್ಳೆಯವರಾಗಿರುತ್ತಾರೆ. ನಿಮ್ಮ ಮಗಳನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನದು’ ಎಂದು ಸ್ವಾಮಿ ಭರವಸೆ ನೀಡಿದರು. ನಿರ್ದೇಶಕರನ್ನು ಮೂರು ದಿನ ಸುತ್ತಾಡಿಸಿದ ಮೇಲೆ ಅಪ್ಪ ಅಮ್ಮ ಒಪ್ಪಿಕೊಂಡರು.

ಮೊದಲ ದಿನ ಒಬ್ಬರು ಮೇಕಪ್ ಹಾಕಿದರು. ಇನ್ನೊಬ್ಬರು ಬಂದು ಕೂದಲಿಗೆ ಕೈ ಹಾಕಿದರು. ನನಗೋ ಇರುಸುಮುರುಸು. ಎಲ್ಲವನ್ನೂ ಸಹಿಸಿಕೊಂಡು ಮೊದಲ ದೃಶ್ಯದಲ್ಲಿ ನಿರ್ದೇಶಕರು ಹೇಳಿಕೊಟ್ಟಂತೆಯೇ ಸಂಭಾಷಣೆ ಹೇಳಿದೆ. ಎಲ್ಲರೂ ಚಪ್ಪಾಳೆ ತಟ್ಟಿದರು. ಮೊದಲ ದಿನದ ಶೂಟಿಂಗ್ ಮುಗಿದಾಗ ನಿರ್ದೇಶಕರು – ‘ಗಿಳಿಮರಿ ಇದು’ ಎಂದು ಮೆಚ್ಚಿಕೊಂಡರು. ಆಮೇಲೆ, ‘ಗಿಳಿಮರಿ’ ಎಂದೇ ನನ್ನನ್ನು ಕರೆಯತೊಡಗಿದರು. ನನ್ನ ಬಳ್ಳಾರಿ ಸ್ಲಾಂಗಿನ ಕನ್ನಡವನ್ನು ಸಿನಿಮಾ ಕನ್ನಡಕ್ಕೆ ಒಗ್ಗಿಸಿಕೊಳ್ಳಲು ಉತ್ತೇಜಿಸಿದರು. ಇದು ನಾನು ಚಿತ್ರರಂಗ ಪ್ರವೇಶಿಸಿದ ಕಥೆ.

* ಜೇನುಗೂಡಿನಲ್ಲಿ ಸಿಹಿಯನ್ನು ಸವಿದದ್ದಾಯಿತು. ಮುಂದಿನ ಪಯಣ ಹೇಗಿತ್ತು?

‘ಚಂದವಳ್ಳಿಯ ತೋಟ’ ಎರಡನೇ ಸಿನಿಮಾ. ಟಿ.ವಿ. ಸಿಂಗ್ ಠಾಕೂರ್ ನಿರ್ದೇಶಕರು. ಮೊದಲ ಸಿನಿಮಾದಲ್ಲಿನ ಮೂವರು ನಾಯಕಿಯರಲ್ಲಿ ನಾನೂ ಒಬ್ಬಳು; ಎರಡನೇ ಸಿನಿಮಾದಲ್ಲಿ ನಾನೊಬ್ಬಳೇ ಹೀರೊಯಿನ್. ಆ ಸಿನಿಮಾ ಪ್ರಶಸ್ತಿಯನ್ನೂ ಪಡೆಯಿತು. ದೆಹಲಿಯಲ್ಲಿ ಪ್ರಶಸ್ತಿಪ್ರದಾನ ಸಮಾರಂಭದಲ್ಲಿ ಇಂದಿರಾಗಾಂಧಿ ಅವರು ನನ್ನನ್ನು ಬಳಿಗೆ ಕರೆದು ಪ್ರೀತಿಯಿಂದ ಮುತ್ತು ಕೊಟ್ಟರು, ಫೋಟೊ ತೆಗೆಸಿಕೊಳ್ಳಲು ಅವಕಾಶ ಕೊಟ್ಟರು.

‘ಚಂದವಳ್ಳಿಯ ತೋಟ’ ಚಿತ್ರದ ಸಂದರ್ಭದಲ್ಲಿ ಕಮಲಕುಮಾರಿ ಹೆಸರು ಉದ್ದವಾಯಿತು ಎಂದರು. ಕಮಲಾ ಹೆಸರಿನ ಯಾರೂ ಕಲಾವಿದರಾಗಿ ಏಳಿಗೆ ಕಾಣದ್ದರಿಂದ ಜಯಂತಿ ಎಂದು ನಾಮಕರಣವಾಯಿತು. ತ್ರಿದೇವಿಯವರ ಹೆಸರನ್ನು ಪ್ರತಿನಿಧಿಸುವ ಹೆಸರಿದು. ಅಂದಿನಿಂದ ನಾನು ಜಯಂತಿ ಎಂದೇ ಹೆಸರಾದೆ. ಕೆಲವು ಸಿನಿಮಾಗಳಲ್ಲಿ ಜಯಂತಿ ಹೆಸರಿನ ನಂತರ ಕಮಲಕುಮಾರಿ ಎಂದು ಬ್ರಾಕೆಟ್‌ನಲ್ಲಿ ಬರೆದಿರುವುದಿದೆ.

ನನ್ನ ನಾಲ್ಕನೇ ಸಿನಿಮಾ ‘ಮಿಸ್ ಲೀಲಾವತಿ’. ಮೊದಲಿಗೆ ಸಾಹುಕಾರ್ ಜಾನಕಿ ಅವರನ್ನು ನಾಯಕಿಯನ್ನಾಗಿ ನಿರ್ದೇಶಕ ಎಂ.ಆರ್. ವಿಠ್ಠಲ್ ಅವರು ಆರಿಸಿದ್ದರು. ಅವರ ಸ್ನೇಹಿತೆಯ ಪಾತ್ರ ನನ್ನದು. ಆದರೆ, ನಾಯಕಿ ಪಾತ್ರಕ್ಕೆ ಅವಶ್ಯವಾಗಿದ್ದ ಸ್ವಿಮ್ಮಿಂಗ್ ಕಾಸ್ಟ್ಯೂಮ್ ಹಾಕಿಕೊಳ್ಳಲು ಜಾನಕಿಯಮ್ಮ ಒಪ್ಪಲಿಲ್ಲ. ವಿಠ್ಠಲ್ ಅಪ್ಪಾಜಿ ಎಷ್ಟು ಹೇಳಿದರೂ ಅವರು ನಿರ್ಧಾರ ಬದಲಿಸಲಿಲ್ಲ. ಹಾಗಾಗಿ, ಆ ಪಾತ್ರ ನನ್ನ ಪಾಲಿಗೆ ಬಂತು. ವಿಠ್ಠಲ್ ಅಪ್ಪಾಜಿಗೆ ನನ್ನನ್ನು ಕಂಡರೆ ತುಂಬಾ ಇಷ್ಟ. ಅವರ ಮಗಳು ನನ್ನ ರೀತಿಯೇ ಇದ್ದರಂತೆ. ಗಂಡಹೆಂಡತಿ ಇಬ್ಬರೂ ಆಗಾಗ ನನ್ನನ್ನು ನೆನಪಿಸಿಕೊಂಡು ಬಂದು ನೋಡಿಕೊಂಡು ಹೋಗುತ್ತಿದ್ದರು. ಅಪ್ಪಾಜಿ ಮೊದಲು ದೃಶ್ಯ ವಿವರಿಸಿ, ‘ಆ ದೃಶ್ಯ ಒಪ್ಪಿಕೊಂಡರೆ ಮಾತ್ರ ಮುಂದಿನ ಕಥೆ ಹೇಳುತ್ತೇನೆ’ ಎಂದರು.

ನಾನು ಸ್ವಿಮ್ಮಿಂಗ್ ಕಲಿತಿದ್ದರಿಂದ ಆ ದೃಶ್ಯ ಸಂಕೋಚವೆನ್ನಿಸಲಿಲ್ಲ. ನನ್ನ ತಾಯಿ ನನ್ನನ್ನು ಹುಡುಗನಂತೆಯೇ ಬೆಳೆಸಿದ್ದರು. ಹುಡುಗರ ಬಟ್ಟೆಗಳನ್ನೇ ಹಾಕುತ್ತಿದ್ದರು. ಹಾಗಾಗಿ ಪಾತ್ರಗಳ ಮಡಿವಂತಿಕೆಯ ಬಗ್ಗೆ ಸಂಕೋಚಪಡುವ ಪ್ರಶ್ನೆ ಇರಲಿಲ್ಲ. ‘ಜೇಡರಬಲೆ’ಯಲ್ಲೂ ಸ್ವಿಮ್ ಸೂಟ್‌ನಲ್ಲಿ ಕಾಣಿಸಿಕೊಂಡೆ. ಆದರೆ, ಆ ಚಿತ್ರವನ್ನು ಮನೆಯಲ್ಲಿ ಬೇಡವೆಂದರು. ದೊರೆ–ಭಗವಾನ್ ನನಗೆ ಗುರುಗಳಿದ್ದಂತೆ. ಅವರ ಮೇಲಿನ ಗೌರವದಿಂದ ಮನೆಯವರನ್ನು ಒಪ್ಪಿಸಿದೆ.

* ರಾಜ್‌ಕುಮಾರ್ ಅವರನ್ನು ಮೊದಲ ಬಾರಿಗೆ ಭೇಟಿಯಾದ ಅನುಭವ ಹೇಗಿತ್ತು?

ಆಗ ಮದರಾಸಿನಲ್ಲಿ ಮಾರ್ನಿಂಗ್ ಷೋಗಳಲ್ಲಿ ಕನ್ನಡ ಸಿನಿಮಾ ಪ್ರದರ್ಶಿಸುತ್ತಿದ್ದರು. ರಾಜಕುಮಾರ್ ಅವರ ‘ಬೇಡರ ಕಣ್ಣಪ್ಪ’ ಚಿತ್ರವನ್ನು ನೋಡಿದ್ದು ಅಲ್ಲಿಯೇ. ಆ ಸಿನಿಮಾ ನೋಡಿದ ಮೇಲೆ, ಇವರೇ ‘ಚಂದವಳ್ಳಿಯ ತೋಟ’ದಲ್ಲಿ ನಿಮ್ಮ ಜೊತೆ ನಟಿಸುವವರು ಎಂದು ಸಹಾಯಕ ನಿರ್ದೇಶಕರಾದ ಭಗವಾನ್ ಹೇಳಿದರು. ಕಣ್ಣಪ್ಪ ಚಿತ್ರದಲ್ಲಿ ನೋಡಿದ್ದು ಕಾಡುಮನುಷ್ಯನ ಪಾತ್ರಧಾರಿಯನ್ನು. ಆ ಪಾತ್ರವೇ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಸೆಟ್‌ನಲ್ಲಿ ನೋಡಿದರೆ ಬೇರೆಯದೇ ವ್ಯಕ್ತಿ. ಇಬ್ಬರೂ ಬೇರೆ ಬೇರೆ ವ್ಯಕ್ತಿ ಅನ್ನಿಸಿತು. ಪಾತ್ರಕ್ಕೆ ತಕ್ಕಂತೆ ರಾಜ್ ಬದಲಾಗುವ ಪರಿ ಅಚ್ಚರಿ ಮೂಡಿಸಿತು.

* ಚಿತ್ರೀಕರಣ ಸಂದರ್ಭದಲ್ಲಿನ ಕೆಲವು ಸ್ವಾರಸ್ಯಕರ ಸಂದರ್ಭಗಳನ್ನು ನೆನಪಿಸಿಕೊಳ್ಳುವಿರಾ?

‘ಚಂದವಳ್ಳಿಯ ತೋಟ’ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಭಗವಾನ್ ಅವರು ಪ್ರತಿದಿನ ಮನೆಗೆ ಬಂದು ಒಂದು ತಾಸು ಕೂತು, ನಾಳೆಯ ದೃಶ್ಯಗಳನ್ನು ಓದಿಹೇಳುತ್ತಿದ್ದರು. ಪದಗಳ ಉಚ್ಚಾರಣೆ ಹೇಳಿಕೊಡುತ್ತಿದ್ದರು. ರತ್ನಾಕರ್ ಅವರೂ ಕನ್ನಡ ಹೇಳಿಕೊಡುತ್ತಿದ್ದರು. ಆ ಚಿತ್ರದಲ್ಲಿನ ಒಂದು ದೃಶ್ಯದಲ್ಲಿ ಅನಾರೋಗ್ಯದಿಂದ ಮಂಚದ ಮೇಲೆ ಮಲಗಿರುತ್ತೇನೆ. ನನ್ನ ಮಾವನ ಪಾತ್ರ ಮಾಡುತ್ತಿದ್ದ ಉದಯಕುಮಾರ್ ಅವರು ರೋದಿಸುತ್ತಾ ನನ್ನ ಮೇಲೆ ಬಿದ್ದರು. ಅವರ ಭಾರಕ್ಕೆ ಜೀವ ಹೋದಂತಾಯಿತು. ನನ್ನ ಕಾಲು ಮುರಿದುಹೋದಂತೆ ಅನ್ನಿಸಿತು. ‘ಅಣ್ಣಾ ಅಣ್ಣಾ’ ಎಂದರೂ ಉದಯಕುಮಾರ್ ಮೇಲೇಳುತ್ತಿಲ್ಲ. ಎಮೋಷನಲ್ ಆದರೆ ಅವರನ್ನು ಎಚ್ಚರಿಸುವುದು ಕಷ್ಟ. ಆಮೇಲೆ ಎಲ್ಲರೂ ಬಂದು ಎಬ್ಬಿಸಿದರು. ಸ್ವಲ್ಪ ಹೊತ್ತು ನನ್ನ ಕಾಲು ಮಾತೇ ಕೇಳುತ್ತಿರಲಿಲ್ಲ.

‘ದೇವರ ಗೆದ್ದ ಮಾನವ’ ಚಿತ್ರದಲ್ಲಿ ಶೈಲಶ್ರೀ ಹಾಗೂ ನಾನು ನರ್ತಿಸಿದ್ದ ಗೀತೆಯನ್ನು ಮರೆಯುವುದು ಸಾಧ್ಯವಿಲ್ಲ. ಆ ಸಿನಿಮಾ ಈಗ ನೋಡಿದಾಗ ಖುಷಿಯೆನ್ನಿಸುತ್ತದೆ. ‘ಬಾಳು ಬೆಳಗಿತು’ ಸಿನಿಮಾದಲ್ಲಿನ ಹುಚ್ಚಿಯ ಪಾತ್ರದಲ್ಲಿ ಸಿಂಗಲ್ ಷಾಟ್‌ನಲ್ಲಿ ನಟಿಸಿದ್ದನ್ನು ನೋಡಿದಾಗಲೂ ಖುಷಿಯಾಯಿತು. ಈಗಿನ ಸಿನಿಮಾಗಳನ್ನು ನೋಡುತ್ತ, ನಮ್ಮ ಹಳೆಯ ಸಿನಿಮಾಗಳನ್ನು ನೆನಪಿಸಿಕೊಳ್ಳುವುದಿದೆ.

‘ದೇವರ ಗೆದ್ದ ಮಾನವ’ ಚಿತ್ರದ ಗೀತೆಯ ಒಂದು ಷಾಟ್ ‘ಓಕೆ’ ಆಯಿತು. ರಾಜ್‌ಕುಮಾರ್ ಮತ್ತೊಮ್ಮೆ ಟ್ರೈ ಮಾಡೋಣ ಎಂದರು. ಆ ಸಂದರ್ಭದಲ್ಲಿ ನನ್ನ ಕಾಲು ಟ್ವಿಸ್ಟ್ ಆಯಿತು. ಪಾದ ಹಿಂದುಮುಂದಾಗಿ ಬಿಟ್ಟಿತು. ರಾಜ್ ಹಿಡಿದುಕೊಂಡು ಕೆಳಗೆ ಕೂರಿಸಿದರು. ನಾನು ಅಳತೊಡಗಿದೆ. ಮೇಕಪ್‌ಮ್ಯಾನ್ ಅವರು ಓಡಿಬಂದು ಕಾಲನ್ನು ಸವರುತ್ತಾ ಅದನ್ನು ತಿರುಗಿಸಿಬಿಟ್ಟರು. ಜೀವ ಹೋದಂತಾಯಿತು. ಆಮೇಲೆ ಆಸ್ಪತ್ರೆಯಲ್ಲಿ ಮೂರು ತಿಂಗಳು ಚಿಕಿತ್ಸೆ ಪಡೆಯಬೇಕಾಯಿತು. ಮೂರು ತಿಂಗಳ ನಂತರವೂ ಕಾಲು ಸರಿಯಾಗಿ ಸ್ವಾಧೀನಕ್ಕೆ ಬರುತ್ತಿರಲಿಲ್ಲ. ಪುತ್ತೂರಿಗೆ ಹೋಗಿಯೂ ಚಿಕಿತ್ಸೆ ಪಡೆದೆ. ಮತ್ತೊಮ್ಮೆ ಕುದುರೆ ಸವಾರಿ ಚಿತ್ರೀಕರಣದಲ್ಲಿ ಬಿದ್ದು ಗಾಯಗೊಂಡಿದ್ದೆ. ಚಾಮುಂಡೇಶ್ವರಿ ತಾಯಿ ದಯೆಯಿಂದ ಜೀವ ಉಳಿಯಿತು. ಒಳ್ಳೆಯದು–ಕೆಟ್ಟದ್ದು ಜೊತೆಜೊತೆಗೆ ಅನುಭವಿಸಿದೆ ಅನ್ನಿಸುತ್ತೆ. ಹೀಗೆ ಕುಂಟುತ್ತ, ನಡೆಯುತ್ತ, ಓಡುತ್ತ ಸಾಗಿದ್ದು ನನ್ನ ವೃತ್ತಿ–ವೈಯಕ್ತಿಕ ಬದುಕು.

‘ಚಕ್ರತೀರ್ಥ’ ಪಾತ್ರದಲ್ಲಿ ನನ್ನದು ದ್ವಿಪಾತ್ರ. ಅಪ್ಪನ ವಿರುದ್ಧವಾಗಿ ಮದುವೆಯಾದ ಮಗಳ ಪಾತ್ರ. ಗಂಡನ ಮನೆಯಲ್ಲಿ ಕಷ್ಟದ ಜೀವನ. ಹಬ್ಬದ ದಿನ ಹೊರಗೆ ಹೋದ ಗಂಡನಿಗೆ ಅಪಘಾತವಾಗುತ್ತದೆ. ಬ್ಯಾಂಡೇಜ್ ಸುತ್ತಿಕೊಂಡ ಗಂಡನನ್ನು ನೋಡಿ ರೋದಿಸುತ್ತ ಬಿಕ್ಕಳಿಸಿಕೊಂಡು ‘ನಿನ್ನ ರೂಪ ಕಣ್ಣಲಿ...’ ಎಂದು ಹಾಡುವ ದೃಶ್ಯ. ಗಂಡ ಸಾಯುತ್ತಾನೆ. ಆಗ ಎಷ್ಟು ಅತ್ತೆನೆಂದರೆ ಷಾಟ್ ಕಟ್ ಆಗಿದ್ದೇ ತಿಳಿಯಲಿಲ್ಲ. ನಿರ್ದೇಶಕರು, ಕ್ಯಾಮೆರಾಮನ್ ಬಂದು ಎಚ್ಚರಿಸಿದರೂ ಅಳು ನಿಲ್ಲಲಿಲ್ಲ. ‘ನಾನು ಚೆನ್ನಾಗಿಯೇ ಇದ್ದೇನೆ. ಸಿನಿಮಾದಲ್ಲಿನ ಪಾತ್ರವಿದು’ ಎಂದು ರಾಜ್ ಕೂಡ ಸಮಾಧಾನಿಸಿದರು. ಆ ಘಟನೆ ಈಗಲೂ ತಲೆಯಲ್ಲಿ ಕೂತಿದೆ. ‘ಯಾರಾದರೂ ಇಲ್ಲ’ ಎಂದರೆ ಆ ಸತ್ಯವನ್ನು ನಾನು ಜೀರ್ಣಿಸಿಕೊಳ್ಳುವುದು ಕಷ್ಟ. ನನಗೆ ದುಃಖ ತಡೆಯಲಿಕ್ಕಾಗಲ್ಲ.

ಆ ಕಾರಣದಿಂದಲೇ ಸಾವಿನ ಸಂದರ್ಭಗಳಿಗೆ ನಾನು ಹೋಗುವುದು ಕಡಿಮೆ. ನನ್ನ ಈ ನಡವಳಿಕೆಯನ್ನು ಅಹಂಕಾರ ಎಂದುಕೊಂಡವರೂ ಇದ್ದಾರೆ. ಆದರೆ, ನನ್ನ ಸ್ವಭಾವ ಇರುವುದೇ ಹಾಗೆ. ಯಾವುದಾದರೂ ಸಾವನ್ನು ನೋಡಿದರೆ ಆ ಆಘಾತದಿಂದ ಹೊರಬರಲಿಕ್ಕೆ ಒಂದು ವಾರವೇ ಬೇಕಾಗುತ್ತೆ. ಕಲ್ಪನಾ ನನ್ನ ಬೆಸ್ಟ್ ಫ್ರೆಂಡ್. ಮದರಾಸಿನಲ್ಲಿ ನನ್ನ ಮನೆಯ ಹಿಂದಿನ ರಸ್ತೆಯಲ್ಲೇ ಅವರ ಮನೆ ಇದ್ದುದು. ಅವರ ಬಗ್ಗೆ ಎಷ್ಟು ಮಾತನಾಡಿರುವೆನೋ ನನಗೆ ತಿಳಿದಿಲ್ಲ. ಕಲ್ಪನಾ ತೀರಿಕೊಂಡಾಗ ‘ಎಡಕಲ್ಲು ಗುಡ್ಡ’ದ ಚಂದ್ರು ವಿಷಯ ತಿಳಿಸಿದರು. ಚೀರುತ್ತಲೇ ಅಳತೊಡಗಿದೆ. ಕಲ್ಪನಾ ಸಾಯುವುದು ಸಾಧ್ಯವೇ ಇಲ್ಲ ಎಂದು ಕಿರುಚಾಡಿದೆ. ಕಲ್ಪನಾ ಮನೆ ಕಟ್ಟಿದಾಗ ಹೋಗಲಿಕ್ಕೆ ನನಗೆ ಸಾಧ್ಯವಾಗಿರಲಿಲ್ಲ. ಸಾವಿನ ಸಂದರ್ಭದಲ್ಲಿ ಅವರನ್ನು ಮನೆಯ ಹಾಲ್‌ನಲ್ಲಿ ಮಲಗಿಸಿದ್ದರು. ಮುಖವನ್ನು ಸರಿಯಾಗಿ ನೋಡಲೂ ಆಗಲಿಲ್ಲ. ನನ್ನನ್ನು ನೋಡಿ, ‘ಯಾರಾದರೂ ಇವರನ್ನು ಮನೆಗೆ ಸೇರಿಸಿ. ಇಲ್ಲದೆ ಹೋದರೆ ಇವರನ್ನು ಆಸ್ಪತ್ರೆಗೆ ಸೇರಿಸಬೇಕಾಗುತ್ತೆ’ ಎಂದು ಅಬ್ಬಾಯಿನಾಯ್ಡು ಹೇಳಿದ್ದರು.

* ನಟಿಯಾಗಿದ್ದವರು ‘ಅಭಿನಯ ಶಾರದೆ’ ಆದುದು ಹೇಗೆ?

‘ಕಲಾ ಕೋಗಿಲೆ’ ನನಗೆ ಅಭಿಮಾನಿಗಳು ಕೊಟ್ಟ ಮೊದಲ ಟೈಟಲ್. ಆಗ ಯಾವುದಾದರೂ ಟೈಟಲ್ ಕೊಡಬೇಕೆಂದರೆ ಯೋಚನೆ ಮಾಡಿ ನಿರ್ಧರಿಸುತ್ತಿದ್ದರು. ದೊಡ್ಡ ದೊಡ್ಡವರೆಲ್ಲ ಸೇರಿ ಯೋಚಿಸುತ್ತಿದ್ದರು. ನನ್ನ ಧ್ವನಿ ಇಂಪಾಗಿದ್ದರಿಂದ ‘ಕಲಾ ಕೋಗಿಲೆ’ ಎಂದರು. ನಂತರ, ನಾನು ಚೆನ್ನಾಗಿ ಅಭಿನಯಿಸುವೆ ಎನ್ನಿಸಿದ್ದರಿಂದ, ಯಾವ ಕ್ಯಾರೆಕ್ಟರ್ ಕೂಡ ಮಾಡಬಲ್ಲೆ ಅನ್ನಿಸಿದ್ದರಿಂದ (ಆಯ್ದುಕೊಂಡು ತಿನ್ನುವವಳಿಂದ ಹಿಡಿದು ರಾಜಕುಮಾರಿವರೆಗೆ ಎಲ್ಲ ರೀತಿಯ ಪಾತ್ರಗಳನ್ನು ಮಾಡಿದ್ದೇನೆ. ಎಲ್ಲ ಪಾತ್ರಗಳಲ್ಲೂ ಜನ ಒಪ್ಪಿಕೊಂಡಿದ್ದಾರೆ. ಅದರಲ್ಲೂ ರಾಜಕುಮಾರ್ ಜೊತೆ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಹೆಮ್ಮೆ ನನ್ನದು). ‘ಅಭಿನಯ ಶಾರದೆ’ ಎನ್ನುವ ಟೈಟಲ್ ಕೊಟ್ಟರು; ದೊಡ್ಡದೊಂದು ವೀಣೆ ಉಡುಗೊರೆಯಾಗಿ ಕೊಟ್ಟರು ಹರಸಿದರು. ಆ ಟೈಟಲ್ ನನ್ನ ಜೊತೆಗೆ ಉಳಿದುಬಂತು.

* ಪುಟ್ಟಣ್ಣ ಕಣಗಾಲರೊಂದಿಗಿನ ನಿಮ್ಮ ಸ್ನೇಹ–ಸಂಬಂಧ ಯಾವ ಬಗೆಯದು?

ಪುಟ್ಟಣ್ಣನವರು ಬಿ.ಆರ್. ಪಂತುಲು ಅವರ ಸಹಾಯಕನಾಗಿ ದುಡಿಯುತ್ತಿದ್ದ ದಿನಗಳಿಂದಲೂ ನನಗೆ ಗೊತ್ತು. ಅವರನ್ನು ನಾನು ‘ಪುಟ್ಟು’ ಎಂದೇ ಕರೆಯುತ್ತಿದ್ದುದು. (ಕೆಲವರನ್ನು ನಾನು ನನ್ನದೇ ಹೆಸರಿನಿಂದ ಕರೆಯುವೆ. ರಾಜಕುಮಾರ್ ಅವರನ್ನು ‘ರಾಜ್’ ಎಂದೇ ಕರೆಯುತ್ತಿದ್ದೆ. ನಾನೊಬ್ಬಳೇ ಅವರನ್ನು ಹೆಸರು ಹಿಡಿದು ಕರೆಯುತ್ತಿದ್ದುದು). ‘ಸಾವಿರ ಮೆಟ್ಟಿಲು’ ಸಿನಿಮಾ ಸಂದರ್ಭದಲ್ಲಿ ಮುಹೂರ್ತಕ್ಕೆ ಹೋಗುವಾಗ, ‘ಯಾರೋ ಹೊಸ ನಿರ್ದೇಶಕ, ಕೋಪಿಷ್ಠನಂತೆ’ ಎನ್ನುವ ವಿಷಯವಷ್ಟೇ ತಿಳಿದಿತ್ತು. ಕಾರು ಇಳಿದಾಗ ನೋಡಿದರೆ ಅಲ್ಲಿದ್ದುದು ಪುಟ್ಟು. ‘ಅವರೇ ಪುಟ್ಟಣ್ಣ ಕಣಗಾಲ್’ ಎಂದು ನನ್ನೊಂದಿಗೆ ಬಂದವರು ಹೇಳಿದರು. ‘ಅವರು ನಮ್ಮ ಪುಟ್ಟು’ ಎನ್ನುತ್ತಾ, ‘ಪುಟ್ಟು’ ಎಂದು ಕೂಗಿದೆ. ‘ಜಯಮ್ಮ’ ಎಂದು ಪುಸ್ತಕ ಓದುತ್ತಿದ್ದ ಅವರು ಓಡಿಬಂದರು. ಕೈಹಿಡಿದುಕೊಂಡು ಕುಶಲ ವಿಚಾರಿಸಿದರು.

ಪುಟ್ಟಣ್ಣ ಎಂದರೆ ನನಗೆ ಬಹಳ ಆತ್ಮೀಯತೆ. ಅವರು ಹುಷಾರಿಲ್ಲದೆ ಆಸ್ಪತ್ರೆಯಲ್ಲಿದ್ದಾಗ ನೋಡಲು ಹೋಗಿದ್ದೆ. ಅವರನ್ನು ಹಾಸಿಗೆಯ ಮೇಲೆ ಕೂರಿಸಿದ್ದರು. ನನ್ನನ್ನು ನೋಡಿದವರೇ ಅಳತೊಡಗಿದರು. ‘ಎರಡು ದಿನಗಳಿಂದ ನನ್ನನ್ನು ಹೀಗೆ ಕೂರಿಸಿದ್ದಾರೆ. ಮಲಗಿಸುವಂತೆ ಡಾಕ್ಟರ್‌ಗೆ ಹೇಳು ಜಯಮ್ಮ’ ಎಂದರು. ‘ನಿಮಗೆ ಏನೂ ಆಗಿಲ್ಲ. ನಿರ್ದೇಶಕರಾಗಿ ನಮ್ಮನ್ನೆಲ್ಲ ಕಂಟ್ರೋಲ್ ಮಾಡ್ತೀರಿ. ಈಗ ನಿಮ್ಮನ್ನು ಕಂಟ್ರೋಲ್ ಮಾಡುವವರು ಯಾರೂ ಇಲ್ಲವಾ?’ ಎಂದು ದಬಾಯಿಸಿ ಧೈರ್ಯ ಹೇಳಿದೆ. ‘ನಾಳೆ ಬರುತ್ತೇನೆ’ ಎಂದು ಬೀಳ್ಕೊಂಡೆ. ಮಾರನೇ ದಿನವೇ ಅವರು ಇನ್ನಿಲ್ಲವೆನ್ನುವ ದೃಶ್ಯ. ಒಂದು ನಕ್ಷತ್ರ ಉದುರಿಹೋಯಿತು.

‘ಎಡಕಲ್ಲು ಗುಡ್ಡದ ಮೇಲೆ’ ಸಿನಿಮಾದಲ್ಲಿ ನಟಿಸುವುದಿಲ್ಲ ಎಂದಿದ್ದೆ. ಪದೇ ಪದೇ ತಪ್ಪು ಮಾಡುವ ಪಾತ್ರ ಸರಿಯಿಲ್ಲ ಎಂದು ವಾದಿಸಿದ್ದೆ. ‘ಇಲ್ಲ ಜಯಮ್ಮ, ಈ ಪಾತ್ರದಲ್ಲಿ ನೀನು ನಟಿಸಲೇಬೇಕು. ಸಿನಿಮಾ ಚೆನ್ನಾಗಿ ಬರದಿದ್ದರೆ ಬೈಯುವೆಯಂತೆ’ ಎಂದು ಒಪ್ಪಿಸಿದರು. ಸಿನಿಮಾ ಜನರಿಗೆ ಇಷ್ಟವಾಯಿತು, ಆ ಚಿತ್ರದ ‘ವಿರಹ’ ಗೀತೆ ಅಪಾರ ಜನಪ್ರಿಯವಾಯಿತು.

ಬಾಲಣ್ಣನವರೊಂದಿಗಿನ ಒಡನಾಟವನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು. ಒಂದು ಸಲ ಶೂಟಿಂಗ್ ನಡೆಯುತ್ತಿತ್ತು. ಮಧ್ಯಾಹ್ನದ ವೇಳೆಗೆ ಅವರು ಬಂದರು. ಅದೇ ಸಮಯಕ್ಕೆ ಊಟದ ವ್ಯಾನ್ ಬಂತು. ಶೂಟಿಂಗ್ ನೋಡುತ್ತಿದ್ದ ಅವರು ‘ವ್ಯಾನ್ ಬಂದ್ಬಿಡ್ತಾ... ಸಾಂಬಾರ್ ವಾಸನೆ ಸಿಕ್ಕಿಬಿಡ್ತಾ...’ ಎಂದು ತಲೆ ಚಚ್ಚಿಕೊಂಡರು. ‘ರಿಹರ್ಸಲ್‌ನಲ್ಲಿ ಅಷ್ಟೊಂದು ಚೆನ್ನಾಗಿ ಮಾಡಿದೆ. ಟೇಕ್‌ನಲ್ಲಿ ಊಟದ ಕಡೆಗೆ ಗಮನ ಹೋಗಿಬಿಡ್ತಾ’ ಎಂದು ಬೈದರು. ಅಂದಿನಿಂದ ಅವರು ನನ್ನನ್ನು ‘ಸಾಂಬಾರು’ ಎಂದೇ ಕರೆಯತೊಡಗಿದರು. ಬಾಲಣ್ಣನವರ ‘ಅಭಿಮಾನ್ ಸ್ಟುಡಿಯೋ’ದಲ್ಲಿ ನಮ್ಮ ನಿರ್ಮಾಪಕರು ಒಂದೊಂದು ದೃಶ್ಯಗಳನ್ನು ಚಿತ್ರೀಕರಿಸಿದ್ದರೂ ಬಾಲಣ್ಣ ಉಳಿದುಕೊಳ್ಳುತ್ತಿದ್ದರು.

* ನಿಮ್ಮ ಓರಗೆಯ ನಟಿಯರಿಗೆ ಹೋಲಿಸಿದರೆ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಹೆಚ್ಚು ಅವಕಾಶಗಳು ನಿಮಗೆ ದೊರೆತವು. ಇದು ಸಾಧ್ಯವಾಗಿದ್ದು ಹೇಗೆ?

ಬಿ.ಎಸ್. ರಂಗಾ ಅವರ ‘ಮಣ್ಣಿನ ಮಗಳು’ ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದೇನೆ (ತಾಯಿ–ಮಗಳ ಪಾತ್ರ.) ಅಮ್ಮನ ಪಾತ್ರಕ್ಕೆ ಕೂದಲು ಬಿಳಿ ಮಾಡಿಕೊಂಡಾಗ, ಕೆಲವರು ಆ ಪಾತ್ರದಲ್ಲಿ ಅಭಿನಯಿಸುವುದು ಬೇಡ ಎಂದರು. ಆದರೆ, ವಿಭಿನ್ನ ರೀತಿಯ ಪಾತ್ರಗಳು ಬಂದಾಗ ನಾನೆಂದೂ ಒಲ್ಲೆ ಎನ್ನಲಿಲ್ಲ. ಇಂತಹುದೇ ಪಾತ್ರ ಎಂದು ಅಂಟಿ ಕೂರಲಿಲ್ಲ. ಕೆಲವರಿಗೆ ಅಳುಬುರುಕಿ ಪಾತ್ರಗಳು ಸೂಟ್ ಆಗುತ್ತವೆ. ಕೆಲವರು ಕಾಮಿಡಿಗೆ, ಮತ್ತೆ ಕೆಲವರು ಗ್ಲಾಮರ್‌ಗೆ ಅಂಟಿಕೊಳ್ಳುತ್ತಾರೆ. ಬಡವಿಯ ಪಾತ್ರಕ್ಕೂ ನಾನು ಓಕೆ, ಶ್ರೀಮಂತನ ಮಗಳ ಪಾತ್ರಕ್ಕೂ ಓಕೆ. ಇತ್ತೀಚೆಗೆ ‘ಪರೋಪಕಾರಿ’ ಚಿತ್ರವನ್ನು ಮತ್ತೊಮ್ಮೆ ನೋಡಿದೆ. ರಾಜ್‌ಕುಮಾರ್ ಜೊತೆಗೆ ‘ಹೋಗೊ, ಬಾರೊ’ ಎಂದು ಜಗಳವಾಡುವ ದೃಶ್ಯ. ವೆರೈಟಿ ಇದ್ದರೆ ಚಂದ ಅಲ್ಲವೇ?

* ನಾಯಕಿಪ್ರಧಾನ ಸಿನಿಮಾಗಳಲ್ಲಿ ನಟಿಸಿದ ನಿಮಗೆ, ಇಂದಿನ ನಾಯಕಿಯರ ಪಾತ್ರಗಳ ಬಗ್ಗೆ ಏನನ್ನಿಸುತ್ತದೆ?

ಆಗ ಪಾತ್ರಗಳ ಬಗ್ಗೆ ಗಮನ ಇತ್ತು. ಸಬ್ಜೆಕ್ಟ್ ಇಲ್ಲದೆ ಸಿನಿಮಾ ನಿರ್ಮಿಸುತ್ತಿರಲಿಲ್ಲ. ಜನರಿಗೆ ಏನನ್ನಾದರೂ ಸಂದೇಶ ತಲುಪಿಸುವ ಉದ್ದೇಶ ಚಿತ್ರತಂಡಕ್ಕೆ ಇರುತ್ತಿತ್ತು. ಈಗ ಹಾಗೆ ಯೋಚಿಸುವವರು ಯಾರಿದ್ದಾರೆ? ‘ನಾಯಕನಟನ ಕಾಲ್‌ಷೀಟ್ ಸಿಕ್ಕಿದೆ, ಸಿನಿಮಾ ಮಾಡಿ’ ಎನ್ನುವವರೇ ಹೆಚ್ಚು. ಟ್ರೆಂಡ್ ಬದಲಾಗಿದೆ. ನಾನು ಈಗಲೂ ಕೆಲವು ಸಿನಿಮಾಗಳನ್ನು ನೋಡುತ್ತೇನೆ. ಈಗಿನ ಟ್ರೆಂಡ್‌ಗೆ ತಕ್ಕಂತೆ ಕಥೆಗಳು, ನಾಯಕಿಯರು ಬರುತ್ತಿದ್ದಾರೆ. ನಮ್ಮ ಕಾಲದಲ್ಲಿ ಹೀರೊಯಿನ್ ಮುಖದ ಭಾವನೆಗಳ ಮೇಲೆ ಕ್ಯಾಮೆರಾ ಕೇಂದ್ರೀಕೃತವಾಗುತ್ತಿತ್ತು. ಈಗ ಹೀರೊಯಿನ್ ಯಾರೆಂದು ಕಂಡು ಹಿಡಿಯುವಷ್ಟರಲ್ಲಿ ತೆರೆಯ ಮೇಲೆ ಬಂದು ಮಾಯವಾಗಿಬಿಟ್ಟಿರುತ್ತಾರೆ.

* ವೃತ್ತಿಜೀವನದ ಬೆಳವಣಿಗೆಯಲ್ಲಿ ಚಿತ್ರರಂಗದವರ ಆಚೆಗೆ ತಕ್ಷಣಕ್ಕೆ ನಿಮ್ಮ ನೆನಪಿಗೆ ಬರುವವರು ಯಾರು?

ಪತ್ರಕರ್ತರು. ನಮ್ಮ ಕಾಲದಲ್ಲಿ ಪತ್ರಿಕೆಯವರನ್ನು ಕಂಡರೆ ಕಲಾವಿದರು ಹೆದರಿಕೊಳ್ಳುತ್ತಿದ್ದರು. ಅವರು ಉದ್ದನೆ ಪಟ್ಟಿಗಳನ್ನು ಬರೆದುಕೊಂಡು ಬರುತ್ತಿದ್ದರು. ಆ ಪ್ರಶ್ನೆಗಳಿಗೆ ಏನೆಂದು ಉತ್ತರಿಸಲು ತಿಳಿಯದೆ ಕಲಾವಿದರು ಅಳುಕುತ್ತಿದ್ದರು. ನನ್ನ ವಿಷಯದಲ್ಲಿ ಮಾತ್ರ ಪತ್ರಕರ್ತರದು ಮೊದಲಿನಿಂದಲೂ ವಿಶ್ವಾಸ. ತಮ್ಮ ಮನೆಯ ಸದಸ್ಯಳೆಂದೇ ತಿಳಿದಿದ್ದಾರೆ.

ಲಂಕೇಶ್ ಪತ್ರಿಕೆಯಲ್ಲಿ ಒಮ್ಮೆ ನನ್ನ ಬಗ್ಗೆ ‘ಅಬ್ಬಬ್ಬಾ! ಜಯಂತಿ ಎಷ್ಟು ಭಾರ’ ಎಂದು ಬರೆದಿದ್ದರು. ‘ನನ್ನ ಭಾರ ಗೊತ್ತಾಗಲಿಕ್ಕೆ ಲಂಕೇಶ್ ನನ್ನನ್ನು ಯಾವಾಗ ಎತ್ತಿಕೊಂಡರು. ಅಬ್ಬಬ್ಬಾ! ಜಯಂತಿ ಎಷ್ಟು ದಪ್ಪ ಎಂದು ಬರೆಯಬೇಕಿತ್ತಲ್ಲವೇ’ ಅನ್ನಿಸಿತು. ಲಂಕೇಶ್ ಪುತ್ರಿ ಗೌರಿ ನನ್ನ ಗೆಳತಿ. ಅವರಿಗೆ ಫೋನ್ ಮಾಡಿ, ‘ಬೇಕಿದ್ದರೆ ನಿಮ್ಮ ತಂದೆ ಒಮ್ಮೆ ನನ್ನನ್ನು ಲಿಫ್ಟ್ ಮಾಡಿ ನೋಡಲಿ’ ಎಂದು ತಮಾಷೆ ಮಾಡಿದ್ದೆ.

* ಈಗಲೂ ಅಭಿನಯಿಸುವ ಆಸಕ್ತಿ ಇದೆಯೇ?

ಖಂಡಿತಾ. ನನ್ನ ವಯಸ್ಸಿಗೆ ತಕ್ಕಂತಹ ಪಾತ್ರಗಳ ನಿರೀಕ್ಷೆಯಲ್ಲಿರುವೆ. ಇತ್ತೀಚೆಗಷ್ಟೇ ಅನಾರೋಗ್ಯದಿಂದ ಚೇತರಿಸಿಕೊಂಡಿರುವೆ. ಒಳ್ಳೆಯ ಪಾತ್ರಗಳು ದೊರೆತರೆ ಖಂಡಿತಾ ಅಭಿನಯಿಸುವೆ.

(ಚಿತ್ರಗಳು: ಆನಂದ ಬಕ್ಷಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.