ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚ್ಛೇದನಕ್ಕೆ ನಟ ಯುವ ರಾಜ್‌ಕುಮಾರ್‌ ಅರ್ಜಿ

Published 11 ಜೂನ್ 2024, 15:44 IST
Last Updated 11 ಜೂನ್ 2024, 15:44 IST
ಅಕ್ಷರ ಗಾತ್ರ

ಬೆಂಗಳೂರು: ಮಾನಸಿಕ ಮತ್ತು ದೈಹಿಕ ಕ್ರೌರ್ಯ, ಕುಟುಂಬದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅಕ್ರಮ ಚಟುವಟಿಕೆ ಹೀಗೆ ಹಲವು ಕಾರಣಗಳನ್ನು ಉಲ್ಲೇಖಿಸಿ ನಟ ಯುವ(ಗುರು) ಅವರು ಪತ್ನಿ ಶ್ರೀದೇವಿ ಬೈರಪ್ಪ ಅವರಿಂದ ವಿಚ್ಛೇದನ ಬಯಸಿದ್ದಾರೆ ಎಂದು ಯುವ ಪರ ವಕೀಲ ಸಿರಿಲ್‌ ಪ್ರಸಾದ್‌ ಹೇಳಿದ್ದಾರೆ. 

‘ವಿಚ್ಛೇದನ ಅರ್ಜಿ ದಾಖಲು ಮಾಡುವ ಮೊದಲು ಶ್ರೀದೇವಿ ಅವರಿಗೆ ಮೇ ತಿಂಗಳಲ್ಲಿ ಲೀಗಲ್‌ ನೋಟಿಸ್‌ ನೀಡಿದ್ದೆವು. ಅದರಲ್ಲಿ ವಿಚ್ಛೇದನಕ್ಕೆ ಕಾರಣಗಳನ್ನು ಉಲ್ಲೇಖಿಸಿದ್ದೆವು. 2018ರಲ್ಲಿ ಅವರ ಮದುವೆ ನಡೆದಿತ್ತು. ಅವರಿಬ್ಬರ ನಡುವೆ ಹಲವು ವರ್ಷಗಳ ವಯಸ್ಸಿನ ಅಂತರವಿದೆ. ಕುಟುಂಬದ ಮೇಲೆ ನಿಯಂತ್ರಣಕ್ಕೂ ಶ್ರೀದೇವಿ ಅವರು ಪ್ರಯತ್ನಿಸಿದ್ದರು. ಆರಂಭದಲ್ಲಿ ಯುವ ಅವರಿಗೆ ಇದು ಅರಿವಿಗೆ ಬಂದಿರಲಿಲ್ಲ. ಹಲವು ವ್ಯವಹಾರಗಳಲ್ಲಿ ಹೂಡಿಕೆ ಮಾಡುವಂತೆ ಶ್ರೀದೇವಿ ಅವರು ಯುವ ಅವರಿಗೆ ಒತ್ತಾಯ ಮಾಡುತ್ತಿದ್ದರು. ಇದರಿಂದ ಯುವ ಅವರಿಗೆ ನಷ್ಟವಾಗಿತ್ತು. ಆಕೆಗೆ ಐಎಎಸ್‌ ಮಾಡುವ ಇಚ್ಛೆಯಿತ್ತು. ಯುವ ಅವರೇ ಇದಕ್ಕೆ ಆರ್ಥಿಕ ಸಹಾಯ ಮಾಡಿದ್ದರು. ದೆಹಲಿಯಲ್ಲಿ ಎರಡು ದಿನವಷ್ಟೇ ಕ್ಲಾಸ್‌ಗೆ ಹೋಗಿದ್ದರು. ಯುವ ಜೊತೆ ಜಗಳ ಮಾಡಿಕೊಂಡಿದ್ದರು. ಈ ಎಲ್ಲ ಕಾರಣಗಳಿಂದ 54 ಪುಟಗಳ ವಿಸ್ತೃತವಾದ ವಿಚ್ಛೇದನ ಅರ್ಜಿ ಸಲ್ಲಿಸಿದ್ದೆವು’ ಎಂದು ಸಿರಿಲ್‌ ಹೇಳಿದ್ದಾರೆ. 

‘ಯುವ ಅವರಿಗೆ ಶ್ರೀದೇವಿ ಮಾನಸಿಕ ಕಿರುಕುಳ ನೀಡುತ್ತಿದ್ದರು, ಅವಮಾನ ಮಾಡುತ್ತಿದ್ದರು. ಡಾ.ರಾಜ್‌ಕುಮಾರ್‌ ಅಕಾಡೆಮಿಯಿಂದ ಸುಮಾರು ₹3 ಕೋಟಿಗೂ ಅಧಿಕ ಹಣವನ್ನು ತಮ್ಮ ವೈಯಕ್ತಿಕ ಖಾತೆಗೆ ಹಾಕಿಕೊಂಡಿದ್ದಾರೆ. ರಾಜ್‌ಕುಮಾರ್‌ ಲರ್ನಿಂಗ್‌ ಆ್ಯಪ್‌ನಿಂದಲೂ ಅಕ್ರಮವಾಗಿ ತಮ್ಮ ಖಾತೆಗೆ ಹಣ ಹಾಕಿಕೊಂಡಿದ್ದಾರೆ. ಇದರಿಂದ ಇಪ್ಪತ್ತು ನಿವೇಶನಗಳನ್ನು ಮೈಸೂರಿನಲ್ಲಿ ಖರೀದಿಸಿದ್ದಾರೆ. ನಮ್ಮ ನೋಟಿಸ್‌ಗೆ ಮೈಸೂರಿನ ವಕೀಲರ ಮುಖಾಂತರ ಅವರು ಉತ್ತರಿಸಿದ್ದು, ‘ತನ್ನ ಸದ್ಯದ ಮಾನಸಿಕ ಸ್ಥಿತಿ ಸರಿ ಇಲ್ಲ. ಮೂರು ತಿಂಗಳ ಅವಕಾಶ ನೀಡಿ’ ಎಂದು ಕೇಳಿಕೊಂಡಿದ್ದರು. ಇದಾಗಿ ನಾವು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಎರಡು ದಿನ ಇರುವಾಗ, ವಿಸ್ತೃತವಾದ ನೋಟಿಸ್‌ ಒಂದನ್ನು ನಮಗೆ ಶ್ರೀದೇವಿ ಅವರು ಕಳುಹಿಸುತ್ತಾರೆ. ಅದರಲ್ಲಿ ಯುವ ವಿರುದ್ಧ ಆರೋಪಗಳಿದ್ದವು’ ಎಂದರು.   

‘ಸತ್ಯ ನ್ಯಾಯ ಮೇಲುಗೈ ಸಾಧಿಸುತ್ತದೆ’

ಯುವ ಪರ ವಕೀಲ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಶ್ರೀದೇವಿ ಬೈರಪ್ಪ ‘ವೃತ್ತಿಪರ ಸೌಹಾರ್ದತೆಯನ್ನು ಕಾಯ್ದುಕೊಳ್ಳಬೇಕಾದ ವ್ಯಕ್ತಿಯೇ ಸಾರ್ವಜನಿಕವಾಗಿ ಒಬ್ಬ ಹೆಣ್ಣಿನ ಚಾರಿತ್ರ್ಯದ ಬಗ್ಗೆ ಕೀಳುಮಟ್ಟದ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಅತ್ಯಂತ ದುರದೃಷ್ಟಕರ ಹಾಗೂ ಬಹಳ ನೋವುಂಟು ಮಾಡಿದೆ. ಕಳೆದ ಕೆಲವು ತಿಂಗಳಿಂದ ಆದ ಅನೇಕ ನೋವುಗಳ ಹೊರತಾಗಿಯೂ ನಾನು ಕುಟುಂಬದ ಗೌರವ ಕಾಪಾಡಿಕೊಳ್ಳಲು ಮೌನವಾಗಿದ್ದೆ. ಆದರೆ ನನ್ನ ಸಭ್ಯತೆ ಹಾಗೂ ಮಾನವೀಯತೆಯನ್ನು ಗೌರವಿಸದೆ ಕೀಳು ಮಟ್ಟದ ಆರೋಪಗಳನ್ನು ಮಾಡುತ್ತಿರುವುದು ದುರದೃಷ್ಟಕರ. ಸತ್ಯ ಮತ್ತು ನ್ಯಾಯವು ಖಂಡಿತ ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬಿದ್ದೇನೆ’ ಎಂದು ಉಲ್ಲೇಖಿಸಿದ್ದಾರೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT