ಸೋಮವಾರ, ಜನವರಿ 20, 2020
26 °C

ಏಕ್‌ ವಿಲನ್‌ 2: ಜಾನ್‌, ಆದಿತ್ಯ ಖಳನಾಯಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಏಕ್‌ ವಿಲನ್‌ 2’ ಚಿತ್ರದಲ್ಲಿ ಜಾನ್‌ ಅಬ್ರಹಾಂ ಹಾಗೂ ಆದಿತ್ಯ ರಾಯ್‌ ಕಪೂರ್‌ ಇಬ್ಬರೂ ಖಳನಾಯಕರಾಗಿ ಪಾತ್ರ ನಿರ್ವಹಿಸಲಿದ್ದಾರೆ.

ಈ ವಿಚಾರವನ್ನು ಸ್ವತಃ ನಿರ್ದೇಶಕ ಮೋಹಿತ್‌ ಸುರಿ ಹೇಳಿದ್ದಾರೆ. 2014ರಲ್ಲಿ ‘ಏಕ್‌ ವಿಲನ್‌’ ಚಿತ್ರವನ್ನು ಮೋಹಿತ್‌ ನಿರ್ದೇಶಿಸಿದ್ದರು. ಈಗ ಈ ಚಿತ್ರದ ಸೀಕ್ವೆಲ್‌ ಮಾಡಲಿದ್ದಾರೆ. ಇದರಲ್ಲಿ ಮುಖ್ಯ ಪಾತ್ರದಲ್ಲಿ ನಟರಾದ ಜಾನ್‌ ಅಬ್ರಹಾಂ ಹಾಗೂ ಆದಿತ್ಯ ರಾಯ್‌ ಕಪೂರ್‌ ಅಭಿನಯಿಸಲಿದ್ದು, ಇಬ್ಬರೂ ವಿಲನ್‌ಗಳೇ ಎಂದು ಅವರು ಹೇಳಿದ್ದಾರೆ.

‘ಏಕ್‌ ವಿಲನ್‌’ ಚಿತ್ರದಲ್ಲಿ ಸಿದ್ಧಾರ್ಥ್‌ ಮಲ್ಹೋತ್ರಾ, ಶ್ರದ್ಧಾ ಕಪೂರ್‌ ಹಾಗೂ ರಿತೇಶ್‌ ದೇಶ್‌ಮುಖ್‌ ನಟಿಸಿದ್ದರು. ಹಿಂಸೆ ನೀಡಿ ಖುಷಿ ಪಡುವ ಮನಸ್ಥಿತಿಯುಳ್ಳ ಸರಣಿ ಹಂತಕನಿಂದ ಕೊಲೆಯಾದ ಪತ್ನಿಯ ಸಾವಿನ ಸೇಡು ತೀರಿಸಿಕೊಳ್ಳುವ ನಾಯಕನ ಕತೆ ಈ ಚಿತ್ರದ್ದು. ಈಗ ಈ ಚಿತ್ರದ ಸೀಕ್ವೆಲ್‌ಗೆ ತಾರಾಗಣವನ್ನೂ ತಂಡ ಹೆಚ್ಚು ಕಡಿಮೆ ಆಯ್ಕೆ ಮಾಡಿದೆ.

ಈ ಚಿತ್ರದಲ್ಲಿ ಅಭಿನಯಿಸುವ ಬಹುತೇಕ ಎಲ್ಲರೂ ಹೊಸಬರೇ. ‘ಏಕ್ ವಿಲನ್‌’ ಚಿತ್ರದಲ್ಲಿ ಅಭಿನಯಿಸಿದ ಯಾರೂ ಈ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ. ‘ಏಕ್‌ ವಿಲನ್‌’ ಚಿತ್ರ 6 ವರ್ಷಗಳ ಹಿಂದೆ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿದ್ದ ಚಿತ್ರ. ಹಾಗಾಗಿ ಆ ಚಿತ್ರದ ಸೀಕ್ವೆಲ್‌ ಬಗ್ಗೆ ಹೆಚ್ಚು ನಿರೀಕ್ಷೆ ಇರುತ್ತದೆ. ಹಾಗಾಗಿ ತುಂಬ ಸಮಯ ತೆಗೆದುಕೊಂಡು ಚಿತ್ರಕತೆಯನ್ನು ಸಿದ್ಧಪಡಿಸುತ್ತಿದ್ದೇವೆ. ಇನ್ನೂ ಚಿತ್ರಕತೆ ಅಂತಿಮವಾಗಿಲ್ಲ ಎಂದು ಮೋಹಿತ್‌ ತಿಳಿಸಿದ್ದಾರೆ.

 ‘ಕತೆ ಬಗ್ಗೆ ಜಾನ್‌ ಹಾಗೂ ಆದಿತ್ಯನಿಗೆ ವಿವರಿಸಿದ್ದೇವೆ. ಅವರಿಬ್ಬರ ಅಭಿನಯದ ಭಾಗವನ್ನು ಅವರು ಮೆಚ್ಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಇಬ್ಬರದೂ ಖಳಪಾತ್ರಗಳು. ಇದರಲ್ಲಿ ಇಬ್ಬರು ನಾಯಕಿಯರು ಇರುತ್ತಾರೆ. ಅವರ ಪಾತ್ರಕ್ಕೂ ಹೆಚ್ಚು ಪ್ರಾಮುಖ್ಯತೆ ಇರುತ್ತದೆ’ ಎಂದು ಅವರು ತಿಳಿಸಿದ್ದಾರೆ.

ಸದ್ಯ ಮೋಹಿತ್‌ ‘ಮಲಂಗ್‌’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದು, ಈ ಚಿತ್ರದ ಕೆಲಸಗಳು ಪೂರ್ಣಗೊಂಡ ಬಳಿಕ ಅವರು ‘ಏಕ್‌ ವಿಲನ್‌ 2’ ತಯಾರಿಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಕಳೆದ ಅನೇಕ ದಿನಗಳಿಂದ ಮೋಹಿತ್‌ ಅವರು ‘ಏಕ್‌ ವಿಲನ್‌’ ಸೀಕ್ವೆಲ್‌ ಅಥವಾ ‘ಆಶಿಕಿ 3’ ಚಿತ್ರ ಮಾಡುತ್ತಾರಾ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಇದಕ್ಕೆ ಉತ್ತರಿಸಿದ ಮೋಹಿತ್‌ ಅವರು ‘ಆಶಿಕಿ 3 ಆಲೋಚನೆಯಲ್ಲಿದೆ. ನಾನು ಅನೇಕ ಚಿತ್ರಕತೆಗಳನ್ನು ಬರೆಯುತ್ತಿರುತ್ತೇನೆ. ಕೆಲ ಪಾತ್ರಗಳಿಗೆ ಕೆಲವು ನಟ, ನಟಿಯರಷ್ಟೇ ಹೊಂದುತ್ತಾರೆ. ನಮ್ಮ ದೇಶದಲ್ಲಿ ಐಡಿಯಾ ಹೆಳಿದರೆ ಕತೆ ಎಂದುಕೊಳ್ಳುತ್ತಾರೆ. ಕತೆ ಎಂದರೆ ಚಿತ್ರಕತೆ, ಚಿತ್ರಕತೆ ಎಂದರೆ ಸಂಭಾಷಣೆ ಹಾಗೂ ಸಂಭಾಷಣೆ ಸಿದ್ಧ ಎಂದರೆ ನಟ, ನಟಿಯರೇ ಗೊತ್ತಾಗಿದ್ದಾರೆ ಎಂದುಕೊಳ್ಳುವವರು ಹೆಚ್ಚು. ಆದರೆ ಒಂದು ಸಿನಿಮಾ ಅಂದರೆ ಸುಲಭದ ಕೆಲಸವಲ್ಲ, ಅದಕ್ಕೆ ತಯಾರಿ ಬೇಕು’ ಎಂದು ಅವರು ಹೇಳಿದ್ದಾರೆ.

‘ಮಲಂಗ್‌’ ಚಿತ್ರದಲ್ಲಿ ಆದಿತ್ಯ ರಾಯ್‌ ಕಪೂರ್‌, ಅನಿಲ್‌ ಕಪೂರ್‌, ದಿಶಾ ಪಟಾನಿ, ಕುನಾಲ್‌ ಖೇಮು ಮೊದಲಾದವರು ನಟಿಸಿದ್ದಾರೆ. ಈ ಚಿತ್ರವು ಫೆಬ್ರುವರಿ 7ರಂದು ಬಿಡುಗಡೆಯಾಗಲಿದೆ. 

ಇದನ್ನೂ ಓದಿ: ಜಾನ್‌ ಅಬ್ರಹಾಂ ಜತೆ ಕಾಜಲ್‌ ಅಗರ್‌ವಾಲ್‌

ಪ್ರತಿಕ್ರಿಯಿಸಿ (+)