ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಂತಿ ನೆನಪು: ಶಾರದೆ ಉಳಿಯಲಿ ಎಂದಿದ್ದ ನಟಿಯ ಪಾಲಿಗೆ ಲಕ್ಷ್ಮೀ ಹೆಚ್ಚು ಉಳಿಯಲಿಲ್ಲ

Last Updated 26 ಜುಲೈ 2021, 7:32 IST
ಅಕ್ಷರ ಗಾತ್ರ

ರಾಷ್ಟ್ರಪತಿ ಪದಕವನ್ನು ಪ್ರಶಸ್ತಿ ರೂಪದಲ್ಲಿ ನೀಡಿದ್ದ ಇಂದಿರಾಗಾಂಧಿ ವೇದಿಕೆಯ ಹಿಂಬದಿಗೆ ಕರೆದರು. ಆಗ ಇಂದಿರಾಗಾಂಧಿ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆಯಾಗಿದ್ದರು. ಹೊಸ ನಟಿಗೆ ಅಚ್ಚರಿ. ವೇದಿಕೆ ಹಿಂಭಾಗಕ್ಕೆ ಹೋದದ್ದೇ ನಟಿಯ ಹಣೆಗೆ ಒಂದು ಮುತ್ತು ಕೊಟ್ಟ ಇಂದಿರಾಗಾಂಧಿ, 'ನಟಿಯಾಗಿ ಎತ್ತರಕ್ಕೆ ಬೆಳೆದು ತೋರಿಸು' ಎಂದು ಹಾರೈಸಿದರು.

1965ರಲ್ಲಿ ಜಯಂತಿ 'ಮಿಸ್ ಲೀಲಾವತಿ' ಸಿನಿಮಾದಲ್ಲಿ ಅಭಿನಯಿಸಿದ ಸಂದರ್ಭದಲ್ಲಿ ನಡೆದ ಘಟನೆ ಇದು. ಇದನ್ನು ಲೀಲಾವತಿ ಹದಿನಾಲ್ಕು ವರ್ಷಗಳ ಹಿಂದೆ ಸಂದರ್ಶನ ಮಾಡಲು ಹೋದಾಗಲೂ ಮಗುವಿನಂತೆ ಹೇಳಿಕೊಂಡಿದ್ದರು. ಅಂಥ ದಿಟ್ಟ ಜನರ ಆಶೀರ್ವಾದವೇ ತಮ್ಮನ್ನು ಇಷ್ಟರ ಮಟ್ಟಿಗೆ ಆಗಲು ಪ್ರೇರಣೆ ಎಂದಿದ್ದರು.

ಎಂ.ಆರ್. ವಿಠಲ್ ನಿರ್ದೇಶನದ 'ಮಿಸ್‌ ಲೀಲಾವತಿ' ಚಿತ್ರದಲ್ಲಿ ಶೀರ್ಷಿಕೆ ಪಾತ್ರವನ್ನು ಜಯಂತಿ ನಿರ್ವಹಿಸಿದ್ದರು. ಆ ಕಾಲಘಟ್ಟದಲ್ಲಿ ಸಂಪ್ರದಾಯಸ್ಥ ಮನಸ್ಸುಗಳನ್ನೆಲ್ಲ ಕೆರಳಿಸುವಂತಹ ಪಾತ್ರ ಅದು. ಮದುವೆ ವಿರೋಧಿಸಿ, ವಿವಾಹಪೂರ್ವ ದೈಹಿಕ ಸಂಬಂಧವನ್ನು ತಕರಾರೇ ಇಲ್ಲದಂತೆ ಸ್ವೀಕರಿಸುವ ಹೆಣ್ಣುಮನಸ್ಸಿನ ಪಾತ್ರವದು. ಸ್ಕರ್ಟ್‌, ಟಿ–ಶರ್ಟ್‌, ನೈಟಿಗಳನ್ನು ತೊಡುವ ಆ ಪಾತ್ರಕ್ಕೆ ಮೊದಲು ನಿರ್ದೇಶಕರು ಬೇರೆ ನಟಿಯನ್ನು ಒಪ್ಪಿಸಲು ಹೆಣಗಾಡಿ, ವಿಫಲರಾಗಿದ್ದರು. ಜಯಂತಿ ಅಂಥ ಗಟ್ಟಿ ಪಾತ್ರವನ್ನು ಕಣ್ಣಿಗೊತ್ತಿಕೊಂಡಿದ್ದರು.

ಬಿರು ಬಿಸಿಲಿನ ಬಳ್ಳಾರಿಯಲ್ಲಿ ಹುಟ್ಟಿದ ಕಮಲ ಕುಮಾರಿ ಆಮೇಲೆ ಸಿನಿಮಾ ಪ್ರವೇಶಿಸಿ ಜಯಂತಿ ಆದರು. 'ಮಿಸ್‌ ಲೀಲಾವತಿ' ತರಹದ ಪಾತ್ರವನ್ನು ಒಪ್ಪಿಕೊಂಡಾಗ ಜಯಂತಿ ಇನ್ನೂ ಇಪ್ಪತ್ತರ ಹುಡುಗಿ. ಈ ನಟಿಯ ತಾಯಿ ಸಂತಾನಲಕ್ಷ್ಮಿ ಅವರಿಗೆ ಮೊದಮೊದಲು ತಮ್ಮ ಮಗಳು ಬಣ್ಣದ ಲೋಕ ಪ್ರವೇಶಿಸುವುದು ಇಷ್ಟವಿರಲಿಲ್ಲ. ನೃತ್ಯ ಪಾಠ ಕಲಿಯಲು ಮಾತ್ರ ಅಭ್ಯಂತರವಿರಲಿಲ್ಲ. ದಪ್ಪ ದೇಹದ ಜಯಂತಿ ಬೇರೆ ನರ್ತಕಿಯರಷ್ಟು ಲೀಲಾಜಾಲವಾಗಿ ತಮಗೆ ನೃತ್ಯ ಆಡಲು ಆಗದೇ ಇದ್ದಾಗ ನೊಂದುಕೊಂಡಿದ್ದರು. ಅದನ್ನು ಸಾಧಿಸಿಯೇ ತೋರಬೇಕು ಎಂದು ಸಂಕಲ್ಪ ಮಾಡಿದರು. ಹಾಗೆ ನೃತ್ಯದ ವೇದಿಕೆಯಲ್ಲೇ ಅವರು ನಿರ್ದೇಶಕ ವೈ.ಆರ್. ಸ್ವಾಮಿ ಅವರ ಕಣ್ಣಿಗೆ ಬಿದ್ದದ್ದು. 'ಜೇನುಗೂಡು' ಸಿನಿಮಾದ ಅವಕಾಶದ ಬಾಗಿಲು ತೆರೆದುಕೊಂಡದ್ದು. ತಮ್ಮ ತಾಯಿಯನ್ನು ಒಪ್ಪಿಸಲು ಆಗ ಅವರು ಸಾಕಷ್ಟು ಕಷ್ಟ ಪಟ್ಟಿದ್ದರಂತೆ. ಜಯಂತಿ ಎಂದು ಆಗ ನಾಮಕರಣ ಮಾಡಿದ್ದೂ ವೈ.ಆರ್.ಸ್ವಾಮಿ ಅವರೇ. ಅದಾದ ಮೇಲೆ 'ಚಂದವಳ್ಳಿಯ ತೋಟ' ಸಿನಿಮಾದಲ್ಲಿ ರಾಜ್‌ಕುಮಾರ್‌ ಜತೆ ನಟನೆಯ ಇನಿಂಗ್ಸ್‌ ಶುರುವಾಯಿತು. ಅದು ಸುಮಾರು ನಲವತ್ತು ಸಿನಿಮಾಗಳ ಮಟ್ಟಕ್ಕೆ ಬೆಳೆಯಿತು.

ಚಿಕ್ಕಂದಿನಲ್ಲಿ ತಮ್ಮಿಷ್ಟದ ನಟ ಎನ್‌.ಟಿ.ಆರ್ ಅವರ ತೊಡೆಮೇಲೆ ಕುಳಿತು ಮುಗ್ಧ ನಗು ತುಳುಕಿಸಿದ್ದ, ಬಾಲನಟಿಯಾಗಿಯೂ ನಟಿಸಿ ಕ್ಯಾಮೆರಾ ಭಯ ಬಿಟ್ಟಿದ್ದ, ಕನ್ನಡದಲ್ಲಿ ಮೊದಲ ಬಾರಿಗೆ ಸ್ವಿಮ್ ಸೂಟ್‌ ಧರಿಸಿ, 'ಅದರಲ್ಲಿ ಏನಿದೆ' ಎನ್ನುವಂತೆ ನೋಡಿದ್ದ ಬಿಂದಾಸ್ ನಟಿ ಜಯಂತಿ. ತಮಗೆ ಇಷ್ಟವಾದವರನ್ನು 'ರಾಜ' ಎಂದು ಪ್ರೀತಿಯಿಂದ ಸಂಬೋಧಿಸುತ್ತಿದ್ದ ಅವರು ಒಳಗೊಳಗೇ ಖಾಸಗಿ ಬದುಕಿನಲ್ಲಿ ದುಃಖ ಅನುಭವಿಸಿದ್ದರು. ಸಂಗಾತಿಗಳ ಆಯ್ಕೆಯಲ್ಲಿ ಅವರು ಇನ್ನಷ್ಟು ಎಚ್ಚರದಿಂದ ಇರಬೇಕಿತ್ತು ಎಂದು ಅವರ ಆಪ್ತೇಷ್ಟರೇ ಹೇಳಿದ್ದುಂಟು. ಮಗ ಕೃಷ್ಣಕುಮಾರ್ ಚುರುಕುಮತಿಯ ಕೆಲಸಗಳ ಕುರಿತು ಅವರಿಗೆ ಹೆಮ್ಮೆ ಇತ್ತು.

ಐನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯ, ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ, ಮರಾಠಿ ಎಲ್ಲ ಚಿತ್ರರಂಗಗಳ ಅನುಭವ, ಏಳು ರಾಜ್ಯ ಪ್ರಶಸ್ತಿಗಳು, ಪೋಷಕ ನಟಿಯಾಗಿಯೂ ರಾಷ್ಟ್ರಪತಿಗಳ ಪದಕ ಗೆದ್ದಿದ್ದ ಜಯಂತಿಗೆ ಅವರಿಗೆ 'ಅಭಿನಯ ಶಾರದೆ' ಎಂಬ ಬಿರುದು ಇತ್ತು.

'ನನ್ನಲ್ಲಿ ಶಾರದೆ ಸದಾ ಉಳಿಯಲಿ ಎಂದು ಭಗವಂತನನ್ನು ಪ್ರಾರ್ಥಿಸುವೆ. ಲಕ್ಷ್ಮಿಯಂತೂ ಉಳಿದದ್ದೇ ಕಡಿಮೆ' ಎಂದು ಅವರು ಹಿಂದೊಮ್ಮೆ ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡು ಹೇಳಿದ್ದರು. ಹಲವು ನೆನಪುಗಳನ್ನು ಉಳಿಸಿ, ಅವರು ಈಗ ಹೊರಟುಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT