ಮಂಗಳವಾರ, ಮಾರ್ಚ್ 28, 2023
22 °C

ಪ್ರಜಾವಾಣಿ ಸೆಲೆಬ್ರಿಟಿ ಲೈವ್‌: ನಿರ್ದೇಶನದ ಕನಸು ಬಿಚ್ಚಿಟ್ಟ ನಟ ದೇವರಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಬೆಂಗಳೂರು: ‘ಹುಲಿಯಾ–2’ ಸಿನಿಮಾ ಮಾಡುವ ಆಲೋಚನೆ ಇದೆ. ನಿರ್ದೇಶನ ಮಾಡುವ ಕನಸೂ ಇದೆ. ಒಳ್ಳೆಯ ನಿರ್ಮಾಪಕರು ಸಿಕ್ಕರೆ ಖಂಡಿತ ನಿರ್ದೇಶನ ಮಾಡುತ್ತೇನೆ...’

ಇದು, ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಚಿತ್ರನಟ ದೇವರಾಜ್ ಅವರು ಶನಿವಾರ ನಡೆದ ‘ಪ್ರಜಾವಾಣಿ ಸೆಲೆಬ್ರಿಟಿ ಲೈವ್‌’ನಲ್ಲಿ ಬಿಚ್ಚಿಟ್ಟ ಇಂಗಿತ. ಅವರು ಮಾತನಾಡಿದ್ದು ಇಲ್ಲಿದೆ.

‘ಇಳಿ ವಯಸ್ಸಿನ ಪ್ರೇಮಕಥೆ, ಹುಲಿಯಾ–2 ಹಾಗೂ ಆ್ಯಕ್ಷನ್ ಸಿನಿಮಾಗಳಿಗೆ ಮೂರು ಸ್ಕ್ರಿಪ್ಟ್‌ ಸಿದ್ಧಪಡಿಸಿದ್ದೇನೆ. ಈ ಸಿನಿಮಾಗಳಿಗೆ ಕಾಲ ಕೂಡಿಬರಬೇಕು. ಈಗಾಗಲೇ ನಿರ್ಮಾಣವನ್ನು ಪ್ರಯತ್ನಿಸಿ ಸೋತಿ ದ್ದೇನೆ. ಅದರಲ್ಲಿ ಕಲಿಯಬೇಕಿರುವುದು ಸಾಕಷ್ಟಿದೆ. ಹಾಗಾಗಿ, ಕೊಂಚ ಬಿಡುವು ಕೊಟ್ಟಿದ್ದೇನೆ. ಸಿನಿಮಾದ ಅಭಿನಯ ಒಂದು ಪ್ರಪಂಚವಾದರೆ, ಸಿನಿಮಾದ ವ್ಯಾಪಾರವೇ ಒಂದು ದೊಡ್ಡ ಪ್ರಪಂಚ. ಅಲ್ಲಿ ಕಲಿಕೆಯೂ ಬಹಳಷ್ಟಿದೆ.

‘ಒಬ್ಬ ಕಲಾವಿದನ ಶಕ್ತಿ ಮತ್ತು ದೌರ್ಬಲ್ಯಗಳನ್ನು ಗುರುತಿಸಲು ರಂಗಭೂಮಿ ವೇದಿಕೆ. ಸಿನಿಮಾರಂಗದಲ್ಲಿ ಕಲಾವಿದರ ಲೋಪಗಳನ್ನು ತಾಂತ್ರಿಕ ವಾಗಿ ಮರೆಮಾಚುವುದರಿಂದ ತಿದ್ದಿಕೊಳ್ಳುವ ಬದಲು ಸೋಮಾರಿಗಳಾಗುತ್ತೇವೆ. ರಂಗಭೂಮಿಯಲ್ಲಿ ಕಲಾವಿದನ ತಪ್ಪನ್ನು ತೋರಿಸುವುದು ಮಾತ್ರವಲ್ಲದೆ, ಅದನ್ನು ಸರಿಪಡಿಸಿಕೊಳ್ಳುವ ಅವಕಾಶಗಳೂ ಇರುತ್ತವೆ. ಆಗ ಮಾತ್ರ ಒಬ್ಬ ವ್ಯಕ್ತಿ ಸಂಪೂರ್ಣವಾಗಿ ಕಲಾವಿದ ಎನಿಸಿಕೊಳ್ಳಲು ಸಾಧ್ಯ.’

‘ರಂಗಭೂಮಿಯಿಂದ ಸಿನಿಮಾ ಕ್ಷೇತ್ರಕ್ಕೆ ಕಾಲಿಡುವ ಕಲಾವಿದನಿಗೆ ಹೆಚ್ಚಿನ ಧೈರ್ಯ, ಆತ್ಮವಿಶ್ವಾಸ ಹಾಗೂ ಹಲವು ಆಯಾಮಗಳನ್ನು ಯೋಚಿಸುವ ಶಕ್ತಿ ಬೆಳೆಯುತ್ತದೆ. ಇತ್ತೀಚೆಗೆ ಕಲಾಕ್ಷೇತ್ರದ ಮೆಟ್ಟಿಲುಗಳನ್ನು ಹತ್ತುವಾಗ ಅಲ್ಲಿ ಕಳೆದ ಕ್ಷಣಗಳು ಒಂದೊಂದೇ ಕಣ್ಣಮುಂದೆ ಬಂದವು. ರಂಗಭೂಮಿಯಲ್ಲಿ ತೊಡಗಿದ್ದ ಆ ದಿನಗಳಲ್ಲಿ ಕಲಾಕ್ಷೇತ್ರದ ಮೆಟ್ಟಿಲುಗಳ ಮೇಳೆ ಕುಳಿತಿದ್ದು, ಅಲ್ಲಿದ್ದ ಕಾರಂತರ ಕ್ಯಾಂಟೀನಿನ ಬೈಟು ಚಾಯ್ ಮರೆಯಲು ಸಾಧ್ಯವಿಲ್ಲ.’ 

‘ನಾನು ಮೊದಲಿಗೆ ಅಭಿನಯಿಸಿದ ‘ತ್ರಿಶೂಲ’, ‘ಕೂಗು’ ಹಾಗೂ ‘ಸಿಕ್ಕು’ ಸಿನಿಮಾಗಳು ತೆರೆಗೆ ಬರಲೇ ಇಲ್ಲ. ನನ್ನ ಅಭಿನಯದ ‘ಹುಲಿಯಾ’ ಸಿನಿಮಾಗೆ ಚಿತ್ರಮಂದಿರಗಳಲ್ಲಿ ನಿರೀಕ್ಷಿತ ಯಶಸ್ಸು ಸಿಕ್ಕಿರಲಿಲ್ಲ. ಆದರೆ, ಟಿ.ವಿ.ಗಳಲ್ಲಿ ಸಿನಿಮಾ ಪ್ರಸಾರಗೊಂಡ ನಂತರ ಹೆಚ್ಚು ಪ್ರಚಾರ ಪಡೆದುಕೊಂಡಿತು.’

‘ಸಿನಿಮಾಗಳಲ್ಲಿ ‘ಪೊಲೀಸ್’ ‍ಪಾತ್ರ ನನ್ನನ್ನು ಬಹಳ ದಿನ ಹಿಡಿದಿಟ್ಟುಕೊಂಡಿತ್ತು. ಪ್ರೇಕ್ಷಕರೂ ನನ್ನನ್ನು ಪೊಲೀಸ್‌ ಪಾತ್ರದಲ್ಲೇ ಹೆಚ್ಚಾಗಿ ಆರಿಸಿಕೊಂಡಿದ್ದರು. ‘ಸರ್ಕಲ್ ಇನ್‌ಸ್ಪೆಕ್ಟರ್’ ಸಿನಿಮಾ ನಂತರ ಪೊಲೀಸ್ ಪಾತ್ರಗಳಲ್ಲಿ ಅಭಿನಯಿಸುವುದಿಲ್ಲ ಎಂದು ಘೋಷಿಸಿದ್ದೆ. ಪರಿಣಾಮ ಅವಕಾಶಗಳೂ ತಗ್ಗಿದ್ದವು.’

‘ಶಂಕರ್‌ನಾಗ್‌ಗೆ ನಟನೆಗಿಂತ ನಿರ್ದೇಶನದಲ್ಲಿ ಖುಷಿ’

‘ಶಂಕರ್‌ನಾಗ್‌ ಅವರೇ ನನ್ನನ್ನು ರಂಗಭೂಮಿಯಲ್ಲಿ ತಿದ್ದಿ, ಮುಂದಕ್ಕೆ ತಂದವರು. ನಾನು ಕಂಡಂತೆ ಅವರು ನಟನೆಯಲ್ಲಿ ಹೆಚ್ಚು ಖುಷಿಯಾಗಿ ಇರುತ್ತಿರಲಿಲ್ಲ. ನಟನೆಗಿಂತಲೂ ಅವರು ನಿರ್ದೇಶನದಲ್ಲಿ ಹೆಚ್ಚು ಉತ್ಸುಕರಾಗಿದ್ದರು’ ಎಂದು ದೇವರಾಜ್ ಹೇಳಿದರು.

‘ಬೆಂಗಳೂರಿಗೆ ಮೆಟ್ರೊ ಹಾಗೂ ನಂದಿ ಬೆಟ್ಟಕ್ಕೆ ರೋಪ್‌ವೇ ಮಾರ್ಗ ತರುವುದು ಶಂಕರ್‌ನಾಗ್‌ ಅಂದೇ ಕಂಡಿದ್ದ ಕನಸುಗಳು. ನಂದಿಬೆಟ್ಟಕ್ಕೆ ರೋಪ್‌ವೇ ಈವರೆಗೆ ಸಾಧ್ಯವಾಗಿಲ್ಲ. ಶಂಕರ್‌ನಾಗ್‌, ಚಿರಂಜೀವಿ ಸರ್ಜಾ, ಸಂಚಾರಿ ವಿಜಯ್ ಹಾಗೂ ಪುನೀತ್ ರಾಜ್‌ಕುಮಾರ್‌ ಅವರಂತಹ ಯುವ ನಟರನ್ನು ಕಳೆದುಕೊಳ್ಳುತ್ತಿರುವುದು ದೊಡ್ಡ ದುರಂತ’ ಎಂದು ಅವರು ಬೇಸರಗೊಂಡರು.

ಪ್ರೇಕ್ಷಕರು ಸಿನಿಮಾ ಪ್ರೀತಿಸಬೇಕು

‘ಕನ್ನಡ ಹೊರತುಪಡಿಸಿ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲೂ ಅಭಿನಯಿಸಿದ ನನಗೆ ಒಂದು ವ್ಯತ್ಯಾಸ ಕಂಡುಬಂತು. ತೆಲುಗು ಮತ್ತು ತಮಿಳು ಪ್ರೇಕ್ಷಕರು ಸಿನಿಮಾಗಳನ್ನು ಹೆಚ್ಚು ಪ್ರೀತಿಸುತ್ತಾರೆ. ಅಲ್ಲಿನ ಸಿನಿಮಾ ಸಂಸ್ಕೃತಿಯೂ ವಿಭಿನ್ನವಾಗಿದೆ. ಈ ವಿಚಾರದಲ್ಲಿ ನಾವು ಸ್ವಲ್ಪ ಹಿಂದಿದ್ದೇವೆ’ ಎಂದು ದೇವರಾಜ್ ಹೇಳಿದರು.

‘ಸಿನಿಮಾಗೆ ಪ್ರೇಕ್ಷಕರ ಬಲ ಹೆಚ್ಚಾಗಬೇಕು. ಆಗ ಮಾತ್ರ ಸಿನಿಮಾ ಹೆಚ್ಚು ಯಶಸ್ಸು ಕಾಣುತ್ತದೆ. ಇತ್ತೀಚಿನ ಕನ್ನಡ ಸಿನಿಮಾಗಳು ಬೇರೆ ಭಾಷೆಯ ಚಿತ್ರಗಳಿಗೆ ಸಮಾನವಾಗಿ ಬೆಳೆಯುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು